ಬೆಂಗಳೂರು: ದಿನನಿತ್ಯದ ಚಟುವಟಿಕೆಯ ನಡುವೆ ಇದ್ದಕ್ಕಿದ್ದಂತೆ ನಡೆಯುವ ಸಣ್ಣ ನಡೆಗೆ (ಹೀಗೂ ಉಂಟು) ನಾವು ಯಾರೋ ನಮ್ಮನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆಂದು ಹೇಳುವುದುಂಟು. ರೆಪ್ಪೆ ಅದುರುವುದರಿಂದ ಹಿಡಿದು ಸೀನಿನವರೆಗೆ ಎಂಥದೋ ಶಕುನಗಳನ್ನು ತಾಳೆ ಮಾಡುತ್ತೇವೆ. ಇದು ಕೇವಲ ನಮ್ಮ ನಂಬಿಕೆಯಲ್ಲ. ಭೂಮಂಡಲದ ಮೇಲಿರುವ ಎಲ್ಲ ದೇಶದಲ್ಲೂ ಇಂತಹ ನಂಬಿಕೆಗಳಿಗೆ ಸಾಮ್ಯತೆಗಳಿವೆ.
ನಮ್ಮ ಸುತ್ತಲೂ ಸಾಕಷ್ಟು ನೆಗೆಟಿವಿಟಿ ಇದೆ. ದಿನನಿತ್ಯವೂ ಇಂತಹ ಹಲವು ಭಾವನೆಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತೇವೆ. ಇದರಿಂದ ನಮ್ಮ ಮನಸ್ಸು ಕ್ಷೋಭೆಗೂ ಒಳಗಾಗುತ್ತದೆ. ಕೆಲವೊಮ್ಮೆ, ನಾವು ನಮ್ಮ ಪ್ರೀತಿಪಾತ್ರರ ಬಗ್ಗೆ ಯೋಚಿಸುತ್ತೇವೆ, ಮಿಸ್ ಮಾಡಿಕೊಳ್ಳುತ್ತೇವೆ. ಬಹಳಷ್ಟು ಸಾರಿ ನಾವು ಇನ್ನೊಬ್ಬರ ಬಗ್ಗೆ ಯೋಚಿಸುವುದರಿಂದ ಅವರಿಗೂ ನಮ್ಮ ಯೋಚನೆಯನ್ನು ಸೂಚನೆಯಂತೆ ತಲುಪಿಸಬಹುದು ಎಂಬುದು ತಿಳಿದಿದೆಯೇ? ಹೌದು, ಇದು ಕೆಲವು ಸಾರಿ ನಿಜವೂ ಹೌದು ಎನ್ನುತ್ತದೆ ಮನೋವಿಜ್ಞಾನ.
ಇನ್ನೊಬ್ಬರು ನಮ್ಮ ಬಗ್ಗೆ ಮತ್ತೆ ಮತ್ತೆ ಯೋಚಿಸುತ್ತಲೇ ಇದ್ದರೆ? ಅದು ನಿಮ್ಮ ಪ್ರೀತಿಪಾತ್ರರಿರಬಹುದು, ಶತ್ರುವಿರಬಹುದು ಅಥವಾ ನಿಮಗೆ ಪರಿಚಯವೇ ಇಲ್ಲದ ಯಾರೋ ವ್ಯಕ್ತಿಯಾಗಿರಲೂಬಹುದು. ಆದರೆ, ಇವರು ಆಲೋಚನೆಯಲ್ಲಿ, ಮಾತಿನಲ್ಲಿ, ನಾವು ಬಂದು ಹೋಗುತ್ತಿದ್ದರೆ, ಬಹಳಷ್ಟು ಸಾರಿ ನಾವಿಲ್ಲಿ ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ ಅರ್ಥವಾಗುತ್ತದೆ ಎಂಬ ವಾದವೂ ಇದೆ. ಯಾವೆಲ್ಲ ಅನುಭವಗಳು ಇಂತಹ ಸೂಚನೆಗಳು ಎಂಬುದನ್ನು ನೋಡೋಣ.
ಇದ್ದಕ್ಕಿದ್ದಂತೆ ವಿಚಿತ್ರ ಭಾವನೆಗಳ ಅನುಭವವಾಗಬಹುದು
ನೀವು ನಿಮ್ಮ ಆಫೀಸಿನಲ್ಲಿ ಏನೋ ಬ್ಯುಸಿಯಾಗಿ ಕೆಲಸ ಮಾಡುತ್ತಿರಬಹುದು ಅಥವಾ ಯಾವುದೋ ಪಾರ್ಟಿಯಲ್ಲಿ ನಗುತ್ತಾ ಕುಣಿಯುತ್ತಾ ಇರಬಹುದು. ಇದ್ದಕ್ಕಿದ್ದಂತೆಯೇ ಕಾರಣವಿಲ್ಲದೆ ಯಾವ ಸೂಚನೆಯೂ ಇಲ್ಲದೆ ನಿಮ್ಮ ಮೂಡ್‌ನಲ್ಲಿ ಬದಲಾವಣೆಯಾಗಬಹುದು. ಇದರರ್ಥ ಬಹುಶಃ ನಿಮ್ಮನ್ನು ಯಾರೋ ಮಿಸ್ ಮಾಡಿಕೊಳ್ಳುತ್ತಿದ್ದಾರೆ! ನಿಮ್ಮ ಅನುಪಸ್ಥಿತಿಯಿಂದಾಗಿ ನಿಮ್ಮನ್ನು ಪ್ರೀತಿಸುವ ಇನ್ನೊಂದು ಜೀವ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿರಬಹುದು. ಇದಲ್ಲದೆ, ತುಂಬ ಒತ್ತಡದಲ್ಲಿದ್ದು, ಕೆಲಸದ ಮೇಲೆ ಗಮನಕೊಡಲಾಗದಷ್ಟು ಸುಸ್ತಾಗುತ್ತಿದ್ದಾಗ, ಇದ್ದಕ್ಕಿದ್ದಂತೆ ಶಕ್ತಿ ಬಂದಂತೆನಿಸಿ ಒಂದೇ ಓಘದಲ್ಲಿ ಬಾಕಿಯಿರುವ ಅಷ್ಟೂ ಕೆಲಸಗಳನ್ನು ಮಾಡಿ ಮುಗಿಸುತ್ತೀರಿ. ಅದೆಲ್ಲಿಂದಲೋ ಒಂದು ಚೈತನ್ಯ ತುಂಬಿದಂತಾಗಿ ಫ್ರೆಶ್ ಫೀಲ್ ಸಿಗುತ್ತದೆ. ಇದೂ ಕೂಡ, ನಿಮ್ಮನ್ನು ಪ್ರೀತಿಸುವ ಇನ್ನೊಂದು ಜೀವ ನಿಮಗಾಗಿ ಮಿಡಿಯುತ್ತಿದೆ ಹಾಗೂ ನಿಮ್ಮ ಕಾಳಜಿಯನ್ನು ಮಾಡುತ್ತಿದೆ ಎಂದರ್ಥವಂತೆ.
ಇದನ್ನೂ ಓದಿ | JDS Pancharatna | ಸರ್ಕಾರಿ ವೈದ್ಯರಿಗೆ ಭಯ-ಭಕ್ತಿ ಇರಲಿ, ನೆಟ್ಟಗೆ ಕೆಲಸ ಮಾಡಲು ಆರೋಗ್ಯ ಸಚಿವರು ಸೂಚಿಸಬೇಕು: ಎಚ್‌ಡಿಕೆ
ಒಂದು ಕಣ್ಣು ತುರಿಸಲು ಆರಂಭವಾಗುತ್ತದೆ
ನಿಮಗೇನೋ ಕಣ್ಣಿನ ತೊಂದರೆಯಿಂದ, ಅಲರ್ಜಿಂದ ಹಾಗಾಗಿದ್ದಲ್ಲಿ ಖಂಡಿತ ವೈದ್ಯರನ್ನು ಸಂಪರ್ಕಿಸಬೇಕು. ಆದರೆ, ಇಲ್ಲಿ ಹೇಳುತ್ತಿರುವುದು ಇದ್ದಕ್ಕಿದ್ದಂತೆ ಎಲ್ಲ ಸರಿಯಿದ್ದಾಗಲೂ ಕಣ್ಣು ತುರಿಸುತ್ತದೆ. ಕೆಲವು ನಂಬಿಕೆಗಳ ಪ್ರಕಾರ, ಮಹಿಳೆಯರಲ್ಲಿ ಎಡಗಣ್ಣು ತುರಿಸಿದರೆ, ಆಕೆಯನ್ನು ಯಾರೋ ಹೊಗಳುತ್ತಾರೆಂದೂ, ಬಲಗಣ್ಣು ತುರಿಸಿದರೆ ಆಕೆಯನ್ನು ಯಾರೋ ಆಕೆಯ ಒಳ್ಳೆಯದನ್ನು ಬಯಸುತ್ತಿಲ್ಲ ಎಂದರ್ಥ. ಪುರುಷರಿಗೆ ಅದು ವಿರುದ್ಧವಾಗಿ ಅಂದರೆ, ಎಡಗಣ್ಣು ತುರಿಸಿದರೆ ಯಾರೋ ನಿಮ್ಮ ಒಳ್ಳೆಯದು ಬಯಸುತ್ತಿಲ್ಲವೆಂದೂ ಬಲಗಣ್ಣು ತುರಿಸಿದರೆ, ಹೊಗಳುತ್ತಿದ್ದಾರೆಂದೂ ಅರ್ಥವಂತೆ. ಇದೊಂದು ಹಳೆಯ ನಂಬಿಕೆಯೂ ಹೌದು. ಬಹಳಷ್ಟು ದೇಶಗಳಲ್ಲೂ ಇದನ್ನು ನಂಬುತ್ತಾರಂತೆ.
ಕಣ್ಣಿನಂತೆ ಕೆನ್ನೆಗೂ ಇದು ಸಂಬಂಧಿಸುತ್ತದಂತೆ
ಕೆನ್ನೆ ಹಾಗೂ ಕಿವಿ ಕಾರಣವಿಲ್ಲದೆ ಕೆಂಪಗಾಗುತ್ತದೆ ಎಂದಾದಲ್ಲಿ ಯಾರೋ ನಿಮ್ಮನ್ನು ನೆನೆಸಿಕೊಳ್ಳುತ್ತಿದ್ದಾರಂದು ಅರ್ಥವಂತೆ. ನೀವ್ಯಾರಿಗೋ ಬೈಯುವಾಗ ಅಥವಾ ಯಾರ ಜೊತೆಗೂ ರೊಮ್ಯಾಂಟಿಕ್ ಆಗಿ ಹರಟುವಾಗ ಕೆನ್ನೆ, ಕಿವಿ ಕೆಂಪಾಗುವುದಕ್ಕೂ ಇದಕ್ಕೂ ಸಂಬಂಧವಿಲ್ಲ. ಕಾರಣವಿಲ್ಲದೆ ಆದರೆ, ಮಾತ್ರ ಇದು ಅನ್ವಯವಾಗುತ್ತದಂತೆ.
ಕಾರಣವಿಲ್ಲದೆ ರೋಮಾಂಚನವಾಗುವುದಕ್ಕೂ ಇಂಥದ್ದೇ ಕಾರಣವಂತೆ
ನೀವು ಸುಮ್ಮನೆ ಕುಳಿತಿದ್ದರೂ, ಯಾರಾದರೂ ಬೇರೆಯವರು ನಿಮ್ಮಿಂದ ಆಕರ್ಷಿತರಾಗಿದ್ದಾರೆಂದಾದಲ್ಲಿ ನಿಮ್ಮನ್ನು ಅವರು ಮುಟ್ಟದೆಯೂ ನಿಮಗೆ ರೋಮಾಂಚನವಾದಲ್ಲಿ, ಆ ಆಕರ್ಷಿತಳಾ/ನಾದ ವ್ಯಕ್ತಿ ಮಾನಸಿಕವಾಗಿ ಬಹಳ ಸಾಮರ್ಥ್ಯವುಳ್ಳವಳು/ನು ಎಂದು ಅರ್ಥವಂತೆ.
ಇದ್ದಕ್ಕಿದ್ದಂತೆ ಸೀನು ಬರುವುದು ಕೂಡಾ ಇಂಥದ್ದರೊಂದಿಗೆ ತಾಳೆ ಮಾಡಲಾಗುತ್ತದೆ.
ಇದು ಬಹಳ ದೇಶಗಳಲ್ಲಿ ನಂಬಿಕೊಂಡಿರುವ ಸಂಸ್ಕೃತಿ ಇದು. ಯಾರಾದರೂ ಕಾರಣವಿಲ್ಲದೆ ಸೀನಿದರೆ, ಯಾರೋ ನಿಮ್ಮನ್ನು ನೆನೆಸುತ್ತಿದ್ದಾರೆಂದೂ, ಹಲವು ದೇಶಗಳಲ್ಲಿ ಪಕ್ಕದಲ್ಲಿರುವ ವ್ಯಕ್ತಿಯ ಬಳಿ ಮೂರಂಕಿಯ ಸಂಖ್ಯೆಯನ್ನು ಕೇಳಿ ಲೆಕ್ಕಾಚಾರದ ಮೂಲಕ ಯಾವ ಅಕ್ಷರದ ಮಂದಿ ತನ್ನನ್ನು ನೆನಸಿಕೊಳ್ಳುತ್ತಿದ್ದಾರೆಂದು ಕಂಡುಹಿಡಿಯುವ ಸಂಪ್ರದಾಯವಿದೆಯಂತೆ. ಅಂದರೆ, ಉದಾಹರಣೆಗೆ ಪಕ್ಕದಲ್ಲಿರುವವರು ೨೪೬ ಎಂದರೆ, ಈ ಮೂರೂ ಅಂಕೆಗಳನ್ನು ಕೂಡಿಸಿ ಬರುವ ೧೨ ಸಂಖ್ಯೆಗೆ ಸರಿ ಸಮನಾದ ಇಂಗ್ಲಿಷ್ ಅಕ್ಷರ ಎಲ್ ಎಂದೂ ಎಲ್ ಅಕ್ಷರದ ವ್ಯಕ್ತಿ ನಿಮ್ಮನ್ನು ನೆನೆಸುತ್ತಿದ್ದಾರೆಂದೂ ಅರ್ಥವಂತೆ.
ಪದೇಪದೇ ಬಿಕ್ಕಳಿಕೆ ಬಂದರೆ ಯಾರೋ ನಿಮ್ಮನ್ನು ಸರಿಯಾಗಿ ಬೈಯುತ್ತಿದ್ದಾರೆ ಎಂದು ಅರ್ಥವಂತೆ
ಯಾರೋ ಇದ್ದಕ್ಕಿದ್ದಂತೆ ಮುಟ್ಟಿದಂತೆ ಅನುಭವವಾಗುವುದೂ ಇದೆ. ಇದು ಯಾಕೆಂದರೆ, ನಿಮ್ಮನ್ನು ನೆನೆಸಿಕೊಳ್ಳುವ ವ್ಯಕ್ತಿಯ ಮಾನಸಿಕತೆ ಎಷ್ಟು ಶಕ್ತಿಯುತವಾದದ್ದೆಂದರೆ, ನಿಮ್ಮಿಬ್ಬರ ಪ್ರೀತಿ ಅಷ್ಟು ಗಟ್ಟಿಯಾಗಿರುವುದೆಂದಾದಲ್ಲಿ ಬಹಳ ಸಾರಿ ಹತ್ತಿರವಿಲ್ಲದಿದ್ದರೂ ಈ ರೀತಿ ಸ್ಪರ್ಶಾನುಭವವಾಗುವ ಸಾಧ್ಯತೆಗಳೂ ಇವೆಯಂತೆ.
ಟೆಲಿಪಥಿ
ಇಬ್ಬರ ನಡುವೆ ಅದ್ಭುತವಾದ ಕನೆಕ್ಷನ್ ಇರುವ ಸಂದರ್ಭ ದೂರದಲ್ಲಿದ್ದರೂ ಪರಸ್ಪರ ಹತ್ತಿರವೇ ಇದ್ದಂತೆ ಭಾಸವಾಗುತ್ತದೆ. ದೂರದಲ್ಲಿರುವ ನಿಮ್ಮ ಪ್ರೀತಿಯ ವ್ಯಕ್ತಿಯ ಆಲೋಚನೆಗಳು ಅರಿವೇ ಇಲ್ಲದಂತೆ ಅದೇ ಸಂದರ್ಭ ನಿಮ್ಮನ್ನು ತಲುಪಿಬಿಡುತ್ತದೆ. ಒಂದೇ ವಿಚಾರಗಳನ್ನು ಇಬ್ಬರೂ ಯೋಚನೆ ಮಾಡುತ್ತೀರಿ. ಇದೊಂದು ಅದ್ಭುತವಾದ ಅನುಭವ ಕೂಡಾ.
ಕನಸುಗಳು
ಇನ್ಯಾರೋ ನಿಮ್ಮನ್ನು ಎಷ್ಟು ಬಯಸುತ್ತಿದ್ದಾರೆಂದರೆ, ಅವರು ನಿಮ್ಮ ಕನಸಿನಲ್ಲಿ ಆ ಮೂಲಕ ಬರುತ್ತಾರೆ ಎಂಬ ವಾದವೂ ಇದೆ. ನಿಮ್ಮ ಬಗೆಗಿನ ಅವರ ಯೋಚನೆಗಳು ಎಷ್ಟು ಗಾಢವಾಗಿರುತ್ತದೆಂದರೆ, ಇದ್ದಕ್ಕಿದ್ದಂತೆ ನಿಮಗರಿವೇ ಇಲ್ಲದೆ ನಿಮ್ಮಲ್ಲಿ ಅವರ ನೆನಪು, ಬಯಕೆ ಮೂಡುತ್ತದೆ. ಹಾಗೂ ಇದೂ ಒಂದು ಬಗೆಯ ಟೆಲಿಪತಿಯೇ. ಆದರೆ ಇದು ಎಲ್ಲ ಸಂದರ್ಭಗಳಿಗೂ ಅನ್ವಯವಾಗುವುದಿಲ್ಲ ಎಂದು ನೆನಪಿಡಿ.
ಇವೆಲ್ಲವುಗಳೂ ಪಾಸಿಟಿವ್ ಹಾಗೂ ನೆಗೆಟಿವ್ ಆಗಿಯೂ ಇರಬಹುದು. ಎಲ್ಲೋ ಒಮ್ಮೆ ಆಗುವ ಇಂತಹ ಅನುಭವಗಳಿಗೆ ಹೆಚ್ಚು ಗಮನ ಅಗತ್ಯವಿಲ್ಲವಾದರೂ ಪದೇ ಪದೇ ಇಂಥ ಅನುಭವವಾಗುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡದಿರಿ ಎನ್ನುತ್ತದೆ ಮನೋವಿಜ್ಞಾನ.
ಇದನ್ನೂ ಓದಿ | Health Care | ತಾವರೆ ಬೀಜ ಅಥವಾ ಮಖನಾ ತಿನ್ನಲು ರುಚಿ ಮಾತ್ರವೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದುಾ