ಬಹಳಷ್ಟು ಸಾರಿ ನಾವು ಹಣ್ಣುಗಳ ವಿಚಾರದಲ್ಲಿ ತಪ್ಪು ಮಾಡುತ್ತೇವೆ. ಕಡಿಮೆಗೆ ಮಾರುಕಟ್ಟೆಯಲ್ಲಿ ಸಿಕ್ಕಿತು ಎಂದೋ, ತಾಜಾ ಆಗಿ ಸಿಕ್ಕಿತು ಎಂದೋ ಸ್ವಲ್ಪ ಹೆಚ್ಚೇ ಹಣ್ಣುಗಳನ್ನು ಕೊಂಡು ತರುತ್ತೇವೆ. ಆದರೆ, ತಂದ ಹಣ್ಣನ್ನು ಸರಿಯಾಗಿ ಶೇಖರಿಸದೆ, ಅರ್ಧದಷ್ಟು ಹಣ್ಣುಗಳು ಕೊಳೆತು ಹೋಗುತ್ತವೆ. ಅಯ್ಯೋ, ಅಷ್ಟು ಚೆನ್ನಾಗಿದ್ದ ಹಣ್ಣು, ದುಡ್ಡು ಕೊಟ್ಟು ತಂದ ಹಣ್ಣು ಕೊಳೆತು ಹೋಯಿತಲ್ಲಾ ಎಂದು ಬೇಸರ ಮಾಡಿಕೊಳ್ಳುತ್ತೇವೆ. ಆದರೆ, ಯಾವ ಹಣ್ಣನ್ನು ಹೇಗೆ ಶೇಖರಿಸಬೇಕು, ಯಾವುದನ್ನು ಫ್ರಿಡ್ಜ್‌ನಲ್ಲಿಡಬೇಕು, ಯಾವುದನ್ನು ಇಡಬಾರದು ಎಂಬ ಸರಳ ಸಾಮಾನ್ಯ ವಿಚಾರ ನಮಗೆ ಗೊತ್ತಿದ್ದರೆ ಹೆಚ್ಚು ಕಾಲ ಹಣ್ಣುಗಳನ್ನು ನಿತ್ಯವೂ ಬುದ್ಧಿವಂತಿಕೆಯಿಂದ ಬಳಸಬಹುದು. ಯಾವ ಹಣ್ಣನ್ನು ಹೇಗೆ ಹೆಚ್ಚು ಕಾಲ ಉಳಿವಂತೆ ಕೆಡದಂತೆ ಶೇಖರಿಸಿಡಬಹುದು ಎಂಬ ಮಾಹಿತಿ ಇಲ್ಲಿದೆ.
೧. ಸೇಬು: ತಾಜಾ ಸೇಬು ಹಣ್ಣು ಒಂದು ವಾರದವರೆಗೆ ತಾಜಾ ಆಗಿ ಉಳಿಯುತ್ತದೆ. ಫ್ರಿಡ್ಜ್‌ನಲ್ಲಿಟ್ಟರೆ ಒಂದು ತಿಂಗಳ ಕಾಲ ಕೆಡದೆ ತಾಜಾ ಆಗಿ ಇರಬಲ್ಲದು. ತಿಂಗಳ ನಂತರವೂ ಫ್ರಿಡ್ಜ್‌ನಿಂದ ಹೊರತೆಗೆದು ತಿನ್ನಬಹುದು. ಅಥವಾ ಫ್ರಿಡ್ಜ್‌ನಲ್ಲಿಟ್ಟು ತಿಂಗಳಿಡೀ, ಬೇರೆ ಬೇರೆ ಹಣ್ಣಿನ ರೆಸಿಪಿಗಳಿಗೆ ಬಳಸಬಹುದು.
೨. ಕಿತ್ತಳೆ, ಮೂಸಂಬಿ: ಕಿತ್ತಳೆ ಹಾಗೂ ಮೂಸಂಬಿಯಂತಹ ಸಿಟ್ರಸ್ ಹಣ್ಣುಗಳು ತಾಜಾ ಆಗಿದ್ದರೆ ಹೊರಗೆ ಸಾಮಾನ್ಯ ಉಷ್ಣತೆಯಲ್ಲಿ 15 ದಿನಗಳವರೆಗೂ ಕೆಡದೆ ಇರಬಲ್ಲವು. ಫ್ರಿಡ್ಜ್‌ನಲ್ಲಿಟ್ಟರೆ ಒಂದು ತಿಂಗಳವರೆಗೂ ಕೆಡದೆ ಇರುತ್ತವೆ. ಆದರೆ, ಫ್ರಿಡ್ಜ್‌ನಲ್ಲಿ ಕಿತ್ತಳೆ, ಮೂಸಂಬಿ ಹಣ್ಣನ್ನು ಹೆಚ್ಚು ಕಾಲ ಇಟ್ಟರೆ, ಅದರಲ್ಲಿರುವ ನೀರಿನಂಶ ಕಡಿಮೆಯಾಗಿ ರುಚಿ ಕಡಿಮೆಯಾಗುತ್ತದೆ. ಮದಲಿನ ಹಾಗೆ ತಾಜಾ ಹಣ್ಣಿನ ರಸ ಅದೊರಳಗೆ ಇರುವುದಿಲ್ಲ.
೩. ಬಾಳೆಹಣ್ಣು: ಬಾಳೆಹಣ್ಣು ಮೂರರಿಂದ ನಾಲ್ಕು ದಿನಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ. ಸುಮಾರು ಒಂದು ವಾರದೊಳಗೆ ಕಾಯಿ ಹಣ್ಣಾಗುತ್ತದೆ. ಒಮ್ಮೆ ಹಣ್ಣಾದ ಬಾಳೆಹಣ್ಣು ಇದಕ್ಕಿಂತ ಹೆಚ್ಚ ಕಾಲ ಇಟ್ಟರೆ ಅದು ಕಪ್ಪಾಗಿ ಮೆತ್ತಗಾಗುತ್ತದೆ. ಒಮ್ಮೆ ಹಳದಿ ಬಣ್ಣಕ್ಕೆ ತಿರುಗಿದ ಬಾಳೆಹಣ್ಣಿನ ಹೊರಗಿನ ಸಿಪ್ಪೆ ಮತ್ತೆ ತನ್ನ ಬಣ್ಣವನ್ನು ಬದಲಾಯಿಸುವತ್ತ ಹೊರಟರೆ ಅದನ್ನು ತಿಂದು ಮುಗಿಸಬೇಕು. ಇಲ್ಲದಿದ್ದರೆ ಹಾಳಾಗುತ್ತದೆ. ಆದರೆ ಬಾಳೆಹಣ್ಣನ್ನು ಫ್ರಿಡ್ಜ್‌ನಲ್ಲಿಡುವ ಕೆಲಸ ಮಾತ್ರ ಮಾಡಬಾರದು.
೪. ದ್ರಾಕ್ಷಿ: ಕೊಂಚ ಹುಳಿಯನ್ನೂ ತನ್ನಳಗೆ ಇಟ್ಟುಕೊಂಡಿರುವ ಸಿಹಿಯಾದ ದ್ರಾಕ್ಷಿ ಹಣ್ಣು ಗಟ್ಟಿಯಾಗಿರುವಾಗಲೇ ಕೊಳ್ಳಬೇಕು. ಒಮ್ಮೆ ಹಣ್ಣಾದ ದ್ರಾಕ್ಷಿಯನ್ನು ಫ್ರಿಡ್ಜ್‌ನಲ್ಲಿಟ್ಟರೆ ಹೆಚ್ಚೆಂದರೆ ಒಂದರಿಂದ ಎರಡು ವಾರ ತಾಜಾ ಆಗಿರುತ್ತದೆ.
ಇದನ್ನೂ ಓದಿ: Food tips: ಅಣಬೆಗಳನ್ನು ಕೆಡದಂತೆ ಸಂರಕ್ಷಿಸಿಕೊಳ್ಳುವುದು ಹೇಗೆ?
೫. ಅನನಾಸು: ಅನನಾಸನ್ನು ಇಡಿಯಾಗಿ ಖರೀದಿಸಿದರೆ ಒಡನೆಯೇ ಕತ್ತರಿಸಿ ತಿನ್ನುವಷ್ಟು ಹಣ್ಣಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಸಾಮಾನ್ಯ ಉಷ್ಣತೆಯಲ್ಲಿ ಎರಡರಿಂದ ಮೂರು ದಿನ ಇಟ್ಟರೆ ಅನನಾಸು ಹಣ್ಣಾಗುತ್ತದೆ. ಸರಿಯಾಗಿ ಹಣ್ಣಾದ ಅನನಾಸು ಮಾತ್ರವೇ ರುಚಿಯಾಗಿರುತ್ತದೆ. ಒಮ್ಮೆ ಕಟ್ ಮಾಡಿದ ಮೇಲೆ ಇದನ್ನು ಫ್ರಿಡ್ಜ್‌ನಲ್ಲಿಟ್ಟರೆ ಮೂರ್ನಾಲ್ಕು ದಿನ ಉಳಿಯುತ್ತದೆ.
೬. ಬೆರ‍್ರಿಗಳು: ಎಲ್ಲ ಬಗೆಯ ಬೆರ‍್ರಿ ಹಣ್ಣುಗಳು ಹೊರಗೆ ಇಟ್ಟರೆ ಬೇಗ ಕೊಳೆತು ಹೋಗುತ್ತದೆ. ಇವು ತುಂಬ ಮೃದುವಾದ ಹಣ್ಣುಗಳು. ಕೊಂಚ ಬಿಸಿಲು ತಾಕಿದರೂ, ಸಾಮಾನ್ಯ ಉಷ್ಣತೆಯಲ್ಲಿದ್ದರೂ ಬಾಡಿ ತಾಜಾತನ ಕಳೆದುಕೊಳ್ಳುತ್ತದೆ. ಹಾಗಾಗಿ ಸ್ಟರಾಬೆರ‍್ರಿ, ಬ್ಲೂಬೆರ‍್ರಿ, ರಸ್‌ಬೆರ‍್ರಿ, ಪ್ಲಂ ಮತ್ತಿತರ ಮೆದುವಾದ ಹಣ್ಣುಗಳನ್ನು ಕಡ್ಡಾಯವಾಗಿ ಫ್ರಿಡ್ಜ್‌ನಲ್ಲಿಟ್ಟು ತಿನ್ನಬೇಕು.
೭. ದಾಳಿಂಬೆ: ದಾಳಿಂಬೆ ಹಣ್ಣು ಏನೂ ಆಗಲಾರದು ಎಂದು ಹೊರಗಿಟ್ಟುಬಿಡುತ್ತೇವೆ. ಆದರೆ, ದಾಳಿಂಬೆಯನ್ನು ಫ್ರಿಡ್ಜ್‌ನಲ್ಲಿಟ್ಟರೆ ಹೆಚ್ಚು ಕಾಲ ಉಳಿಸಬಹುದು. ಹೊರಗೇ ಇದ್ದರೆ, ದಾಳಿಂಬೆ ಹೊರಗಿನಿಂದ ಹಾಳಾಗದಂತೆ ಕಂಡರೂ ಒಳಗಿನಿಂದ ಬೀಜಗಳು ಕೊಳೆತಿರುತ್ತದೆ.
ಇದನ್ನೂ ಓದಿ: Food Tips: ಮನೆಯಲ್ಲೇ ಹೊಂಬಣ್ಣದ ಗರಿಗರಿ ದೋಸೆ ಮಾಡಲು ಪಂಚಸೂತ್ರಗಳಿವು!