ನಿತ್ಯ ಉಣ್ಣುವ ಮೊಸರಿನ ಬಗ್ಗೆ ನಮಗೆ ನೂರೆಂಟು ಸಂದೇಹ. ಅದೊಂದು ಅರೋಗ್ಯಕರ ಆಹಾರ ಎಂಬುದು ಗೊತ್ತಿದ್ದರೂ ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ. ಒಬ್ಬರ ದೇಹಕ್ಕಾದ ತೊಂದರೆಯನ್ನೇ ನಾವು ನಮ್ಮ ದೇಹಕ್ಕೂ ಹಾಗೆಯೇ ಆಗಬಹುದೇನೋ ಎಂಬ ಕಲ್ಪನೆಯಲ್ಲಿ ಮೊಸರು ತಿನ್ನಲು ಹಿಂದೇಟು ಹಾಕುತ್ತೇವೆ. ಕ್ಯಾಲ್ಶಿಯಂ, ಖನಿಜಾಂಶ, ವಿಟಮಿನ್‌ಗಳಿಂದ ಸಮೃದ್ಧವಾಗಿರುವ ಮೊಸರನ್ನು ದೂರ ತಳ್ಳುತ್ತೇವೆ. ಮೊಸರಿನ ಯಾವೆಲ್ಲ ತಪ್ಪುಕಲ್ಪನೆಗಳಿವೆ ಹಾಗೂ ನಿಜಾಂಶವೇನು ಎಂಬುದರ ಮಾಹಿತಿ ಇಲ್ಲಿದೆ.
ತಪ್ಪು ಕಲ್ಪನೆ ೧: ಚಳಿಗಾಲದಲ್ಲಿ ಮೊಸರು ತಿನ್ನುವುದರಿಂದ ಕಫ, ಶೀತ ಅಥವಾ ನೆಗಡಿಯಾಗುತ್ತದೆ.
ನಿಜಾಂಶ: ಇದೊಂದು ಶುದ್ಧ ತಪ್ಪು ಕಲ್ಪನೆ. ಚಳಿಗಾಲದಲ್ಲೂ ಮೊಸರನ್ನು ತಿನ್ನಬಹುದು. ಇದರಲ್ಲಿರುವ ಪ್ರೊಬಯಾಟಿಕ್ ಹಾಗೂ ವಿಟಮಿನ್‌ಗಳು ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಕ್ಕೆ ಚಳಿಗಾಲ ಬೇಸಗೆ, ಮಳೆಗಾಲ ಎಂಬ ಋತುಗಳ ಹಂಗಿಲ್ಲ. ಆದರೆ, ಮೊಸರು ಫ್ರಿಡ್ಜ್‌ನಲ್ಲಿಟ್ಟು ತೆಗೆದು, ಉಣ್ಣುವುದರಿಂದ ಇಂತಹ ಸಮಸ್ಯೆ ಬರಬಹುದು. ಅದಕ್ಕಾಗಿ ಚಳಿಗಾಲದಲ್ಲಿ ಮೊಸರನ್ನು ಸಾಮಾನ್ಯ ನೈಸರ್ಗಿಕ ತಾಪಮಾನದಲ್ಲಿಟ್ಟು ತಿನ್ನಬಹುದು.
ತಪ್ಪುಕಲ್ಪನೆ ೨: ರಾತ್ರಿ ಮೊಸರು ಉಣ್ಣಬಾರದು.
ನಿಜಾಂಶ: ರಾತ್ರಿ ಮೊಸರು ತಿನ್ನಬಾರದು ಎಂಬ ವಾದಕ್ಕೆ ನಿವಾಗಿಯೂ ಯಾವುದೇ ಹುರುಳಿಲ್ಲ. ಹಾಗೆ ನೋಡಿದರೆ, ರಾತ್ರಿ ಮೊಸರು ಉಣ್ಣುವುದರಿಂದ ಹೊಟ್ಟೆ ಶಾಂತವಾಗಿ ಮನಸ್ಸಿಗೆ ಹಿತವಾದ ಆನಂದವನ್ನು ಕೊಡುತ್ತದೆ. ಇದು ಅಮೈನೋ ಆಸಿಡ್ ಬಿಡುಗಡೆ ಮಾಡಲು ನೆರವಾಗುವ ಕಾರಣ ಮಿದುಳಿಗೆ ರಿಲ್ಯಾಕ್ಸ್ ಅನುಭವ ಕೊಡುತ್ತದೆ.
ತಪ್ಪು ಕಲ್ಪನೆ ೩: ಹಾಲೂಡಿಸುವ ತಾಯಂದಿರು ಮೊಸರು ಉಣ್ಣುವುದರಿಂದ ತಾಯಿಗೂ ಹಾಲು ಕುಡಿವ ಮಗುವಿಗೂ ಶೀತ, ನೆಗಡಿ, ಕಫ ಉಂಟಾಗಬಹುದು.
ನಿಜಾಂಶ: ಇದು ಸತ್ಯವಲ್ಲ. ಎದೆಹಾಲಿನ ಮೂಲಕ ಕೇವಳ ಫೋಷಕಾಂಶಗಳು ಮಗುವಿಗೆ ಸಿಗುವುದರಿಂದ ಮಗುವಿಗೆ ಶೀತ ಅಮ್ಮನ ಹಾಲಿನ ಹೋಗುವುದಿಲ್ಲ. ಎದೆಹಾಲು ಇಮ್ಯುನೋಗ್ಲೋಬ್ಯುಲಿನ್ಸ್ ಹೊಂದಿರುವುದರಿಂದ ಮಗುವಿಗೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮೊಸರಿನಲ್ಲಿರುವ ಬ್ಯಾಕ್ಟೀರಿಯಾ ಮಗುವಿನಲ್ಲಿ ಪಚನಕ್ರಿಯೆಯನ್ನು ಉದ್ದೀಪಿಸು ಜೊತೆಗೆ ರೋಗಗಳು ಬರದಂತೆ ತಡೆಯುತ್ತದೆ. ಇದರಲ್ಲಿರುವ ಎಲ್ಲ ವಿಟಮಿನ್, ಕ್ಯಾಲ್ಶಿಯಂ, ಖನಿಜಾಂಶಗಳು ಮಗುವಿನ ಬೆಳವಣಿಗೆಗೆ ಒಳ್ಳೆಯದು. ಅಮ್ಮನಿಗೂ ಅತ್ಯಂತ ಅಗತ್ಯ.
ತಪ್ಪು ಕಲ್ಪನೆ ೪: ಮಕ್ಕಳು ಚಳಿಗಾಲದಲ್ಲಿ ಮೊಸರು ತಿನ್ನಬಾರದು.
ನಿಜಾಂಶ: ಮಕ್ಕಳಿಗೆ ಚಳಿಗಾಲದಲ್ಲಿ ಮೊಸರು ಒಳ್ಳೆಯದು. ಇದು ಅವರಲ್ಲಿ ರೋಗನಿರೋಧಕತೆಯನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ಮಕ್ಕಳು ಮೊಸರು ತಿನ್ನುವುದನ್ನು ತಪ್ಪಿಸಬಾರದು. ಆದರೆ, ಹೊರಗೆ ಸಾಮಾನ್ಯ ಉ಼ಷ್ಣತೆಯಲ್ಲಿರುವ ಮೊಸರನ್ನು ತಿನ್ನುವುದು ಸೂಕ್ತ.
ಇದನ್ನೂ ಓದಿ: Healthy Nails: ಸುಂದರ ಉಗುರು ಬೇಕಾದರೆ ಇವೆಲ್ಲಾ ತಿನ್ನಬಹುದು!
ತಪ್ಪು ಕಲ್ಪನೆ ೫: ತೂಕ ಕಡಿಮೆ ಮಾಡುವ ಮಂದಿ ಮೊಸರನ್ನು ಬಿಡಬೇಕು.
ನಿಜಾಂಶ: ಇದು ಸತ್ಯವಲ್ಲ. ಒಳ್ಳೆಯ ಫ್ಯಾಟಿ ಆಸಿಡ್‌ಗಳು ದೇಹಕ್ಕೆ ತೂಕ ಇಳಿಸಲು ಪೂರಕ ಕೂಡಾ. ಇದರ ಸಂಪೂರ್ಣ ವರ್ಜ್ಯ ಒಳ್ಳೆಯದಲ್ಲ. ಆದರೆ, ಕಡಿಮೆ ಕೊಬ್ಬು ಇರುವ ಹಾಲಿನಿಂದ ತಯಾರಿಸಿದ ಮೊಸರನ್ನು ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಉಣ್ಣಬಹುದು. ಕೊಬ್ಬನ್ನು ಹೊರತುಪಡಿಸಿ ಮೊಸರಿನಲ್ಲಿರುವ ಕ್ಯಾಲ್ಶಿಯಂ, ವಿಟಮಿನ್ ಡಿ ಪೊಟಾಶಿಯಂ ತೂಕ ಇಳಿಸುವ ಮಂದಿಗೂ ಅಗತ್ಯವಿದೆ ಎಂಬುದನ್ನು ಮರೆಯಬಾರದು.
ಹಾಗಾದರೆ ಇದು ಕೆಲವರಿಗೆ ಯಾಕೆ ಒಳ್ಳೆಯದಲ್ಲ ಎಂದರೆ, ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗಬಹುದು. ಕೆಲವರಲ್ಲಿ ಕಫ ಹಾಗೂ ಪಿತ್ತವನ್ನು ಹೆಚ್ಚು ಮಾಡುತ್ತದೆ, ಆದರೆ ಸಾಮಾನ್ಯ ಉಷ್ಣತೆಯಲ್ಲಿಟ್ಟ ಮೊಸರು ಇಂತಹ ಪರಿಣಾಮ ಬೀರುವುದಿಲ್ಲ. ಸಣ್ಣವರಿದ್ದಾಗಿನಿಂದ ಮೊಸರಿನ ನಿತ್ಯ ಸೇವನೆ ಅಭ್ಯಾಸವಿದ್ದರೆ, ಅದು ದೇಹದ ಆರೋಗ್ಯವನ್ನು ಬಾಧಿಸದು. ಜೊತೆಗೆ, ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರೆ ಮೊಸರು ತಿನ್ನುವುದರಲ್ಲಿ ಯಾವ ದೋಷವೂ ಇಲ್ಲ.
ಇದನ್ನೂ ಓದಿ: Food Tips: ಅಡುಗೆಮನೆಯ ಒಗ್ಗರಣೆ ಡಬ್ಬಿ ನಿಮ್ಮ ಲೈಂಗಿಕ ಜೀವನಕ್ಕೂ ಒಗ್ಗರಣೆಯೇ!