ಭಾರತೀಯರ ಪಾಲಿಗೆ ಅನ್ನ ನಿತ್ಯದ ಆಹಾರ. ಅನ್ನವಿಲ್ಲದೆ ಬಹುತೇಕ ಭಾರತೀಯರ ದಿನ ಮುಂದೆ ಸಾಗದು. ಕೆಲವು ರಾಜ್ಯಗಳಲ್ಲಿ ದಿನದ ಎರಡೂ ಹೊತ್ತು ಅನ್ನ ಉಂಡರೆ, ಇನ್ನೂ ಕೆಲವೆಡೆ, ಅನ್ನದ ಬದಲು ಗೋಧಿಯ ಬಳಕೆ ಹೆಚ್ಚು. ಅನ್ನ ಮಾಡುವ ಅಕ್ಕಿಯಿಂದ ನಾನಾ ಬಗೆಯ ಆಹಾರಗಳೂ, ಬಗೆಬಗೆಯ ಬಾತ್‌ಗಳೂ, ದೋಸೆಗಳೂ, ಪಾಯಸಗಳೂ ಸೇರಿದಂತೆ ಥರಹೇವಾರಿ ಅಡುಗೆಗಳನ್ನು ಮಾಡುತ್ತೇವೆ. ಏನೇ ಅಡುಗೆ ಮಾಡಲು (making rice tips) ತಿಳಿಯದಿದ್ದರೂ ಕನಿಷ್ಠ ಅನ್ನ ಬೇಯಿಸುವ ವಿಧಾನ ತಿಳಿಯದೆ ಇರುವವರು ಇರಲಿಕ್ಕಿಲ್ಲವೇನೋ ಎಂಬಷ್ಟು ಅನ್ನಕ್ಕೆ ನಮ್ಮಲ್ಲಿ ಪ್ರಾಧಾನ್ಯತೆ.
ಅಡುಗೆ ಮಾಡುವುದು ಒಂದು ಕಲೆ ನಿಜ. ಆದರೆ ಅನ್ನ ಮಾಡುವುದು ಒಂದು ಕಲೆ ಎಂಬುದನ್ನು ಬಹುತೇಕರು ಒಪ್ಪಲಿಕ್ಕಿಲ್ಲ. ಕಣ್ಣುಮುಚ್ಚಿಕೊಂಡೇ ಅನ್ನಕ್ಕಿಡುವಷ್ಟು ಸಲೀಸು ನಮಗಿದೆ ಎಂಬುದು ನಿಜವಾದರೂ, ಸರಿಯಾಗಿ ಅನ್ನ ಮಾಡದಿದ್ದರೆ, ನಮಗೆ ಹೊಟ್ಟೆಯ ತೊಂದರೆಗಳು ಕಟ್ಟಿಟ್ಟ ಬುತ್ತಿ. ಹೆಚ್ಚು ಬೇಯಿಸಿ ಮುದ್ದೆಯಾಗಿಸುವುದು, ಕಡಿಮೆ ಬೇಯಿಸಿ ಕಾಳಿನಂತೆ ಬಡಿಸುವುದು, ನೀರು ಸರಿಯಾಗಿ ಹಾಕದೆ ಇರುವುದು ಸೇರಿದಂತೆ ಹಲವರು ಮಾಡುವ ಸಾಮಾನ್ಯ ಎಡವಟ್ಟುಗಳಿಂದಾಗಿ ಅನ್ನ ಮಾಡುವುದೂ ಕೂಡಾ ಒಂದು ಕಲೆಯೇ ಎಂಬುದನ್ನು ಇಲ್ಲಿ ಒಪ್ಪಲೇಬೇಕಾಗುತ್ತದೆ. ಅನ್ನ ಮಾಡುವುದು ಒಂದು ಕಲೆಯೇ, ಅದಕ್ಕೂ ಕೆಲವು ರೀತಿನೀತಿಗಳಿವೆ, ಎಷ್ಟೋ ಪಳಗಿದ ಕೈಗಳೂ ಕೂಡಾ ಅನ್ನ ಮಾಡುವಾಗ ಎಡವಟ್ಟುಗಳನ್ನು ಮಾಡಿಬಿಡುತ್ತವೆ ಎಂಬುದನ್ನು ಒಪ್ಪಲೇಬೇಕಾಗುತ್ತದೆ. ಸರಿಯಾಗಿ ಅನ್ನ ಮಾಡುವುದು ಹೇಗೆ? ಅನ್ನ ಮಾಡುವಾಗ ಮಾಡುವ ತಪ್ಪುಗಳೇನು ಎಂಬುದನ್ನು ತಿಳಿಯೋಣ ಬನ್ನಿ.
ಅನ್ನಕ್ಕಿಡುವ ಮೊದಲು ಅಕ್ಕಿಯನ್ನು ತೊಳೆಯಬೇಕು ಎಂಬುದು ಸಾಮಾನ್ಯಜ್ಞಾನ. ಇದನ್ನು ಹೇಳಬೇಕಾದ ಅಗತ್ಯವಿಲ್ಲ ಎಂಬುದು ನಿಜವೇ ಆದರೂ, ಕೆಲವರಿಗೆ ಈ ಸತ್ಯ ಗೊತ್ತೇ ಇರುವುದಿಲ್ಲ! ಹಾಗಾಗಿ, ಮೊದಲು ಅನ್ನ ಮಾಡುವ ಮಂದಿ ಮಾಡುವ ಪ್ರಮುಖ ತಪ್ಪು ಇದು. ಸರಿಯಾಗಿ ಅಕ್ಕಿಯನ್ನು ತೊಳೆಯದೆ ಅನ್ನಕ್ಕಿಟ್ಟರೆ, ಅಕ್ಕಿಯಲ್ಲಿ ಇದ್ದ ಹೆಚ್ಚುವರಿ ಸ್ಟಾರ್ಚ್ ತೊಳೆದು ಹೋಗುವುದಿಲ್ಲ. ಹೀಗಾಗಿ ಸರಿಯಾದ ಅನ್ನ ಬೇಯಬೇಕೆಂದರೆ, ಅಕ್ಕಿಯನ್ನು ಚೆನ್ನಾಗಿ ತೊಳೆಯಲೇಬೇಕು. ಅನ್ನ ಸರಿಯಾಗಿ ಆಗುವುದಕ್ಕೆ ಅಕ್ಕಿ ತೊಳೆಯುವುದರಲ್ಲೂ ರಹಸ್ಯ ಅಡಗಿದೆ ಎಂಬ ಸತ್ಯ ಎಲ್ಲ ಅನ್ನ ಮಾಡುವ ಮಂದಿಗೂ ತಿಳಿದಿರಲೇಬೇಕು.
ಅಕ್ಕಿಯನ್ನು ತೊಳೆದಿದ್ದಾಯಿತು, ಈಗ ಬೇಯಲು ಇಡಲು ಅಕ್ಕಿಗೆ ನೀರು ಸೇರಿಸುವುದು ಬಹಳ ಮುಖ್ಯ ಘಟ್ಟ. ಎಷ್ಟು ನೀರು ಹಾಕಬೇಕು ಎಂಬಲ್ಲಿಯೇ ಸಾಕಷ್ಟು ಮಂದಿ ಗೊಂದಲ ಅನುಭವಿಸುತ್ತಾರೆ. ಸಾಮಾನ್ಯವಾಗಿ ಅಕ್ಕಿಯ ದುಪ್ಪಟ್ಟು ನೀರು ಎಂಬುದು ಸತ್ಯವೇ ಆದರೂ, ಪ್ರತಿ ಅಕ್ಕಿಯ ಬಗೆಗೂ ಬಗೆಬಗೆಯ ನೀರಿನ ಪ್ರಮಾಣದ ಅಗತ್ಯವಿರುತ್ತದೆ. ಉದಾಹರಣೆಗೆ ಉದ್ದ ಬಗೆಯ ಅಕ್ಕಿಗೆ 2:1ರ ಅನುಪಾತದಲ್ಲಿ ನೀರು ಹಾಗೂ ಅಕ್ಕಿ ಬೇಯಲು ಇಟ್ಟರೆ, ಸಣ್ಣ ಗುಂಡಗಿನ ಅಕ್ಕಿಗೆ ಹೆಚ್ಚು ನೀರು ಬೇಕಾಗುತ್ತದೆ. ಈ ಅಳತೆಯನ್ನು ನಿರ್ಲಕ್ಷ್ಯ ಮಾಡಿದರೆ, ಕಡಿಮೆ ಬೆಂದ ಅನ್ನ ಸಿದ್ಧವಾಗುತ್ತದೆ. ಪರ್ಫೆಕ್ಟ್ ಅನ್ನ ಸಿಗದು.
ಬಹಳಷ್ಟು ಮಂದಿ ಮಾಡುವ ಮತ್ತೊಂದು ದೊಡ್ಡ ತಪ್ಪು ಎಂದರೆ ಕುಚ್ಚಲಕ್ಕಿಯನ್ನೂ ಬೆಳ್ತಿಗೆ ಅಕ್ಕಿಯನ್ನೂ ಒಂದೇ ಬಗೆಯಲ್ಲಿ ಬೇಯಿಸುವುದು! ಸಾಮಾನ್ಯವಾಗಿ ಕುಚ್ಚಲಕ್ಕಿ ಬೇಯಲು ಹೆಚ್ಚು ಸಮಯ ಬೇಕು. ಅಷ್ಟೇ ಅಲ್ಲ, ಹೆಚ್ಚು ನೀರೂ ಬೇಕು. ಸಾಮಾನ್ಯ ಬೆಳ್ತಿಗೆ ಅಕ್ಕಿ ಬೇಯಲು 15 ನಿಮಿಷ ತೆಗೆದುಕೊಂಡರೆ, ಕುಚ್ಚಲಕ್ಕಿಗೆ ಸುಮಾರು ೪೫ ನಿಮಿಷವಾದರೂ ಬೇಕು.
ದೊಡ್ಡ ಉರಿಯಲ್ಲಿ ಅಕ್ಕಿ ಬೇಯಿಸುವುದೂ ಕೂಡಾ ಬಹುತೇಕ ಎಲ್ಲರೂ ಮಾಡುವ ದೊಡ್ಡ ತಪ್ಪು. ಬೇಗ ಆಗಬೇಕು ಎಂಬ ಕಾರಣಕ್ಕೆ ದೊಡ್ಡ ಉರಿಯಲ್ಲಿಟ್ಟರೆ, ಅಕ್ಕಿ ಸರಿಯಾಗಿ ಬೇಯದು. ಹೀಗಾಗಿ ಹದ ಉರಿ ಅನ್ನ ಬೇಯಲು ಸರಿಯಾದ ಉರಿ. ಸರಿಯಾದ ಕ್ರಮವೆಂದರೆ, ಮೊದಲು ನೀರನ್ನು ಬಿಸಿಯಾಗಲು ಬಿಟ್ಟು ನಂತರ ಅದಕ್ಕೆ ಅಕ್ಕಿಯನ್ನು ಹಾಕುವುದು. ಹೀಗೆ ಮಾಡಲು ಸಾಧ್ಯವಾಗದಿದ್ದರೆ, ಹದ ಉರಿಯಲ್ಲಿ ಅಕ್ಕಿ ಬೇಯಲು ಬಿಡುವುದು ಸೂಕ್ತ.
ಪ್ರೆಷರ್ ಕುಕ್ಕರ್‌ನಲ್ಲಿ ಅನ್ನ ಬೇಯಿಸಲು ಇಟ್ಟಿದ್ದರೆ, ಗಡಿಬಿಡಿಯಲ್ಲಿ ಕೂಡಲೇ ಅನ್ನ ಹೊರತೆಗೆಯಲು ಪ್ರಯತ್ನಿಸುವುದು ಬಹುತೇಕರು ಮಾಡುವ ದೊಡ್ಡ ತಪ್ಪು. ಇದರಿಂದ ಅನ್ನ ಮುದ್ದೆಯಾಗಿಬಿಡುತ್ತದೆ. ಅನ್ನ ಬೆಂದಮೇಲೆ, ಉರಿ ಆರಿಸಿದ ಮೇಲೆ, ಅನ್ನವನ್ನು ಕೆಲ ನಿಮಿಷಗಳ ಕಾಲ ಹಾಗೆಯೇ ಬಿಡಿ. ಹೀಗೆ ಮಾಡುವುದರಿಂದ ಸರಿಯಾಗಿ ಬೆಂದ ಅನ್ನ, ಉದುರುದುರಾಗಿ ಸಿಗುತ್ತದೆ. ಇಲ್ಲದಿದ್ದರೆ ಮುದ್ದೆಯಾಗುತ್ತದೆ.