ಬಜ್ಜಿ, ಬೋಂಡಾ, ಪಕೋಡಾಗಳು ಯಾರಿಗಿಷ್ಟವಿಲ್ಲ ಹೇಳಿ! ಎಣ್ಣೆಯಲ್ಲಿ ಮುಳುಗೆದ್ದು ಬರುವ ಇಂಥ ಕುರುಕಲು ತಿನಿಸುಗಳು ತಿನ್ನಲು ಬಲು ರುಚಿ. ಆದರೆ, ಇದು ಕುಡಿದು ಬರುವ ಎಣ್ಣೆ ನಮ್ಮ ಹೊಟ್ಟೆಗಿಳಿವಾಗ ಅಯ್ಯೋ ಎನಿಸುತ್ತದೆ. ಕಷ್ಟಪಟ್ಟು ತೂಕ ಇಳಿಸಲು ಹೆಣಗುವ ಎಲ್ಲ ಜೀವಗಳೂ, ಇಂಥ ಎಣ್ಣೆ ತಿಂಡಿ ಕಾಣುವಾಗ ಬಾಯಿ ಕಟ್ಟಿ ಕೂರುತ್ತವೆ. ಬಹಳಷ್ಟು ಸಾರಿ ಅಪರೂಪಕ್ಕೆ ಎಣ್ಣೆ ತಿಂಡಿ ಮನೆಯಲ್ಲಿ ಮಾಡಿದರೂ, ಯಾಕೆ ಇವು ಇಷ್ಟು ಎಣ್ಣೆ ಕುಡಿಯುತ್ತವೆ ಎಂದೂ ಹಲವರಿಗೆ ಅನಿಸದೇ ಇರದು. ನಾನು ಮಾಡುವ ಪಕೋಡಾ, ಬಜ್ಜಿಗಳು ಬೇರೆಯವರಿಗಿಂತ ಹೆಚ್ಚು ಎಣ್ಣೆಕುಡಿಯುತ್ತಿದೆಯಲ್ಲ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡಬಹುದು. ಮಾಡಿದ ಬಜ್ಜಿಯನ್ನು ಹಿಂಡಿದರೆ, ನೆನೆಸಿದ ಬಟ್ಟೆಯಿಂದ ನೀರಿಳಿವ ಹಾಗೆ ಎಣ್ಣೆ ಇಳಿವಾಗ, ತಿನ್ನುವುದೇ ಬೇಡ ಎಂದು ಮಾಡಿದ ತಿಂಡಿಯ ಮೇಲೆ ಜಿಗುಪ್ಸೆಯೂ ಬರಬಹುದು. ಹಾಗಾದರೆ, ಕಡಿಮೆ ಎಣ್ಣೆ ಕುಡಿವಂತೆ ರುಚಿಕರ ಕುರುಕಲು, ಬಜ್ಜಿ ಬೋಂಡಾಗಳನ್ನು ಮಾಡುವುದು ಹೇಗೆ? ಎಣ್ಣೆ ತಿಂಡಿ ಕರಿವಾಗ ಮಾಡುವ ಐದು ತಪ್ಪುಗಳಾದರೂ ಯಾವುವು ಎಂಬುದನ್ನು ನೋಡೋಣ.
ತಪ್ಪು 1: ಬಾಣಲೆಯಲ್ಲಿ ಕರಿಯಲು ತೆಗೆದುಕೊಳ್ಳುವ ಎಣ್ಣೆ ಪ್ರಮಾಣಕ್ಕೂ ಇದಕ್ಕೂ ಸಂಬಂಧವಿದೆ ಎಂದರೆ ಒಪ್ಪುತ್ತೀರಾ? ಇಲ್ಲದಿದ್ದರೆ ಇಲ್ಲಿ ಕೇಳಿ. ಬಾಣಲೆಯಲ್ಲಿ ಕಡಿಮೆ ಎಣ್ಣೆ ತೆಗೆದುಕೊಂಡಷ್ಟೂ ಎಣ್ಣೆ ಕುಡಿಯುವುದು ಹೆಚ್ಚಾಗುತ್ತದೆ! ಗರಿಗರಿಯಾದ ಜಿಡ್ಡು ರಹಿತ ಎಣ್ಣೆ ತಿಂಡಿ ಮಾಡಬೇಕಿದ್ದರೆ ಬಾಣಲೆಯಲ್ಲಿ ಎಣ್ಣೆಯೂ ಇರಬೇಕು. ಕಡಿಮೆ ಎಣ್ಣೆ ಕುಡಿಯಲಿ ಎಂದು ಅಷ್ಟೂ ಪಕೋಡಗಳನ್ನು ಕಡಿಮೆ ಎಣ್ಣೆಗೆ ಸುರುವಿಕೊಳ್ಳುವ ಬದಲು, ಒಂದೊಂದಾಗಿ ಕರಿಯಿರಿ. ಅಥವಾ ಮುಳುಗುವಷ್ಟು ಜಾಗ ಇಟ್ಟುಕೊಂಡು ಕರಿಯಿರಿ. ಶ್ಯಾಲೋ ಫ್ರೈ ಮಾಡಬೇಕಿದ್ದರೆ ಬಾಣಲೆಯಲ್ಲೇ ಮಾಡಬೇಡಿ. ಆಗ ತವಾದ ಆಯ್ಕೆ ಒಳ್ಳೆಯದು.
ತಪ್ಪು 2: ಬಾಣಲೆಯಲ್ಲಿ ಎಣ್ಣೆ ಸರಿಯಾಗಿ ಬಿಸಿಯಾಗದೇ ಇರಬಹುದು! ಹೌದು. ಎಣ್ಣೆ ಇಟ್ಟ ಕೂಡಲೇ ಹಿಟ್ಟು ಹಾಕಬೇಡಿ. ಕೊಂಚ ಬಿಸಿಯಾದ ಕೂಡಲೇ ಕೂಡಾ ಹಾಕಬೇಡಿ. ಎಣ್ಣೆ ಕರಿಯಲು ತಯಾರಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಕಡಿಮೆ ಕಾದ ಎಣ್ಣೆಗೆ ಹಾಕಿದರೆ ಅದು ಹೆಚ್ಚು ಎಣ್ಣೆ ಹೀರಿಕೊಳ್ಳುತ್ತದೆ. ಹಾಗಂತ ಎಣ್ಣೆ ಅಗತ್ಯಕ್ಕಿಂತ ಹೆಚ್ಚು ಬಿಸಿಯಾಗಲೂಬಾರದು. ಎಣ್ಣೆಯ ಬಿಸಿಯ ಹದ ನಿಮಗೆ ಅರಿವಿರಬೇಕು. ಯಾವಾಗಲೂ ಉರಿಯನ್ನು ಆಗಾಗ ಬದಲಾಯಿಸಬಾರದು. ಹದ ಉರಿ ಒಳ್ಳೆಯದು.
ತಪ್ಪು 3: ನಿಮ್ಮ ಹಿಟ್ಟಿನ ಬಗ್ಗೆ ಅರಿವಿರಲಿ. ಹಿಟ್ಟು ಅತಿಯಾಗಿ ದಪ್ಪವಿರಬಾರದು. ಬಜ್ಜಿ ಬೋಂಡಾಗಳ ಹಿಟ್ಟು ಮಾಡುವುದೂ ಒಂದು ಕಲೆ. ಗಂಟುಗಳಾಗದಂತೆ ಹಿಟ್ಟು ಕಲಸಿ. ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಬೇಕಿಂಗ್ ಸೋಡಾ ಬೇಕಾದರೆ ಹಾಕಬಹುದು.
ಇದನ್ನೂ ಓದಿ: Food Tips: ನೆನಪಿಡಿ, ತಾಮ್ರದ ಪಾತ್ರೆಯಲ್ಲಿ ಈ ಎಲ್ಲ ಅಡುಗೆಗಳನ್ನು ಮಾಡಬೇಡಿ!
ತಪ್ಪು 4: ಅತಿಯಾಗಿ ನೀರು ಹಾಕಿ ಹಿಟ್ಟನ್ನು ಕೆಡಿಸಬೇಡಿ. ಇದರಿಂದ ಬಜ್ಜಿ ಬೋಂಡಾ ಹಾಳಾಗುತ್ತದೆ. ಹಿಟ್ಟು ಹರಿವ ನದಿಯಂತಾಗಿ ಹೆಚ್ಚು ಎಣ್ಣೆ ಹೀರಿಕೊಳ್ಳುತ್ತದೆ. ಹಾಗಾಗಿ, ಅಕಸ್ಮಾತಾಗಿ ಹಿಟ್ಟು ನೀರಾದರೆ ಹೆಚ್ಚು ಕಡ್ಲೆಹಿಟ್ಟು ಹಾಕಿ ಹಿಟ್ಟನ್ನು ಸರಿದಾರಿಗೆ ತನ್ನಿ. ಕರಿಯುವಾಗ ಹೆಚ್ಚು ಎಣ್ಣೆ ಹೀರಿಕೊಳ್ಳದಂತೆ ಮಾಡಲು ಒಂದೆರಡು ಹನಿ ಎಣ್ಣೆಯನ್ನೂ ಮೊದಲೇ ಕಲಸಿಕೊಳ್ಳುವಾಗಲೇ ಹಿಟ್ಟಿಗೆ ಹಾಕಬಹುದು. ಕರಿವ ಎಣ್ಣೆಗೆ ಚಿಟಿಕೆ ಉಪ್ಪನ್ನೂ ಸೇರಿಸಬಹುದು.
ತಪ್ಪು 5: ಕರಿಯುವ ಬಾಣಲೆಯ ಪಾತ್ರವೂ ಇಲ್ಲಿ ಮುಖ್ಯ ಎಂದರೆ ನಂಬುತ್ತೀರಾ? ಹೌದು. ಎಂತಹ ಬಾಣಲೆಯಲ್ಲಿ ಬೋಂಡಾ ಕರಿಯುತ್ತೀರಿ ಎಂಬುದೂ ಕೂಡಾ ಮುಖ್ಯ. ದಪ್ಪ ತಳದ ಬಾಣಲೆ ಕರಿಯಲು ಸೂಕ್ತ. ಹಾಗಾಗಿ ಯಾವಾಗಲೂ ಗುಂಡಗಿನ, ಆಳವಿರುವ ದಪ್ಪ ತಳದ ಬಾಣಲೆಯನ್ನೇ ಕರಿಯಲು ಆಯ್ಕೆ ಮಾಡಿಕೊಳ್ಳಿ. ಇದು ಉಷ್ಣತೆಯನ್ನು ಸರಿಯಾದ ಹದದಲ್ಲಿಡುತ್ತದೆ.
ಇದನ್ನೂ ಓದಿ: Food Tips: ಹಾಲು ಸೀದರೆ ತಲೆ ಕೆಡಿಸಿಕೊಳ್ಳಬೇಡಿ, ಹೀಗೆ ಮಾಡಿಯೂ ಬಳಸಬಹುದು!