ಚಪಾತಿ ಎಂಬುದು ಅನ್ನದ ಹಾಗೆ ಬಹುತೇಕರ ಮನೆಯ ನಿತ್ಯದ ಆಹಾರ. ಹಾಗಾಗಿ ನಿತ್ಯವೂ ಚಪಾತಿ ಹಿಟ್ಟು (Chapati Atta) ಕಲಸುವುದು ಎಂಬ ಕ್ರಿಯೆಯೂ ಅಷ್ಟೇ ಸಾಮಾನ್ಯ. ನಿತ್ಯವೂ ಪರ್ಫೆಕ್ಟ್ ಆಗಿ, ಎಷ್ಟು ಬೇಕೋ ಅಷ್ಟೇ ಹಿಟ್ಟು ಕಲಸಿಕೊಳ್ಳುವುದು ಖಂಡಿತ ಒಂದು ಕಲೆಯೇ. ಯಾಕೆಂದರೆ, ಎಷ್ಟು ಮಂದಿ ಎಷ್ಟು ಚಪಾತಿ ತಿನ್ನುತ್ತಾರೆಂಬ ಅರಿವು ಇಟ್ಟುಕೊಂಡು ಚಪಾತಿ ಹಿಟ್ಟು ಕಲಸಿಕೊಳ್ಳುವುದು ಹಾಗೂ ಮೆತ್ತೆಯ ಉರುಟಾದ ಸಪಾತಿಗಳ್ನು ಮಾಡುವುದಕ್ಕೆ ಕೊಂಚ ಪಳಗಿದ ಕೈಗಳು ಬೇಕು. ಆರಂಭದಲ್ಲಿ ಇವೆಲ್ಲ ಲೆಕ್ಕಕ್ಕೆ ಸಿಗದೆ, ಕಲಸಿದ ಹಿಟ್ಟು ಜಾಸ್ತಿಯಾಗುವುದು, ಕೊನೆಗೆ ಅದು ವೇಸ್ಟಾಗಿ ಬಿಡುವುದು ಇತ್ಯಾದಿಗಳು ನಡೆಯುತ್ತವೆ. ಹಾಗಾದರೆ ಕಲಸಿದ ಹಿಟ್ಟನ್ನು ಮುಂದಿನ ಉಪಯೋಗಕ್ಕಾಗಿ ನಾಳೆಗೆ ಇಟ್ಟುಕೊಳ್ಳಲು ಸಾಧ್ಯವಿಲ್ಲವೇ, ಇಟ್ಟುಕೊಳ್ಳುವುದಾದರೂ ಹೇಗೆ ಇತ್ಯಾದಿ ಇತ್ಯಾದಿಗಳ ಬಗೆಗೆ ಕೊಂಚ ಸಾಮಾನ್ಯಜ್ಞಾನ ಹೆಚ್ಚಿಸಿಕೊಂಡರೆ ಖಂಡಿತ ಆಹಾರ ಪೋಲಾಗದಂತೆ ನೋಡಿಕೊಳ್ಳಬಹುದು. ಬನ್ನಿ, ಹಿಟ್ಟು ಕಲಸಿದ್ದು ಹೆಚ್ಚಾದರೆ, ಏನೆಲ್ಲಾ ಮಾಡಿ ಹಾಳಾಗದಂತೆ ತಡೆಯಬಹುದು (Food Tips) ಎಂಬುದನ್ನು ನೋಡೋಣ.
1. ಎಣ್ಣೆ ಹಾಕಿ: ಯಾವಾಗಲೂ ಹಿಟ್ಟು ಕಲಸುವಾಗ ಸ್ವಲ್ಪವೇ ಸ್ವಲ್ಪ ಎಣ್ಣೆಯೋ, ತುಪ್ಪವನ್ನೋ ಹಿಟ್ಟಿಗೆ ಹಾಕಿ ಕಲಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಹಿಟ್ಟನ್ನು ಇನ್ನಷ್ಟು ಮೆದುವಾಗುವಂತೆ ಮಾಡುತ್ತದಷ್ಟೇ ಅಲ್ಲ, ಹೆಚ್ಚು ದಿನ ಕೆಡದಂತೆ ಇಡಲು ನೆರವಾಗುತ್ತದೆ.
2. ಗಾಳಿಯಾಡದ ಡಬ್ಬದಲ್ಲಿಡಿ: ಹಿಟ್ಟು ಉಳಿಯಿತು, ಹಾಳಾದೀತು ಎಂದು ತಲೆ ಕೆಡಿಸಬೇಡಿ. ಉಳಿದ ಹಿಟ್ಟನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ ಫ್ರಿಡ್ಜ್‌ನಲ್ಲಿಡಿ. ಮೆತ್ತಗೆ ಹಾಗೆಯೇ ಉಳಿಯುತ್ತದೆ.
3. ಬಟ್ಟೆಯಲ್ಲಿ ಸುತ್ತಿಡಿ: ಚಪಾತಿ ಹಿಟ್ಟನ್ನು ಕಲಸಿದ ಮೇಲೆ ಒಂದು ತೆಳುವಾದ ಹತ್ತಿ ಬಟ್ಟೆಯಲ್ಲಿ ಸುತ್ತಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಈ ಬಟ್ಟೆಯಲ್ಲಿ ಸುತ್ತಿಯೇ ಅದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಹಿಟ್ಟು ತಾಜಾ ಆಗಿ ಹಾಗೆಯೇ ಉಳಿಯುತ್ತದೆ. ಚಪಾತಿ ಹಿಟ್ಟಿಗೆಂದೇ ಒಂದು ಬಟ್ಟೆಯನ್ನು ಇಟ್ಟುಕೊಳ್ಳಿ.
4. ಝಿಪ್ ಲಾಕ್ ಬ್ಯಾಗ್‌ನಲ್ಲಿಡಿ: ಝಿಪ್ ಲಾಕ್ ಬ್ಯಾಗ್‌ಗಳು ನಿಮ್ಮಲ್ಲಿದ್ದರೆ ಅದು ಹಿಟ್ಟನ್ನು ಸಂರಕ್ಷಿಸಿಡಲು ಒಳ್ಳೆಯ ಐಡಿಯಾ. ಝಿಪ್ ಲಾಕ್ ಪ್ಲಾಸ್ಟಿಕ್ ಕವರ್ ಒಳಗೆ ಗಾಳಿಯಾಡುವುದಿಲ್ಲವಾದ್ದರಿಂದ ಉಳಿದ ಹಿಟ್ಟನ್ನು ಇಟ್ಟು ಹಾಗೆಯೇ ಲಾಕ್ ಮಾಡಿ ಫ್ರಿಡ್ಜ್ ಒಳಗೆ ಇಟ್ಟುಕೊಳ್ಳಬಹುದು. ಎರಡು ಮೂರು ದಿನಗಳವರೆಗೆ ಯಾವುದೇ ಭಯವಿಲ್ಲದೆ, ಹಿಟ್ಟನ್ನು ಮತ್ತೆ ಬಳಸಬಹುದು.
ಇದನ್ನೂ ಓದಿ: Food Tips: ಗರಿಗರಿ ಫ್ರೆಂಚ್ ಫ್ರೈಸ್ ಮನೆಯಲ್ಲೇ ಮಾಡಲು ಇಲ್ಲಿವೆ ಪಂಚಸೂತ್ರಗಳು!
5. ತಂಪಾದ ಜಾಗದಲ್ಲಿಡಿ: ಯಾವಾಗಲೂ ಉಳಿದ ಹಿಟ್ಟನ್ನು ಯಾವುದೇ ಗಾಳಿಯಾಡದ ಚೀಲ, ಡಬ್ಬ ಇತ್ಯಾದಿಗಳಲ್ಲಿ ಹಾಕಿಟ್ಟರೂ, ಅದನ್ನು ತಂಪಾದ ಪ್ರದೇಶದಲ್ಲಿ ಇಡುವುದನ್ನು ಮರೆಯಬೇಡಿ. ತಂಪಾದ ಜೊತೆಗೆ ಯಾವುದೇ ನೀರಿನಂಶ ಅದಕ್ಕೆ ತಾಕದಂತೆ ಇಟ್ಟುಕೊಂಡರೆ ಮೂರ್ನಾಲ್ಕು ದಿನಗಳವರೆಗೆ ಕಲಸಿಟ್ಟ ಹಿಟ್ಟು ಹಾಳಾಗುವುದಿಲ್ಲ. ಫ್ರಿಡ್ಜ್‌ನಲ್ಲಿ ನೀರು ತಾಕದಂತೆ ಡಬ್ಬದಲ್ಲಿ ಮುಚ್ಚಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ತೆರೆದಿಟ್ಟರೆ ಫ್ರಿಡ್ಜ್‌ನಲ್ಲಿಟ್ಟರೂ ಬಳಸಲು ಯೋಗ್ಯವಾಗಿ ಹಿಟ್ಟು ಉಳಿಯುವುದಿಲ್ಲ. ಕಪ್ಪಾಗಿ, ಒಣಕಲಾಗಿ ಮತ್ತೆ ಚಪಾತಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಯಾವಾಗಲೂ, ಆಗಾಗ ಕಲಸಿದ ಹಿಟ್ಟಿನಿಂದ ಚಪಾತಿ ಮಾಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಹೆಚ್ಚು ಹಿಟ್ಟು ಕಲಸಿ ಇಡುವುದಕ್ಕಿಂತ, ಆದಷ್ಟೂ ಆಯಾ ದಿನಕ್ಕೆ ಬೇಕಾದಷ್ಟೇ ಹಿಟ್ಟು ಕಲಸಿಕೊಳ್ಳುವದರಲ್ಲಿ ಉತ್ತಮ ಚಪಾತಿಯಷ್ಟೇ ಅಲ್ಲ ಆರೋಗ್ಯದ ರಹಸ್ಯವೂ ಅಡಗಿದೆ ಎಂಬುದನ್ನು ಅರಿಯಿರಿ. ಉಳಿದ ಹಿಟ್ಟನ್ನು ಹಾಳಾಗದಂತೆ ಇಟ್ಟುಕೊಳ್ಳುವುದು ಹೇಗೆ ಎಂಬುದಷ್ಟೇ ಇಲ್ಲಿ ಮುಖ್ಯ.
ಇದನ್ನೂ ಓದಿ: Food Tips: ಮೊಳಕೆ ಕಾಳುಗಳನ್ನು ಕೆಡದಂತೆ ಹೆಚ್ಚು ಕಾಲ ಇಡಲು ಇಲ್ಲಿವೆ ಟಿಪ್ಸ್!