Site icon Vistara News

Eating Style: ಉಣ್ಣುವ ರೀತಿ ನಾವು ಎಂಥವರು ಎನ್ನುವುದನ್ನು ಬಯಲು ಮಾಡುತ್ತದೆ! ಅದು ಹೇಗೆ?

Eating Style

ಒಬ್ಬ ವ್ಯಕ್ತಿತ್ವ ಒಟ್ಟಾರೆ (Eating Style) ಹೇಗೆ ಎಂದು ತಿಳಿಯಲು ಹಲವಾರು ಮಾನದಂಡಗಳಿರುತ್ತವೆ. ಒಮ್ಮೆ ಒಬ್ಬ ವ್ಯಕ್ತಿಯನ್ನು ಭೇಟಿಯಾದ ತಕ್ಷಣ ಈತ ಹೀಗೆಯೇ ಎಂದು ನಾವು ಹೇಳಲಾಗುವುದಿಲ್ಲ. ಒಂದಿಷ್ಟು ಕಾಲ ಜೊತೆಗೆ ಪಳಗಬೇಕು. ಆದರೆ, ವ್ಯಕ್ತಿತ್ವ ಹೀಗೆ ಎಂದು ಹೇಳಲು ಜ್ಯೋತಿಷ್ಯ ಸೇರಿದಂತೆ ಹಲವಾರು ವಿಧಾನಗಳಿವೆ. ನಮ್ಮ ಹಲವಾರು ಅಭ್ಯಾಸಗಳಿಂದ, ಕೈಯ ರೇಖೆಗಳಿಂದ, ನಡೆಯುವ ವಿಧಾನದಿಂದ, ಬೆರಳಿನ ಉದ್ದದಿಂದ, ದೇಹದ ಆಕಾರದಿಂದ, ಬರೆಯುವ ಶೈಲಿಯಿಂದ, ಹಸ್ತಾಕ್ಷರದಿಂದ ಹೀಗೆ ಹಲವಾರು ವಿಧಾನಗಳಿಂದ ಪ್ರತಿಯೊಬ್ಬರ ವ್ಯಕ್ತಿತ್ವ, ಭವಿಷ್ಯ ಇತ್ಯಾದಿಗಳನ್ನು ಲೆಕ್ಕಾಚಾರ ಹಾಕುವ ವಿಧಾನವಿದೆ. ಆದರೆ ಉಣ್ಣುವ ವಿಧಾನದಿಂದಲೂ ನಿಮ್ಮ ವ್ಯಕ್ತಿತ್ವವನ್ನು ಅಳೆಯಬಹುದು ಎಂಬುದು ತಿಳಿದಿದೆಯೇ? ಹೌದು, ನೀವು ಹೇಗೆ ಉಣ್ಣುತ್ತೀರಿ ಎಂಬುದನ್ನು ಆಧರಿಸಿಯೂ ನಿಮ್ಮ ವ್ಯಕ್ತಿತ್ವ ಹೀಗೆ ಎಂದು ಹೇಳಬಹುದಂತೆ. ಬನ್ನಿ, ಈ ಕೆಳಗಿನವರಲ್ಲಿ ನೀವು ಯಾವುದನ್ನು ಹೋಲುತ್ತೀರಿ ಎಂದು ಕಂಡುಕೊಳ್ಳಿ.

ನಿಧಾನವಾಗಿ ಉಣ್ಣುವವರು

ನಮ್ಮ ಪರಿಚಿತ ವರ್ಗದಲ್ಲಿ, ಸ್ನೇಹವರ್ಗದ ಗುಂಪಿನಲ್ಲಿ ಕೆಲವರಿರುತ್ತಾರೆ. ಅವರು ನಿಧಾನವಾಗಿ ಉಣ್ಣುವವರು. ಜೊತೆಗೆ ಕೂತರೆ, ಎಲ್ಲರೂ ಉಂಡ ನಂತರ ಕೊನೆಯಲ್ಲಿ ಊಟ ಮುಗಿಸಿ ಏಳುವವರು. ನಿಧಾನವಾಗಿ ಉಣ್ಣುವವರು ಯಾವಾಗಲೂ ಸವಿದು, ಪ್ರತಿ ತುತ್ತನ್ನೂ ಅನುಭವಿಸಿ ಉಣ್ಣುತ್ತಾರೆ. ಜೊತೆಯಲ್ಲಿ ಒಂದಿಷ್ಟು ಹರಟುತ್ತಾರೆ. ಎಲ್ಲಿಯದೋ ಸುದ್ದಿಯನ್ನು ಚಪ್ಪರಿಸಿ ಮಾತನಾಡುವ ಜೊತೆಗೆ ಊಟದಲ್ಲೂ ಮಾತಿನಲ್ಲೂ ಕಳೆದು ಹೋಗುತ್ತಾರೆ. ಬೇಗ ಉಣ್ಣುವುದೆಂದರೆ ಇವರಿಗೆ ಆಗದು. ಬೇಗ ಉಂಡರೆ ಸುಸ್ತಾಗಿಬಿಡುವ ಇವರು ಬಹಳ ಆತ್ಮವಿಶ್ವಾಸ ಉಳ್ಳವರು. ಆದರೆ ಪ್ರದರ್ಶನ, ಶೋಆಫ್‌ ಇವರಿಗೆ ಇಷ್ಟವಾಗದು. ನಾಯಕತ್ವ ಗುಣವೂ ಇವರಿಗಿದ್ದು, ಅಂತಹ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಆದರೆ, ತಮ್ಮದೇ ಆದ ಸಮಯವನ್ನು ಇಷ್ಟಪಡುವವರು.

ಬೇಗ ಉಣ್ಣುವವರು

ಬೇಗ ಉಣ್ಣುವವರು ಯಾವಾಗಲೂ ಉಳಿದವರು ಅರ್ಧ ಉಂಡು ಮುಗಿಸುವಷ್ಟರಲ್ಲಿ ತಮ್ಮ ಊಟವನು ಮುಗಿಸಿರುತ್ತಾರೆ. ಇಂತಹ ಮಂದಿ ಯಾವಾಗಲೂ ಇನ್ನಷ್ಟು ಬೇಕು ಎಂಬ ಹಸಿವಿನಿಂದ ಕೂಡಿರುವ ವ್ಯಕ್ತಿತ್ವ ಉಳ್ಳವರು. ಬಹಳ ಮಹತ್ವಾಕಾಂಕ್ಷೆಯಿರುವ ಈ ಮಂದಿ ಸದಾ ಕೆಲಸ ಮಾಡಿಕೊಂಡಿರುವವರು. ಅವರು ಸಮಯಕ್ಕೆ ಬಹಳ ಮಹತ್ವ ಕೊಡುತ್ತಾರೆ. ಹಾಗೂ ಕೆಲವೊಮ್ಮೆ ತಮ್ಮ ಸಂತೋಷದ ಕ್ಷಣವನ್ನೂ ಬದಿಗೊತ್ತಿಬಿಡುವ ಗುಣದವರು.

ಕುತೂಹಲದಿಂದ ಉಣ್ಣುವವರು

ಸದಾ ಹೊಸ ಬಗೆಯ ಊಟಕ್ಕೆ, ಹೊಸ ಅಡುಗೆಯ ಬಗ್ಗೆ ಕುತೂಹಲ ಉಳಿಸಿಕೊಂಡಿರುವವರು. ಹೊಸದರ ಅನ್ವೇಷಣೆಯಲ್ಲಿರುವ, ಹೊಸತನಕ್ಕೆ ತುಡಿಯುವ ಮನಸ್ಥಿತಿಯ ಮಂದಿ ಇವರು. ಬಗೆಬಗೆಯ ಕಾಂಬಿನೇಶನ್‌ಗಳಲ್ಲಿ ಆಹಾರವನ್ನು ತಿಂದು ನೋಡುವ, ಹೊಸತನ್ನು ಟ್ರೈ ಮಾಡುವ ಮಂದಿ ಇವರು. ಇಂತಹ ಮಂದಿ ಹೃದಯ ಶ್ರೀಮಂತಿಕೆಯ ಮಂದಿ. ಜೀವನವನ್ನು ಚೆನ್ನಾಗಿ ಅನುಭವಿಸಬೇಕು, ಸುಖವಾಗಿ ಇರಬೇಕು ಎಂದು ಆ ಕ್ಷಣದ ಸುಖವನ್ನು ಅನುಭವಿಸುವವರು. ತಮ್ಮ ಕಂಫರ್ಟ್‌ ಝೋನ್‌ನಿಂದ ಹೊರಗೆ ಹೋಗುವುದಕ್ಕೆ ಇವರು ಹಿಂದೆಮುಂದೆ ನೋಡಲಾರರು.

ಇದನ್ನೂ ಓದಿ: Benefits of Poppy Seeds: ಗಸೆಗಸೆ ನಿದ್ದೆಗಷ್ಟೇ ಅಲ್ಲ, ಪೌಷ್ಟಿಕಾಂಶಗಳ ಆಗರವೂ ಹೌದು!

ಆಯ್ದು ತಿನ್ನುವವವರು

ಇಂತಹ ಮಂದಿ ಏನೇ ಕೊಟ್ಟರೂ ಅದರಲ್ಲಿ ಒಂದಿಷ್ಟು ಆಹಾರವನ್ನು ಎತ್ತಿಡುತ್ತಾರೆ. ಒಂದಿಷ್ಟನ್ನು ಮಾತ್ರ ಹೆಕ್ಕಿ ತಿಂದು ಉಳಿದುದನ್ನು ತಟ್ಟೆಯಲ್ಲಿ ಹಾಗೆಯೇ ಬಿಟ್ಟು ಏಳುತ್ತಾರೆ. ಈ ಮಂದಿ ಎಲ್ಲೇ ಹೋದರೂ ಒಂದಿಷ್ಟು ಬಗೆಯ ಆಹಾರವನ್ನು ಮಾತ್ರ ತಿನ್ನುತ್ತಾರೆ. ಇಂಥವರು ಆಹಾರದಲ್ಲಿ ಪ್ರಯೋಗಶೀಲ ಮನಸ್ಸನ್ನು ಹೊಂದಿರುವುದಿಲ್ಲ. ಹೊಸತನ್ನು ಟ್ರೈ ಮಾಡಲು ಅತೀವ ಆಸಕ್ತಿ ಇರುವುದಿಲ್ಲ. ಇಂತಹ ಮಂದಿ ಜೀವನದಲ್ಲಿ ನಿರ್ಧಿಷ್ಟ ಗುರಿಯನ್ನು ಹೊಂದಿರುತ್ತಾರೆ. ಆದರೆ, ಅತಿಯಾದ ಯೋಚನೆ, ಅತಿಯಾದ ಪ್ಲಾನಿಂಗ್‌ ಇವರು ಮಾಡುವುದಿಲ್ಲ.

Exit mobile version