Site icon Vistara News

Aam Panna Recipe: ಆಮ್‌ ಪನ್ನಾ! ಮಾವಿನಕಾಯಿಯ ಅದ್ಭುತ ಪೇಯ ಇದು; ನೀವೂ ಮಾಡಿ ನೋಡಿ

Aam Panna Recipe

ಹೇಳಿಕೇಳಿ ಇದು ಮಾವಿನಹಣ್ಣಿನ ಕಾಲ. ಮಾರುಕಟ್ಟೆಗೆ ಕಾಲಿಟ್ಟರೆ ಮಾವಿನಹಣ್ಣಿನಷ್ಟೇ ಸುಲಭವಾಗಿ ಮಾವಿನಕಾಯಿಯೂ ದೊರೆಯುತ್ತದೆ. ಮಾವಿನ ಕಾಯಿ ದೊರೆತರೆ, ಉಪ್ಪಿನಕಾಯಿ, ಗೊಜ್ಜು ಸೇರಿದಂತೆ ಥರಹೇವಾರಿ ಅಡುಗೆಗಳನ್ನು ಮಾಡುವುದು ಸಾಮಾನ್ಯ. ಅವುಗಳ ಪೈಕಿ ಆಮ್‌ ಪನ್ನಾ ಕೂಡಾ ಒಂದು. ಈ ಮಹಾರಾಷ್ಟ್ರ ಮೂಲದ ಪೇಯ ಬೇಸಿಗೆಗೆ ಅತ್ಯಂತ ಹಿತ ನೀಡುವ ಪೇಯಗಳ ಪೈಕಿ ಒಂದು. ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಹಾಗೂ ಆರೋಗ್ಯಕರವೂ ಆಗಿರುವ ಈ ಪೇಯದಿಂದ ಸಾಕಷ್ಟು ಲಾಭಗಳೂ ಇವೆ. ಬನ್ನಿ, ಆಮ್‌ ಪನ್ನಾದ (Aam Panna Recipe) ಲಾಭಗಳು ಯಾವುವು ಎಂಬುದನ್ನು ನೋಡೋಣ.

ಪಚನಕ್ರಿಯೆಗೆ ಒಳ್ಳೆಯದು

ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಹೊಂದಿರುವ ಮಂದಿಗೆ ಆಮ್‌ ಪನ್ ಒಳ್ಳೆಯದು. ಹೊಟ್ಟೆಯುಬ್ಬರ ಹಾಗೂ ಮಲಬದ್ಧತೆಯ ಸಮಸ್ಯೆ ನಿಮಗೆ ಆಗಾಗ ಕಾಣಿಸುತ್ತಿದೆ ಎಂದಾದಲ್ಲಿ ಇದರಲ್ಲಿ ಅದಕ್ಕೆ ಉತ್ತರವಿದೆ. ಆಮ್‌ ಪನ್ನಾದಲ್ಲಿ ನಾರಿನಂಶವಿದೆ. ಅಷ್ಟೇ ಅಲ್ಲ, ಮಾವಿನ ಕಾಯಿಯಲ್ಲಿ ಜೀರ್ಣಕಾರಿ ಗುಣಗಳಿವೆ. ಜೊತೆಗ ಆಮ್‌ ಪನ್ನಾ ಮಾಡುವಾಗ ಬಳಸಿದ ಜೀರಿಗೆ, ಸೈಂದವ ಲವಣ, ಕರಿಮೆಣಸು ಎಲ್ಲವೂ ಕೂಡಾ ಜೀರ್ಣಕ್ರಿಯೆಗೆ ಅತ್ಯಂತ ಒಳ್ಳೆಯದು.

ರೋಗನಿರೋಧಕತೆ ಹೆಚ್ಚಿಸುತ್ತದೆ

ಆಮ್‌ ಪನ್ನಾದ ಮತ್ತೊಂದು ಲಾಭವೆಂದರೆ ಇದು ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ. ಕಾರಣ ಇದರಲ್ಲಿರುವ ವಿಟಮಿನ್‌ ಸಿ. ಮಾವಿನಕಾಯಿಯಲ್ಲಿ ವಿಟಮಿನ್‌ ಸಿ ಹೇರಳವಾಗಿ ಇರುವುದರಿಂದ ಇದು ರೋಗ ನಿರೋಧಕತೆಯ ವಿಚಾರದಲ್ಲಿ ಉತ್ತಮ ಕೊಡುಗೆ ನೀಡುತ್ತದೆ. ಅಷ್ಟೇ ಅಲ್ಲ, ಮಾವಿನಕಾಯಿಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ಇದೂ ಕೂಡಾ ರೋಗ ನಿರೋಧಕತೆ ಹೆಚ್ಚಿಸಲು ಸಹಾಯ ಮಾಡುತ್ತದೆ.

ಚರ್ಮದ ಆರೋಗ್ಯಕ್ಕೆ ಉತ್ತಮ

ಆಮ್‌ ಪನ್ನಾ ಚರ್ಮದ ಆರೋಗ್ಯಕ್ಕೂ ಒಳ್ಳೆಯದು ಎಂಬುದು ತಿಳಿದಿದೆಯೇ? ಹೌದು. ವಿಟಮಿನ್‌ ಸಿ ಹೇರಳವಾಗಿರುವ ಮಾವಿನ ಕಾಯಿ ಚರ್ಮದ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಚರ್ಮದ ಹೊಳಪಿಗೆ, ತಾಜಾತನಕ್ಕೆ, ಹಾಗೂ ಆರೋಗ್ಯದಿಂದ ಕಂಗೊಳಿಸುವಂತೆ ಮಾಡಲು ವಿಟಮಿನ್‌ ಸಿ ಬೇಕೇ ಬೇಕು. ಮೊಡವೆ, ಕಪ್ಪುಕಲೆ, ಚುಕ್ಕೆಗಳು ಇತ್ಯಾದಿ ಚರ್ಮದ ಸಮಸ್ಯೆಗಳಿಗೂ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ.

ತೂಕ ಇಳಿಕೆಗೂ ಒಳ್ಳೆಯದು

ನೀವು ತೂಕ ಇಳಿಕೆಯ ಹಂಬಲದಲ್ಲಿದ್ದರೆ ಆಮ್‌ ಪನ್ನಾ ಕೂಡಾ ಅದಕ್ಕೆ ಸಹಾಯ ಮಾಡುತ್ತದೆ. ಇದು ಕಡಿಮೆ ಕ್ಯಾಲರಿಯ, ನಾರಿನಂಶ ಹೆಚ್ಚಿರುವ ಪೇಯವಾದ್ದರಿಂದ ಇದನ್ನು ಯಾವ ತಲೆಬಿಸಿಗಳಿಲ್ಲದೆ ಕುಡಿಯಬಹುದು.

ಆಮ್‌ ಪನ್ನಾ ಹೇಗೆ ಮಾಡುವುದು?

ಮಾವಿನ ಕಾಯಿಯನ್ನು ಬೇಯಿಸಿ. ಅದು ಮೆದುವಾಗುವವರೆಗೆ ಬೇಯಲಿ. ಬೆಂದಾಗ ಮಾವಿನ ಕಾಯಿಯ ಸಿಪ್ಪೆಯ ಬಣ್ಣ ಬದಲಾಗುತ್ತದೆ. ಬೇಯಿಸಿದ ಮಾವಿನ ಕಾಯಿ ತಣ್ಣಗಾದಾಗ, ಅದರ ಸಿಪ್ಪೆ ಹಾಗೂ ಬೀಜವನ್ನು ಬೇರ್ಪಡಿಸಿ. ಉಳಿದ ಭಾಗವನ್ನು ಚೆನ್ನಾಗಿ ಮ್ಯಾಶ್‌ ಮಾಡಿ. ಅದಕ್ಕೆ ಜೀರಿಗೆ, ಕರಿಮೆಣಸು, ಸೈಂದವ ಲವಣ, ಚೆನ್ನಾಗಿ ಕತ್ತರಿಸಿದ ಪುದಿನ ಎಲೆಗಳನ್ನು ಸೇರಿಸಿ ಮಿಕ್ಸಿಯಲ್ಲಿ ತಿರುಗಿಸಿ. ಸಕ್ಕರೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೇರಿಸಬಹುದು. ನಂತರ ಅದಕ್ಕೆ ಅಗತ್ಯವಿದ್ದಷ್ಟು ನೀರನ್ನು ಸೇರಿಸಿ. ತಣ್ಣಗೆ ಬೇಕಿದ್ದರೆ ಐಸ್‌ ಕ್ಯೂಬ್‌ ಸೇರಿಸಿ ಕುಡಿಯಿರಿ.

ಇದನ್ನೂ ಓದಿ: Healthy Salad Tips: ನೀವು ಸಲಾಡ್‌ ಪ್ರಿಯರೇ? ಸಲಾಡ್‌ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

Exit mobile version