Site icon Vistara News

Egg Facts: ಮೊಟ್ಟೆಯ ಬಳಕೆಯ ಮೊದಲು ನಿಮಗೀ ಸಂಗತಿಗಳು ತಿಳಿದಿರಲಿ!

eggs

ಮೊಟ್ಟೆಗಳನ್ನು ದಿನನಿತ್ಯ ಆಹಾರದ ಭಾಗವಾಗಿ ಉಪಯೋಗಿಸುತ್ತಿದ್ದರೂ, ಬಹಳಷ್ಟು ಬಾರಿ ಸಣ್ಣ ಸಣ್ಣ ಸಂಗತಿಗಳೇ ತಿಳಿದಿರುವುದಿಲ್ಲ. ಅವುಗಳನ್ನು ಖರೀದಿಸುವ ಬಗೆಯಿಂದ ಹಿಡಿದು, ಒಡೆಯದಂತೆ ಬೇಯಿಸುವವರೆಗೂ ಸಣ್ಣ ಸಣ್ಣ ತಪ್ಪುಗಳು ದಿನನಿತ್ಯ ನಡೆಯುತ್ತಲೇ ಇರುತ್ತದೆ. ಹಾಗಾಗಿ, ಮೊಟ್ಟೆಯ ಕುರಿತಾದ ಕೆಲವು ಸಾಮಾನ್ಯ ಸಂಗತಿಗಳು (Egg Facts) ಇಲ್ಲಿವೆ.

೧. ಅಂಗಡಿಯಲ್ಲಿ ಮೊಟ್ಟೆಯನ್ನು ಕೊಳ್ಳುವಾಗ ಹಾಳಾಗಿದೆಯೇ ಎಂದು ಪರೀಕ್ಷಿಸಿ. ಮೊಟ್ಟೆಯನ್ನು ಪ್ರಕಾಶಮಾನವಾದ ಬೆಳಕಿಗೆ ಹಿಡಿದಾಗ ಮೊಟ್ಟೆಯ ಎರಡೂ ತುದಿಗಳು ಒಂದೇ ಸಮನಾಗಿ ಕಂಡರೆ ಅದು ಹಾಳಾಗಿಲ್ಲವೆಂದು ಅರ್ಥ. ಒಂದು ಬದಿ ಮಬ್ಬಾಗಿ ಕಂಡರೆ ಅದು ಹಾಳಾಗಿದೆ ಎಂದು ಅರ್ಥ. ಅಂಥ ಮೊಟ್ಟೆಯನ್ನು ಖರೀದಿಸಬೇಡಿ.

೨. ಅಂಗಡಿಯಿಂದ ತಂದ ಮೊಟ್ಟೆಯನ್ನು ಫ್ರಿಡ್ಜ್‌ನಲ್ಲಿ ಶೇಖರಿಸಿ ಇಡುವಾಗ ಅವುಗಳ ಅಗಲ ಕೊನೆಗಳನ್ನು ಮೇಲೆ ಮಾಡಿ ಇಟ್ಟರೆ ಹೆಚ್ಚು ದಿನ ಹಾಳಾಗದೆ ಇರುತ್ತದೆ.

೩. ಮೊಟ್ಟೆಯಲ್ಲಿ ಬಿರುಕು ಇದ್ದರೆ ಸೆಲೋ ಟೇಪ್ ಅಂಟಿಸಿ ಫ್ರಿಡ್ಜ್‌ನಲ್ಲಿ ಶೇಖರಿಸಿ ಇಡಬಹುದು. ಹಾಳಾಗುವುದಿಲ್ಲ.

೪. ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುವ ಮೊದಲು ಅದನ್ನು ತೊಳೆಯಬಾರದು. ತೊಳೆದರೆ ಅದರ ಮೇಲ್ಮೈನ ಪುಡಿ ಹೋಗಿ ಬೇಗ ಹಾಳಾಗುತ್ತದೆ.

೫. ಮೊಟ್ಟೆಯ ಹಳದಿ ಲೋಳೆಯನ್ನು ಫ್ರಿಡ್ಜ್‌ನಲ್ಲಿ ನಾಲ್ಕು ದಿನಕ್ಕಿಂತ ಹೆಚ್ಚಿಗೆ ಇಡಬಾರದು. ಬಿಳಿ ಲೋಳೆಯನ್ನು ೨ರಿಂದ ೩ ದಿನಕ್ಕಿಂತ ಹೆಚ್ಚಿಗೆ ಇಡುವುದು ಯೋಗ್ಯವಲ್ಲ. ಹಾಳಾಗುತ್ತದೆ.

೬. ಕೇಕ್‌ ಅಥವಾ ಇನ್ನಾವುದನ್ನಾದರೂ ಮಾಡಲು ಒಂದಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಒಡೆಯುತ್ತಿದ್ದರೆ ಪ್ರತಿಯೊಂದನ್ನೂ ಪ್ರತ್ಯೇಕವಾಗಿ ಒಡೆಯಿರಿ. ಇದರಿಂದ ಹಾಳಾಗಿದ್ದರೆ ಪ್ರತ್ಯೇಕ ಮಾಡಲು ಸುಲಭವಾಗುತ್ತದೆ.

೭. ಮೊಟ್ಟೆಯನ್ನು ಬೇಯಿಸಲು ಅವುಗಳನ್ನು ಮೊದಲು ತಣ್ಣೀರಿನಲ್ಲಿ ಹಾಕಿ ಮತ್ತೆ ಹದ ಉರಿಯಲ್ಲಿ ಬೇಯಿಸಬೇಕು.

೮. ಫ್ರಿಡ್ಜ್‌ನಿಂದ ತೆಗೆದ ಮೊಟ್ಟೆಯನ್ನು ಕೂಡಲೇ ಬೇಯಿಸಬಾರದು. ಸ್ವಲ್ಪ ಹೊತ್ತು ಹೊರಗಿಟ್ಟು ಅದು ಸಾಮಾನ್ಯ ತಾಪಮಾನಕ್ಕೆ ಬಂದ ಮೇಲೆ ಬೇಯಿಸಿದರೆ, ಒಡೆಯುವುದಿಲ್ಲ.

೯. ಹೊಸ ಮೊಟ್ಟೆಗಳನ್ನು ಹಾಗೆಯೇ ದೊಡ್ಡ ಉರಿಯಲ್ಲಿ ಬೇಯಿಸಿದರೆ, ಅವುಗಳ ಹಳದಿ ಲೋಳೆ ಗಟ್ಟಿ ಆಗುವ ಮೊದಲೇ ಚಿಪ್ಪು ಒಡೆಯಲಾರಂಭಿಸುತ್ತದೆ.

 ೧೦. ಬೇಯಿಸಿದ ಮೊಟ್ಟೆಯನ್ನು ಹೋಳು ಮಾಡುವ ಮೊದಲು ಚೂರಿಯನ್ನು ತಣ್ಣೀರಿನಲ್ಲಿ ಮುಳುಗಿಸಿ ಆಮೇಲೆ ಅದರಿಂದ ಕತ್ತರಿಸಿದರೆ ಮೊಟ್ಟೆಯ ಹಳದಿ ಲೋಳೆ ಪುಡಿಯಾಗದೆ ನೀಟಾಗಿ ಕತ್ತರಿಸಬಹುದು.

೧೧. ಮೊಟ್ಟೆಯನ್ನು ಬೇಯಿಸುವಾಗ ಅದನ್ನು ಪಾತ್ರೆಯಿಂದ ಕೆಳಗಿಳಿಸಿದ ಮೇಲೆಯೂ ಬೇಯುವ ಕಾರ್ಯ ಪ್ರಗತಿಯಲ್ಲಿರುವುದರಿಂದ ಪೂರ್ತಿ ಬೇಯಲು ಇನ್ನೂ ೩-೪ ನಿಮಿಷ ಬೇಕು ಅನಿಸುವಾಗಲೇ ಕೆಳಗಿಳಿಸಿಬಿಡಿ.

೧೨. ಹದ ಉರಿಯಲ್ಲಾದರೂ ಮೊಟ್ಟೆಯನ್ನು ೧೫ ನಿಮಿಷಕ್ಕಿಂತ ಹೆಚ್ಚು ಬೇಯಿಸಬಾರದು. ಹಾಗೆ ಬೇಯಿಸಿದರೆ, ಹಳದಿ ಭಾಗ ಸುತ್ತ ಕಪ್ಪಾಗುತ್ತದೆ.

೧೩. ಬಿರುಕು ಇದ್ದ ಮೊಟ್ಟೆಯನ್ನು ಬೇಯಿಸುವಾಗ, ಸೆಲೋ ಟೇಪ್‌ ಅಂಟಿಸಿದ್ದರೆ ಅದನ್ನು ತೆಗೆದು, ನೀರಿಗೆ ಸ್ವಲ್ಪ ವಿನೆಗರ್‌ ಹಾಕಿ ಬೇಯಿಸಿ. ನೀಟಾಗಿ ಬೇಯುತ್ತದೆ.

೧೪. ಬೇಯಿಸಿದ ಮೊಟ್ಟೆಯ ಪುಡಿಯನ್ನು ಮೆದುವಾಗಿಸಲು ಹಾಲು ಸೇರಿಸುವ ಬದಲು ಒಂದೆರಡು ಚಮಚ ನೀರನ್ನೇ ಸೇರಿಸಿ.

೧೫. ಬೆಂದ ಮೊಟ್ಟೆಯ ಚಿಪ್ಪು ಬಿಡಿಸುವುದೇ ನಿಮಗೆ ದೊಡ್ಡ ತಲೆನೋವಾಗಿದ್ದರೆ, ಕೆಲವು ಸುಲಭದ ಟ್ರಿಕ್‌ ಫಾಲೋ ಮಾಡಬಹುದು. ಬೆಂದ ಮೊಟ್ಟೆ ತಣಿದ ಮೇಲೆ ಒಂದು ಸಣ್ಣ ಡಬ್ಬಿಯೊಳಗೆ ಹಾಕಿ ಮೆತ್ತಗೆ ಕುಲುಕಿಸಿ. ಅಥವಾ ಮೆತ್ತಗೆ ಹೆಚ್ಚು ಒತ್ತಡ ಹಾಕದೆ ಕಟ್ಟಿಂಗ್‌ ಬೋರ್ಡ್‌ ಮೇಲೆ ಉರುಳಾಡಿಸಿ. ಬಿರುಕುಗಳು ಬಿಟ್ಟು ಯಾವುದೇ ಗಾಯಗಳಾಗದಂತೆ ನಯವಾಗಿ ಮೊಟ್ಟೆ ಬಿಡಿಸಬಹುದು.

೧೬. ಮೊಟ್ಟೆ ಬೇಯಿಸಲು ಇಟ್ಟ ಮೇಲೆ ಅದಕ್ಕೆ ಚಿಟಿಕೆ ಅಡುಗೆ ಸೋಡಾವನ್ನೂ ಹಾಕಬಹುದು. ಹೀಗೆ ಹಾಕಿದ ಮೇಲೆ ೧೨ ನಿಮಿಷ ಬೇಯಿಸಿ. ಮೊಟ್ಟೆಯ ಚಿಪ್ಪು ಬಿಡಿಸಲು ಸುಲಭವಾಗುತ್ತದೆ.

೧೭. ಬೇಯಿಸಿದ ಮೇಲೆ ಬಿಸಿ ಇರುವಾಗಲೇ ತಣ್ಣೀರಿನಲ್ಲಿ ಹಾಕಿದರೆ ಒಂದೆರಡು ಐಸ್‌ ಕ್ಯೂಬ್‌ ಹಾಕಿ ತಣ್ಣಗೆ ಮಾಡಿ ಆಮೇಲೆ ಚಿಪ್ಪು ತೆಗೆಯಲು ಸುಲಭವಾಗುವುದು.

೧೮. ಮೊಟ್ಟೆಗಳನ್ನು ಬೇಯಿಸುವಾಗ ನೀರಿಗೆ ಚಿಟಿಕೆ ಉಪ್ಪು ಸೇರಿಸಿದರೆ ಚಿಪ್ಪು ಸುಲಭವಾಗಿ ತೆಗೆಯಲು ಬರುತ್ತದೆ.

ಇದನ್ನೂ ಓದಿ: Eggs VS Paneer: ಮೊಟ್ಟೆ- ಪನೀರ್:‌ ಯಾವುದು ಒಳ್ಳೆಯದು?

Exit mobile version