Site icon Vistara News

Tea Desserts: ಚಹಾ ಪ್ರಿಯರಿಗೆ ಬಗೆಬಗೆಯ ಚಹಾ ಡೆಸರ್ಟುಗಳು! ಇಲ್ಲಿವೆ ಕ್ರೇಜಿ ಐಡಿಯಾಗಳು!

Tea Desserts

ಚಳಿಗಾಲದಲ್ಲಿ ಚಹಾ ಕುಡಿಯುವ ಗಮ್ಮತ್ತೇ ಬೇರೆ. ಬಿಸಿ ಬಿಸಿ ಹೊಗೆಯಾಡುವ ಬಗೆಬಗೆಯ ಚಹಾವನ್ನು ನಾವು ಲೋಟಗಟ್ಟಲೆ ದಿನವಿಡೀ ಕುಡಿದೆವು ಎಂದು ಚಹಾಪ್ರಿಯರು ತಮ್ಮ ಚಹಾಪ್ರೇಮದ ಬಗ್ಗೆ ವ್ಯಾಖ್ಯಾನ ನೀಡಬಹುದು. ಆದರೆ, ಬೇಸಿಗೆಯಲ್ಲಿ? ಚಹಾ ಬೇಸಿಗೆಯ ಪೇಯವಲ್ಲ ನಿಜ. ಆದರೂ, ಚಹಾಪ್ರಿಯರು ದಿನಕ್ಕೆರಡು ಬಾರಿಯಾದರೂ ಚಹಾ ಕುಡಿಯದೆ ಬಿಡಲಾರರು. ನೀವು ಏನೇ ಹೇಳಿ, ಯಾವುದೇ ವಾದ ಮಂಡಿಸಿ, ಚಹಾಪ್ರಿಯರಿಗೆ ತಮ್ಮ ಚಹಾ ಪ್ರೇಮವನ್ನು ಸಮರ್ಥಿಸಲು ಕಾರಣ ನೂರಾರು. ಬೇಸಿಗೆಯಲ್ಲಿ ಯಾವುದೇ ಕ್ರೇಜಿ ಐಡಿಯಾ ಮಾಡಿಯಾದರೂ ಅವರು ಚಹಾ ಸೇವಿಸುತ್ತಾರೆ. ಇಂಥ ಚಹಾಪ್ರಿಯರಿಗೊಂದು ಕ್ರೇಜಿ ಡೆಸರ್ಟ್‌ಗಳು (Tea Desserts) ಇಲ್ಲಿವೆ. ಬೇಸಿಗೆಯಲ್ಲಿ ನಿಮ್ಮ ಚಹಾಪ್ರೇಮಕ್ಕೆ ಕಳಶವಿಟ್ಟಂತೆ ಈ ಚಿತ್ರವಿಚಿತ್ರ ಚಹಾದ ಡೆಸರ್ಟ್‌ಗಳು ಇಂದು ಕೆಲವೆಡೆ ವಿಶೇಷವಾಗಿ ಲಭ್ಯವಿವೆಯಂತೆ. ಬನ್ನಿ ಚಹಾದ ಈ ಚಿತ್ರವಿಚಿತ್ರ ಡೆಸರ್ಟ್‌ಗಳ ಹೆಸರು ಕೇಳಿ ನೀವೂ ಮನೆಯಲ್ಲಿ ಪ್ರಯತ್ನಿಸಿ.

ಮಸಾಲಾ ಚಹಾ ಐಸ್‌ಕ್ರೀಂ

ಬೇಸಿಗೆಯಲ್ಲಿ ಐಸ್‌ಕ್ರೀಂ ಅನ್ನು ಯಾರಾದರೂ ಬೇಡ ಎನ್ನುತ್ತಾರೆಯೋ. ಖಂಡಿತ ಇಲ್ಲ. ಆದರೆ ಇದು ಮಸಾಲೆ ಚಹಾ ಐಸ್‌ ಕ್ರೀಂ. ಎಲ್ಲಿಯ ಚಹಾ ಎಲ್ಲಿಯ ಐಸ್‌ಕ್ರೀಂ ಎನ್ನಬೇಡಿ. ಬಿಸಿಬಿಸಿಯಾದ ಚಹಾದ ಬದಲಿಗೆ ಬಾಯಲ್ಲಿಟ್ಟರೆ ಕರಗುವ ಮಸಾಲೆ ಚಹಾದ ರುಚಿಯ ಐಸ್‌ಕ್ರೀಂ ರೂಪದ ಡೆಸರ್ಟ್‌ ನಿಮಗೆ ಸಿಕ್ಕರೆ?! ವಾಹ್‌ ಎನಿಸೀತೇ? ಹಾಗಿದ್ದರೆ ಒಮ್ಮೆ ನೀವೂ ಮನೆಯಲ್ಲಿ ಟ್ರೈ ಮಾಡಿ ನೋಡಬಹುದು. ಈಗ ಸಾಕಷ್ಟು ಟ್ರೆಂಡ್‌ನಲ್ಲಿರುವ ಈ ಹೊಸ ಐಸ್‌ಕ್ರೀಂ ಹುಡುಕಿ ತಿನ್ನಿ, ಇಲ್ಲವೇ ಮನೆಯಲ್ಲೇ ಟ್ರೈ ಮಾಡಿ ತಿನ್ನಿ!

ಮಸಾಲಾ ಚಹಾ ಕೇಕ್

ಮಸಾಲೆ ಚಹಾದ ರುಚಿಯಿರುವ ಘಮವಿರುವ ಕೇಕ್‌ ಕೂಡಾ ತಯಾರಿಸಬಹುದು. ಚಹಾ ಪ್ರಿಯರಿಗೆ ಇದು ಖಂಡಿತ ಇಷ್ಟವಾಗಲೂಬಹುದು. ಕಾಫಿ ಫ್ಲೇವರ್‌ನ ಕೇಕ್‌ನಂತೆ ಈಗ ಚಹಾ ಪ್ರಿಯರಿಗೆ ಚಹಾ ಫ್ಲೇವರಿನ ಕೇಕುಗಳೂ ಕೆಲವೆಡೆ ಲಭ್ಯವಾಗುತ್ತಿವೆಯಂತೆ. ಹಾಗಾಗಿ ನೀವೂ ಕೇಕ್‌ ತಜ್ಞರಾಗಿದ್ದರೆ, ಮಾಡುವ ಅಭ್ಯಾಸ ನಿಮಗಿದ್ದರೆ ಒಮ್ಮೆ ಈ ರುಚಿಯನ್ನು ಪ್ರಯತ್ನಿಸಿ. ಈ ಕೇಕ್‌ ಅನ್ನು ರಬ್ಡೀ ಜೊತೆಗೆ ಸವಿದರೆ ಇನ್ನೂ ರುಚಿಯಂತೆ!

ಕಟ್ಟಿಂಗ್‌ ಚಾಯ್‌ ಕುಲ್ಫಿ

ನೀವು ಮುಂಬೈಯ ಕಟ್ಟಿಂಗ್‌ ಚಾಯ್‌ ಪ್ರಿಯರಾಗಿದ್ದಲ್ಲಿ ಈ ಬಗೆಯ ಕುಲ್ಫಿ ಟ್ರೈ ಮಾಡಬಹುದು. ಕಟ್ಟಿಂಗ್‌ ಚಾಯ್‌ ತಯಾರಿಸಿ ಕುಲ್ಫಿ ಮೌಲ್ಡ್‌ಗಳಲ್ಲಿ ಹಾಕಿಟ್ಟು, ಅದಕ್ಕೆ ಇನ್ನೂ ಆಕರ್ಷಕವಾಗಿಸಲು ಗುಲಾಬಿದಳಗಳು, ಪಿಸ್ತಾ ಹಾಗೂ ಬಾದಾಮಿ ಚೂರುಗಳು ಮತ್ತಿತರ ಬೀಜಗಳನ್ನೂ ಸೇರಿಸಬಹುದು. ನಿಮ್ಮ ಚಹಾ ಕುಲ್ಫಿ ರೆಡಿ. ಬಗೆಬಗೆಯ ಫ್ಲೇವರ್‌ಗಳ ಕುಲ್ಫಿಗಳ ಜೊತೆಗೆ ಈಗ ಈ ಕಟ್ಟಿಂಗ್‌ ಚಾಯ್‌ ಕುಲ್ಫಿ ಕೂಡಾ ಟ್ರೆಂಡ್‌ನಲ್ಲಿದೆ. ಯುವಜನರನ್ನು ಆಕರ್ಷಿಸುತ್ತಿದೆ.

ಮಸಾಲಾ ಚಾಯ್‌ ಕುಕ್ಕೀಸ್‌

ನಿಮ್ಮ ಚಹಾ ಟೈಮ್‌ಗೆ ನೀವು ತಿನ್ನುವ ಕುಕ್ಕೀಸ್‌ ಕೂಡಾ ಚಹಾ ಫ್ಲೇವರ್‌ನದ್ದೇ ಆಗಿದ್ದರೆ!? ವಾಹ್‌, ಎಂಥಾ ಐಡಿಯಾ ಎನ್ನುತ್ತೀರಾ? ಚಹಾ ಘಮವಿರುವ ಕುಕ್ಕೀಸ್‌ ಕೂಡಾ ತಯಾರು ಮಾಡಬಹುದು. ಸಂಜೆಯ ಹೊತ್ತು ಕೂತು ಚಹಾವನ್ನೂ ಜೊತೆಗೆ ಚಹಾದ ಘಮವಿರುವ ಕುಕ್ಕೀಸನ್ನೂ ಸವಿಯಬಹುದು!

Exit mobile version