Site icon Vistara News

best drink: ಹೊಟ್ಟೆಯ ಆಪ್ತಮಿತ್ರ ಈ ಜಲ್‌ಜೀರಾ!

jal jeera

ಬೇಸಗೆ ಕಳೆದು ಮಳೆಗಾಲ ಎಂದು ನಾವು ಜೂನ್‌ಗೆಲ್ಲ ಅಂದುಕೊಂಡರೂ ಮಳೆ ನಿಂತು ಸ್ವಲ್ಪ ಹೊತ್ತಿನಲ್ಲೇ ಬೆವರು ಧಾರಾಕಾರವಾಗಿ ಸುರಿವ ಪರಿಸ್ಥಿತಿ ರಾಜ್ಯದ ಹಲವೆಡೆ ಇದೆ. ಬೇಸಗೆ ಇನ್ನೂ ಅಧಿಕೃತವಾಗಿ ಟಾಟಾ ಹೇಳಿಲ್ಲ. ಮಳೆಗಾಲ ಸ್ವಾಗತ ಕೋರಿಲ್ಲ. ಇಂಥ ಸಂದರ್ಭ ದಿಢೀರ್‌ ಬೇಸಗೆಯಿಂದ ಮುಕ್ತಿ ಸಿಕ್ಕಿತೆಂಬಂತೆ ನಮ್ಮ ಆಹಾರ ಸೇವನೆಯಲ್ಲಿ ಬದಲಾವಣೆ ಮಾಡಿಕೊಂಡರೆ, ಆರೋಗ್ಯದಲ್ಲಿ ವ್ಯತ್ಯಯ ಖಂಡಿತ. ಹಾಗಾದರೆ, ಇನ್ನೂ ಬೇಸಗೆಯ ಧಗೆಯಿಂದ ತಪ್ಪಿಸಿಕೊಳ್ಳಲು ಹಾಗೂ ನಮ್ಮ ಪಚನ ಕ್ರಿಯೆಯನ್ನು ಉತ್ತೇಜಿಸಬಲ್ಲ ಪಾನೀಯವೆಂದರೆ ಅದು ಜಲ್‌ಜೀರಾ!

ಪುದೀನಾ, ಜೀರಿಗೆ, ಸೈಂದವ ಲವಣ, ಇಂಗು, ನಿಂಬೆಹಣ್ಣು ಹಾಗೂ ಮಾವಿನ ಪುಡಿಗಳಿಂದ ಮಾಡುವ ಈ ಜಲ್‌ಜೀರಾ ಎಂಬ ಪೇಯ, ಜೀರ್ಣಕ್ರಿಯೆಯಲ್ಲಿ ಪರಿಣಾಮಕಾರಿ. ದೇಹದಲ್ಲಿರುವ ಕಲ್ಮಶಗಳನ್ನೆಲ್ಲ ಹೊರಗೆ ಕಳಿಸಿ, ದೇಹವನ್ನು ತಂಪಾಗಿ, ಹಾಗೂ ಸ್ವಚ್ಛವಾಗಿ ಇಡುವಲ್ಲಿ ಇದು ಮುಖ್ಯಪಾತ್ರ ವಹಿಸುತ್ತದೆ.

ನಾವು ಭಾರತೀಯರಿಗೆ ಮಸಾಲೆಯುಕ್ತ ಆಹಾರವನ್ನೇ ಸೇವಿಸಿ ಹೆಚ್ಚು ಅಭ್ಯಾಸ. ಎಂಥ ಕಡು ಬೇಸಿಗೆಯಲ್ಲೂ ನಮ್ಮ ನಾಲಿಗೆ ಮಾಡಿಕೊಂಡ ಅಭ್ಯಾಸಗಳಿಗೆ ಗುಡ್‌ಬೈ ಹೇಳಲು ಹಿಂದೆ ಮುಂದೆ ಯೋಚಿಸಿಬಿಡುತ್ತೇವೆ. ಮಸಾಲೆಗಳನ್ನೂ, ಮೆಣಸನ್ನೂ ಸುರಿಸುರಿದು ಮಾಡುವ ಅಡುಗೆಯನ್ನು ಬೆವರಿಳಿಸಿಕೊಂಡಾದರೂ ಮುಕ್ಕುತ್ತೇವೆ. ಆದರೆ ದೇಹಕ್ಕೆ ಇಂತಹ ವಾತಾವರಣದಲ್ಲಿ ಇದರ ಅಗತ್ಯ ಇದೆಯೇ, ನಮ್ಮ ಅನ್ನಾಂಗಗಳಿಗೆ ಇಂತಹ ಸಂದರ್ಭ ಇಷ್ಟೊಂದು ಕೆಲಸ ಕೊಡಬೇಕೇ ಎಂದೆಲ್ಲ ಯೋಚಿಸುವುದಿಲ್ಲ. ಆದರೆ, ಬಹಳ ಸಾರಿ, ಇಲ್ಲಿಯೇ ಎಡವುತ್ತೇವೆ. ಆರೋಗ್ಯ ಹದಗೆಡುತ್ತದೆ.

ದಿನಕ್ಕೊಂದು ಲೋಟ ತುಂಬಾ ಜಲ್‌ಜೀರಾ ಕುಡಿದಿರೆಂದರೆ ಹೊಟ್ಟೆಗೂ ತಂಪು. ಪಚನಕ್ರಿಯೆಯೂ ತನ್ನ ವೇಗವನ್ನು ಮರಳಿ ಪಡೆಯುತ್ತದೆ. ಹಾಗಂತ ಒಳ್ಳೆಯದೆಂದು ಲೀಟರ್‌ಗಟ್ಟಲೆ ಗಟಗಟನೆ ಕುಡಿಯುವುದೂ ಸಲ್ಲದು. ಅತಿಯಾದರೆ ಅಮೃತವೂ ವಿಷವೆಂಬ ಅನಾದಿಕಾಲದ ಗಾದೆಯನ್ನು ನೆನಪಿನಲ್ಲಿಟ್ಟುಕೊಂಡೇ ಜಲ್‌ಜೀರಾ ನೀವು ಹೊಟ್ಟೆಗಿಳಿಸಬೇಕು. ಆಗಷ್ಟೇ ಅದರ ಸರಿಯಾದ ಪ್ರಯೋಜನವನ್ನು ನಮ್ಮದಾಗಿಸಬಹುದು.

ಈ ಜಲ್‌ಜೀರಾವನ್ನು ಇನ್ನಷ್ಟು ಆಕರ್ಷಕವಾಗಿಸಲು ಮೇಲಿನಿಂದ ಬೂಂದಿಯ ಕಾಳನ್ನು ಉದುರಿಸಿ ಕೊಡುವ ಸಂಪ್ರದಾಯವೂ ಇದೆ. ಆದರೆ, ಇಂತಹ ಕರಿದ ಪದಾರ್ಥಗಳನ್ನೆಲ್ಲ ಆರೋಗ್ಯಕರ ಪೇಯಗಳಿಗೆ ಹಾಕಿ ಅವುಗಳ ಪಾವಿತ್ರ್ಯತೆಯನ್ನು ಕೆಡಿಸಬೇಡಿ. ಕರಿದ ಪದಾರ್ಥ ಎಷ್ಟೇ ಆಗಿದ್ದರೂ ಕರಿದದ್ದೇ ಅನ್ನೋದು ನೆನಪಿನಲ್ಲಿಡಿ.

ಅಷ್ಟಕ್ಕೂ ಈ ಪಾನೀಯಕ್ಕೆ ಇನ್ನೂ ಆಕರ್ಷಕವಾಗಿಸಲೇಬೇಕೆಂದು ನೀವು ಪಣ ತೊಡುತ್ತೀರೆಂದಾದಲ್ಲಿ ಬೇಕಿದ್ದರೆ, ನಿಂಬೆಹಣ್ಣು ಹಿಂಡಿ ತುಲಸೀ ಬೀಜಗಳನ್ನೋ, ಚಿಯಾ ಬೀಜಗಳನ್ನೋ ಸೇರಿಸಬಹುದು. ಇವೆಲ್ಲವೂ ತೂಕ ನಿಯಂತ್ರಣದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತವೆ. ಜೊತೆಗೆ ಬೇಸಗೆಯಲ್ಲಿ ದೇಹವನ್ನು ತಂಪಾಗಿಡಲು ಇದು ಸರಳೋಪಾಯ.

ಇದನ್ನೂ ಓದಿ: ಫಾಸ್ಟ್ ಫುಡ್ v/s ಸ್ಲೋ ಪುಡ್‌: ಅವಸರ v/s ಆರೋಗ್ಯ

ಹಾಗಿದ್ದರೆ ಜಲ್‌ಜೀರಾವನ್ನು ಯಾವ ಹೊತ್ತಿನಲ್ಲಿ ಕುಡಿಯಬಹುದು ಎಂಬ ಯೋಚನೆಯೊಂದು ಖಂಡಿತ ಸುಳಿಯದೆ ಇರದು. ಊಟವಾದ ಅರ್ಧ ಗಂಟೆಯ ನಂತರ ತಣ್ಣಗಿನ ಜಲ್‌ಜೀರಾ ಪೇಯವನ್ನು ಕುಡಿಯುವುದರಿಂದ ಪಚನಕ್ರಿಯೆಗೆ ವೇಗ ದೊರೆಯುತ್ತದೆ. ಹೊಟ್ಟೆಗೂ ತಂಪಾದ ಅನುಭವವಾಗುತ್ತದೆ. ಇವಲ್ಲದೆ, ತಿಳಿಮಜ್ಜಿಗೆ ನಿಮ್ಮಲ್ಲಿದ್ದರೆ, ಊಟವಾದ ನಂತರ ಒಂದಿಷ್ಟು ಕೊತ್ತಂಬರಿ ಸೊಪ್ಪು, ಪುದಿನ, ಜೀರಿಗೆ ಪುಡಿ, ಇಂಗು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುಡಿಯಬಹುದು. ಇದೂ ಕೂಡಾ ಜೀರ್ಣಕ್ರಿಯೆಗೆ ಸಹಾಯ ಮಾಡುವುದಲ್ಲದೆ, ಹೊಟ್ಟೆಗೆ ತಂಪೂ ಕೂಡಾ. ಹಾಗೆಂದುಕೊಂಡು ವಿಪರೀತ ಮಸಾಲೆಗಳನ್ನು ಸೇರಿಸಿ ಜಲ್‌ಜೀರಾ ಮಾಡಿಕೊಂಡರೆ ಅದು ಒಳ್ಳೆಯದಲ್ಲ. ಮಿಶ್ರಣ ಹದವಾಗಿರಲಿ.

ಜಲ್‌ಜೀರಾ ಹೊರತು ಪಡಿಸಿ, ಬೇಸಗೆಯಲ್ಲಿ ದೇಹ ಮನಸ್ಸಿಗೆ ತಂಪೆರೆಯುವ ಪಾನೀಯವೆಂದರೆ ಕೋಕಂ (ಪುನರ್ಪುಳಿ). ಕೆಂಪನೆಯ ಬಣ್ಣದ ಈ ಪಾನೀಯ ಬೇಸಿಗೆಯಲ್ಲಿ ಪಿತ್ತಕಾರಕಗಳನ್ನು ಹೊಡೆದೋಡಿಸಿ ದೇಹವನ್ನು ಸದಾ ತಣ್ಣಗೆ ಆರಾಮದಾಯಕವಾಗಿ ಇರಿಸುತ್ತದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಮಾಸ್ಟರ್‌ ಶೆಫ್‌ನಲ್ಲಿ ಮಿಂಚಿದ ಭೇಲ್‌ಪುರಿ!

Exit mobile version