ಈಗಷ್ಟೇ ನಡೆಯಲು ಕಲಿತ ಮಗುವಿನಿಂದ ಹಿಡಿದು ಹಾಸಿಗೆ ಹಿಡಿದ ವೃದ್ಧರವರೆಗೆ ಚಿಪ್ಸ್ ಎಂಬ ಕುರುಕಲು ಸದಾ ಸೆಳೆಯುತ್ತದೆ. ಅದರಲ್ಲೂ ಆಲೂಗಡ್ಡೆಯ ಚಿಪ್ಸ್ ಎಂದರೆ ಬಹುತೇಕರಿಗೆ ಬಾಯಲ್ಲೇ ನೀರು. ಅದಕ್ಕಾಗಿಯೇ ಇಂದು ಆಲೂಗಡ್ಡೆಯ ಚಿಪ್ಸ್ ಮಾರುಕಟ್ಟೆ ವ್ಯಾಪಕವಾಗಿ ಬೆಳೆದಿದೆ. ಪ್ಯಾಕೆಟ್ಟುಗಳಲ್ಲಿ ಬರುವ ಚಿಪ್ಸ್‌ಗಳಲ್ಲಿ ನಾನಾ ಬಗೆಯ ರಾಸಾಯನಿಕಗಳೂ, ಪ್ರಿಸರ್ವೇಟಿವ್‌ಗಳೂ, ರುಚಿ ಹೆಚ್ಚಿಸುವ ಟೇಸ್ಟ್ ಎನ್ಹ್ಯಾನ್ಸರ್‌ಗಳೂ ಇರುವುದು ಗೊತ್ತೇ ಇದೆ. ಹೀಗಾಗಿ ಚಿಪ್ಸ್ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದು ಗೊತ್ತೇ ಇದ್ದರೂ, (healthy homemade chips) ಚಿಪ್ಸ್ ಕಂಡಾಗ ತಿನ್ನದೆ ಇರುವುದು ಯಾರಿಗೆ ತಾನೇ ಸಾಧ್ಯವಾದೀತು ಹೇಳಿ!
ಆದರೆ, ಚಿಪ್ಸ್ ರುಚಿಯ ಬಗ್ಗೆ ಯೋಚಿಸಿದಾಗ ಇದ್ದಕ್ಕಿದ್ದಂತೆ ಚಿಪ್ಸ್ ತಿನ್ನಬೇಕೆನಿಸುವುದೂ ಕೂಡಾ ಸಹಜವೇ. ಅದರಲ್ಲೂ ಚಳಿಗಾಲ ಬಂದಾಗ ಈ ಬಯಕೆ ಇನ್ನೂ ಹೆಚ್ಚಾಗಿ, ಚಳಿಗಾಲದಲ್ಲಿ, ಫಿಟ್ ಆಗಿರುವ ಕನಸೆಲ್ಲ ಗಾಳಿಗೋಪುರವಾಗಿಬಿಡುತ್ತದೆ. ಆದರೆ, ಚಳಿಗಾಲದಲ್ಲಿ ಒಂದಿಷ್ಟಾದರೂ ನಾಲಿಗೆಗೂ ರುಚಿಯನ್ನು ಕೊಡಬೇಕಲ್ಲವೇ? ಹಾಗಾದರೆ ಬನ್ನಿ, ಆಲೂಗಡ್ಡೆಯ ಚಿಪ್ಸ್ ಬದಲಾಗಿ ಕೊಂಚ ಆರೋಗ್ಯಕರವಾದ ಯಾವೆಲ್ಲ ಚಿಪ್ಸ್ ಆಯ್ಕೆಗಳಿವೆ ಎಂಬುದನ್ನು ನೋಡೋಣ. ಸುಲಭವಾಗಿ ಮನೆಯಲ್ಲೇ ಏರ್ ಫ್ರೈ ಮಾಡಿಕೊಂಡು ಹಾಗೂ ಆರೋಗ್ಯದ ಕಾಳಜಿಯನ್ನೂ ವಹಿಸಿಕೊಂಡು ತಿನ್ನಬಹುದಾದ ಚಿಪ್ಸ್‌ಗಳ ವಿವರ ಇಲ್ಲಿದೆ.
ತಾವರೆ ಹೂವಿನ ಬೇರಿನ ಚಿಪ್ಸ್
ಹೌದು, ಕೇಳಲು ವಿಚಿತ್ರವೆನಿಸಬಹುದು. ತಾವರೆ ಹೂವಿನ ಬೇರಿನ ಅಡುಗೆ ಉತ್ತರ ಭಾರತ ಸೇರಿದಂತೆ, ಭಾರತದ ಕೆಲವಡೆ ಪ್ರಸಿದ್ಧ. ನೋಡಲು ಯಾವುದೋ ಮೂಳೆಯಂತೆ ಕಾಣುವ ಇದರ ಬಗೆಬಗೆಯ ಅಡುಗೆಗಳು ಭಾರತದೆಲ್ಲೆಡೆ ಲಭ್ಯವಿವೆ. ಆರೋಗ್ಯಕರ ಕೂಡಾ. ಇದನ್ನು ವೃತ್ತಾಕಾರವಾಗಿ ಕತ್ತರಿಸಿ ಕರಿಮೆಣಸು, ಚಾಟ್ ಮಸಾಲಾ, ಉಪ್ಪನ್ನು ಚಿಮುಕಿಸಿ, ಕೊಂಚ ಆಲಿವ್ ಎಣ್ಣೆಯನ್ನೂ ಚಿಮುಕಿಸಿ ಏರ್ ಫ್ರೈ ಮಾಡಿದರೆ, ಆಹಾ ಎಂಬ ರುಚಿ. ಚಳಿಗೆ ಅದ್ಭುತ ಕುರುಕಲು ಕೂಡಾ. ನೋಡಲೂ ಆಕರ್ಷಕ!
ಬೆಂಡೆಕಾಯಿ ಚಿಪ್ಸ್
ನೀವು ಬೆಂಡೆಕಾಯಿ ಪ್ರಿಯರಾಗಿದ್ದರಂತೂ ಈ ಚಿಪ್ಸ್ ನೀವು ಎಂದಿಗೂ ಮರೆಯಲಾರಿರಿ. ಬೆಂಡೆಕಾಯಿಯನ್ನುಉದ್ದುದ್ದಕ್ಕೆ ಹೆಚ್ಚಿ, ಮಸಾಲೆ ಪುಡಿಗಳನ್ನು ಹಾಕಿ, ಆಲಿವ್ ಎಣ್ಣೆಯನ್ನೂ ಚಿಮುಕಿಸಿ ಏರ್ ಫ್ರೈ ಮಾಡಿದರೆ, ಸ್ವರ್ಗ ಸುಖ! ಅಂಥಾ ರುಚಿ. ಆಲೂಗಡ್ಡೆ ಚಿಪ್ಸ್ ಕೂಡಾ ಈ ಬೆಂಡೆಕಾಯಿ ಚಿಪ್ಸ್ ಎದುರು ಸೋತು ಮಕಾಡೆ ಮಲಗುತ್ತದೆ.
ಹಾಗಲಕಾಯಿ ಚಿಪ್ಸ್
ಕಹಿ ಎಂದು ಮೂಗು ಮುರಿವ ಮಂದಿಯೆಲ್ಲ, ಒಮ್ಮೆ ಹಾಗಲಕಾಯಿ ಚಿಪ್ಸ್ ಮಾಡಿ ಸವಿಯಿರಿ. ಆರೋಗ್ಯಕರವಾದ ಈ ಚಿಪ್ಸ್‌ಮಾಡಲು, ಹಾಗಲಕಾಯಿಯನ್ನು ತೆಳುವಾಗಿ ವೃತ್ತಾಕಾರವಾಗಿ ಕತ್ತರಿಸಿ ಕೊಂಚ ಹೊತ್ತು ಬಿಸಿನೀರಿನಲ್ಲಿ ಹಾಕಿಟ್ಟು ಅದರ ಕಹಿಯನ್ನು ಬೇಕಿದ್ದರೆ ಹಿಂಡಿ ತೆಗೆದು ಟವಲ್‌ನಲ್ಲಿ ವರಸಿಕೊಂಡು ಗಾಳಿಯಾಡಲು ಬಿಡಬಹುದು. ನೀರಿನಂಢ ಆರಿದ ಮೇಲೆ, ಮಸಾಲೆ ಹಾಕಿದ ಕಡಲೆ ಹಿಟ್ಟು, ಉಪ್ಪು ಸೇರಿಸಿಕೊಂಡು ಅದರಲ್ಲಿ ಹಾಗಲಕಾಯಿ ತುಂಡುಗಳನ್ನು ಮುಳುಗಿಸಿ ತೆಗೆದು ನಂತರ ಕೊಂಚ ಆಲಿವ್ ಎಣ್ಣೆಯನ್ನು ಚಿಮುಕಿಸಿ ಏರ್ ಫ್ರೈ ಆಡಬಹುದು. ಊಟದ ಜೊತೆಗೆ ತಿನ್ನಲೂ ಕೂಡಾ ಇದು ಅತ್ಯುತ್ತಮ ಆಯ್ಕೆ.
ಸಿಹಿಗೆಣಸಿನ ಚಿಪ್ಸ್
ಸಿಹಿ ಗೆಣಸು ಚಳಿಗಾಲದಲ್ಲಿ ಹೇರಳವಾಘಿ ಸಿಗುವ ಇನ್ನೊಂದು ಗಡ್ಡೆ. ಇದು ಅತ್ಯಂತ ಆರೋಗ್ಯಕರವೂ ಹೌದು.ಇದನ್ನೂ ಕೂಡಾ, ತೆಳುವಾಗಿ ವೃತ್ತಾಕಾರವಾಗಿ ಕತ್ತರಿಸಿ, ಮಸಾಲೆ ಪುಡಿ, ಉಪ್ಪು ಹಾಗೂ ಆಳಿವ್ ಎಣ್ಣೆ ಚಿಮುಕಿಸಿ ಏರ್ ಫ್ರೈ ಮಾಡಿ ತಿನ್ಬಬಹುದು.
ಬೀಟ್‌ರೂಟ್ ಚಿಪ್ಸ್
ಚಳಿಗಾಲದಲ್ಲಿ ತಾಜಾ ಆಗಿ ಸಿಗುವ ಬೀಟ್‌ರೂಟ್‌ನ ಗುಣಗಳನ್ನು ಪಟ್ಟಿ ಮಾಡಿದರೆ ಕಾದಂಬರಿಯೇ ಆದೀತು.ಇಂತಹ ಬೀಟ್‌ರೂಟ್‌ನನ್ನು ತೆಳುವಾಗಿ ಕತ್ತರಿಸಿ ಎಲ್ಲ ಚಿಪ್ಸ್‌ಗಳನ್ನು ಮಾಡುವ ಕ್ರಮದಲ್ಲಿ ಬೇಕ್ ಮಾಡಬಹುದು.
ಆಪಲ್ ಚಿಪ್ಸ್
ರಾಶಿ ಆಪಲ್ ಮಾರುಕಟ್ಟೆಯಿಂದ ಹೊತ್ತು ತಂದು ಏನು ಮಾಡಲಿ ಎಂದು ತಲೆಬಿಸಿ ಮಾಡಬೇಡಿ, ಚಿಪ್ಸ್ ಮಾಡಿ.ಆಪಲ್ ಚಿಪ್ಸಾ ಎಂದು ಹುಬ್ಬೇರಿಸಬೇಡಿ. ವೃತ್ತಾಕಾರವಾಗಿ ಆಪಲ್ ಕತ್ತರಿಸಿ ಕೊಂಚ ಮಸಲಾ ಚಿಮುಕಿಸಿ ಬೇಕ್ ಮಾಡಿದರೆ ತಿನ್ನಲು ಬಲು ರುಚಿ. ಸಿಹಿಸಿಹಿಯಾದ ಗರಿಗರಿ ಚಿಪ್ಸ್ ತಿನ್ನಬಹುದು!
ಇದನ್ನೂ ಓದಿ: Winter Food Tips: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ದೇಸೀ ಸಿಹಿತಿಂಡಿಗಳಿವು!