ಪ್ರೀತಿಯಲ್ಲಿರುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅತ್ಯಂತ ಮಧುರ ಕ್ಷಣಗಳಲ್ಲಿ ಒಂದು. ಪ್ರೀತಿ ಬದುಕಿನ ಭಾಗ. ಪ್ರೀತಿಯೆಂಬ ಭಾವವಿಲ್ಲದೆ ಬದುಕುವುದು ಕಷ್ಟ. ಇಂತಹ ಪ್ರೀತಿಯ ವ್ಯಾಖ್ಯಾನ ಕಷ್ಟ. ಪ್ರೀತಿಯಲ್ಲಿ ಏರಿಳಿತ ಸಹಜ. ಪ್ರೀತಿಯಲ್ಲಿ ಬಿದ್ದವರಿಗೆ ಇದು ತಿಳಿದಿರುತ್ತದೆ. ಆದರೆ, ಈ ಪ್ರೀತಿಯಲ್ಲಿ ಬೀಳುವುದರಿಂದ (Do You Know) ಆಗುವ ಇನ್ನೊಂದು ಬಹುದೊಡ್ಡ ಸಮಸ್ಯೆ ಎಂದರೆ, ತೂಕ ಏರಿಕೆ (Weight gain)! ಆಶ್ಚರ್ಯವಾದರೂ ಸತ್ಯ. ಹೌದು. ಪ್ರೀತಿಸುವುದರಿಂದ ತೂಕದಲ್ಲಿ ಏರಿಕೆಯಾಗುತ್ತದೆ ಎಂಬುದನ್ನು ಪುಷ್ಟೀಕರಿಸುವ ಹಲವು ಸಂಶೋಧನಾ ವರದಿಗಳು ಬಂದಿವೆ. ಇಂಥದ್ದೇ ಒಂದು ವರದಿಯ ಪ್ರಕಾರ, ಪ್ರೀತಿಯಲ್ಲಿ ಬಿದ್ದ, ಮದುವೆಯಾದ ಸುಮಾರು 8000 ಮಂದಿಯ ತೂಕವನ್ನು ಅಧ್ಯಯನ ಮಾಡಲಾಗಿ ಈ ವರದಿ ಸಿದ್ಧಪಡಿಸಲಾಗಿದೆ. ಮದುವೆಯಾದ ಮಹಿಳೆಯರಲ್ಲಿ ಸಾಮಾನ್ಯವಾಗಿ, ಮದುವೆಯಾಗಿ ಐದೇ ವರ್ಷಗಳಲ್ಲಿ ಅವರು ಸುಮಾರು 11 ಕೆಜಿಗಳಷ್ಟು ತೂಕ ಏರಿಕೆಯಾಗುತ್ತದೆ ಎನ್ನಲಾಗಿದೆ. ಪ್ರೀತಿಸುತ್ತಿರುವ ಆದರೆ ಮದುವೆಯಾಗದೆ ಜೊತೆಗಿರುವ ಜೋಡಿಗಳು ಸುಮಾರು ಎಂಟು ಕೆಜಿ ಏರಿಸಿಕೊಂಡರೆ, ಜೊತೆಯಾಗಿರದ ಅದರೆ ಪ್ರೀತಿಸುತ್ತಿರುವ ಜೋಡಿಗಳ ಪೈಕಿ ಮಹಿಳೆಯರು ಏಳು ಕೆಜಿಗಳಷ್ಟು ತೂಕ ಏರಿಸಿಕೊಳ್ಳುತ್ತಾರಂತೆ. ಹಾಗಾದರೆ ಪ್ರೀತಿಸುವುದರಿಂದ ಮಹಿಳೆಯರ ತೂಕದಲ್ಲಿ ಏರಿಕೆಯಾಗುತ್ತದಾ ಎಂಬ ಸಂಶಯ ನಿಮ್ಮಲ್ಲಿ ಬರಬಹುದು. ಹೌದು ವರದಿಗಳು ಈ ಸಂಶಯವನ್ನು ಅಲ್ಲಗಳೆಯುವುದಿಲ್ಲ. ಹೀಗೆ ತೂಕ ಹೆಚ್ಚಾಗಲು ಸಾಮಾನ್ಯವಾಗಿ ಮೂರು ಕಾರಣಗಳಿವೆ. ಇದು ಪ್ರೀತಿಸುವುದರಿಂದ ತೂಕ ಏರಿಕೆ ಎನ್ನುವುದಕ್ಕಿಂತಲೂ, ಆ ಸಂದರ್ಭ ನಿಮ್ಮ ಆಹಾರ ಕ್ರಮದಿಂದಲೂ ಎಂದು ಹೇಳುತ್ತವೆ ಈ ವರದಿಗಳು. ಸಾಮಾನ್ಯವಾಗಿ ಪ್ರೀತಿಸುವ ಜೋಡಿಗಳು, ಸಾಮಾನ್ಯವಾಗಿ ಈ ಮೂರು ಕಾರಣಗಳಿಂದಾಗಿ ತೂಕ ಏರಿಸಿಕೊಳ್ಳುತ್ತಾರೆ. ಬನ್ನಿ, ಆ ಮೂರು ಕಾರಣಗಳನ್ನು ನೋಡೋಣ.
ನಿಮ್ಮ ಸಂಗಾತಿಯ ಕೆಟ್ಟ ಆಹಾರಕ್ರಮ
2007ರಲ್ಲಿ ನಡೆದ ಸಂಶೋಧನಾ ವರದಿಯೊಂದು ಹೇಳುವ ಪ್ರಕಾರ, ಜೋಡಿಯಲ್ಲಿ ಒಬ್ಬರ ತೂಕ ಹೆಚ್ಚಿದ್ದರೆ, ಇನ್ನೊಬ್ಬರ ತೂಕವೂ ಹೆಚ್ಚಾಗುವ ಸಾಧ್ಯತೆ ಶೇ.37ರಷ್ಟು ಹೆಚ್ಚಿರುತ್ತದೆ. ಕಾರಣ ಇಬ್ಬರಲ್ಲಿ ಒಬ್ಬರ ನಡತೆ, ಆಹಾರ ಕ್ರಮ ಮತ್ತೊಬ್ಬರ ಆಹಾರಕ್ರಮದ ಮೇಲೆ ಪರಿಣಾಮ ಬೀರುತ್ತದೆ. ಸಂಗಾತಿಯೊಬ್ಬರು ಹೆಚ್ಚು ಕ್ಯಾಲರಿಯ ಆಹಾರಗಳನ್ನು ಸೇವಿಸುವವರಾಗಿದ್ದರೆ, ಸ್ನ್ಯಾಕ್ಸ್, ಸಂಸ್ಕರಿಸಿದ ಆಹಾರ, ಜಂಕ್ ಪ್ರಿಯರಾಗಿದ್ದರೆ, ಸಹಜವಾಗಿಯೇ ಅದನ್ನು ಇನ್ನೊಬ್ಬ ಸಂಗಾತಿಯೂ ಅನುಸರಿಸತೊಡಗುತ್ತಾರೆ. ಅವರ ಜೊತೆಗೆ ಎರಡು ತುತ್ತು ಉಂಡರೂ ಕೂಡಾ, ನಿಧಾನವಾಗಿ ಇಬ್ಬರೂ ಒಂದೇ ಅಭ್ಯಾಸವುಳ್ಳವರಾಗಿ ಬದಲಾಗುತ್ತಾರೆ.
ಹೊರಗೆ ತಿನ್ನುವುದು
ಸಂಗಾತಿಗಳಲ್ಲಿ ಒಬ್ಬರು ಫುಡೀ ಅರ್ಥಾತ್ ಆಹಾರ ಪ್ರಿಯರಾಗಿದ್ದರಂತೂ ಕತೆ ಮುಗೀತು. ಒಬ್ಬರ ಪರಿಣಾಮ ಇನ್ನೊಬ್ಬರ ಮೇಲೆ ಬೀರುತ್ತದೆ. ಇಬ್ಬರೂ ಹೊರಗೆ ಉಣ್ಣುವುದು ಹೆಚ್ಚಾಗುತ್ತದೆ. ಸಂಜೆಯ ಜೊತ್ತು, ಜೊತೆಗೆ ಸೇರುವ, ಸಮಯ ಕಳೆವ, ಸಿನೆಮಾ ಥಿಯೇಟರ್ ಭೇಟಿ ಇತ್ಯಾದಿ ಇತ್ಯಾದಿಗಳ ನೆಪದಲ್ಲಿ ಸಹಜವಾಗಿಯೇ ಹೆಚ್ಚು ಕ್ಯಾಲರಿ ಹೊಟ್ಟೆಗೆ ಹೋಗುತ್ತದೆ. ಅನಾರೋಗ್ಯಕರ ಆಹಾರ ಪದ್ಧತಿ ಹೆಚ್ಚಾಗುತ್ತದೆ, ಪರಿಣಾಮ ತೂಕವೂ ಹೆಚ್ಚುತ್ತದೆ.
ಹೆಚ್ಚು ಆಲ್ಕೋಹಾಲ್ ಕುಡಿಯುತ್ತೀರಿ
ಪ್ರೀತಿಯಲ್ಲಿ ಬಿದ್ದಾಗ ಜೊತೆಯಲ್ಲಿ ಸಮಯ ಕಳೆಯುವ ನೆಪದಲ್ಲಿ ಗುಂಡು ಪಾರ್ಟಿಗಳೂ ಹೆಚ್ಚಾಗುತ್ತವೆ. ಆಗಾಗ ಸೇರಿಕೊಂಡು ಆಲ್ಕೋಹಾಲ್ ಸೇವಿಸುವುದು ಇತ್ಯಾದಿ ಚಟುವಟಿಕೆಗಳಿಂದ ಸಹಜವಾಗಿಯೇ ತೂಕ ಏರುತ್ತದೆ.
ಹಾಗಾದರೆ ಏನು ಮಾಡಬಹುದು?
- ನಿಮ್ಮ ಸಂಗಾತಿಯ ಕೆಟ್ಟ ಆಹಾರಕ್ರಮವನ್ನು ನಿಮಗೆ ಸರಿಪಡಿಸಲು ಸಾಧ್ಯವಾಗದಿದ್ದರೂ, ನೀವು ಬದಲಾಗಬೇಡಿ. ನಿಮ್ಮ ಆಹಾರಕ್ರಮದಲ್ಲಿ ಶಿಸ್ತಿರಲಿ.
- ಪ್ರೀತಿಸುವ ನೆಪದಲ್ಲಿ ಗುಂಡು ಪಾರ್ಟಿ ಮಾಡಿ ಆಲ್ಕೋಹಾಲ್ ಸೇವನೆ ಇತ್ಯಾದಿಗಳನ್ನು ಮಾಡುವ ಬದಲು ಪ್ರೀತಿಯಿಂದ ಜೊತೆಯಾಗಿ ಅಡುಗೆ ಮಾಡಿ. ಅದೂ ಕೂಡಾ ಬಹಳ ರೊಮ್ಯಾಂಟಿಕ್ ಗಳಿಗೆಗಳನ್ನು ಸೃಷ್ಟಿ ಮಾಡುತ್ತವೆ.
- ಹೊರಗೆ ಹೋಗಿ ತಿನ್ನುವ ಸಂದರ್ಭ ಹೆಚ್ಚು ಆರ್ಡರ್ ಮಾಡಬೇಡಿ. ಅಗತ್ಯಕ್ಕಿಂತ ಕಡಿಮೆ ಆರ್ಡರ್ ಮಾಡಿ. ಕಡಿಮೆ ಪ್ರಮಾಣದಲ್ಲಿ ತಿನ್ನಿ. ಒಂದು ಬಗೆಯನ್ನು ಆರ್ಡರ್ ಮಾಡಿ ಇಬ್ಬರೂ ಹಂಚಿಕೊಂಡು ತಿನ್ನಿ.