ಹಾಲನ್ನು ಕುದಿಸುವುದು ಎಷ್ಟು ಸುಲಭ ಎಂದು ಇಷ್ಟರವರೆಗೆ ಹಾಲು ಕುದಿಸದವರಷ್ಟೇ ಹೇಳಬಹುದು. ಆದರೆ, ಹಾಲು ಕುದಿಸಿದವರಿಗಷ್ಟೇ ಗೊತ್ತು ಕುದಿಸುವ ಕಷ್ಟ. ಹಾಲನ್ನು ಪಾತ್ರೆಗೆ ಹಾಕಿ ಕುದಿಸಲೆಂದು ಒಲೆಗಿಟ್ಟು, ʻಇನ್ನೂ ಕುದಿಯಲು ಸಮಯ ಇದೆ, ಒಂದೇ ನಿಮಿಷ, ಹೀಗೆ ಹೋಗಿ ಹಾಗೆ ಬಂದೆʼ ಎಂದುಕೊಂಡು ಅರೆಕ್ಷಣ ಬೇರೆ ವಿಷಯಕ್ಕೆ ತಲೆಕೊಟ್ಟಿರೋ, ಕಥೆ ಮುಗಿದಂತೆ. ಬರುವಷ್ಟರಲ್ಲಿ ಹಾಲು ಉಕ್ಕಿ, ಒಲೆಯ ಮೇಲೆಲ್ಲಾ ಹಾಲಿನ ಅಭಿಷೇಕ. ಅಯ್ಯೋ ಎಂದು ತಲೆ ಮೇಲೆ ಕೈಹೊತ್ತು ಕೂರುವ ಸರದಿ ನಿಮ್ಮದೇ. ಹಾಲುಕ್ಕಿದ ಒಲೆಯನ್ನು ಒರೆಸುವ ಕಷ್ಟ ಯಾರಿಗೂ ಬೇಡ. ಇರಲಿ, ಕಥೆ ಇಷ್ಟಕ್ಕೇ ಮುಗಿದಿರುವುದಿಲ್ಲ. ಹಾಲು ತಳವನ್ನೂ ಹಿಡಿದಿರುತ್ತದೆ. ಮೂಸಿ ನೋಡಿದರೆ, ಹಾಲಿನ ಪರಿಮಳ ಹಾರಿ ಹೋಗಿ ಸೀದ ವಾಸನೆ ಹಾಲಿಗೆ ಬಂದಿರುತ್ತದೆ. ಹಾಗಾದರೆ, ಇಷ್ಟೂ ಹಾಲನ್ನು ಚೆಲ್ಲಿ ಬಿಡುವುದಾ, ಇಟ್ಟುಕೊಳ್ಳುವುದಾ ಎಂದು ಅರ್ಥವಾಗದೆ, ಚೆಲ್ಲಿ ವೇಸ್ಟ್ ಮಾಡಲೂ ಮನಸು ಬಾರದೆ ಯೋಚನೆ ಮಾಡುತ್ತೀರಿ. ಇಂಥ ಸಂದಿಗ್ಧದಲ್ಲಿ ಬಿದ್ದಿದ್ದರೆ, ಅಂತಹ ಹಾಲನ್ನು ಹೇಗೆ ಬಳಕೆ ಮಾಡಬಹುದು ಎಂಬ ಟಿಪ್ಸ್ ಇಲ್ಲಿದೆ.
1. ಪಾತ್ರೆ ಬದಲಾಯಿಸಿ: ಹಾಲು ಸೀದಿದೆ ಅಂತ ಗೊತ್ತಾದ ತಕ್ಷಣ ಪಾತ್ರೆ ಬದಲಾಯಿಸಿಬಿಡಿ. ತಳವನ್ನು ಸೌಟಲ್ಲಿ ಕೆರೆಯದೆ, ಹಾಲನ್ನು ಅಲ್ಲಾಡದಂತೆ ನಿಧಾನವಾಗಿ ಬೇರೆ ಪಾತ್ರೆಗೆ ವರ್ಗಾಯಿಸಿ. ಆಗ ಪಾತ್ರೆಯ ತಳದಿಂದ ಇನ್ನಷ್ಟು ವಾಸನೆ ಹಾಲಿಗೆ ಹರಡುವುದು ತಪ್ಪುತ್ತದೆ.
2. ಏಲಕ್ಕಿ ಹಾಕಿ: ಏಲಕ್ಕಿ ಎಂಬ ಅತ್ಯಂತ ಪರಿಮಳದ ಮಸಾಲೆ ಬಹಳ ಸಾರಿ ಇಂಥ ಕೆಲಸಗಳಲ್ಲೂ ಕೆಲಸಕ್ಕೆ ಬರುತ್ತದೆ. ಹಾಲು ಸೀದಾಗ ಏನು ಮಾಡುವುದೆಂದು ಗೊತ್ತಾಗದಿದ್ದರೆ, ಸೀದ ಹಾಲನ್ನು ಬೇರೆ ಪಾತ್ರೆಗೆ ವರ್ಗಾಯಿಸಿ ಅದನ್ನು ಸಣ್ಣ ಉರಿಯಲ್ಲಿ ಕುದಿಯಲು ಇಡಿ. ಜೊತೆಗೆ ನಾಲ್ಕೈದು ಏಲಕ್ಕಿಯನ್ನು ಜಜ್ಜಿ ಈ ಹಾಲಿಗೆ ಹಾಕಿ. ಕುದಿದ ಮೇಲೆ ಕೆಳಗಿಳಿಸಿ.
ಇದನ್ನೂ ಓದಿ: Food Tips: ಪಾವ್ ಬಾಜಿ ರುಚಿಯಾಗಿರಬೇಕೆಂದರೆ ಈ ಐದು ಸೂತ್ರಗಳನ್ನು ಮರೆಯದಿರಿ!
3. ದಾಲ್ಚೀನಿ ಪುಡಿ ಹಾಕಿ: ಎಲ್ಲರ ಮನೆಗಳ ಮಸಾಲೆ ಡಬ್ಬಿಯಲ್ಲೂ ದಾಲ್ಚೀನಿ ಇರದೇ ಇರುವುದಿಲ್ಲ. ಹಾಲು ಸೀದಾಗ ತಕ್ಷಣ ಹಾಲನ್ನು ಬೇರೆ ಪಾತ್ರೆಗೆ ವರ್ಗಾಯಿಸಿ. ದಾಲ್ಚೀನಿ ಅಥವಾ ಚೆಕ್ಕೆಗೆ ಬೇರೆಯದೇ ಆದ ನೆಲದ ಗಂಧವಿದೆ. ಹಾಗಾಗಿ ಇದರ ಪುಡಿಯನ್ನು ಹಾಲಿಗೆ ಸೇರಿಸಿ ಕುದಿಸುವುದರಿಂದ ಹಾಲಿನ ಸೀದ ವಾಸನೆ ಹೋಗಿ, ಕೊಂಚ ಸಿಹಿ ರುಚಿಯ ದಾಲ್ಚೀನಿ ಘಮ ಹಾಲಿಗೆ ಹರಡಿಕೊಳ್ಳುತ್ತದೆ.
4. ಬೆಲ್ಲ ಹಾಕಿ ಕುಡಿಯಿರಿ: ಸಿಹಿಯಾದ ಹಾಲು ಬಹುತೇಕ ಎಲ್ಲರಿಗೂ ಇಷ್ಟವೇ. ಹಾಗಾಗಿ ಹಾಲು ಸೀದಿದ್ದರೆ ಸಕ್ಕರೆ ಹಾಕುವ ಬದಲು, ಬೆಲ್ಲದ ಪುಡಿ ಹಾಕಿ. ಇದು ಬೇರೆಯದೇ ಆದ ರುಚಿ ಕೊಡುತ್ತದೆ. ಬೆಲ್ಲದ ಪುಡಿಯನ್ನು ಹಾಲಿಗೆ ಹಾಕಿ ಕುದಿಸಿ ಕುಡಿಯುವುದರಿಂದ ಸೀದಾ ವಾಸನೆ ಗಮನಕ್ಕೆ ಬರದು. ಆದರೆ ಬೆಲ್ಲದ ಪುಡಿ ಹಾಲಿಗೆ ಹಾಕಿ ಕುದಿಸುವಾಗ ಸಣ್ಣ ಉರಿಯಲ್ಲಿ ಮೆದುವಾಗಿ ಕುದಿಸಿ. ಯಾಕೆಂದರೆ ದೊಡ್ಡ ಉರಿಯಲ್ಲಿ ಬೆಲ್ಲದ ಜೊತೆಗೆ ಹಾಲು ಒಡೆಯುವ ಅಪಾಯವೂ ಇದೆ.
5. ಬೇಗ ಮುಗಿಸಿ: ಸೀದ ಹಾಲನ್ನು ಬೇಗ ಮುಗಿಸುವುದು ಯಾವತ್ತಿಗೂ ಒಳ್ಳೆಯದು. ಯಾಕೆಂದರೆ ಇದನ್ನು ಫ್ರಿಡ್ಜ್‌ನಲ್ಲಿಟ್ಟಷ್ಟೂ ಇದರ ವಾಸನೆ ಹೆಚ್ಚಾಗುತ್ತದೆ ಹಾಗೂ ಬಳಸಲು ಯೋಗ್ಯವಾಗಿ ಇರುವುದಿಲ್ಲ. ಸೀದ ಹಾಲು ಹೆಚ್ಚು ಹೊತ್ತು ಇಟ್ಟಂತೆಲ್ಲ, ತನ್ನ ವಾಸನೆಯನ್ನು ಹೆಚ್ಚಿಸುತ್ತಾ ಹೋಗುವುದರಿಂದ ಅದೇ ದಿನ ಇಂಥ ಹಾಲನ್ನು ಬಳಸಿ ಮುಗಿಸಿ.
ಇದನ್ನೂ ಓದಿ: Food Tips: ಅಡುಗೆ ಅಂದುಕೊಂಡದ್ದಕ್ಕಿಂತ ಹೆಚ್ಚು ಖಾರವಾಯಿತೇ? ಖಾರ ತಗ್ಗಿಸಲು ಇಲ್ಲಿವೆ ಫಟಾಫಟ್ ಟಿಪ್ಸ್!