- ರಾಧಿಕಾ ವಿಟ್ಲ
ಕಾಳಜಿ ಎಂಬ ಗುಣ ಯಾರಲ್ಲೇ ಆದರೂ ಸಾಮಾನ್ಯವಾಗಿ ಕಲಿತು ಬರುವುದಲ್ಲ. ಅದು ತಾನೇ ತಾನಾಗಿ ವ್ಯಕ್ತಿತ್ವದಲ್ಲಿ ಬರುವಂಥದ್ದು. ʻನೀವು ಇಷ್ಟ ಪಡದ ವ್ಯಕ್ತಿಯ ಜೊತೆಗೂ ನೀವು ಪ್ರೀತಿಯಿಂದಲೇ ವ್ಯವಹರಿಸುತ್ತೀರೆಂದಾದಲ್ಲಿ ಅದರರ್ಥ ನೀವು ವಂಚಕ ಎಂದಲ್ಲ. ನಿಮಗೆ ಸಹಿಸಿಕೊಳ್ಳುವ ಹಾಗೂ ಕ್ಷಮಿಸುವ ದೊಡ್ಡ ಗುಣ ಇದೆ ಎಂದರ್ಥʼ ಎಲ್ಲೋ ಕೇಳಿದ ಈ ಮಾತು ಹೌದಲ್ಲ ಅನಿಸದಿರದು.
ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಗುಣ ಕಾಳಜಿ. ಸುತ್ತಮುತ್ತಲ ಜನರೊಂದಿಗೆ ಅವರ ಕಷ್ಟಕ್ಕೆ ಕೈಲಾದಷ್ಟು ಹೆಗಲು ಕೊಡುವ, ಸಮಸ್ಯೆ ಆಲಿಸುವ, ಅವರ ಕಣ್ಣೀರಿಗೆ ಒರಗಲು ಭುಜ ನೀಡುವ ದೊಡ್ಡ ಗುಣವಿದು. ಎಲ್ಲರಲ್ಲೂ ಇರುವಂಥದ್ದಲ್ಲ. ಹೇಳಿಕೊಟ್ಟು ಬರುವಂಥದ್ದಲ್ಲ. ಬಹಳಷ್ಟು ಸಾರಿ, ಪ್ರಪಂಚವೇ ಕೆಟ್ಟು ಹೋಗಿದೆ ಅನ್ನುವ ಸಾರ್ವತ್ರಿಕ ಮಾತು ಕೇಳಿ ಬಂದಾಗ ಅಲ್ಲಲ್ಲಿ, ಇಂಥ ಕಾಳಜಿಯುಕ್ತ ಜನರ ಭೇಟಿಗಳು ನಡೆದು, ಪ್ರಪಂಚ ಚಂದವಿದೆ, ಅದ್ಭುತವಾಗಿದೆ ಅನಿಸಿ, ಕಷ್ಟದ ಸಂದರ್ಭಗಳನ್ನು ಸುಲಭವಾಗಿ ದಾಟಿ, ಬದುಕಿನಲ್ಲಿ ಮತ್ತೆ ಆಶಾಕಿರಣ ಕಾಣುವವರು ಅದೆಷ್ಟೋ ಮಂದಿ.
ಜೀವನದಲ್ಲಿ ಎಲ್ಲ ದಿನಗಳು ಒಂದೇ ತೆರನಾಗಿರುವುದಿಲ್ಲ. ಏಳುಬೀಳುಗಳ ವೈಪರೀತ್ಯ ಸಹಜ. ಇಂತಹ ಒತ್ತಡದಲ್ಲಿದ್ದಾಗಲೂ ನೀವು ನಿಮ್ಮ ತಾಳ್ಮೆ ಮೀರದೆ, ಇತರರ ನೋವಿಗೆ ಬೇಸರಕ್ಕೆ ಸ್ಪಂದಿಸುವ ಗುಣ ಹೊಂದಿದ್ದರೆ ನಿಮ್ಮಲ್ಲಿ ಕಾಳಜಿಯುಕ್ತ ಗುಣ ಇದೆ ಎಂದರ್ಥ. ಕಾಳಜಿಯಿರುವ ಮಂದಿಗೆ ಯಾವತ್ತಿಗೂ ಸ್ನೇಹಿತರ ಬರವಿರುವುದಿಲ್ಲ. ಹಾಗಾಗಿ ಕೊಟ್ಟುದಕ್ಕಿಂತ ದುಪ್ಪಟ್ಟು ಪ್ರೀತಿ ಸ್ನೇಹ ಇತರರಿಂದಲೂ ಸಿಕ್ಕೇ ಸಿಗುತ್ತದೆ.
ನೀವು ನಿಮ್ಮನ್ನು ಕಾಳಜಿಯುಕ್ತ ಜೀವಿ ಎಂದು ಕರೆದುಕೊಳ್ಳುವಿರಾದರೆ ನಿಮಗೆ ತಿಳಿದೋ ತಿಳಿಯದೆಯೋ ಈ ಕೆಳಗಿನ ಗುಣಸ್ವಭಾವಗಳೂ ನಿಮ್ಮದೆಂದರ್ಥ. ನಿಮ್ಮನ್ನು ನೀವು ಒರೆಗೆ ಹಚ್ಚಲು, ಅಥವಾ ಇನ್ನಾದರೂ ಎಚ್ಚೆತ್ತು ಪ್ರೀತಿ ಕಾಳಜಿ ತೋರಿಸುವ ಗುಣವನ್ನು ಬೆಳೆಸಿಕೊಳ್ಳಲು ಇದು ಸಕಾಲ.
1.. ಇತರರನ್ನು ಹೊಗಳುವುದು ಕೂಡಾ ಕಾಳಜಿಯ ಲಕ್ಷಣವೇ. ಜೀವನದ ಸಣ್ಣ ಸಣ್ಣ ಖುಷಿಗಳಲ್ಲಿ, ಯಾರೋ ಒಬ್ಬರು ಚಂದದ ದಿರಿಸು ಹಾಕಿಕೊಂಡಿದ್ದರೆ, ಇಷ್ಟವಾದಲ್ಲಿ ಹೇಳಿದರೆ ತಪ್ಪಿಲ್ಲ. ಹೊಗಳಿದ ತಕ್ಷಣ ನಾವು ಸಣ್ಣವರಾಗುವುದಿಲ್ಲ. ಇನ್ನೊಬ್ಬರ ಮುಖದಲ್ಲೊಂದು ಚಂದದ ನಗೆ ಚಿಮ್ಮಿಸುವುದು ಕೂಡಾ ಕಾಳಜಿಯೇ. ಹಾಗೆಯೇ ಬೇರೆಯವರು ನಿಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದಾಗಲೂ, ಆದ ಖುಷಿಯನ್ನು ಹಂಚಿಕೊಳ್ಳುವುದು ಕೂಡಾ ಕಾಳಜಿಯೇ.
೨. ತಾಳ್ಮೆ ಎಂಬುದು ಬದುಕಿನ ವರ. ತಾಳ್ಮೆಯನ್ನು ಗುಣವಾಗಿ ದಕ್ಕಿಸಿಕೊಳ್ಳಲೂ ಸಾಕಷ್ಟು ತಾಳ್ಮೆ ಬೇಕು. ಇನ್ನೇನು ದಾಟಿ ಬಿಡುತ್ತೇನೆ ಎಂಬಷ್ಟರಲ್ಲಿ ಸಿಗುವ ರೆಡ್ ಸಿಗ್ನಲ್, ಯಾರೋ ಅಡ್ಡ ಬಂದರೆಂದೋ, ಮಕ್ಕಳು ಮಾಡುವ ಕಿರಿಕಿರಿ ಇವೆಲ್ಲವೂ ಪ್ರತಿನಿತ್ಯ ಪ್ರತಿಯೊಬ್ಬರ ತಾಳ್ಮೆಯನ್ನೂ ಪರೀಕ್ಷಿಸಲು ಬರುವ ಸಂದರ್ಭಗಳು. ಇವೆಲ್ಲವುಗಳನ್ನು ದಾಟಿ ಮುಂದೆ ಹೋಗಿದ್ದೀರೆಂದಾದಲ್ಲಿ ನೀವು ಇತರರ ಬಗ್ಗೆ ಕಾಳಜಿ ಹೊಂದಿದ್ದೀರೆಂದೇ ಅರ್ಥ.
೩. ಎಷ್ಟೇ ಪ್ರೀತಿಯ ಸಂಬಂಧವೇ ಆಗಿರಲಿ, ಮತ್ತೊಬ್ಬರ ಖಾಸಗೀತನಕ್ಕೆ ಗೌರವ ಕೊಡುವುದೂ ಕೂಡಾ ಕಾಳಜಿಯ ಇನ್ನೊಂದು ಮುಖವೇ.
ಇದನ್ನೂ ಓದಿ: World Hypertension Day | ಹೈಪರ್‌ಟೆನ್ಷನ್ ಗೆಲ್ಲಲು 5 ಸೂತ್ರಗಳು
೪. ಹಿರಿಯರ ಭಾವನೆಗಳಿಗೆ ಬೆಲೆ ಕೊಡುವುದು ಹಾಗೂ ಅವರಿಗೆ ಸಹಾಯ ಮಾಡುವುದು ಕೂಡಾ ಕಾಳಜಿಯ ಸಂಕೇತವೇ. ಬಸ್ಸಿನಲ್ಲಿ ಹಿರಿಯರನ್ನು ಕಂಡಾಗ ಸೀಟಿನಿಂದ ಎದ್ದು ಅವರಿಗೆ ಕೂರಲು ಅವಕಾಶ ಮಾಡಿಕೊಡುವುದು, ದಿನಸಿಗೆ ನಿಂತ ಸಾಲಿನಲ್ಲಿ ತನ್ನ ಹಿಂದೆ ಹಿರಿಯ ವ್ಯಕ್ತಿ ನಿಂತಿದ್ದಲ್ಲಿ ಅವರನ್ನು ಮುಂದೆ ಹೋಗಲು ಅನುವು ಮಾಡಿಕೊಡುವುದು ಇತ್ಯಾದಿ ಸಣ್ಣ ಪುಟ್ಟ ಕಾಳಜಿಗಳು ಕೂಡಾ ಬದುಕಿನ ಖುಷಿಯನ್ನು, ತೃಪ್ತಿಯನ್ನು ಹೆಚ್ಚಿಸುತ್ತದೆ.
೫. ನಗು ಒಂದು ಮಾಂತ್ರಿಕ ಗುಳಿಗೆ. ಒಂದು ನಗುವಿನ ಶಕ್ತಿಯೇ ಅಂಥದ್ದು. ಸಂತೋಷದಲ್ಲಿ ನಕ್ಕಂತೆ ಜೀವನ ನೀಡುವ ಸವಾಲನ್ನೂ ಬದುಕಿನ ಭಾಗವಾಗಿ ಪರಿಗಣಿಸಿ ನಕ್ಕು ಮುಂದೆ ಸಾಗುವುದನ್ನು ಅಭ್ಯಾಸ ಮಾಡಿಕೊಂಡ ವ್ಯಕ್ತಿಯ ಹೃದಯ ಮೃದುವಾಗಿರುತ್ತದೆ. ಸಮಾಜಕ್ಕೆ, ತನ್ನ ಸುತ್ತಲಿನ ಆಗುಹೋಗುಗಳಿಗೆ ಸ್ಪಂದಿಸುತ್ತಾ, ಉತ್ತಮ ನಾಗರಿಕನಾಗಿ, ಸರ್ಕಾರದ ನಿಯಮಗಳನ್ನು ಪಾಲಿಸುತ್ತಾ, ನಾಗರಿಕನಾಗಿ ಜವಾಬ್ದಾರಿಗಳನ್ನು ನಿರ್ವಹಿಸುವುದೂ ಕೂಡಾ ಕಾಳಜಿಯುಕ್ತ ಮಂದಿಯ ಸೌಭಾವವೇ ಆಗಿದೆ.
ಇವೆಲ್ಲವೂ ನಿಮ್ಮದೂ ಆಗಿದ್ದರೆ ಸಂತೋಷ. ಇವೆಲ್ಲವುಗಳ ಪಡೆವ ಹಾದಿಯಲ್ಲಿ ಸ್ವಪ್ರಯತ್ನದಲ್ಲಿದ್ದರೆ ಇನ್ನೂ ಸಂತೋಷ!
ಇದನ್ನೂ ಓದಿ: Motivational story: ವಾಚು ಕದ್ದ ಹುಡುಗ ಮತ್ತು ಮರೆಯಲಾಗದ ಪಾಠ ಕಲಿಸಿದ ಮೇಸ್ಟ್ರು