Site icon Vistara News

Bread History: ಅಡುಗೆಯೇ ವಿಸ್ಮಯ; ಕ್ರಿಸ್ತಪೂರ್ವ 8,600ರ ಕಾಲದ ಬ್ರೆಡ್‌ ಟರ್ಕಿಯಲ್ಲಿ ಪತ್ತೆ!

Bread History

ಒಂದು ಬ್ರೆಡ್‌ ಹೆಚ್ಚೆಂದರೆ ಎಷ್ಟು ಕಾಲ ಬಾಳಿಕೆ ಬರಬಹುದು. ಅಂಗಡಿಯಿಂದ ತಂದ ಬ್ರೆಡ್‌ ನಾಲ್ಕೈದು ದಿನಗಳ ನಂತರ ಅದರ ಅವಧಿ ಮುಗಿದು ಹಾಳಾಗಲು ಶುರುವಾಗುತ್ತದೆ. ಹಾಳಾದರೆ ನಾವು ಅದನ್ನು ಎಸೆದುಬಿಡುತ್ತೇವೆ. ಅದು ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ. ಆದರೆ, ಇದಕ್ಕೊಂದು ಅಪವಾದ ಎಂಬಂತೆ, ಜಗತ್ತಿನ ಇತಿಹಾಸದಲ್ಲೊಂದು ವಿಶೇಷವಾದ ಘಟನೆ ನಡೆದಿದೆ. ಕ್ರಿಸ್ತಪೂರ್ವ 8,600ರಿಂದ 6,600ರ ಆಸುಪಾಸಿನ ಕಾಲದ್ದೆಂದು ಹೇಳಲಾದ ಬ್ರೆಡ್‌ (bread history) ಟರ್ಕಿಯಲ್ಲಿ ದೊರೆತಿದೆ! ಹೌದು. ಇಂಥದ್ದೊಂದು ಬ್ರೆಡ್‌ ಒಂದನ್ನು ಟರ್ಕಿ ದೇಶದ ಪುರಾತತ್ವ ಅಧಿಕಾರಿಗಳು ಪತ್ತೆ ಹಚ್ಚಿದ್ದು ಇದನ್ನು ಕ್ರಿಸ್ತಪೂರ್ವಕಾಲದ್ದೆಂದು ಹೇಳಿದ್ದಾರೆ. ಅಂಗೈ ಗಾತ್ರದ ಉರುಟಾದ ಬ್ರೆಡ್‌ ಇದಾಗಿದ್ದು ಮೆದುವಾಗಿ ಸ್ಪಾಂಜೀಯಾಗಿದೆ. ಈ ಬ್ರೆಡ್‌ ಜೊತೆಗೆ ಗೋಧಿ, ಬಾರ್ಲಿಯ ಕಾಳುಗಳ ಪಳೆಯುಳಿಕೆಗಳು ಒಂದು ಓವನ್‌ನಂತಹ ಆಕೃತಿಯೊಳೆಗೆ ದೊರೆತಿದ್ದು ಇದು ಬಹಳ ಪುರಾತನ ಕಾಳದ್ದು ಎಂದು ಲೆಕ್ಕಾಚಾರ ಹಾಕಲಾಗಿದೆ.‌ ಟರ್ಕಿಯ ಕೋನ್ಯಾದ ಕ್ಯಾಟಲ್‌ಹೋಯುಕ್‌ ಎಂಬ ಪ್ರದೇಶದಲ್ಲಿ ಉತ್ಖನನ ಮಾಡುವ ಸಂದರ್ಭ ಇವು ದೊರೆತಿದೆ. ಟರ್ಕಿಯ ನೆಕ್‌ಮೆಟಿನ್‌ ಎರ್‌ಬಾಕನ್‌ ವಿಶ್ವವಿದ್ಯಾನಿಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ ತನ್ನ ಪತ್ರಿಕಾ ಹೇಳಿಕೆಯಲ್ಲಿ ಬಗ್ಗೆ (bread history) ವಿಸ್ತೃತವಾಗಿ ವಿವರಣೆ ನೀಡಿದೆ.

ಪುರಾತತ್ವ ಅಧಿಕಾರಿ ಹೇಳೋದೇನು?

ಪುರಾತತ್ವ ಅಧಿಕಾರಿ ಅಲಿ ಉಮುಟ್‌ ಟುರ್ಕನ್‌ ಅವರು ಹೇಳಿರುವಂತೆ ಇದು ಜಗತ್ತಿನ ಅತ್ಯಂತ ಹಳೆಯ ಬ್ರೆಡ್‌ ಆಗಿದೆ ಎಂದಿದ್ದಾರೆ. ಈ ಬ್ರೆಡ್‌, ಒಂದು ಸಣ್ಣ ಲೋಫ್‌ನಂತಿದ್ದು, ಮಧ್ಯದಲ್ಲಿ ಒಂದು ಬೆರಳಿನಿಂದ ಪ್ರೆಸ್‌ ಮಾಡಿದಂತಿದೆ. ಇದನ್ನು ಬೇಕ್‌ ಮಾಡಲಾಗಿಲ್ಲ. ಆದರೆ, ಹುಳಿ ಬರಿಸಲಾದ ಹಿಟ್ಟಿನಿಂದ ಮಾಡಲಾಗಿರುವ ಬ್ರೆಡ್‌ ಇದು. ಮರದ ತುಂಡೂ ಇದರ ಜೊತೆಗಿದ್ದು, ಒಂದು ತೆಳುವಾದ ಮೇಣದ ಪರದೆ ಇದರ ಮೇಲಿದೆ. ಇದನ್ನು ಹಾಳಾಗದಂತೆ ಇಡುವಲ್ಲಿ ಈ ಮೇಣದ ಪರದೆ ಕೆಲಸ ಮಾಡಿದೆ ಎಂದು ಅವರು ವಿವರಿಸಿದ್ದಾರೆ.

ಗಾಳಿ ಆಡಬಲ್ಲ ರಚನೆ

ಸೂಕ್ಷ್ಮದರ್ಶಕದಲ್ಲಿ ಈ ಬ್ರೆಡ್‌ ಅನ್ನು ವೀಕ್ಷಣೆ ಮಾಡಲಾಗಿದ್ದು, ಈ ಬ್ರೆಡ್‌ ನಡುವಿನಲ್ಲಿ ಗಾಳಿಆಡಬಲ್ಲ ರಚನೆಗಳಿದ್ದು, ಇದು ಉಬ್ಬಿಕೊಂಡಿರುವ ಬ್ರೆಡ್‌ ಆಗಿದೆ. ಅಂದರೆ ಸಾಕಷ್ಟು ಸ್ಪಾಂಜೀ ಆಗಿದೆ. ಇದರ ಜೊತೆಯಲ್ಲಿ ಸ್ಟಾರ್ಚ್‌ ಇರುವ ಧಾನ್ಯಗಳಿಂದ ಮಾಡಲ್ಪಟ್ಟಿದೆ ಎನ್ನಲಾಗಿದೆ. ನೀರಿನಲ್ಲಿ ಬೆರೆಸಿದ ಹಿಟ್ಟಿನಿಂದ ಈ ಬ್ರೆಡ್‌ ಮಾಡಲಾಗಿದ್ದು, ಅಂದಿನ ಕಾಲದ ಓವನ್‌ನಂತಹ ರಚನೆಯಲ್ಲಿ ಇದನ್ನು ಬೇಯಿಸಲು ಇಡಲಾಗಿದೆ.

ವಿಶ್ವದ ಹಳೆಯ ಬ್ರೆಡ್

ಈ ಹಿಂದೆ ಜೋರ್ಡನ್‌ನ ಕಪ್ಪು ಮರುಭೂಮಿಯ ಈಶಾನ್ಯ ಭಾಗದಲ್ಲಿ 14,400 ವರ್ಷಗಳಷ್ಟು ಹಳೆಯ ಬ್ರೆಡ್‌ನ ತುಣಕುಗಳು ಸಿಕ್ಕಿದ್ದವು. 2018ರಲ್ಲಿ ಇದು ದೊರೆತಿದ್ದು, ಅದನ್ನೇ ವಿಶ್ವದ ಅತ್ಯಂತ ಹಳೆಯ ಬ್ರೆಡ್‌ ಎಂದು ಬಾವಿಸಲಾಗಿದೆ. ಈ ಎರಡೂ ಬ್ರೆಡ್‌ಗಳು ವಿಶ್ವದ ಅತ್ಯಂತ ಹಳೆಯ ಬ್ರೆಡ್‌ಗಳಾಗಿದ್ದು, ಆಹಾರ ತಯಾರಿಕೆ ಹಾಗೂ ಅಡುಗೆಯ ಇತಿಹಾಸವನ್ನು ನಾವು ಊಹಿಸಬಹುದಾಗಿದೆ. ನಮ್ಮ ಪೂರ್ವಜರ ಅಡುಗೆ ಪದ್ಧತಿಗಳು ಹಾಗೂ ಈಗಿರುವ ಅಡುಗೆ ಪದ್ಧತಿಗಳು ಇಷ್ಟು ಪುರಾತನ ಇತಿಹಾಸವನ್ನು ಹೊಂದಿದೆ ಎಂಬುದಕ್ಕೆ ಬೆಳಕು ಚೆಲ್ಲುವ ಉತ್ಖನನ ಇದಾಗಿದೆ.

ಇದನ್ನೂ ಓದಿ: Rumali Roti: ರುಮಾಲಿ ರೋಟಿ ಇತ್ತೀಚೆಗೆ ಮಾಯವಾಗುತ್ತಿದೆಯೇ? ರೋಟಿ ಪ್ರಿಯರಲ್ಲಿ ಕಳವಳ!

Exit mobile version