Site icon Vistara News

Food Tips: ಮನೆಯಲ್ಲೇ ಹೊಂಬಣ್ಣದ ಗರಿಗರಿ ದೋಸೆ ಮಾಡಲು ಪಂಚಸೂತ್ರಗಳಿವು!

dosa for breakfast

ದೋಸೆ ಎಂಬ ನಿತ್ಯಾಹಾರವನ್ನು ದಿನವೂ ಬೆಳಗ್ಗೆ ತಿಂದರೂ ಹೊಟೇಲಿಗೆ ಹೋಗಿ ಒಂದು ಮಸಾಲೆ ದೋಸೆ ಎಂದು ಆರ್ಡರ್‌ ಮಾಡುವ ಸುಖವೇ ಬೇರೆ. ಗರಿಗರಿಯಾಗಿ ತೆಳುವಾದ ದೋಸೆಯೊಳಗೆ (crispy dosa) ಮಸಾಲೆ ಇಟ್ಟ ದೋಸೆಯನ್ನು ಮುರಿದು ಬಾಯಿಟ್ಟರೆ ಆಹಾ, ಸ್ವರ್ಗವೇ ಬಾಯಿಗಿಳಿದಂತೆ ಖುಷಿ ಪಡುವ ಮಂದಿ ಬಹುಸಂಖ್ಯಾತರು. ಇಂತಹ ದೋಸೆ ಪ್ರಿಯರು ಮನೆಯಲ್ಲೂ ನಮ್ಮ ದೋಸೆ ಯಾಕಿಷ್ಟು ಗರಿಗರಿಯಾಗಿ ಬರುವುದಿಲ್ಲ ಎಂದು ತಲೆಕೆಡಿಸುವುದುಂಟು. ಯುಟ್ಯೂಬ್‌ ವಿಡಿಯೋಗಳನ್ನೆಲ್ಲ ಜಾಲಾಡಿ, ದೋಸೆಯನ್ನು ಗರಿಗರಿಯಾಗಿಸೋದು ಹೇಗೆ ಎಂಬ ಯಕ್ಷಪ್ರಶ್ನೆಯನ್ನು ಹೊತ್ತು ಸಾಕಷ್ಟು ಶ್ರಮ, ಸಮಯ ಧಾರೆಯೆರೆಯುವುದುಂಟು. ಕೆಲವರಿಗೆ ಈ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಉತ್ತರ ಸಿಕ್ಕಿ, ಮನೆಯಲ್ಲಿ ಎಲ್ಲರಿಗೂ ಗರಿಗರಿ ದೋಸೆಯ ಸಂಭ್ರಮಾಚರಣೆ ನಡೆಸಿ ಮೌಂಟ್‌ ಎವರೆಸ್ಟ್‌ ಹತ್ತಿದಷ್ಟು ಖುಷಿಪಟ್ಟರೆ, ಇನ್ನೂ ಕೆಲವರು ಮಾತ್ರ ನಮಗ್ಯಾಕೆ ಹಾಗೆ ಸಾಧ್ಯವಾಗುವುದಿಲ್ಲ ಎಂದು ತಲೆಕೆರೆದುಕೊಂಡು ಎಲ್ಲೋ ಒಮ್ಮೆ ಗರಿಗರಿಯಾಗಿ ಬಂದ ದೋಸೆಯನ್ನೇ ಪಾಲಿಗೆ ಬಂದದ್ದಿಷ್ಟೇ ಎಂದು ಕಣ್ಣಿಗೊತ್ತಿ ತಿನ್ನುತ್ತಾರೆ. ಹಾಗಿದ್ದರೆ ದೋಸೆ ಎಂಬುದು ಇದ್ಯಾವ ಬ್ರಹ್ಮವಿದ್ಯೆಯಿದ್ದೀತು ಎಂದು ಅಂದುಕೊಳ್ಳುವ ಮಂದಿಗೆಲ್ಲ ಹೊಂಬಣ್ಣದ ಗರಿಗರಿಯಾದ ದೋಸೆ ಮಾಡಿ ಹೆಮ್ಮೆಯಿಂದ ಬೀಗಲು ಇಲ್ಲಿವೆ ಸುಲಭ ಪಂಚಸೂತ್ರಗಳು (Food tips).

1. ನಿಮ್ಮದೇ ದೋಸೆ ಹಿಟ್ಟಿರಲಿ, ಹೊರಗಿನಿಂದ ತಂದ ದೋಸೆ ಹಿಟ್ಟಿರಲಿ, ಅದನ್ನು ಫ್ರಿಡ್ಜಿನಲ್ಲಿಟ್ಟಿರುತ್ತೀರಿ. ಬೇಸಿಗೆಯಲ್ಲಿ ಹಿಟ್ಟು ಹೊರಗಿಟ್ಟರೆ ಅಗತ್ಯಕ್ಕಿಂತ ಹೆಚ್ಚು ಹುಳಿ ಬಂದು ದೋಸೆ ಹುಳಿ ಹುಳಿಯಾದೀತು ಎಂಬ ಮುಂಜಾಗ್ರತೆಯಿಂದ ಹಾಗೂ ಹೆಚ್ಚು ದಿನ ಬಳಸಲು ದೋಸೆ ಹಿಟ್ಟನ್ನು ಒಳಗಿಡುವುದು ಸಾಮಾನ್ಯ. ಆದರೆ, ಯಾವಾತ್ತಿಗೂ, ಫ್ರಿಡ್ಜ್‌ನಿಂದ ಹಿಟ್ಟನ್ನು ತೆಗೆದ ಕೂಡಲೇ ದೋಸೆ ಹುಯ್ಯಬೇಡಿ. ಹಿಟ್ಟನ್ನು ದೋಸೆ ಮಾಡುವ ಸುಮಾರು ಒಂದು ಗಂಟೆ ಮೊದಲೇ ಹೊರಗೆ ತೆಗೆದಿಟ್ಟಿರಿ. ಆಗ ಹಿಟ್ಟು ಸಾಮಾನ್ಯ ಉಷ್ಣತೆಗೆ ಬಂದಿರುತ್ತದೆ. ಅತಿಯಾಗಿ ತಂಪಾದ ಹಿಟ್ಟಿನಿಂದ ದೋಸೆ ಹೊಯ್ಯುವಾಗ ಅದು ಗಂಟುಗಂಟಾಗಿ ಸರಿಯಾಗಿ ಹರಡಲು ಸಾಧ್ಯವಾಗುವುದಿಲ್ಲ. ಇದರಿಂದ ತೆಳುವಾದ ದೋಸೆ ಮಾಡಲು ಸಾಧ್ಯವಾಗುವುದಿಲ್ಲ.

2. ಹಿಟ್ಟು ರುಬ್ಬುವಾಗ ಹೆಚ್ಚು ನೀರು ಹಾಕಬೇಡಿ. ನೀರು ಅತಿಯಾಗಿ ಹುಯ್ದರೆ ಹಿಟ್ಟು ತೆಳುವಾಗಿ ದೋಸೆ ಗರಿಗರಿಯಾಗಿ ಬರುವುದಿಲ್ಲ. ಒಂದು ಹದಕ್ಕಿಂತ ಹಿಟ್ಟು ಹೆಚ್ಚು ತೆಳ್ಳಗಾದರೆ ದೋಸೆ ಚೆನ್ನಾಗಿ ಬರುವುದಿಲ್ಲ. ಹಾಗಾಗಿ, ದೋಸೆ ಹಿಟ್ಟಿಗೆ ಎಷ್ಟು ನೀರು ಹಾಕಬೇಕು ಎಂಬುದೂ ಕೂಡಾ ಒಂದು ಕಲೆಯೇ.

3. ದೋಸೆಯ ಕಾವಲಿ ಅಥವಾ ತವಾಕ್ಕೆ ಎಣ್ಣೆ ಅಥವಾ ತುಪ್ಪ ಹಚ್ಚುವುದರಲ್ಲೂ ನೀವು ತಪ್ಪು ಮಾಡಬಹುದು. ಸರಿಯಾಗಿ ಎಣ್ಣೆ ಹಚ್ಚುವುದೂ ಬಹಳ ಮುಖ್ಯ. ಎಣ್ಣೆ ಹಚ್ಚುವ ಮೊದಲು ಕಾವಲಿ ಕಾದಿರಬೇಕು. ಆದರೆ ಹೆಚ್ಚು ಕಾದು ಹೊಗೆಯೇಳಬಾರದು. ಹೆಚ್ಚು ಕಾದರೆ ನೀರು ಚಿಮುಕಿಸಿ ಕಾವಲಿಯನ್ನು ದೋಸೆ ಹುಯ್ಯುವ ಹದಕ್ಕೆ ತರಬಹುದು, ಹಾಗೂ ಕಾವಲಿ ಹದವಾಗಿದೆಯೇ ಎಂದು ಪರೀಕ್ಷಿಸಬಹುದು. ಈರುಳ್ಳಿಯನ್ನು ಎರಡು ಭಾಗವಾಗಿ ಮಾಡಿಕೊಂಡು ಅದನ್ನು ಕಾವಲಿಗೆ ಪ್ರತಿ ದೋಸೆ ಮಾಡುವ ಮೊದಲೂ ಉಜ್ಜಿಕೊಳ್ಳುವುದರಿಂದ ದೋಸೆ ಚೆನ್ನಾಗಿ ಏಳುತ್ತದೆ. ಕಾವಲಿಯ ಕೊನೆಯಲ್ಲಿ ಹೆಚ್ಚಿಗೆ ಎಣ್ಣೆ ಇರದಂತೆ ನೋಡಿಕೊಳ್ಳುವುದೂ ಮುಖ್ಯ. ಕಾದ ಕಾವಲಿಯನ್ನು ಒಂದೇ ಬಿಸಿಯಲ್ಲಿ ಇಟ್ಟುಕೊಂಡಿರುವುದೂ ಕೂಡಾ ಮುಖ್ಯ. ಕಾವಲಿಯ ಉರಿಯನ್ನು ಆಗಾಗ ಬದಲಾಯಿಸಬೇಡಿ.

ಇದನ್ನೂ ಓದಿ: Food tips: ಅಣಬೆಗಳನ್ನು ಕೆಡದಂತೆ ಸಂರಕ್ಷಿಸಿಕೊಳ್ಳುವುದು ಹೇಗೆ?

4. ತೇವವಿರುವ ಕಾವಲಿಯನ್ನು ಬಳಸುವುದರಿಂದಲೂ ಕೂಡಾ ದೋಸೆ ಕೆಡುತ್ತದೆ. ದೋಸೆ ಹುಯ್ಯುವ ಮೊದಲು ಕಾವಲಿಯನ್ನು ತೊಳೆದು ನೀರಿರದಂತೆ ಉಜ್ಜಿಕೊಳ್ಳುವುದು ಮುಖ್ಯ. ದೋಸೆ ಹಿಟ್ಟು ಕಾವಲಿಗೆ ಅಂಟಿಕೊಳ್ಳುತ್ತಿದೆಯೆಂದಾದಲ್ಲಿ ಈ ತೊಂದರೆಯನ್ನು ಹಿಟ್ಟಿನ ಮೂಲಕವೇ ಪರಿಹರಿಸಿಕೊಳ್ಳಬಹುದು. ಕೊಂಚ ಹಿಟ್ಟನ್ನು ಕಾವಲಿಯಲ್ಲಿ ಹಾಕಿ ಹರವಿ, ಅದರಿಂದರೇ ಕಾವಲಿಯನ್ನೊಮ್ಮೆ ಪೂರ್ತಿ ಉಜ್ಜಿ ತೆಗೆದು ಕಾವಲಿಯನ್ನು ಮುಂದಿನ ದೋಸೆಗೆ ರೆಡಿಯಾಗುವಂತೆ ಮಾಡಬಹುದು. ಇದು ಕಾವಲಿಯಲ್ಲಿ ಬೇಡದ ತೇವಾಂಶವನ್ನೆಲ್ಲ ಹೀರಿ ಕಾವಲಿಯನ್ನು ಹುಯ್ಯಲು ರೆಡಿಯಾಗಿಸುತ್ತದೆ.

5. ಹಿಟ್ಟು ಹದವಾಗಿ ಹುಳಿ ಬಂದಿರುವುದೂ ಕೂಡಾ ಮುಖ್ಯ. ಹುಳಿ ಬಂದಿರದ ಹಿಟ್ಟಿನಿಂದ ಉತ್ತಮ ದೋಸೆ ಸಾಧ್ಯವಿಲ್ಲ. ಹಿಟ್ಟಿಗೆ ಕೊಂಚ ಅಂದರೆ ಒಂದೆರಡು ಚಮಚ ಸಕ್ಕರೆ ಸೇರಿಸಿದರೆ ದೋಸೆ ಹೊಂಬಣ್ಣಕ್ಕೆ ಬರುತ್ತದೆ. ಹಿಟ್ಟು ರುಬ್ಬುವಾಗ, ಒಂದೆರಡು ಚಮಚ ಮೆಂತೆ ಅಥವಾ ಕಡಲೇ ಬೇಳೆ ಅಥವಾ ಒಂದು ಮುಷ್ಟಿ ಅವಲಕ್ಕಿ ಹಾಕಿ ರುಬ್ಬಿದರೆ ದೋಸೆ ಗರಿಗರಿಯಾಗುತ್ತದೆ. ಒಳ್ಳೆಯ ಕಬ್ಬಿಣದ ಕಾವಲಿಯನ್ನು ದೋಸೆಗೆಂದೇ ಇಟ್ಟುಕೊಳ್ಳುವುದು ಒಳ್ಳೆಯದು. ಅದನ್ನು ದೋಸೆಗಾಗಿ ಎಣ್ಣೆ ಹಚ್ಚಿಟ್ಟು ಇಟ್ಟು ಪಳಗಿಸುವುದೂ ಕೂಡಾ ಮುಖ್ಯ.

ಇದನ್ನೂ ಓದಿ: Food tips: ಅರಿಶಿನ ಹಾಗೂ ಬೆಲ್ಲ ಎಂಬ ಅಮೃತದಂಥ ಜೋಡಿ: ಮ್ಯಾಜಿಕ್‌ ಔಷಧಿ!

Exit mobile version