ಚೀಸ್ ಎಂಬುದು ಈಗ ಮನೆಮನೆಯಲ್ಲೂ ಖಂಡಿತವಾಗಿ ಇರುವ ವಸ್ತು. ಮಕ್ಕಳಿಗೆ ಚೀಸ್ ಎಂಬುದು ಪಂಚಪ್ರಾಣ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಮಕ್ಕಳ ನಿತ್ಯದ ಊಟದ ಡಬ್ಬಿಗೆ ಏನಾದರೊಂದು ಸ್ಪೆಷಲ್ ತಿನಿಸುಗಳನ್ನು ಮಾಡುವ ಮಾಡರ್ನ್ ಅಮ್ಮಂದಿರು, ಯುಟ್ಯೂಬ್ಗಳಲ್ಲಿ, ಇನ್ಸ್ಟಾ ರೀಲ್ಸ್ನಲ್ಲಿ ರೆಸಿಪಿಗಳನ್ನು ನೋಡಿಕೊಂಡು ಒಂದಿಲ್ಲೊಂದು ವಿಧದಲ್ಲಿ ಚೀಸ್ ಬಳಕೆ ಮಾಡುವುದು ಸಾಮಾನ್ಯವಾಗಿದೆ. ʻಅಮ್ಮಾ, ಚೀಸ್ ಹಾಕಿ ಯಮ್ಮೀ ಯಮ್ಮೀ ಏನಾದ್ರೊಂದು ಮಾಡಿ ಕೊಡುʼ ಎಂದು ಮಕ್ಕಳು ಅಮ್ಮನ ಹಿಂದೆ ಬೀಳುವುದು ಸಹಜ ಕೂಡ. ಆದರೆ, ನಿತ್ಯವೂ ಮಕ್ಕಳು ಹೀಗೆ ಚೀಸ್ ಅತಿಯಾಗಿ ಚೀಸ್ ತಿನ್ನಬಾರದು ಎಂಬುದು ನಿಜವೇ ಆದರೂ, ಮನೆಮನೆಗಳಲ್ಲೂ ಚೀಸ್ ಎಂಬುದು ಫ್ರಿಡ್ಜ್ನಲ್ಲಿ ಇಲ್ಲದಿದ್ದರೆ, ಅಮ್ಮಂದಿರಿಗೆ ಮಕ್ಕಳನ್ನು ಸಂತೈಸುವುದೂ ಸಾಧ್ಯವಾಗದು ಎಂಬುದು ಕಟು ಸತ್ಯ.
ಆದರೆ, ಬಹುತೇಕ ಅಮ್ಮಂದಿರ ಸಮಸ್ಯೆ ಎಂದರೆ ಚೀಸ್ ಅನ್ನು ಕೆಡದಂತೆ ಇಟ್ಟುಕೊಳ್ಳುವುದು ಹೇಗೆ ಎಂದು. ಬಹಳಷ್ಟು ಮಂದಿ ಚೀಸ್ ಕೆಡದಂತೆ ಇಡುವ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಮಾರುಕಟ್ಟೆಯಿಂದ ತಂದ ಚೀಸ್ ಪ್ಯಾಕೆಟ್ಟನ್ನು ಓಪನ್ ಮಾಡಿ ಬೇಕಾದಷ್ಟು ಚೀಸ್ ಅನ್ನು ಬಳಸಿ ಉಳಿದುದನ್ನು ಹಾಗೆಯೇ ಫ್ರಿಡ್ಜ್ನಲ್ಲಿಟ್ಟುಬಿಡುತ್ತಾರೆ. ಮುಂದಿನ ಬಾರಿ ಬಳಸಲು ನೋಡಿದರೆ, ಮೊದಲಿನ ರುಚಿ, ಆಕಾರ, ಘಮ ಕಳೆದುಕೊಂಡ ಈ ಚೀಸ್ ಬಳಸಲು ಯೋಗ್ಯವಾಗಿರುವುದಿಲ್ಲ. ಯಾಕೆಂದರೆ, ಈ ಚೀಸ್, ಗಾಳಿಗೆ ಕೊಂಚವೇ ತೆರೆದುಕೊಂಡರೂ ಗಟ್ಟಿಯಾಗುತ್ತದೆ. ತನ್ನ ರುಚಿ, ಘಮ ಎಲ್ಲವನ್ನೂ ಕಳೆದುಕೊಳ್ಳುತ್ತದೆ. ಹಾಗಾಗಿ, ಚೀಸ್ ಅನ್ನು ಸರಿಯಾಗಿ ಹೇಗೆ ಸಂರಕ್ಷಿಸಿ ಬಹಳ ದಿನಗಳ ಕಾಲ ಇಡಬಹುದು ಎಂಬುದನ್ನು ತಿಳಿಯೋಣ ಬನ್ನಿ.
- ಮಾರುಕಟ್ಟೆಯಿಂದ ತಂದ ಚೀಸ್ನ ಪ್ಯಾಕೆಟ್ಟನ್ನು ಒಮ್ಮೆ ಓಪನ್ ಮಾಡಿದ ಮೇಲೆ ಮತ್ತೆ ಫ್ರಿಡ್ಜ್ನಲ್ಲಿ ಹಾಗೆಯೇ ಇಟ್ಟುಬಿಟ್ಟರೆ ಖಂಡಿತಾಗಿಯೂ ಅದು ಅದರ ಸ್ವಾದ ಕಳೆದುಕೊಂಡು ಗಟ್ಟಿಯಾಗುತ್ತದೆ. ಚೀಸ್ ಹಾಕಿ ಇಡಲು ಗಾಳಿಯಾಡದ ಡಬ್ಬ ಬೇಕು. ಒಂದು ರ್ಯಾಪರ್ನಲ್ಲಿ ಸುತ್ತಿಟ್ಟು ಡಬ್ಬದಲ್ಲಿ ಹಾಕಬಹುದು. ಅಥವಾ ರ್ಯಾಪರ್ನಲ್ಲಿ ಸುತ್ತಿ ಝಿಪ್ ಲಾಕ್ ಕವರ್ ಒಳಗೆ ಇಡಬಹುದು. ರ್ಯಾಪರ್ನಲ್ಲಿ ಸುತ್ತಿಡುವಾಗ ಹೊಸ ರ್ಯಾಪರನ್ನೇ ಬಳಸಿ.
- ನೀವು ಗಮನಿಸಿರಬಹುದು. ಫ್ರಿಡ್ಜ್ನಲ್ಲಿ ಕೆಲವು ಆಹಾರ ವಸ್ತುಗಳಿಗೆ ಇಂಥದ್ದೇ ಎಂಬ ಜಾಗಗಳಿರುತ್ತವೆ. ಆ ವಸ್ತುಗಳು ಅಂಥ ಜಾಗದಲ್ಲಿಟ್ಟರೆ ಹೆಚ್ಚು ಸೂಕ್ತ. ಹಾಳಾಗದೆ ಉಳಿವ ದೃಷ್ಟಿಯಿಂದಲೂ ಕೂಡಾ. ಯಾಕೆಂದರೆ, ಪ್ರತಿ ಆಹಾರವೂ ಕೆಡದಂತೆ ಉಳಿಯಲು ಅದರದ್ದೇ ಆದ ಕಡಿಮೆ ಉಷ್ಣತೆಯ ಜಾಗ ಬೇಕು. ಕೆಲವಕ್ಕೆ ಹೆಚ್ಚು ತಂಪಿರುವ ಜಾಗ, ಕೆಲವಕ್ಕೆ, ಫ್ರಿಡ್ಜ್ನ ಕಡಿಮೆ ತಂಪಿರುವ ಜಾಗ, ಕೆಲವಕ್ಕೆ ಕ್ಯಾಬಿನ್, ಕೆಲವಕ್ಕೆ ಫ್ರೀಜರ್ ಹೀಗೆ. ಹಾಗಾಗಿ, ಚೀಸ್ಗೂ ಕೂಡಾ ಅದ ಜಾಗ ಬೇಕು. ಚೀಜ್ ಅನ್ನು ನಿಮ್ಮ ಫ್ರಿಡ್ಜ್ನಲ್ಲಿ ಎಲ್ಲಿಡಲು ಹೇಳಿದ್ದಾರೋ, ಅಲ್ಲೇ ಇಟ್ಟರೆ ಒಳ್ಳೆಯದು.
- ಚೀಸ್ನಲ್ಲಿ ಬಹಳ ಬಗೆಗಳಿರುತ್ತವೆ. ಹಾಗಾಗಿ ಎಲ್ಲ ಚೀಸ್ಗಳನ್ನೂ ಒಂದೇ ಮಾನದಂಡದಿಂದ ಅಳೆಯಬೇಡಿ. ಎಲ್ಲವನ್ನೂ ಒಂದೇ ಮಾದರಿಯಲ್ಲಿ ಸ್ಟೋರ್ ಮಾಡಬೇಡಿ. ಆಯಾ ಚೀಸ್ಗೆ ಹೇಗೆ ರಕ್ಷಣೆ ಅಗತ್ಯವೋ ಹಾಗೆ ಸ್ಟೋರ್ ಮಾಡಿ. ಉದಾಹರಣೆಗೆ ಗಟ್ಟಿ ಚೀಸ್ ಹೆಚ್ಚು ಕಾಲ ಉಳಿಯುತ್ತದೆ. ಚೀಸ್ ಸ್ಪ್ರೆಡ್ನಂತಹುಗಳು ಬೇಗ ಹಾಳಾಗುತ್ತವೆ. ಹಾಗಾಗಿ, ಇವನ್ನೂ ಗಮನದಲ್ಲಿಟ್ಟುಕೊಳ್ಳಿ.
- ಚೀಸ್ ಅನ್ನು ಫ್ರೀಜರ್ನಲ್ಲಿಡುವುದನ್ನು ಆದಷ್ಟು ತಪ್ಪಿಸಿ. ಫ್ರೀಜರ್ನಲ್ಲಿಟ್ಟರೆ ಬಹಳ ಕಾಲ ಕೆಡದೆ ಇರಬಹುದು, ನಿಜ. ಆದರೆ, ಫ್ರೀಜರ್ನಲ್ಲಿಟ್ಟ ಚೀಸ್ ತನ್ನ ತಾಜಾ ಪರಿಮಳ ಹಾಗೂ ರುಚಿಯನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಚೀಸನ್ನು ಸಾಮಾನ್ಯ ಸ್ಥಳದಲ್ಲೇ ಫ್ರಿಡ್ಜ್ನಲ್ಲಿಡಿ.
- ಚೀಸ್ಗೆ ಪ್ರಿಡ್ಜ್ನ ಸರಿಯಾದ ಜಾಗ ಎಂದರೆ ವೆಜಿಟೇಬಲ್ ಕ್ರಿಸ್ಪರ್ ಸೆಕ್ಷನ್. ಈ ಜಾಗದಲ್ಲಿ ಉಷ್ಣತೆ ಒಂದೇ ಮಟ್ಟದಲ್ಲಿರುತ್ತದೆ ಹಾಗೂ ಅತ್ಯಂತ ತಣ್ಣಗಿರುತ್ತದೆ.
- ಚೀಸ್ ಜೊತೆಗೆ ಸ್ವಲ್ಪ ಸಕ್ಕರೆಯ ತುಣುಕನ್ನೂ ಇಡಬಹುದು. ಸಕ್ಕರೆ ತೇವಾಂಶವನ್ನು ಹೀರಿಕೊಳ್ಳುವುದರಿಂದ ಚೀಸ್ಗೆ ತೇವಾಂಶದಿಂದ ಯಾವುದೇ ಹಾನಿಯಾಗುವುದಿಲ್ಲ.
ಇದನ್ನೂ ಓದಿ: Winter Health Tips: ಬಂದೇ ಬಿಡ್ತು ಚಳಿಗಾಲ! ಇರಲಿ ಆರೋಗ್ಯದ ಕಡೆಗೆ ಎಚ್ಚರ!