ನೀವು ಪಾಸ್ತಾ ಪ್ರಿಯರೇ? ಆದರೆ, ಪಾಸ್ತಾ ತಿನ್ನುವುದು ಅನಾರೋಗ್ಯಕರ ಎಂಬ ಕಾರಣಕ್ಕೆ ನೀವು ಪಾಸ್ತಾ ತಿನ್ನುವುದನ್ನು ಬಿಟ್ಟಿದ್ದೀರಾ? ಅಥವಾ ನಿಮ್ಮ ಮಕ್ಕಳಿಗೆ ಪಾಸ್ತಾ ಎಂದರೆ ಸ್ವರ್ಗವೇ? ಅವರಿಗೂ ಪಾಸ್ತಾ ತಿನ್ನಬಾರದೆಂದು ತಾಕೀತು ಮಾಡಿದ್ದೀರಾ? ಹಾಗಾದರೆ ನೀವು ಇಷ್ಟೆಲ್ಲ ತಲೆಬಿಸಿ ಮಾಡುವ ಅಗತ್ಯವಿಲ್ಲ. ಯಾಕೆಂದರೆ ಕಾರ್ಬೋಹೈಡ್ರೇಟ್ ಇರುವುದರಿಂದ ಇದನ್ನು ಖಾಲಿ ಕ್ಯಾಲರಿಗಳು ಎಂದೇ ಪರಿಗಣಿಸಲಾಗುತ್ತದೆ. ನಮ್ಮ ದೇಹಕ್ಕೆ ಶಕ್ತಿ ನೀಡಲು ಬೇಕಾಗುವ ಪೋಷಕಾಂಶಗಳ ಪೈಕಿ ಕಾರ್ಬೋಹೈಡ್ರೇಟ್ ಕೂಡಾ ಒಂದಾಗಿದ್ದರೂ, ಇತರ ಪೋಷಕಾಂಶಗಳ ಸೇವನೆಯೂ ಬಹಳ ಮುಖ್ಯ. ಜೊತೆಗೆ ಪಾಸ್ತಾದ ಹೆಸರಿನಲ್ಲಿ ರೆಡಿ ಟು ಕುಕ್ ಪಾಸ್ತಾ ಪ್ಯಾಕೆಟ್‌ಗಳು, ರಾಶಿ ರಾಶಿ ಚೀಸ್, ಬೆಣ್ಣೆ ಮೆಯೋನೀಸ್, ಕ್ರೀಂ, ಕೆಚಪ್ ಸುರಿದು ಮಾಡಲಾಗುವ ಪಾಸ್ತಾಗಳ ಮೂಲಕ ನಿಮ್ಮ ಮಕ್ಕಳಿಗಾಗಲೀ, ನಿಮಗಾಗಲೀ ಯಾವ ಪೋಷಕಾಂಶವೂ ಸರಿಯಾಗಿ ಸಿಗಲಾರದು. ಬದಲಾಗಿ ಅನಾರೋಗ್ಯಕರ ಆಹಾರವಾಗಿಯೇ ಪಾಸ್ತಾ ಬದಲಾಗುತ್ತದೆ. ಹಾಗಾದರೆ ಪಾಸ್ತಾವನ್ನು ಆರೋಗ್ಯಕರವನ್ನಾಗಿ ಮಾಡುವುದು ಹೇಗೆ ಅಂತೀರಾ? ಇಲ್ಲಿವೆ (pasta cooking tips) ಸರಳ ತಂತ್ರಗಳು.
ಪಾಸ್ತಾದ ಮೂಲ ತಿಳಿಯಿರಿ
ಪಾಸ್ತಾವನ್ನು ಕೊಳ್ಳುವಾಗ ಅದು ಯಾವುದರಿಂದ ಮಾಡಿದ ಪಾಸ್ತಾ ಎಂಬುದನ್ನು ಓದಿ. ಉದಾಹರಣೆಗೆ ಮೈದಾದಿಂದ ಮಾಡಿದ ಪಾಸ್ತಾ ಖರೀದಿಸಬೇಡಿ. ಗೋಧಿಯಿಂದ ಅಥವಾ ಇತರ ಧಾನ್ಯಗಳಿಂದ ಮಾಡಿದ ಪಾಸ್ತಾಕ್ಕೆ ಮಹತ್ವ ನೀಡಿ. ಹೋಲ್ ಗ್ರೈನ್ ಪಾಸ್ತಾ ಸಿಕ್ಕರೆ ಒಳ್ಳೆಯದು. ಈಗ ಬಗೆಬಗೆಯ ಮಾದರಿಯ ಪ್ರೊಟೀನ್‌ನಿಂದ ಶ್ರೀಮಂತವಾಗಿರುವ ಪಾಸ್ತಾಗಳು ಸಿಗುತ್ತವೆ.
ತರಕಾರಿ ಹೆಚ್ಚು ಬಳಸಿ
ಪಾಸ್ತಾ ಮಾಡುವಾಗ ಸಾಕಷ್ಟು ತರಕಾರಿಗಳನ್ನು ಹಾಕಿ. ಅಣಬೆ, ಪನೀರ್, ಬೀನ್ಸ್, ಜೋಳ, ಬಟಾಣಿ, ಕ್ಯಾರೆಟ್, ಕ್ಯಾಪ್ಸಿಕಂ ಇತ್ಯಾದಿ ಇತ್ಯಾದಿ ತರಕಾರಿಗಳು ಪಾಸ್ತಾಕ್ಕೆ ಹೊಂದಿಕೊಳ್ಳುತ್ತವೆ. ಹೀಗಾಗಿ ಹೊಂದಿಕೊಳ್ಳುವ ತರಕಾರಿಗಳನ್ನು ಬಳಸಿ. ತರಕಾರಿಯೂ ಸೇರಿದಾಗ ಪಾಸ್ತಾದ ಆರೋಗ್ಯಕರ ಅಂಶ ಇನ್ನೂ ಹೆಚ್ಚಾಗುತ್ತದೆ.
ಸಾಸ್ ಮನೆಯಲ್ಲೇ ತಯಾರಿಸಿ
ಪಾಸ್ತಾಕ್ಕೆ ಬಳಸುವ ಸಾಸ್ ಅಥವಾ ಮಯನೀಸ್ ಅನ್ನು ಮನೆಯಲ್ಲೇ ತಯಾರಿಸಿ. ಕ್ರೀಂ ಕೆಚಪ್‌ಗಳಿಗೆ ಮೊರೆ ಹೋಗಬೇಡಿ. ಟೊಮೇಟೋ, ಈರುಳ್ಳಿ ಇತ್ಯಾದಿಗಳನ್ನು ಬಳಸಿ ಮನೆಯಲ್ಲಿಯೇ ಚಟ್ನಿ ಮಾಡಿ. ರೆಡ್ ಪಾಸ್ತಾ ಮಾಡಬಹುದು. ರೆಸ್ಟೋರೆಂಟ್‌ಗಳಿಗೂ ಸೆಡ್ಡು ಹೊಡೆಯಬಲ್ಲ ಪಾಸ್ತಾವನ್ನು ಕ್ಷಣ ಮಾತ್ರದಲ್ಲಿ ನೀವು ಕೆಚಪ್ ಬಳಸದೆಯೇ ಮಾಡಬಹುದು. ಇಂತಹ ಅಡುಗೆಯನ್ನು ಕಲಿಯಿರಿ.
ಅಡುಗೆ ಮನೆಯಲ್ಲಿ ಜಾದೂ ಮಾಡಿ
ವೈಟ್ ಪಾಸ್ತಾ ಮಾಡಲು ಬಳಸುವ ಮೆಯೋನೀಸ್ ಅನ್ನು ಮನೆಯಲ್ಲಿಯೇ ತಯಾರಿಸಿಟ್ಟುಕೊಳ್ಳಿ. ಒಂದಿಷ್ಟು ಬೆಳ್ಳುಳ್ಳಿ, ಹಂಗ್ ಕರ್ಡ್ ಹಾಗೂ ಗೋಡಂಬಿಯನ್ನು ನೆನೆಹಾಕಿ ಪೇಸ್ಟ್ ಮಾಡಿದರೆ ಮಾರುಕಟ್ಟೆಯ ಮಯೋನೀಸನ್ನು ಕೂಡಾ ನಿವಾಳಿಸಿ ಎಸೆಯಬಹುದು. ಇಂತಹ ಅಡುಗೆ ತಂತ್ರಗಳನ್ನು ಕಲಿತುಕೊಂಡು, ಅಡುಗೆಮನೆಯಲ್ಲಿಯೇ ಜಾದೂ ಮಾಡಿ!
ಇದನ್ನೂ ಓದಿ: Cooking Tips: ನೀವೂ ಹೀಗೇನಾ? ಹಾಗಿದ್ದರೆ ಅಡುಗೆ ನಿಮಗೆ ಕಬ್ಬಿಣದ ಕಡಲೆ!