ಮನೆಯಲ್ಲೆಷ್ಟೇ ಚಾಟ್ ತಿಂಡಿಗಳನ್ನು ಮಾಡಿದರೂ, ಬೀದಿಬದಿಯ ಚಾಟ್‌ಗಳಿಗೆ ಅದರದ್ದೇ ರುಚಿ. ಬೀದಿಬದಿಯಲ್ಲಿ ನಿಂತು ಆತ ಮಾಡಿಕೊಡುವ ಬಗೆಬಗೆಯ ಚಾಟ್‌ಗಳನ್ನು ಅಪರೂಪಕ್ಕೊಮ್ಮೆಯಾದರೂ ಸವಿಯದಿದ್ದರೆ ನಗರದಲ್ಲಿರುವ ಬಹುತೇಕರಿಗೆ ನೆಮ್ಮದಿಯ ಬದುಕು ಸಾಗದು. ಪಾನಿಪುರಿ, ಬೇಲ್ ಪುರಿ, ಮಸಾಲೆಪುರಿ, ಟಿಕ್ಕಿ, ಸಮೋಸ, ಬಿಸಿಬಿಸಿ ಜಿಲೇಬಿ, ಲಸ್ಸಿ, ಪಾವ್ ಬಾಜಿ ಇತ್ಯಾದಿಗಳ ಬೀದಿಬದಿಯ ರುಚಿಯೇ ಬೇರೆ. ಅದ್ಹೇಗೆ ಬೀದಿಬದಿಯ ತಿಂಡಿಗಳು ಅಷ್ಟು ರುಚಿಯಾಗಿರುತ್ತೆ ಎಂದು ಆಶ್ಚರ್ಯವೂ ಆಗದಿರದು. ಎಷ್ಟೋ ಬಾರಿ, ಬೀದಿಬದಿಗಿಂತ ಆರೋಗ್ಯಕರವಾಗಿ ನಾವು ಮನೆಯಲ್ಲೇ ಮಾಡಿ ತಿನ್ನುವ ಅಂದುಕೊಂಡು ರೆಸಿಪಿ ಹುಡುಕಿ ಹಾಗೆಯೇ ಮಾಡಿದರೂ, ಆ ರುಚಿ ಬರದು. ಮುಖ್ಯವಾಗಿ ಪಾವ್ ಬಾಜಿ ಪ್ರಿಯರು ರಸ್ತೆಬದಿಯ ಪಾವ್‌ಬಾಜಿ ರುಚಿಯನ್ನು ಮನೆಯಲ್ಲೊಮ್ಮೆ ಟ್ರೈ ಮಾಡದೆ ಇರರು. ಅಲ್ಲಿಯ ರುಚಿ ಇಲ್ಲಿ ಬಂದಿಲ್ಲ, ಹಾಗಾದರೆ, ಅದರಲ್ಲಿರುವ ಮ್ಯಾಜಿಕ್ ಏನು ಎಂಬ ಕುತೂಹಲ ನಿಮಗಾಗಿದ್ದರೆ, ಮತ್ತೊಮ್ಮೆ ಪಾವ್ ಬಾಜಿ ಟ್ರೈ ಮಾಡುವುದಿದ್ದರೆ, ಈ ಸರಳ ಸೂತ್ರಗಳನ್ನು ಅನುಸರಿಸಿ. ನಿಮ್ಮ ಪಾವ್ ಬಾಜಿ, ಥೇಟ್ ಅದೇ ಬೀದಿಬದಿಯ ರುಚಿಯೇ ನಿಮ್ಮದೂ ಆಗಿರುತ್ತದೆ.
೧. ಪಾವ್ ಬಾಜಿಯ ಬಾಜಿಗೆ ಹಾಕುವ ಪ್ರತಿಯೊಂದು ತರಕಾರಿಗೂ ಅದರದ್ದೇ ಆದ ಪಾತ್ರ ಇದೆ. ಹಾಗಾಗಿ, ಯಾವೊಂದು ತರಕಾರಿಯನ್ನು ಇದರಲ್ಲಿ ಕೈಬಿಟ್ಟರೂ ಪಾವ್ ಬಾಜಿಯ ಬಾಜಿ ಪೇಲವವಾಗುತ್ತದೆ ಬಾಜಿಗೆ ಆಲೂಗಡ್ಡೆ, ಈರುಳ್ಳಿ, ಟೊಮೇಟೋ, ಬಟಾಣಿ, ಹೂಕೋಸು ಇತ್ಯಾದಿಗಳೆಲ್ಲವೂ ಬೇಕು. ಪ್ರತಿಯೊಂದೂ ಒಂದಕ್ಕೊಂದು ಜೊತೆ ಸೇರಿ ಬಾಜಿಗೆ ಒಳ್ಳೆಯ ಘಮ ಕೊಡುತ್ತದೆ.
೨. ಪಾವ್ ಬಾಜಿಯಲ್ಲಿ ಬಳಸಿದ ತರಕಾರಿಗಳೆಲ್ಲವೂ ಒಂದಕ್ಕೊಂದು ಚೆನ್ನಾಗಿ ಬೆರೆತುಕೊಳ್ಳಬೇಕು ಎಂದರೆ ಅವುಗಳನ್ನು ಬೇಯಿಸಿದ ನಂತರ ಬಾಜಿ ಆಡುವ ಹಂತದಲ್ಲಿ ಮಸಾಲೆ ಹಾಕಿದಾಗ ಚೆನ್ನಾಗಿ ಹಿಸುಕಬೇಕು. ಮ್ಯಾಶ್ ಮಾಡುವ ಸಾಧನದಿಂದ ಬಿಸಿಯಾಗಿ ಒಲೆಯಲ್ಲಿರುವಾಗಲೇ ಚೆನ್ನಾಗಿ ಮ್ಯಾಶ್ ಮಾಡುವುದು ಅತ್ಯಂತ ಮುಖ್ಯವಾದ ಘಟ್ಟ. ಆಗ ಅದರ ನಿಜವಾದ ರುಚಿ ಸಿಗುತ್ತದೆ.
೩. ಪಾವ್ ಬಾಜಿಗೆ ಬಳಸಬೇಕಾದ್ದು ಬೆಣ್ಣೆ. ಬೆಣ್ಣೆ ಈ ಪಾಜಿಗೆ ಕೊಡುವ ಘಮವೇ ಬೇರೆ. ಬೆಣ್ಣೆ ಇಲ್ಲ, ತುಪ್ಪದಲ್ಲಿ ಮಾಡುತ್ತೇವೆ, ಎರಡೂ ಒಂದೇ ತಾನೇ ಎಂದರೆ, ಈ ವಾದ ಒಪ್ಪಲಾಗದು. ರುಚಿಯಲ್ಲಿ, ಘಮದಲ್ಲಿ ವ್ಯತ್ಯಾಸ ಖಂಡಿತವಾಗಿಯೂ ತಿಳಿಯುತ್ತದೆ. ಹಾಗಾಗಿ, ಬಾಜಿ ಮಾಡುವಾಗ ಯಾವ ದಾಕ್ಷಿಣ್ಯವೂ ಇಲ್ಲದೆ, ಕಂಜೂಸುತನ ಮಾಡದೇ ಧಾರಾಳವಾಗಿ ಬೆಣ್ಣೆ ಹಾಕಿ ಅದರಲ್ಲಿಯೇ ತರಕಾರಿಗಳನ್ನು ಫ್ರೈ ಮಾಡಿ ಅದರಲ್ಲೇ ಬೇಯಲು ಬಿಡಿ. ಆಮೇಲೂ ಬೆಣ್ಣೆ ಹಾಕಿ. ಧಾರಾಳವಾಗಿ ಬೆಣ್ಣೆ ಮೆತ್ತಿಕೊಂಡ ತರಕಾರಿ ಅದ್ಭುತ ಘಮವನ್ನು ಹೊತ್ತು, ಕ್ರೀಮೀಯಾಗಿರುವ ಬಾಜಿ ಸಿದ್ಧವಾಗುತ್ತದೆ.
ಇದನ್ನೂ ಓದಿ: Food Tips: ಅಡುಗೆ ಅಂದುಕೊಂಡದ್ದಕ್ಕಿಂತ ಹೆಚ್ಚು ಖಾರವಾಯಿತೇ? ಖಾರ ತಗ್ಗಿಸಲು ಇಲ್ಲಿವೆ ಫಟಾಫಟ್ ಟಿಪ್ಸ್!
೪. ಪಾವ್ ಬನ್ ಅನ್ನು ಟೋಸ್ಟ್ ಮಾಡುವುದೂ ಒಂದು ಕಲೆಯೇ. ಬಾಜಿ ರೆಡಿಯಾದ ಕೂಡಲೇ ಪಾವ್ ಟೋಸ್ಟ್ ಮಾಡಿ. ಸ್ವಲ್ಪ ಕ್ರಂಚಿ ಆಗುವಂತೆ ಆದರೆ, ಅದು ಸುಟ್ಟು ಕರಕಲಾದಂತೆ ಜಾಗರೂಕತೆಯಿಂದ ಬೆಣ್ಣೆ ಹಾಕಿ ಮಾಡಿ.
೫. ಬಾಜಿ ಹಾಗೂ ಪಾವ್ ಎರಡೂ ಸಿದ್ಧವಾದ ಕೂಡಲೇ ಎರಡನ್ನೂ ತಟ್ಟೆಯಲ್ಲಿ ಹಾಕಿ ಕೊಡುವ ಸಂದರ್ಭ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಮೇಲಿನಿಂದ ಬೆಣ್ಣೆ ಮುದ್ದೆಯೊಂದನ್ನು ಇಡಿ. ಜೊತೆಗೆ ಕತ್ತರಿಸಿದ ಈರುಳ್ಳಿ, ಒಂದು ನಿಂಬೆ ಹಣ್ಣಿನ ತುಂಡು ಇವನ್ನೆಲ್ಲ ಖಂಡಿತಾ ಮರೆಯಬೇಡಿ. ಯಾಕೆಂದರೆ, ಪಾವ್ ಬಾಜಿಯಲ್ಲಿ, ಮೇಲಿನಿಂದ ಬಿಸಿಗೆ ಮೆಲ್ಲನೆ ಕರಗುವ ಬೆಣ್ಣೆ ಮುದ್ದೆಯಿಂದ ಹಿಡಿದು, ಜೊತೆಗೆ ಕೊಡುವ ಈರುಳ್ಳಿ ಹಾಗೂ ನಿಂಬೆಹಣ್ಣಿನ ತುಂಡಿನವರೆಗೆ ಎಲ್ಲವಕ್ಕೂ ಅದರದ್ದೇ ಆದ ಪಾತ್ರವಿದೆ. ಇದರಲ್ಲಿ ಒಂದು ಮಿಸ್ ಆದರೂ ಪಾವ್ ಬಾಜಿ ಅದರದ್ದೇ ಆದ ವಿಶೇಷ ರುಚಿ ಕೊಡದು. ಇವಿಷ್ಟು ಗಮನದಲ್ಲಿಟ್ಟರೆ, ಖಂಡಿತವಾಗಿಯೂ ರಸ್ತೆ ಬದಿಯ ಪಾವ್ ಬಾಜಿಗಿಂತಲೂ ಒಂದು ಕೈ ಮೇಲೆನಿಸುವ ಪಾವ್ ಬಾಜಿ ಪಾಕಪ್ರವೀಣರು ನೀವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ!
ಇದನ್ನೂ ಓದಿ: Mayonnaise Ban | ಅಷ್ಟೊಂದು ರುಚಿಯಾದ ಮೆಯೋನೀಸ್ ಅನಾರೋಗ್ಯಕರವೇ?ದನ್ನೂ ಓದಿ: