ಪ್ರತಿಯೊಬ್ಬರೂ ಎಲ್ಲ ಕೆಲಸಗಳಲ್ಲಿ ಪಳಗಿರಬೇಕಾಗೇನೂ ಇಲ್ಲ. ಎಲ್ಲರಿಗೂ ಎಲ್ಲ ವಿದ್ಯೆಗಳು ಗೊತ್ತಿರುವುದಿಲ್ಲ. ಹುಟ್ಟುತ್ತಲೇ ನಾವು ಎಲ್ಲವನ್ನೂ ಕಲಿತು ಬರುವುದಿಲ್ಲ. ದೊಡ್ಡವರಾಗುತ್ತಾ ಆಗುತ್ತಾ ಒಂದೊಂದೇ ಬದುಕಿನ ಕೌಶಲ್ಯಗಳನ್ನು ಕಲಿಯುತ್ತೇವೆ. ಹಾಗಂತ, ಎಲ್ಲರಿಗೂ ಬದುಕಿನ ಕೌಶಲ್ಯಗಳು ಕರಗತವಾಗಬೇಕೆಂದೇನೂ ಇಲ್ಲ. ಮೀನಿಗೆ ಈಜು ಕಲಿಸಬೇಕೇ ಹೇಳಿ ಎನ್ನುತ್ತಾ, ಮಹಿಳೆಯರೆಲ್ಲರಿಗೂ ಅಡುಗೆ ಬರಲೇಬೇಕು ಎನ್ನುವ ವಾದದಲ್ಲಿ ಹುರುಳಿಲ್ಲ ಬಿಡಿ. ಈಜು ಬಾರದ ಮೀನುಗಳೂ ಇರುತ್ತವೆ ಅಂದುಕೊಂಡರಾಯಿತು! ಅಡುಗೆ ಎಂಬುದು ಕಲೆ. ಹೌದು. ಅಡುಗೆ ಮಾಡುವುದೂ ಒಂದು ಕಲೆ. ರುಚಿಯಾಗಿ, ಆರೋಗ್ಯಕರವಾಗಿ ಮಾಡುವುದು ಕೂಡಾ ಕಲೆಯೇ. ಮಾಡಿದ ಅಡುಗೆಯನ್ನು ಅದ್ಭುತವಾಗಿ ಕಾಣುವಂತೆ ಮಾಡುವುದೂ ಒಂದು ಕಲೆ. ಆದರೆ, ಅಡುಗೆಯೇನು ಬ್ರಹ್ಮವಿದ್ಯೆಯೇ? ಅದನ್ನು ಕಲಿಯುವ ಅಗತ್ಯ ಎಲ್ಲಿದೆ, ಸಂದರ್ಭ ಬಂದಾಗ ಕಲಿಯುತ್ತೇವೆ ಎಂಬ ಸಬೂಬನ್ನು ಹೇಳಿಕೊಂಡು ಓಡಾಡುತ್ತಿರುವ ಮಂದಿಯೂ ನಮ್ಮ ನಡುವೆ ಇದ್ದಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಅಡುಗೆ ಬಾರದು. ಅವರಿಗೆ ಅಡುಗೆ ಬ್ರಹ್ಮವಿದ್ಯೆಯೇ! ಹಾಗಾದರೆ ಬನ್ನಿ (cooking tips), ಅಡುಗೆ ನಿಮಗೆ ಬ್ರಹ್ಮವಿದ್ಯೆಯೇ ನೋಡಿ!
ಇದು ತಮಾಷೆಯೆನಿಸಬಹುದು, ಆದರೆ, ತಮಾಷೆಯಾದರೂ ಸತ್ಯವೇ. ನೀವು ನಿಮ್ಮ ಗಣಿತದಲ್ಲಿ ಚಂದದ ವೃತ್ತಾಕಾರದ ಲೆಕ್ಕಾಚಾರಗಳನ್ನೆಲ್ಲ ಮಾಡಿ ೧೦೦ಕ್ಕೆ ನೂರು ಅಂಕ ತೆಗೆದಿರಬಹುದು. ಆದರೆ, ಎಷ್ಟೇ ಪ್ರಯತ್ನಿಸಿದರೂ ಉರುಟಾದ, ಗುಂಡಗಿನ ಚಪಾತಿ ಮಾಡುವುದು ಮಾತ್ರ ಸಾಧ್ಯವಾಗುತ್ತಿಲ್ಲವೇ? ಎಷ್ಟೇ ಪ್ರಯತ್ನಿಸಿದರೂ, ಸರಳವಾಗಿ ವೃತಾಕಾರವಾಗಿ ದೋಸೆ ಹುಯ್ಯುವುದು ಕಷ್ಟ ಅನಿಸುತ್ತಿದೆಯೇ? ನೀವು ಮಾಡುವ ಚಪಾತಿ ಏಷ್ಯಾ ಖಂಡ, ಆಫ್ರಿಕಾದ ಹಾಗೆ ಆಕಾರದಲ್ಲಿರುತ್ತದೆಯೋ? ಕಾರು, ಬೈಕ್ ಓಡಿಸುವುದೇ ಸುಲಭವಪ್ಪಾ, ಬೆಟ್ಟವಾದರೂ ಹತ್ತಿಯೇನು, ನನ್ನ ಕೈಯಿಂದ ಉರುಟು ಚಪಾತಿ ಮಾಡುವುದು ಮಾತ್ರ ಸಾಧ್ಯವಾಗುತ್ತಿಲ್ಲ ಅನಿಸುತ್ತಿದೆಯೇ? ಹಾಗಿದ್ದರೆ ಖಂಡಿತ ಅಡುಗೆ ನಿಮ್ಮ ಕ್ಷೇತ್ರವಲ್ಲ.
ನೀವು ಮಾಡಿದ ರೈಸ್‌ಬಾತ್, ಬಿರಿಯಾನಿ, ಇಡ್ಲಿ ಅಥವಾ ಯಾವುದೇ ಹೊಸ ರುಚಿ ಬಾಯಲ್ಲಿ ಇಡಲು ಸಾಧ್ಯವಾಗದಿದ್ದರೂ ನಿಮ್ಮ ಮನೆಯವರು ಬಾಯಿ ಮುಚ್ಚಿಕೊಂಡು ತಿನ್ನುತ್ತಿದ್ದಾರೆಯೇ? ಹಾಗಾದರೆ ನೀವು ಖಂಡಿತ ಅದೃಷ್ಟವಂತರು. ನೀವೆಷ್ಟು ಕೆಟ್ಟ ಅಡುಗೆ ಮಾಡಿದ್ದರೂ, ಅಡುಗೆ ನಿಮ್ಮ ಕ್ಷೇತ್ರವಲ್ಲವೆಂದು ಅವರು ಅರಿತುಕೊಂಡು ನಿಮ್ಮನ್ನು ಬೇಸರ ಮಾಡಿಸದೆ, ಬಾಯುಮುಚ್ಚಿ ತಿನ್ನುತ್ತಿದ್ದಾರೆ! ಪ್ರತಿ ಬಾರಿಯೂ ಅಡುಗೆಗೆ ರುಚಿಗೆ ತಕ್ಕಷ್ಟೇ ಉಪ್ಪು ಹಾಕುವುದು ಹೇಗೆ ಎಂಬುದು ಮಾತ್ರ ಜಗತ್ತಿನ ಅತ್ಯಂತ ಜಟಿಲ ಸಮಸ್ಯೆ ಎನಿಸುತ್ತಿದೆಯೇ? ಹಾಗಿದ್ದರೆ ಖಂಡಿತ ನಿಮ್ಮ ಹಣೆಯಲ್ಲಿ ಅಡುಗೆ ಬರೆದಿಲ್ಲ.
ಪ್ರತಿ ಬಾರಿಯೂ ಎದ್ದಾಗ, ಅಯ್ಯೋ ಯಾಕಪ್ಪಾ ನಾನು ಅಡುಗೆ ಕೆಲಸ ಮಾಡುತ್ತಿದ್ದೇನೆ ಅನಿಸುತ್ತಿದೆಯೇ? ಈ ಅಡುಗೆ ಕೆಲಸ ಎಷ್ಟೊಂದು ಕಷ್ಟವಪ್ಪಾ ಎಂಬ ಯೋಚನೆ ನಿತ್ಯವೂ ಬರುತತಿದೆಯೇ? ಹಾಗಿದ್ದರೆ ಖಂಡಿತಾ ಅಡುಗೆ ನಿಮ್ಮ ಕ್ಷೇತ್ರವಲ್ಲ. ಅನಿವಾರ್ಯವಾಗಿ ಸುಲಭದಡುಗೆ ಮಾಡಿಕೊಂಡು, ನಿಮ್ಮ ನಿಜವಾದ ಪ್ರೀತಿಪಾತ್ರವಾದ ಕ್ಷೇತ್ರವನ್ನು ಆರಿಸಿಕೊಳ್ಳಿ.
ಅಡುಗೆ ಮಾಡುವಾಗ ಭಯವಾಗುತ್ತದೆಯೋ? ಅಂದರೆ, ಸ್ಟವ್ ಬಳಿ ಮಾರುದೂರ ನಿಂತು ಅಡುಗೆ ಮಾಡುತ್ತೀರೋ? ಎಣ್ಣೆಯಲ್ಲಿ ಕರಿಯಲು ಎತ್ತರದಿಂದ ಹಾಕುತ್ತೀರೋ? ಅಥವಾ ಇನ್ನೇನೋ ಅಡುಗೆ ಕೆಲಸ ನಿಮಗೆ ಭಯ ತರಿಸುತ್ತಿದೆಯೋ? ಹಾಗಿದ್ದರೆ ಖಂಡಿತಾ ನೀವು ಒಳ್ಳೆಯ ಅಡುಗೆ ಮಾಡುವವರಲ್ಲ.
ಎಲ್ಲರ ಜೊತೆಗೆ ಸೇರುವಾಗ, ಮನೆಯಲ್ಲೇ ಅಡುಗೆ ಮಾಡಿ ಜೊತೆಯಾಗಿ ಒಂದಿಷ್ಟು ಮಂದಿ ಉಣ್ಣುವ ಯೋಜನೆ ರೂಪಿಸಿದಾಗ, ನೀವು ಅಡುಗೆಯನ್ನು ಒಪ್ಪಿಕೊಳ್ಳುವ ಬದಲು, ಸುಲಭವಾದ ಇತರ ಕೆಲಸಗಳನ್ನು ಒಪ್ಪಿಕೊಳ್ಳುತ್ತೀರೆಂದಾದಲ್ಲಿ ಖಂಡಿತ ನೀವು ಅಡುಗೆ ವಿಷಯದಲ್ಲಿ ಹಿಂದೆ ಎಂದೇ ಅರ್ಥ.
ಇದನ್ನೂ ಓದಿ: Weight Loss: ತೂಕ ಇಳಿಕೆಯ ಶತ್ರು ಈ ಮಧ್ಯರಾತ್ರಿಯ ಬಾಯಿ ಚಪಲ! ಇದಕ್ಕೇನು ಪರಿಹಾರ?
ಇಷ್ಟಕ್ಕೇ, ನೀವು ಬೇಸರ ಪಡಬೇಕೆಂದೇನಿಲ್ಲ. ಎಲ್ಲರ ಮುಂದೆ ನಗೆಪಾಟಲಿಗೀಡಾಗುತ್ತೇನೆ ಎಂಬ ಕಳವಳ ಬೇಡ. ಅಡುಗೆ ಒಂದು ಕಲೆ ನಿಜ. ಆದರೆ, ಕಲಿಯಲೇ ಆಗದ ವಿದ್ಯೆಯೇನಲ್ಲ. ಸುಲಭವಾದ ಕೆಲವನ್ನು ಕರಗತ ಮಾಡಿಕೊಂಡರಾಯಿತು. ಬೊಗಳಿ ಬೊಗಳಿ ರಾಗ ಅನ್ನುವ ಗಾದೆಯೇ ಇದೆಯಲ್ಲ! ಹಾಗೆಯೇ ಹೋಗ್ತಾ ಹೋಗ್ತಾ ನಿಮಗೆ ಅಡುಗೆ ಒಲಿಯುತ್ತದೆ. ಅಷ್ಟಕ್ಕೂ ಅಡುಗೆ ಬಾರದಿದ್ದರೆ ದೊಡ್ಡ ತಲೆಬಿಸಿ ಮಾಡಬೇಕೆಂದೇನಿಲ್ಲ ಬಿಡಿ. ಕೂಲ್, ತೊಂದರೆಯೇನಿಲ್ಲ. ಅಡುಗೆ ಬಾರದಿದ್ದರೇನೂ ಲೋಕ ಮುಳುಗದು. ಬದುಕನ್ನು ಸರಳವಾಗಿಸುವ ಸ್ಮಾರ್ಟ್ ಪ್ರಯತ್ನಗಳ ಕಡೆ ಗಮನ ಹರಿಸಿ ಸಾಕು. ಯಾವುದು ಆರೋಗ್ಯಕರ ಎಂಬ ಸತ್ಯ ಗೊತ್ತಿದ್ದರೆ ಸಾಕು.