Site icon Vistara News

Baking Powder: ಬೇಕಿಂಗ್‌ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಮೊದಲು ಇದರ ಹಿನ್ನೆಲೆ ಗೊತ್ತಿರಲಿ

Baking Powder

ಏನನ್ನಾದರೂ ಬೇಕ್‌ ಮಾಡುವ ಉದ್ದೇಶ ನಿಮಗಿದೆ ಎಂದಿಟ್ಟುಕೊಳ್ಳೋಣ. ಇಂಟರ್ನೆಟ್‌ನಲ್ಲಿ ರೆಸಿಪಿ ಹುಡುಕುತ್ತೀರಿ. ಯಾವುದೇ ಪಾಕವನ್ನು ಹುಡುಕಿದರೂ ಅದರಲ್ಲಿ ಸಾಮಾನ್ಯವಾಗಿ ಬೇಕಿಂಗ್‌ ಪೌಡರ್‌ ಹಾಕುವುದಕ್ಕೆ ಹೇಳಿರುತ್ತಾರೆ. ಭಾರತೀಯ ಅಡುಗೆ ಮನೆಗಳಲ್ಲಿ ಪರಂಪರಾಗತವಾಗಿ ಇದರ ಬಳಕೆ ಇಲ್ಲದಿದ್ದರೂ, ಆಧುನಿಕ ಅಡುಗೆಮನೆಗಳಲ್ಲಿ ಇದು ತನ್ನ ಸ್ಥಾನ ಸ್ಥಾಪಿಸಿಕೊಂಡಿದೆ. ಹೆಚ್ಚಿನ ಬೇಕಿಂಗ್‌ ವಿಧಾನಗಳು ಬೇಕಿಂಗ್‌ ಪೌಡರ್‌ (Baking Powder) ಬಳಸುವುದಕ್ಕೆ ಸೂಚಿಸುತ್ತವೆ. ಬೇಕಿಂಗ್‌ ಸೋಡಾ ಸಹ ಅಲ್ಪ ಪ್ರಮಾಣದಲ್ಲಿ ಬಳಕೆಯಾದರೂ, ಅದು ಸ್ವಚ್ಛ ಮಾಡುವುದಕ್ಕೂ ಅಷ್ಟೇ ವ್ಯಾಪಕವಾಗಿ ಬಳಕೆಯಲ್ಲಿದೆ. ಆದರೆ ಬೇಕಿಂಗ್‌ ಸೋಡಾದಷ್ಟು ಪ್ರಬಲವಾದ ಶುಚಿಕಾರಕವಲ್ಲ ಬೇಕಿಂಗ್‌ ಪುಡಿ. ಏನಿದು, ಎಂದಿನಿಂದ ಇದರ ಬಳಕೆ ಪ್ರಾರಂಭವಾಯ್ತು ಎಂಬೆಲ್ಲ ಮಾಹಿತಿಗಳು ಇಲ್ಲಿವೆ.
ಹಿಟ್ಟನ್ನು ಹುದುಗು ಬರಿಸಿ ಬೇಯಿಸುವುದು ವಿಶ್ವದೆಲ್ಲೆಡೆ ಚಾಲ್ತಿಯಲ್ಲಿರುವ ಕ್ರಮ; ಅದು ಇಡ್ಲಿ-ದೋಸೆಗಳೇ ಇರಬಹುದು, ಧೋಕ್ಲಾ-ವಡೆಗಳೇ ಆಗಬಹುದು, ಕೇಕ್‌-ಬ್ರೆಡ್‌ಗಳೇ ಇರಬಹುದು. ಈ ಹುದುಗು ಬರುವುದೆಂದರೆ ಹಿಟ್ಟಿನಲ್ಲಿ ನೈಸರ್ಗಿಕವಾಗಿ ಒಂದಿಷ್ಟು ಎನ್‌ಜೈಮುಗಳು ಸೇರಿಕೊಳ್ಳುವುದು. ಪಾಶ್ಚಾತ್ಯ ಅಡುಗೆಗಳಲ್ಲಿ ಯೀಸ್ಟ್‌ ಬಳಕೆ ಶತಮಾನಗಳಿಂದಲೂ ಇದೆ. ಆದರೆ ಅವುಗಳಲ್ಲೂ ಸಮಯ ತೆಗೆದುಕೊಳ್ಳುತ್ತದೆ. ಬ್ರೆಡ್‌ ಮಾಡುವುದಕ್ಕೆ ಯೀಸ್ಟ್‌ ಸೇರಿಸಿದಾಗ ಹಲವಾರು ತಾಸುಗಳ ಕಾಲ ಹಿಟ್ಟನ್ನು ಹುದುಗಿಸಬೇಕು, ಆ ಹಿಟ್ಟು ಉಬ್ಬಿ ಬರಬೇಕು. ಆಗಲೇ ಮೃದುವಾದ ಹತ್ತಿಯಂಥ ಬ್ರೆಡ್‌ ಮಾಡುವುದಕ್ಕೆ ಸಾಧ್ಯ. ಭಾರತೀಯ ಪಾಕಗಳಲ್ಲೂ ಹಾಗೆಯೇ. ಆದರೆ ಹಿಟ್ಟನ್ನು ನೈಸರ್ಗಿಕವಾಗಿಯೇ ಹುದುಗಿಸುವ ಕ್ರಮ ಇನ್ನೂ ಚಾಲ್ತಿಯಲ್ಲಿದೆ. ತೀರಾ ಗಡಿಬಿಡಿಯಿದ್ದರೆ ಬೇಕಿಂಗ್‌ ಪೌಡರ್‌ ಇದ್ದೇಇದೆ!

ಆವಿಷ್ಕಾರ ಆಗಿದ್ದೇಕೆ?

ಪಶ್ಚಿಮ ದೇಶಗಳಲ್ಲಿ ಕೈಗಾರಿಕಾ ಕ್ರಾಂತಿಯ ನಂತರ ಜೀವನಶೈಲಿಯಲ್ಲಿ ಬಹಳಷ್ಟು ಬದಲಾವಣೆಗಳು ತಲೆದೋರಿದವು. ಎಲ್ಲವನ್ನೂ ಬೃಹತ್‌ ಪ್ರಮಾಣದಲ್ಲಿ ಮಾಡುವ ಗೀಳು ಆರಂಭವಾಯಿತು, ಬ್ರೆಡ್‌ ಮತ್ತದರ ಸೋದರ ಸಂಬಂಧಿಗಳು ಸಹ ಈ ಪಟ್ಟಿಗೆ ಸೇರಿದವು. ಮನೆಮಂದಿಯ ಯೋಗಕ್ಷೇಮವನ್ನೇ ಕಸುಬಾಗಿ ನೆಚ್ಚಿಕೊಂಡಿದ್ದ ಮಹಿಳೆಯರು ಕೈಗಾರಿಕೆಗಳಿಗೆ ತೆರಳಿ ದುಡಿಯಲು ಆರಂಭಿಸಿದ ಮೇಲೆ, ಬೇಕರಿಗಳಿಂದ ಆಹಾರ ಖರೀದಿಸುವ ಅಗತ್ಯ ಕಂಡುಬಂತು. ಹೀಗೆ ಹೆಚ್ಚಿನ ಪ್ರಮಾಣದಲ್ಲಿ, ಕ್ಷಿಪ್ರವಾಗಿ ಬೇಕ್‌ ಮಾಡುವ ಉದ್ದೇಶ ಬೇಕಿಂಗ್‌ ಪೌಡರ್‌ ಮತ್ತು ಸೋಡಾಗಳ ಆವಿಷ್ಕಾರದ ಹಿಂದಿತ್ತು.
ಬ್ರಿಟಿಷ್‌ ದೇಶದ ರಸಾಯನ ಶಾಸ್ತ್ರಜ್ಞ ಆಲ್ಫ್ರೆಡ್‌ ಬರ್ಡ್‌ ಎಂಬಾತ, ೧೮೪೩ರಲ್ಲಿ, ಬೇಕಿಂಗ್‌ ಪೌಡರ್‌ ಆವಿಷ್ಕರಿಸಿದ. ಬೇಕಿಂಗ್‌ ಸೋಡಾ ಮತ್ತು ಆಮ್ಲವೊಂದರ (ಟಾರ್ಟರ್‌ ಕ್ರೀಮ್‌) ಮಿಶ್ರಣಗಳು ತೇವಾಂಶ ಅಥವಾ ಉಷ್ಣತೆಯ ಸಂಪರ್ಕಕ್ಕೆ ಬಂದಾಕ್ಷಣ ಹುದುಗಲಾರಂಭಿಸುತ್ತವೆ ಎಂಬುದನ್ನು ಆತ ತೋರಿಸಿಕೊಟ್ಟ. ಹೀಗೆ ಹತ್ತೊಂಬತ್ತನೇ ಶತಮಾನದ ಹೊತ್ತಿಗೆ, ಇಂದಿನ ಕಾಲದಲ್ಲಿ ಉಪಯೋಗಿಸುತ್ತಿರುವ ಬೇಕಿಂಗ್‌ ಪುಡಿ ಸಿದ್ಧಗೊಂಡಿತು.

ಇಂದಿನ ದಿನಗಳಲ್ಲಿ

ಕೇವಲ ಹಿಟ್ಟನ್ನು ಹುದುಗಿಸುವುದಕ್ಕೆ ಮಾತ್ರವೇ ಬೇಕಿಂಗ್‌ ಪುಡಿ ಇಂದಿನ ದಿನಗಳಲ್ಲಿ ಸೀಮಿತಗೊಂಡಿಲ್ಲ. ಬೇಕ್‌ ಮಾಡಿದ ತಿನಿಸುಗಳು ಸರಿಯಾದ ಆಕಾರ ಹೊಂದಲು, ಅದಕ್ಕೆ ಪದರುಪದರಾದ ಮೇಲ್ಮೈ ಬರುವುದಕ್ಕೆ- ಹೀಗೆ ತಿನಿಸುಗಳು ಕಣ್ಣಿಗೂ ತಂಪೆರೆಯುವಂತೆ ಮಾಡುವುದಕ್ಕೆ ಇದು ಸಹಕಾರಿ. ಮಾತ್ರವಲ್ಲ, ಗೋದಿ ಅಥವಾ ಮೈದಾ ಬಳಸದ ಗ್ಲೂಟೆನ್‌-ಮುಕ್ತ ಬೇಕಿಂಗ್‌ನಲ್ಲೂ ಬೇಕಿಂಗ್‌ ಪುಡಿಯ ಕೊಡುಗೆ ಸಾಕಷ್ಟಿರುತ್ತದೆ. ಮೊಟ್ಟೆಯನ್ನು ಬಳಸದೆ ಬೇಕ್‌ ಮಾಡುವುದಕ್ಕೆ ಸಹ ಬೇಕಿಂಗ್‌ ಪುಡಿ ಅತ್ಯಗತ್ಯ. ಇದಲ್ಲದೆ, ಹೊಸ ರೆಸಿಪಿಗಳು ಬೇಕಿಂಗ್‌ ಪುಡಿಯನ್ನು ಬಳಸಿಕೊಂಡೇ ತಿನಿಸುಗಳ ಬಣ್ಣ, ರುಚಿ ಮತ್ತು ಮೇಲ್ನೋಟವನ್ನು ಶೋಧಿಸಲು ಯತ್ನಿಸುತ್ತಿರುವುದು ಆಸಕ್ತಿಕರ ಸಂಗತಿ.

ಇದನ್ನೂ ಓದಿ: Sugarcane Milk Benefits: ಬಿಸಿಲಲ್ಲೂ ತಾಜಾತನ ನೀಡುವ ಕಬ್ಬಿನಹಾಲು ದೇವರು ಕೊಟ್ಟ ಅಮೃತ!

Exit mobile version