Site icon Vistara News

ಮೆಂತ್ಯೆ ನೈಸರ್ಗಿಕ ಹೇರ್‌ ಕಂಡಿಷನರ್‌

ಮೆಂತ್ಯೆ ನೈಸರ್ಗಿಕ ಹೇರ್‌ ಕಂಡಿಷನರ್‌

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಅಡುಗೆ ಮನೆಯಲ್ಲಿ ಬಳಸುವ ಮೆಂತ್ಯೆ ನಿಮ್ಮ ಕೂದಲಿನ ಸೌಂದರ್ಯ ಹೆಚ್ಚಿಸುತ್ತದೆ. ಹೌದು. ಹೆಚ್ಚು ಖರ್ಚಿಲ್ಲದೇ ಮನೆಯಲ್ಲಿಯೇ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.

“ ನಿಮ್ಮ ವದನ ಎಷ್ಟೇ ಸುಂದರವಾಗಿದ್ದರೂ ಕೂದಲ ಸೌಂದರ್ಯದ ಸಾಥ್‌ ಇಲ್ಲದೇ ಹೋದಲ್ಲಿ ಸೌಂದರ್ಯ ಪರಿಪೂರ್ಣವಾಗದು. ಮುಖದ ಸೌಂದರ್ಯ ಹೆಚ್ಚಿಸಲು ಕೂದಲ ಆರೋಗ್ಯ ಕೂಡ ಪರೋಕ್ಷವಾಗಿ ಸಹಕರಿಸುತ್ತದೆ. ಇನ್ನು ಒಣಗಿದಂತಿರುವ ಕೂದಲು ಯಾವುದೇ ಕಾರಣಕ್ಕೂ ಸುಂದರವಾಗಿ ಕಾಣಲು ಸಾಧ್ಯವಿಲ್ಲ. ಆಗಾಗ್ಗೆ ಕಂಡಿಷನಿಂಗ್‌ ಮಾಡುವುದು ಅತ್ಯಗತ್ಯ. ರಾಸಾಯನಿಕ ಪದಾರ್ಥಗಳಿಂದ ಕಂಡಿಷನಿಂಗ್‌ ಮಾಡುವುದು ಸುಲಭ ಏನಿಸಿದರೂ, ತಕ್ಷಣಕ್ಕೆ ನಿಮ್ಮ ಕೂದಲು ನಳನಳಿಸಿದಂತೆ ಕಂಡರೂ, ಮುಂದೊಮ್ಮೆ ಉದುರುವ ಸಾಧ್ಯತೆಯೇ ಹೆಚ್ಚು. ಅಡುಗೆ ಮನೆಯಲ್ಲಿ ಸುಲಭವಾಗಿ ದೊರೆಯುವ ಮೆಂತ್ಯೆ ಕಳನ್ನು ಬಳಸಿ ಕೂದಲನ್ನು ಹೇರ್‌ ಕಂಡೀಷನಿಂಗ್‌ ಮಾಡಬಹುದು’ ಎನ್ನುತ್ತಾರೆ ಹೇರ್‌ ಸ್ಪೆಷಲಿಸ್ಟ್‌ ದೇವಿಕಾ. ಈ ಬಗ್ಗೆ ಸಂಕ್ಷೀಪ್ತ ಮಾಹಿತಿ ನೀಡಿದ್ದಾರೆ.

ನೈಸರ್ಗಿಕ ಹೇರ್‌ ಕಂಡಿಷನರ್‌

ನಿಮ್ಮ ಕೂದಲಿಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಮೆಂತ್ಯೆ ಪುಡಿ ಮಾಡಿಕೊಳ್ಳಿ. ಅರ್ಧ ಕಪ್‌ ಮೊಸರಿನಲ್ಲಿಕಲೆಸಿ. ಇದಕ್ಕೆ ನಾಲೈದು ಹನಿ ನಿಂಬೆರಸ ಹಾಕಿ. ಇದನ್ನು ನಿಮ್ಮ ಕೂದಲಿಗೆ ಪ್ಯಾಕ್‌ ಹಚ್ಚಿ. ಅಗತ್ಯಕ್ಕೆ ತಕ್ಕಂತೆ ಕೆಲ ಕಾಲ ಹಾಗೆಯೇ ಬಿಡಿ. ಇದು ಕಂಡಿಷನರ್‌ನಂತೆ ಕಾರ್ಯ ನಿರ್ವಹಿಸುತ್ತದೆ. ಕೆಲ ಸಮಯದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಕೂದಲ ನೈಜ ಸೌಂದರ್ಯ ಹಾಳಾಗದೇ ಹಾಗೆಯೇ ಉಳಿಯುವುದು ಮಾತ್ರವಲ್ಲ. ದೇಹ ಕೂಡ ತಂಪಾಗಿರುತ್ತದೆ.

ತಲೆ ಹೊಟ್ಟಿಗೆ ಪರಿಹಾರ

ರಾತ್ರಿಯಿಡಿ ಮೆಂತ್ಯೆಯನ್ನು ನೀರಿನಲ್ಲಿನೆನೆಸಿ. ಬೆಳಗ್ಗೆ ಇದನ್ನು ನುಣ್ಣಗೆ ರುಬ್ಬಿ. ಇದನ್ನು ತಲೆ ಬುರಡೆಗೆ ಲೇಪಿಸಿ. 30 ನಿಮಿಷಗಳ ವರೆಗೆ ಹಾಗೆಯೇ ಬಿಡಿ. ನಂತರ ಶ್ಯಾಂಪೂವಿನಿಂದ ಸ್ನಾನ ಮಾಡಿ. ಕೂದಲ ಬುಡ ಸ್ವಚ್ಛವಾಗುವುದು. ಕ್ರಮೇಣ ಹೊಟ್ಟು ನಿವಾರಣೆಯಾಗುವುದು.

ಇದನ್ನೂ ಓದಿ: hair care: ಒದ್ದೆ ಕೂದಲು ತಂದೊಡ್ಡುವ ತೊಂದರೆಗಳು!

Exit mobile version