ಸಪೋಟ ಎಂಬ ಸಿಹಿಯಾದ ಹಣ್ಣುಗಳಿಗೆ ಚಿಕ್ಕು ಎಂಬ ಮುದ್ದಾದ ಹೆಸರೂ ಇದೆ. ನೋಡಲು ಆಕರ್ಷಕವಲ್ಲದಿದ್ದರೂ ತಿನ್ನಲು ರುಚಿಯಾಗಿರುವ ಈ ಹಣ್ಣು ಸಾಕಷ್ಟು ಖನಿಜಾಂಶಗಳನ್ನೂ, ಪೋಷಕಾಂಶಗಳನ್ನೂ ತನ್ನಲ್ಲಿ ಹೊಂದಿದೆ. ಆದರೆ, ವಿಧವಿಧವಾದ ಹಣ್ಣುಗಳ ಪೈಕಿ ಚಿಕ್ಕು ಸದಾ ಹಿಂದೆಯೇ ಉಳಿವ ಹಣ್ಣು. ದಕ್ಷಿಣ ಹಾಗೂ ಪಶ್ಚಿಮ ಭಾರತದಲ್ಲಿ ಹೇರಳವಾಗಿ ಕಂಡುಬರುವ ಈ ಹಣ್ಣು ಹಿಂದೆ ಉಳಿದರೂ, ಸಾಕಷ್ಟು ಸದ್ಗುಣಗಳನ್ನು ಹೊಂದಿರುವುದರಿಂದ ತಿನ್ನಲೇಬೇಕಾದ ಹಣ್ಣು ಕೂಡಾ (Chikoo Benefits) ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಎಲುಬು, ಹೃದಯ, ಚರ್ಮ ಹಾಗೂ ಶ್ವಾಸಕೋಶಗಳಿಗೆ ಇದು ಒಳ್ಳೆಯದನ್ನೇ ಬಯಸುವ ಹಣ್ಣಿದು.
ಚಿಕ್ಕು ಹಣ್ಣಿನಲ್ಲಿ ಕ್ಯಾಲ್ಶಿಯಂ, ಕಬ್ಬಿಣಾಂಶ ಹಾಗೂ ಪಾಸ್ಪರಸ್ ಹೇರಳವಾಗಿದೆ. ಹಾಗಾಗಿ ಇದು ಎಲುಬಿನ ಆರೋಗ್ಯಕ್ಕೆ ಅತ್ಯಂತ ಮುಖ್ಯ. ಮುಖ್ಯವಾಗಿ ಮಹಿಳೆಯರಲ್ಲಿ ಮೂವತ್ತು ದಾಟಿದ ಮೇಲೆ ಸಾಮಾನ್ಯವಾಗಿ ಕುಂಠಿತವಾಗುವ ಎಲುಬಿನ ಆರೋಗ್ಯಕ್ಕೆ ಇದು ಉತ್ತಮ ಪರಿಹಾರ ನೀಡುತ್ತದೆ. ಅಷ್ಟೇ ಅಲ್ಲ, ಸಪೋಟಾ ಹಣ್ಣಿನಲ್ಲಿ ಸಾಕಷ್ಟು ವಿಟಮಿನ್ ಸಿ ಹಾಗೂ ತಾಮ್ರ ಇವೆ. ಹಾಗಾಗಿ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚು ಮಾಡುತ್ತದೆ. ಶೀತ ನೆಗಡಿಯಿಂದ ಮೂಗಿನ ಹೊಳ್ಳೆ, ಗಂಟಲು ಹಾಗೂ ಉಸಿರಾಟದ ನಾಳಗಳಲ್ಲಿ ಗಟ್ಟಿಯಾದ ಕಫ ಕೂಡಾ ನೀರಾಗಲು ಇದು ಸಹಾಯ ಮಾಡುತ್ತದೆ.
ಇದರಲ್ಲಿರುವ ವಿಟಮಿನ್ ಸಿ ಕೊಲಾಜೆನ್ ಉತ್ಪಾದಿಸಲು ಸಹಾಯ ಮಾಡುವುದರಿಂದ ಇದು ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಚರ್ಮದಲ್ಲಿ ನಿರಿಗೆಗಳಾಗದಂತೆ ಸಹಾಯ ಮಾಡುವ ಇದು ಉತ್ತಮ ಆಂಟಿ ಏಜಿಂಗ್ ಆಗಿ ಕೆಲಸ ಮಾಡುತ್ತದೆ. ಚಿಕ್ಕಿನಲ್ಲಿರುವ ಪೊಟಾಶಿಯಂ ಹಾಗೂ ಮೆಗ್ನೀಶಿಯಂ ಅಂಶವು ರಕ್ತದೊತ್ತಡವನ್ನೂ ಸಮತೋಲನದಲ್ಲಿರಿಸಿ ಹೃದಯ ಹಾಗೂ ಕೊಲೆಸ್ಟೆರಾಲ್ ತೊಂದರೆಗಳನ್ನೂ ನಿಯಂತ್ರಿಸುತ್ತದೆ. ಇಷ್ಟೇ ಅಲ್ಲ, ಸಕಲ ಗುಣ ಸಂಪನ್ನವಾಗಿರುವ ಚಿಕ್ಕು ಹಣ್ಣನ್ನು ತಿನ್ನಲೇಬೇಕು ಎನ್ನಲು ಇನ್ನೂ ಕೆಲವು ಕಾರಣಗಳು ಇಲ್ಲಿವೆ.
1. ಚಿಕ್ಕು ಹಣ್ಣಿನಲ್ಲಿ ನಾರಿನಂಶ ಹೆಚ್ಚಿದೆ. ಮಲಬದ್ಧತೆಯ ತೊಂದರೆ ಇರುವ ಮಂದಿ ಯಾವ ಚಿಂತೆಯೂ ಇಲ್ಲದೆ ಈ ಹಣ್ಣನ್ನು ತಿನ್ನಬಹುದು. ಯಾಕೆಂದರೆ ಇದರಿಂದ ಮಲಬದ್ಧತೆಯ ತೊಂದರೆಗೆ ನೈಸರ್ಗಿಕ ಪರಿಹಾರವೂ ಸಿಗುತ್ತದೆ.
2. ಪಚನಕ್ರಿಯೆಯ ಸಮಸ್ಯೆ ಇರುವ ಮಂದಿಗೂ ಇದು ಒಳ್ಳೆಯ ಹಣ್ಣು. ಯಾಕೆಂದರೆ ಇದರಲ್ಲಿರುವ ಫ್ಲೇವನಾಯ್ಡ್‌ಗಳು ಪಚನಕ್ರಿಯೆಗೆ ಪೂರಕವಾಗಿವೆ.
3. ಗ್ರಾಸ್ಟ್ರಿಕ್ ಸಮಸ್ಯೆ ಇರುವ ಮಂದಿಗೂ ಇದು ಅತ್ಯಂತ ಉತ್ತಮ ಹಣ್ಣು. ಇದರಲ್ಲಿ ಆಂಟಿ ಇನ್‌ಫ್ಲಮೇಟರಿ ಗುಣಗಳಿರುವುದರಿಂದ ಇದು ಹೊಟ್ಟೆಯುರಿ ಉಬ್ಬರದಂತಹ ಸಮಸ್ಯೆಗಳನ್ನು ಶಾಂತವಾಗಿಸುತ್ತದೆ. ಜೀರ್ಣನಾಳದಲ್ಲಿ ಆಸಿಡ್ ಹೆಚ್ಚಾಗದಂತೆ ಇದು ತಡೆಯುತ್ತದೆ.
ಇದನ್ನೂ ಓದಿ: Water Rich Fruits: ಬೇಸಿಗೆ ಬಂತಲ್ಲಾ! ಅತಿಹೆಚ್ಚು ನೀರಿನಂಶ ಇರುವ ಹಣ್ಣುಗಳಿವು
4. ಚಿಕ್ಕು ಹಣ್ಣು ಕೊಲೋನ್ ಕ್ಯಾನ್ಸರ್ ಬರದಂತೆ ತಡೆಯುತ್ತದೆ.
5. ಚಿಕ್ಕು ಕಡಿಮೆ ಕ್ಯಾಲರಿಯ ಹಣ್ಣಾಗಿದ್ದು, ಬಹಳ ಹೊತ್ತಿನವರೆಗೆ ಹಸಿವಾಗದಂತೆ ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಆದರೆ, ಸಿಹಿಯಾದ ಹಣ್ಣಾದ್ದರಿಂದ ಮಧುಮೇಹದ ಸಮಸ್ಯೆ ಇರುವ ಮಂದಿ ವೈದ್ಯರ ಸಲಹೆ ಪಡೆದು ಈ ಹಣ್ಣನ್ನು ಸೇವಿಸುವುದು ಒಳಿತು.
ಹಾಗಾದರೆ ಚಿಕ್ಕು ಹಣ್ಣನ್ನು ತಿನ್ನುವುದು ಹೇಗೆ ಎಂಬ ಪ್ರಶ್ನೆಯೂ ಇದರ ಹಿಂದೆಯೇ ಉದ್ಭವಿಸೀತು. ಚಿಕ್ಕನ್ನು ಹಾಗೆಯೇ ತಿನ್ನಲಿಚ್ಛಿಸುವ ಮಂದಿ ಹಾಗೆಯೂ ತಿನ್ನಬಹುದು. ಇಲ್ಲವಾದಲ್ಲಿ ಇದನ್ನು ಜ್ಯೂಸ್ ಅಥವಾ ಸ್ಮೂದಿ ಮಾಡಿ ಕುಡಿಯಬಹುದು. ಹಾಲು ಹಾಕಿ ಮಿಲ್ಕ್‌ಶೇಕ್ ಕೂಡಾ ಮಾಡಿ ಹೀರಬಹುದು. ಚಿಕ್ಕು ಹಣ್ಣಿನ ಐಸ್‌ಕ್ರೀಂ ಕೂಡಾ ಅತ್ಯಂತ ಪ್ರಸಿದ್ಧ. ಖೀರ್, ಬರ್ಫಿ ಕೂಡಾ ಮಾಡಬಹುದು. ಬೆಳಗಿನ ಉಪಹಾರಕ್ಕೆ ತಿಂಡಿಯ ಬದಲು, ಚಿಕ್ಕು, ಖರ್ಜೂರ, ಬಾದಾಮಿ, ಓಟ್ಸ್ ಇತ್ಯಾದಿಗಳನ್ನು ಹಾಕಿ ಮಿಕ್ಸಿಯಲ್ಲೊಮ್ಮೆ ತಿರುಗಿಸಿ ಸ್ಮೂದಿಯಂತೆ ಮಾಡಿಯೂ ಕುಡಿಯಬಹುದು.
ಇದನ್ನೂ ಓದಿ: Food Tips: ಹಣ್ಣುಗಳನ್ನು ಕೆಡದಂತೆ ತಾಜಾ ಆಗಿ ಕಾಪಾಡಿಕೊಳ್ಳುವುದು ಹೇಗೆ?