Site icon Vistara News

Winter Food: ಚಳಿಗಾಲದಲ್ಲಿ ಬೇಸರವೇ? ಈ ಆಹಾರಗಳನ್ನು ಸೇವಿಸುವ ಮೂಲಕ ಖುಷಿಯಾಗಿರಿ!

Winter Food:

ಈ ಚಳಿಗಾಲದಲ್ಲಿ ಚಳಿ ಎಂದರೆ ಕೆಲವರಿಗೆ ಬಹಳ ಖುಷಿಯಾದರೆ, ಇನ್ನೂ ಕೆಲವರಿಗೆ ಅಯ್ಯೋ ಎಂಬ ಭಾವ. ಚಳಿಯ ದಿನಗಳಲ್ಲಿ ಅದೇನೋ ಉದಾಸೀನ ಭಾವ. ಯಾವ ಕೆಲಸದಲ್ಲೂ ಆಸಕ್ತಿಯಿಲ್ಲ, ಯಾವುದೂ ಬೇಡ ಎಂಬಂಥ ಮನಸ್ಥಿತಿ. ಆಗಾಗ ಖಿನ್ನತೆಗೆ ಜಾರುವ ವಿಂಟರ್‌ ಬ್ಲೂ ಸಮಸ್ಯೆ. ಅಂದರೆ ಖುಷಿಯ, ಉಲ್ಲಾಸದ ಹಾರ್ಮೋನು ಡೋಪಮೈನ್‌ ಪ್ರಚೋದನೆಗೂ ಒಳಗಾಗದೆ ಇರುವ ಪರಿಸ್ಥಿತಿ. ಫೀಲ್‌ ಗುಡ್‌, ಖುಷಿಯೆನಿಸುವ ಭಾವವನ್ನು ಉದ್ದೀಪಿಸುವ ಹಾರ್ಮೋನಾದ ಡೋಪಮೈನ್‌, ಮನುಷ್ಯನ ಭಾವನೆಗಳಿಗೆ ಸಂಬಂಧಿಸಿದ ವಿಚಾರಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಸ್ಮರಣ ಶಕ್ತಿ, ನಡತೆ, ಮೂಡು, ಹಾಗೂ ವಿವಿಧ ದೇಹದ ಕೆಲಸಗಳ ಮೇಲೂ ಇದು ತನ್ನ ಪ್ರಭಾವ ಬೀರುತ್ತದೆ. ಪಾರ್ಕಿನ್ಸನ್‌ ಕಾಯಿಲೆ, ಖಿನ್ನತೆ ಕಾಯಿಲೆಗಳಿಗೂ ಡೋಪಮೈನ್‌ಗೂ ನೇರಾನೇರ ಸಂಬಂಧವೂ ಇದೆ. ಹೀಗಾಗಿ ಡೋಪಮೈನ್‌ ಉದ್ದೀಪಿಸುವ ಆಹಾರಗಳ (Winter Food) ಸೇವನೆಯೂ ನಮಗೆ ಮುಖ್ಯ.

ಚಾಕೋಲೇಟ್‌

ನೀವು ನಂಬಲಿಕ್ಕಿಲ್ಲ, ಚಾಕೋಲೇಟ್‌ಗೂ ನಿಮ್ಮ ಮೂಡಿಗೂ ಸಂಬಂಧವಿದೆ. ಚಾಕೋಲೇಟಿನಲ್ಲಿ ಟೈರಾಮೈನ್‌ ಎಂಬ ರಾಸಾಯನಿಕವಿದ್ದು, ಇದಕ್ಕೆ ಡೋಪಮೈನ್‌ ಹಾರ್ಮೋನನ್ನು ಉದ್ದೀಪಿಸಿ, ಪಾಸಿಟಿವ್‌ ಮನಸ್ಥಿತಿಯನ್ನು ತರುವ ಶಕ್ತಿಯಿದ. ಹಲವಾರು ಸಂಶೋಧನೆಗಳೂ ಇದನ್ನು ಪು಼ಷ್ಠೀಕರಿಸಿದ್ದು, ಇದರಲ್ಲಿರುವ ಫೀನೈಲ್‌ ಥೈಲಾಮೈನ್‌ ನಮ್ಮ ಪಲ್ಸ್‌ ರೇಟನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಹೀಗಾಗಿ ಚಾಕೋಲೇಟ್‌ ತಿಂದರೆ ಪ್ರೀತಿಯಲ್ಲಿ ಬಿದ್ದಷ್ಟೇ ಖುಷಿ ಸಿಗುತ್ತದಂತೆ. ಹಾಗಾಗಿ ಮುಂದಿನ ಬಾರಿ ಬೇಸರದಲ್ಲಿದ್ದಾಗ ಚಾಕೋಲೇಟ್‌ ತಿನ್ನಿ. ನಿಮ್ಮ ಮೂಡ್‌ ಸುಧಾರಿಸಬಹುದು.

ಒಣ ಬೀಜಗಳು

ಊಟದ ನಂತರ, ಮಧ್ಯದಲ್ಲಿ ಹಸಿವಾದಾಗ ಏನಾದರೂ ತಿನ್ನಬೇಕೆಂಬ ಬಯಕೆ ಆಗುವುದು ಸಹಜ. ಆದರೆ, ಆ ಸಮಯದಲ್ಲಿ ಏನಾದರೊಂದು ಕುರುಕಲು ತಿನ್ನುವ ಬದಲು ಬೀಜಗಳನ್ನು ತಿನ್ನಬಹುದು. ಬೀಜಗಳಿಗೂ ಡೋಪಮೈನ್‌ ಉದ್ದೀಪಿಸುವ ಗುಣವಿದೆ. ಇವುಗಳಲ್ಲಿ ಟೈರೋಸಿನ್‌ ಎಂಬ ಅಮೈನೋ ಆಸಿಡ್‌ ಇದ್ದು ಇದು ದೇಹಕ್ಕೆ ಸೇರಿದಾಗ ಅದು ಡೋಪಮೈನ್‌ ಆಗಿ ಬದಲಾಗುತ್ತದೆ. ಮುಖ್ಯವಾಗಿ ವಾಲ್ನಟ್‌ನಲ್ಲಿ ಇದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ. ಉಳಿದಂತೆ, ಬಾದಾಮಿ, ಕುಂಬಳಕಾಯಿ ಬೀಜ, ಅಗಸೆಬೀಜ, ನೆಲಗಡಲೆ, ಎಳ್ಳು ಇತ್ಯಾದಿಗಳನ್ನೆಲ್ಲವನ್ನೂ ತಿನ್ನುವ ಮೂಲಕ ಖುಷಿಯನ್ನೂ ಪಡೆಯಬಹುದು.

ಮೀನು

ಬಹಳಷ್ಟು ಮಂದಿಗೆ ವಿಟಮಿನ್‌ ಡಿಯ ಕೊರತೆಯಿಂದ ಡೊಪಮೈನ್‌ ಹಾರ್ಮೋನಿನ ಉತ್ಪಾದನೆಯೂ ಕುಗ್ಗುತ್ತದೆ ಎಂಬ ಸತ್ಯ ಗೊತ್ತಿಲ್ಲ. ಹಾಗಾಗಿ ವಿಟಮಿನ್‌ ಡಿ ಡೊಪಮೈನ್‌ಗೆ ಅಗತ್ಯವಾಗಿ ಬೇಖು. ಮುಖ್ಯವಾಗಿ ಬಿ೬ ವಿಟಮಿನ್‌ಗೆ ಈ ಶಕ್ತಿ ಹೆಚ್ಚಿದೆ. ಹಾಗಾಗಿ ಮೀನಿನ ಸೇವನೆಯಿಂದ ವಿಟಮಿನ್‌ ಬಿ೬ ಹಾಗೂ ಕಬ್ಬಿಣಾಂಶವು ದೇಹಕ್ಕೆ ಸೇರಿ ಡೋಪಮೈನ್‌ ಏರಲು ಪರೋಕ್ಷವಾಗಿ ಸಹಾಯ ಮಾಡುತ್ತದೆ.

ಕಾಫಿ

ಕಾಫಿ ಅತಿಯಾಗಿ ಸೇವನೆ ಒಳ್ಳೆಯದಲ್ಲವೆಂಬುದು ಸತ್ಯವೇ ಆದರೂ. ಹಿತಮಿತವಾಗಿ ಕಾಫಿ ಕುಡಿಯುವುದರಿಂದ ಡೊಪಮೈನ್‌ ಪ್ರಮಾಣವನ್ನು ಉದ್ದೀಪಿಸಬಹುದು. ಕಾಫಿ ಎಚ್ಚರವಾಗಿರುವಂತೆ ಮಾಡುವುದಲ್ಲದೆ ಖುಷಿಯನ್ನೂ ನೀಡುತ್ತದೆ. ಕಾಫಿಯಲ್ಲಿರುವ ಕೆಫಿನ್‌ಗೆ ಈ ಗುಣವಿರುವುದರಿಂದ ಬೇಸರವಾದಾಗ ಒಂದು ಕಪ್‌ ಬಿಸಿ ಬಿಸಿ ಕಾಫಿಯನ್ನೂ ಕುಡಿದು ಮೂಡ್‌ ಸರಿ ಮಾಡಿಕೊಳ್ಳಬಹುದು. ಆದರೆ ಇದು ಅತಿಯಾಗಬಾರದು, ಚಟವಾಗಬಾರದು!

ತರಕಾರಿ ಹಾಗೂ ಹಣ್ಣುಗಳು

ಹಣ್ಣುಗಳು ಹಾಗೂ ತರಕಾರಿಗಳಲ್ಲಿಸಾಕಷ್ಟು ವಿಟಮಿನ್‌ ಹಾಗೂ ಖನಿಜಾಂಶಗಳಿರುವುದರಿಂದ ಇದು ದೇಹದಲ್ಲಿ ಸದಾ ಡೋಪಮೈನ್‌ ಹಾರ್ಮೋನನ್ನು ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ. ಹಣ್ಣು ತರಕಾರಿಗಳನ್ನು ತಿನ್ನುವ ಮೂಲಕ ಆರೋಗ್ಯವಂತರಾಗಿ, ಈ ಹಾರ್ಮೋನಿನ ಏರಿಳಿತವಾಗುವುದರಿಂದ ತಪ್ಪಿಸಿಕೊಳ್ಳಬಹುದು.

ಇದನ್ನೂ ಓದಿ: Bone Health In Winter: ಚಳಿಗಾಲದಲ್ಲಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

Exit mobile version