ಚಕ್ಕುಲಿ ಅಥವಾ ಮುರುಕ್ಕು (Chakli) ಎಂಬ ಹೆಸರಿನಿಂದ ಕರೆಯಲ್ಪಡುವ ದಕ್ಷಿಣ ಭಾರತೀಯರ ಪರಂಪರಾಗತ ಸಾಂಪ್ರದಾಯಿಕ ಕುರುಕಲು ತಿಂಡಿ ಯಾರಿಗೆ ತಾನೇ ಪ್ರಿಯವಲ್ಲ ಹೇಳಿ? ಒಮ್ಮೆಯಾದರೂ ಬಾಯಲ್ಲಿ ಹಾಕುವಾಗ ಕರಗುವಂಥ ಗರಿಗರಿ ಚಕ್ಕುಲಿ (Crispy chakli) ಮಾಡಬೇಕೆಂಬ ಬಯಕೆ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಸಾಮಾನ್ಯವಾಗಿ ಇರುತ್ತದೆ. ಅಮ್ಮ ಮಾಡುತ್ತಿದ್ದ ಚಕ್ಕುಲಿ, ಅಜ್ಜಿ ಹಬ್ಬಕ್ಕೆ ಮಾಡಿ ಕೊಟ್ಟು ಕಳುಹಿಸುತ್ತಿದ್ದ ಚಕ್ಕುಲಿ ಹೀಗೆಲ್ಲಾ ಭಾವನಾತ್ಮಕ ಸಂಬಂಧವೂ ಚಕ್ಕುಲಿಯೊಡನೆ ಬೆರೆತುಕೊಂಡು ಹಾಗೆಯೇ ಇರುವ ಚಕ್ಕುಲಿಯನ್ನೂ ನಾನೂ ಒಮ್ಮೆ ಟ್ರೈ ಮಾಡಿ ನೋಡಬೇಖು ಎಂದು ರೆಸಿಪಿಯನ್ನು ಕೇಳಿ, ಇಂಟರ್ನೆಟ್‌ನಲ್ಲಿ ಜಾಲಾಡಿ, ಮೊದಲ ಪ್ರಯತ್ನದಲ್ಲಿ ಕೈಸುಟ್ಟುಕೊಂಡು, ಕಚ್ಚಿದರೆ ಹಲ್ಲು ಮುರಿದು ಹೋಗುವಂಥ ಚಕ್ಕುಲಿ ಮಾಡಿ ಬೇಸರಪಟ್ಟುಕೊಳ್ಳುವವರೂ ಇಲ್ಲದಿಲ್ಲ. ಬಹುತೇಕರು ತಮ್ಮ ಮೊದಲ ಪ್ರಯತ್ನದ ಚಕ್ಕುಲಿ ಪ್ರಯತ್ನದಲ್ಲಿ ಫೇಲಾಗಿದ್ದೇ ಹೆಚ್ಚು.
ಹಾಗಾದರೆ ಚಕ್ಕುಲಿ ಮಾಡುವುದು ಬ್ರಹ್ಮವಿದ್ಯೆಯೇ? ಖಂಡಿತಾ ಅಲ್ಲ. ಒಮ್ಮೆ ಅದರ ಹದವರಿತರೆ, ಆಮೇಲೆ, ಚಕ್ಕುಲಿಯನ್ನು ಲೀಲಾಜಾಲವಾಗಿ ಮಾಡಿಬಿಡಬಹುದು. ಸಂಜೆಯ ಚಹಾಕ್ಕೆ, ಆಗಾಗ ಹಬ್ಬಕ್ಕೆ, ಮನೆಯಲ್ಲಿಯೇ ಚಕ್ಕುಲಿ ಮಾಡಿ ಮೆಲ್ಲಬಹುದು. ಹಾಗಾದರೆ ಬನ್ನಿ, ಗರಿಗರಿಯಾದ, ಬಾಯಲ್ಲಿಟ್ಟರೆ ಕರಗುವ ಚಕ್ಕುಲಿ ಮಾಡಬೇಕಾದರೆ ಏನು ಮಾಡಬೇಕು (crispy chakli making) ಎಂಬುದನ್ನು (food tips) ನೋಡೋಣ.
1. ಬಳಸುವ ಸಾಮಾಗ್ರಿಯ ಗುಣಮಟ್ಟದ ಬಗೆಗೆ ಗಮನವಿರಲಿ. ಅಂದರೆ, ಅಕ್ಕಿಹಿಟ್ಟು ಹಾಗೂ ಉದ್ದು ಇವೆರಡರ ಗುಣಮಟ್ಟ ಚೆನ್ನಾಗಿರಲಿ. ಹಳೆಯ ಉದ್ದು, ಹಳೆಯ ಅಕ್ಕಿಹಿಟ್ಟು ಇತ್ಯಾದಿಗಳನ್ನು ಬಳಸಿದರೂ ಒಳ್ಳೆಯ ಚಕ್ಕುಲಿ ಆಗಲಾರದು.
2. ಚಕ್ಕುಲಿಗೆ ಬೇಕಾದ ಸಾಮಾಗ್ರಿಗಳನ್ನು ಒಂದೆಡೆ ಸೇರಿಸಸಿದ್ದಾಯಿತು. ಇನ್ನು ಅದರ ಹಿಟ್ಟನ್ನು ಬೆರೆಸುವಾಗ ಗಮನ ಕೊಡಿ. ಹಿಟ್ಟಿನ ಹದ ಸರಿಯಾಗಿರಬೇಕು. ಸರಿಯಾದ ಅಳತೆಯನ್ನು ನೋಡಿಕೊಳ್ಳಿ. ಕಲಸಲು ಬಿಸಿನೀರು ಬಳಸಿ. ಹಿಟ್ಟು ತೀರಾ ಗಟ್ಟಿಊ, ತೀರಾ ಮೆತ್ತಗೂ ಆಗಬಾರದು. ಹದ ಸರಿಯಾಗಿರಬೇಕು. ಚಕ್ಕುಲಿಯನ್ನು ಒತ್ತುವಾಗ ಅದು ತುಂಡಾಗದಂತೆ ಸರಿಯಾಗಿ ವೃತ್ತಾಕಾರವಾಗಿ ಕೂರುವಂತಿರಬೇಕು.
3. ಸರಿಯಾದ ಉರಿಯೂ ಬಹಳ ಮುಖ್ಯ. ಎಣ್ಣೆಯನ್ನು ಬಿಸಿ ಮಾಡಲು ಇಟ್ಟು ಒಂದು ಸರಿಯಾದ ಹದಕ್ಕೆ ಬಿಸಿಯಾದಾಗ ಚಕ್ಕುಲಿಯನ್ನು ಕರಿಯಲು ಹಾಕಿ. ತೀರಾ ಹೆಚ್ಚು ಬಿಸಿಯಾದ ಎಣ್ಣೆಯಾದರೆ, ಚಕ್ಕುಲಿಯ ಮೇಲ್ಮೈ ಬೇಗನೆ ಕೆಂಪಗಾಗುತ್ತದೆ, ಆದರೆ ಒಳಗೆ ಬೆಂದಿರುವುದೇ ಇಲ್ಲ. ಒಳಗೂ ಹೊರಗೂ ಸರಿಯಾಗಿ ಬೇಯಲು ಒಂದೇ ಹದದಲ್ಲಿ ಬೇಯಲು ಎಣ್ಣೆ ಹದ ಉರಿಯಲ್ಲಿ ಒಂದೇ ಸಮನಾದ ಅಳತೆಯಲ್ಲಿ ಬಿಸಿಯಾಗಿರಬೇಕು.
ಇದನ್ನೂ ಓದಿ: Monsoon Food Tips: ಮಳೆಗಾಲದಲ್ಲಿ ಆರೋಗ್ಯದ ದೃಷ್ಟಿಯಿಂದ ತಿನ್ನಲೇಬೇಕಾದ ತರಕಾರಿಗಳಿವು!
4. ಎಣ್ಣೆಯಲ್ಲಿ ಜಾಗ ಇದೆ ಎಂದು ಒಂದಾದ ಮೇಲೊಂದು ಚಕ್ಕುಲಿ ಹಾಕುತ್ತಲೇ ಇರಬೇಡಿ. ಬಾಣಲೆಯಲ್ಲಿ ಸಾಕಷ್ಟು ಸ್ಥಳಾವಕಾಶ ಪ್ರತಿಯೊಂದಕ್ಕೂ ಸಿಗಲಿ. ಒಟ್ಟಿಗೆ ತುಂಬ ಚಕ್ಕುಲಿಯನ್ನು ಬಾಣಲೆಯಲ್ಲಿ ಹಾಕಿ ಬೇಗಬೇಗನೆ ಚಕ್ಕುಲಿಯ ಕೆಲಸ ಮುಗಿಸಬಹುದು ಎಂದು ನೀವಂದುಕೊಳ್ಳಬಹುದು. ಆದರೆ, ಇದರಿಂದ ಅತ್ಯುತ್ತಮ ಚಕ್ಕುಲಿ ನೀವು ಮಾಡಲಾಗುವುದಿಲ್ಲ.
5. ಹೆಚ್ಚಿನ ಎಣ್ಣೆಯನ್ನು ಚಕ್ಕುಲಿಯಿಂದ ತೆಗೆಯಿರಿ. ಮಾಡಿದ ತಕ್ಷಣ ಟಿಶ್ಯೂ ಪೇಪರಿನಲ್ಲಿ ಹಾಕಲು ಸಾಧ್ಯವಾಗದಿದ್ದರೂ, ಒಮ್ಮೆ ಒಂದು ಪಾತ್ರೆಗೆ ಹಾಕಿದ ಮೇಲೆ ಮತ್ತೆ ಟಿಶ್ಯೂ ಪೇಪರಿನ ಜೊತೆಯಲ್ಲಿಟ್ಟು ಹೆಚ್ಚಾದ ಎಣ್ಣೆಯನ್ನು ಅದರಲ್ಲಿ ಹೀರುವಂತೆ ಮಾಡಿ ತೆಗೆದುಬಿಡಿ. ಹೀಗೆ ಮಾಡಿದರೆ, ಚಕ್ಕುಲಿ ಗರಿಗರಿಯಾಗಿಯೇ ಉಳಿಯುತ್ತದೆ.
ಇದನ್ನೂ ಓದಿ: Food Tips: ಮನೆಯಲ್ಲೇ ಮಿದುವಾದ ಪರ್ಫೆಕ್ಟ್ ಇಡ್ಲಿ ಮಾಡಲು ಪಂಚಸೂತ್ರಗಳು!