ಇವತ್ತೇನೋ ಪಾಯಸ ಮಾಡುವುದಕ್ಕೆ (Common cooking mistakes) ಮನಸ್ಸು ಮಾಡಿದ್ದೀರಿ. ಶಾವಿಗೆಯನ್ನು ಚೆನ್ನಾಗಿ ಹುರಿಯೋಣವೆಂದು ತೊಡಗಿದರೆ ಅಗತ್ಯಕ್ಕಿಂತ ಹೆಚ್ಚು ಕೆಂಪಾಗಿಬಿಡುತ್ತದೆ. ಆಗಿದ್ದಾಯಿತು ಎಂದು ಬೇಯಿಸುವುದಕ್ಕೆ ಮೊದಲಾದರೆ, ಸ್ವಲ್ಪ ಹೆಚ್ಚೇ ಬೆಂದು ಪೇಸ್ಟಿನಂತಾಗಿ ಬಿಡುತ್ತದೆ. ಇದಿಷ್ಟು ಸಾಲದೆಂಬಂತೆ, ಹಾಲೂ ಒಡೆದಂತಾಗಿ ಯಾಕಾದರೂ ಪಾಯಸ ಮಾಡುವ ಮನಸ್ಸಾಯಿತೋ ಎಂದು ಪರದಾಡುವಂತಾಗುತ್ತದೆ. ಇಂಥ ಅಡುಗೆ ಮನೆಯ ಎಡವಟ್ಟುಗಳು ಯಾರಿಗೆ ಬೇಕಿದ್ದರೂ ಆಗಬಹುದು. ರುಚಿಕಟ್ಟಾಗಿ ಪಾಕ ಕಾಯಿಸುವ ಉದ್ದೇಶವೇ ಇದ್ದರೂ ತಳ ಸೀಯುವುದು, ಉಕ್ಕುವುದು ಮುಂತಾದವು ಆಗಿಯೇ ಬಿಡುತ್ತವೆ. ಇಂಥ ಕೆಲವು ತಪ್ಪುಗಳಿಂದ ತಪ್ಪಿಸಿಕೊಳ್ಳುವುದು ಹೇಗೆ?
ಚಾಕಲೇಟ್
ಮಕ್ಕಳಿಗೆಲ್ಲ ಇಷ್ಟವೆಂಬ ನೆವದಿಂದ ಚಾಕಲೇಟ್ ಕುಲ್ಫಿಯನ್ನೊ ಏನನ್ನೋ ಮಾಡುವುದಕ್ಕೆ ಪ್ರಾರಂಭಿಸಿದ್ದೀರಿ. ಬೇಕಾದಷ್ಟು ಚಾಕಲೇಟ್ ಕರಗಿಸಿಕೊಳ್ಳುವಾಗಲೇ ಎಡವಟ್ಟಾಗುತ್ತದೆ. ಇದನ್ನು ಅತಿಯಾಗಿ ಕಾಯಿಸಿದರೆ ರವೆರವೆಯಾಗಿ ಬೇಕಾದಂತೆ ಕುಲ್ಫಿಯ ಮೇಲ್ಮೈ ಬರುವುದಿಲ್ಲ. ಹಾಗಾಗಿ ಇದನ್ನು ಸ್ವಲ್ಪವಾಗಿಯೇ ಕಾಯಿಸಿಕೊಳ್ಳುವುದು ಸೂಕ್ತ. ಮೈಕ್ರೋವೇವ್‌ನಲ್ಲಿ ಕಾಯಿಸುತ್ತೀರಿ ಎಂದಾದರೆ 20-30 ಸೆಕೆಂಡ್‌ಗಳಿಗೆ ಮಾತ್ರವೇ ಇಡುತ್ತಾ ಹೋಗಿ. ಆಗ ನಿಮಗೆ ಬೇಕಾದಂತೆ ಆಗುತ್ತಿದ್ದಂತೆ ನಿಲ್ಲಿಸಬಹುದು. ಬಹುತೇಕ ಕರಗಿದೆ ಎಂದಾಗುತ್ತಿದ್ದಂತೆ ಇದನ್ನು ಕಾವಿನಿಂದ ತೆಗೆದು ಚೆನ್ನಾಗಿ ತಿರುಗಿಸಿ. ಆಗ ಬೆಣ್ಣೆಯಂಥ ಮೇಲ್ಮೈ ತರಬಹುದು.
ಒವೆನ್
ಬೇಕ್ ಮಾಡುವುದಕ್ಕೆಂದು ಇರಿಸಿರುವ ತಿನಿಸು ಉಬ್ಬಿತೇ ಎಂದು ಘಳಿಗೆಗೊಮ್ಮೆ ಒವೆನ್ ಮುಚ್ಚಳ ತೆಗೆದು ನೋಡುವವರು ಎಷ್ಟೋ ಮಂದಿ. ಹೀಗೆ ಮಾಡಿಯೇ ಅಲ್ಲಿ ಆಗಬೇಕಾದ ಕೆಲಸ ಆಗುವುದಿಲ್ಲ. ಪದೇಪದೇ ತಣ್ಣನೆಯ ಗಾಳಿ ಒವೆನ್ ಒಳಗೆ ತೂರಿ ಬಂದರೆ, ಬೇಕಾದ ಉಷ್ಣತೆಗೆ ಅದನ್ನು ನಿಲ್ಲಿಸುವುದಕ್ಕೆ ಹೆಚ್ಚಿನ ಸಮಯ ಬೇಕು. ಹಾಗಾಗಿ ಅದರಷ್ಟಕ್ಕೆ ಅದನ್ನು ಬಿಟ್ಟರೆ ಸಾಕು.
ಉಪ್ಪು
ಒಮ್ಮೆ ಅಡುಗೆಗೆ ಉಪ್ಪು ಬಿದ್ದೇ ಹೋಯಿತೆಂದರೆ ಅದನ್ನು ತೆಗೆಯಲಾಗದು. ಸಾಂಬಾರಿಗೆ ಹಾಕಿದ ಉಪ್ಪು ಹೆಚ್ಚಾಯಿತು ಎನಿಸಿದರೆ, ಒಂದೆರಡು ಆಲೂಗಡ್ಡೆಗಳನ್ನು ದೊಡ್ಡದಾಗಿ ಕತ್ತರಿಸಿ ಅದರೊಳಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಆಲೂ ಬೇಡಿದ್ದರೆ ತೆಗೆಯಿರಿ ಅಥವಾ ಹಾಗೇ ಇರಿಸಿದರೂ ತೊಂದರೆಯಿಲ್ಲ. ಹೆಚ್ಚುವರಿ ಉಪ್ಪನ್ನಿದು ಹೀರಿಕೊಳ್ಳುತ್ತದೆ. ಇಂಥದ್ದಕ್ಕೆ ಅವಕಾಶವಿಲ್ಲ ಎಂದಾದರೆ, ಕೊಂಚ ಹುಳಿ, ಖಾರ ಮತ್ತು ಚಿಟಿಕೆ ಸಿಹಿಯನ್ನು ಅಡುಗೆಗೆ ಸೇರಿಸಬಹುದು. ಇದರಿಂದ ಪಾಕದ ಒಟ್ಟಾರೆ ರುಚಿ ತೀಕ್ಷ್ಣವಾಗುತ್ತದೆ, ಉಪ್ಪು ಮುಂದಾಗಿರುವುದು ತಿಳಿಯುವುದಿಲ್ಲ.
ಪ್ಯಾನ್ ತುಂಬಿಸಬೇಡಿ
ಬೇಕಿಂಗ್ ಮಾಡುವಾಗ ಬೆಣ್ಣೆ ಬೆಸ್ಕೆಟ್‌ಗಳನ್ನು ಪ್ಯಾನ್‌ನಲ್ಲಿ ಇರಿಸಿದ್ದೀರಿ. ಹೆಚ್ಚು ಬಿಸ್ಕೆಟ್‌ಗಳನ್ನು ಬೇಗನೇ ಮಾಡಿ ಮುಗಿಸುವ ಉತ್ಸಾಹದಲ್ಲಿ ಪ್ಯಾನ್ ತುಂಬಿಸಿಟ್ಟರೆ ಕೆಲಸ ಹಾಳು. ಮೊದಲಿಗೆ ಸಣ್ಣ ಆಕಾರದಲ್ಲಿದ್ದವು ನಂತರ ಹಿಗ್ಗುವುದರಿಂದ, ಇದಕ್ಕೆ ಸಾಕಷ್ಟು ಸ್ಥಳಾವಕಾಶ ಇದ್ದರೆ ಮಾತ್ರವೇ ಮಾಡಿದ್ದು ಸರಿಯಾಗುತ್ತದೆ. ಇದೊಂದೇ ಅಲ್ಲ, ಜಾಮೂನು ಕರಿಯುವಾಗ, ಸೀಮೆ ಅಕ್ಕಿ ಅಥವಾ ಉದ್ದಿನವಡೆ ಮಾಡುವಾಗ ಬಾಣಲೆ ತುಂಬಿಸಬೇಡಿ. ಅವು ಎಣ್ಣೆಯಲ್ಲಿ ಅರಳುವುದಕ್ಕೆ ಜಾಗ ಬಿಡಿ.
ತಣ್ಣಗಿನವು
ಕೆಲವು ವಸ್ತುಗಳನ್ನು ಫ್ರಿಜ್‌ನಿಂದ ತೆಗೆದು ನೇರವಾಗಿ ಅಡುಗೆಗೆ ಬಳಸಿದರೆ, ಬೇಕಾದ ಸ್ವರೂಪಕ್ಕೆ ಪಾಕ ಬರುವುದಿಲ್ಲ. ಉದಾ, ಬೆಣ್ಣೆಯನ್ನು ಕರಗಿಸಿ ಕೇಕ್ ಮಿಶ್ರಣಕ್ಕೆ ಹಾಕಿದರೆ ಮಾತ್ರವೇ ಮಿಶ್ರಣ ಸರಿಯಾಗುತ್ತದೆ. ಇಲ್ಲದಿದ್ದರೆ ಅಂಟಾದ ಪೇಸ್ಟ್‌ನಂತಾಗಿ, ಸರಿ ಮಾಡಿಕೊಳ್ಳಲು ಒದ್ದಾಡಬೇಕು. ಹಾಗಾಗಿ ಫ್ರಿಜ್‌ನ ವಸ್ತುಗಳನ್ನು, ಫ್ರೀಜ್ ಮಾಡಿದ ಸಾಮಗ್ರಿಗಳನ್ನು ಮೊದಲಿಗೆ ತೆಗೆದಿಟ್ಟುಕೊಳ್ಳುವ ಅಗತ್ಯವಿದ್ದರೆ, ಮರೆಯಬೇಡಿ.
ಇದನ್ನೂ ಓದಿ: Personality Test: ನೀವು ಒಳ್ಳೆಯವರೇ, ಕೆಟ್ಟವರೇ?; ನಿಮ್ಮನ್ನೇ ನೀವು ಪರೀಕ್ಷಿಸಬೇಕಾದರೆ ಇದನ್ನು ಓದಿ!
ಜಿಡ್ಡು ಸವರುವುದು
ಯಾವುದೋ ಹಲ್ವಾ ಅಥವಾ ಬರ್ಫಿ ಮಾಡುತ್ತಿದ್ದರೆ, ಅದನ್ನು ಹರಡುವ ಪ್ಲೇಟಿಗೆ ಮುಂಚಿತವಾಗಿ ಜಿಡ್ಡು ಸವರಿಟ್ಟುಕೊಳ್ಳುವುದು ಅಗತ್ಯ. ಇಲ್ಲದಿದ್ದರೆ ಕಷ್ಟಪಟ್ಟು ಮಾಡಿದ್ದು, ನಿಮಿಷದಲ್ಲಿ ಪುಡಿಯಾಗುತ್ತದೆ. ಮೈಸೂರ್ ಪಾಕ್, ಕೊಬ್ಬರಿ ಮಿಠಾಯಿ ಮುಂತಾದ ಯಾವುದೇ ಪಾಕಗಳು ಕತ್ತರಿಸಿದ ಮೇಲೆ ಚೆನ್ನಾದ ಆಕೃತಿಯಲ್ಲಿ ಕೈಗೆತ್ತಲು ಬರಬೇಕು. ಹಾಗೆಯೇ ಕೇಕ್, ಮಫಿನ್ ಮುಂತಾದ ಯಾವುದನ್ನೇ ಬೇಕ್ ಮಾಡುವಾಗಲೂ ಬೇಕಿಂಗ್ ಪಾತ್ರೆಗೆ ಜಿಡ್ಡು ಸವರುವುದು ಅಗತ್ಯ. ಪಾರ್ಚ್‌ಮೆಂಟ್ ಪೇಪರ್ ಹಾಕಿದರೆ ಇನ್ನೂ ಸುಲಭ.