ಮೊಳಕೆ ಕಾಳುಗಳು (sprouts) ನಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗ. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರೊಟೀನ್, ವಿಟಮಿನ್‌ಗಳು, ಆಂಟಿ ಆಕ್ಸಿಡೆಂಟ್‌ಗಳು ಹಾಗೂ ಖನಿಜಾಂಶಗಳು ಇರುವುದರಿಂದ ಆರೋಗ್ಯಕರ ಆಹಾರ ಸೇವಿಸಲು ಪ್ರಯತ್ನಿಸುವ ಎಲ್ಲರೂ ತಮ್ಮ ನಿತ್ಯಾಹಾರದಲ್ಲಿ ಮೊಳಕೆ ಕಾಳುಗಳನ್ನೂ ಸೇವಿಸಲು ಬಯಸುವುದು ಸಾಮಾನ್ಯ. ಮುಖ್ಯವಾಗಿ ತೂಕ ಇಳಿಸಿಕೊಂಡು, ಫಿಟ್ ಆಗಿರಬಯಸುವ ಮಂದಿ, ಅದರಲ್ಲೂ ಮೊಟ್ಟೆ ಹಾಗೂ ಮಾಂಸಾಹಾರದಲ್ಲಿರುವ ಪ್ರೊಟೀನ್ ಸೇವನೆ ಸಾಧ್ಯವಾಗದ ಸಸ್ಯಾಹಾರಿಗಳು ಮುಖ್ಯವಾಗಿ ಪ್ರೊಟೀನ್ ಮೂಲಕ್ಕಾಗಿ ಮೊಳಕೆ ಕಾಳುಗಳ ಮೊರೆ ಹೋಗುತ್ತಾರೆ. ಊಟದ ಮಧ್ಯದಲ್ಲಿ ಹಸಿವಾದಾಗ, ಸ್ನ್ಯಾಕ್ ಬದಲಿಗೆ ಸಲಾಡ್ ಮಾಡಿಕೊಂಡು ತಿನ್ನುವಾಗಲೂ ಮೊಳಕೆ ಕಾಳುಗಳನ್ನು ಹಾಕುತ್ತೇವೆ. ಇಂತಹ ಪೋಷಕಾಂಶಯುಕ್ತ ಮೊಳಕೆ ಕಾಳುಗಳನ್ನು ಬೇಸಿಗೆಯಲ್ಲಿ ಕೆಡದಂತೆ ಕಾಪಿಡುವುದೂ ದೊಡ್ಡ ಸಮಸ್ಯೆ. ಒಮ್ಮೆ ಮೊಳಕೆ ಬರಿಸಿದ ಮೇಲೆ ವಾಸನೆ ಬರದಂತೆ, ಹೆಚ್ಚು ಕಾಲ ಹೇಗೆ ಕೆಡದಂತೆ ಇಡಬಹುದು ಎಂಬುದು ಎಲ್ಲರಿಗೂ ಮಿಲಿಯನ್ ಡಾಲರ್ ಪ್ರಶ್ನೆ. ಹಾಗಾದರೆ ಬನ್ನಿ, ಮೊಳಕೆ ಕಾಳುಗಳನ್ನು ಬೇಸಿಗೆಯಲ್ಲಿ ಹೇಗೆ ಹೆಚ್ಚು ಕಾಲ ಉಳಿಯುವಂತೆ ನೋಡಿಕೊಳ್ಳಬಹುದು (Food Tips) ಎಂಬುದನ್ನು ನೋಡೋಣ.
1. ಮೊಳಕೆ ಕಾಳುಗಳನ್ನು ಕೆಡದಂತೆ ಇಡುವ ಮೊದಲು ಕಾಳುಗಳನ್ನು ಚೆನ್ನಾಗಿ ಪರೀಕ್ಷೆ ಮಾಡಿ. ರಾಶಿ ಮೊಳಕೆ ಕಾಳುಗಳ ಮಧ್ಯದಲ್ಲಿ ಒಂದೆರಡು ಕೆಟ್ಟ ಅಥವಾ ವಾಸನೆಯುಕ್ತ ಮೊಳಕೆ ಕಾಳೂ ಇದ್ದಾವು. ಇಂತಹ ಹಾಳಾದ ಮೊಳಕೆ ಕಾಳುಗಳು ಬಹುಬೇಗನೆ ಬೇರೆಯ ಕಾಳುಗಳನು ಹಾಳಾಗುವಂತೆ ಮಾಡುತ್ತವೆ. ಅದಕ್ಕಾಗಿ, ಅಂತಹ ಹಾಳಾದ ಕಾಳುಗಳನ್ನು ಸರಿಯಾಗಿರುವ ಕಾಳುಗಳ ಮಧ್ಯೆ ಇರಲು ಬಿಡಬೇಡಿ. ಹಾಳಾದ್ದನ್ನು ಬೇರ್ಪಡಿಸಿ ಬಿಸಾಡಿ.
2. ಮೊಳಕೆ ಕಾಳುಗಳು ಸರಿಯಾಗಿ ಮೊಳಕೆ ಬಂದ ಮೇಲೆ ಕೆಲದಿನಗಳು ಕಳೆದಾಗ, ಅದರ ಹೊರಕವಚದಿಂದ ವಾಸನೆ ಬೀರಲಾರಂಭಿಸುತ್ತದೆ. ಹೊರ ಕವಚದಲ್ಲಿ ಹೆಚ್ಚು ನಾರಿನಂಶ ಇರುವುದು ಸತ್ಯವಾದರೂ, ಬೇಗ ಳಾಗದಂತೆ ತಡೆಯಲು ಹೊರಕವಚವನ್ನು ಪ್ರತ್ಯೇಕಿಸಿ. ಇದರಿಂದ ಕಾಳುಗಳು ಹೆಚ್ಚು ದಿನ ಇರಬಲ್ಲದು.
ಇದನ್ನೂ ಓದಿ: Food Tips: ನೆಲ್ಲಿಕಾಯಿ ಎಂಬ ವಿಟಮಿನ್ ಸಿಯನ್ನು ತಿಂಗಳುಗಟ್ಟಲೆ ಶೇಖರಿಸಿಡುವುದು ಹೇಗೆ!?
3. ಮೊಳಕೆ ಕಾಳುಗಳು ವಾಸನೆ ಬರಲಾರಂಭಿಸಿದರೆ, ಅದನ್ನು ಹಾಗೆಯೇ ಮತ್ತೆ ಇಡುವ ಬದಲು ಅಥವಾ ಎಸೆಯುವ ಬದಲು, ನೀರಿನಲ್ಲಿ ಚೆನ್ನಾಗಿ ತೊಳೆದು ನೋಡಿ. ಬಹಳಷ್ಟು ಸಾರಿ ನೀರಿನಿಂದ ತೊಳೆದ ಕೂಡಲೇ ವಾಸನೆ ಮಾಯವಾಗಿ ತಿನ್ನಲು ಅಥವಾ ಮತ್ತೆ ಸಂರಕ್ಷಿಸಿ ಫ್ರಿಡ್ಜ್‌ನಲ್ಲಿಡಲು ಯೋಗ್ಯವಾಗುತ್ತದೆ.
4. ನೀರಿನಲ್ಲಿ ಮೊಳಕೆ ಕಾಳನ್ನು ತೊಳೆದುಇಡುವ ಸಂದರ್ಭ ಅವನ್ನು ಕೊಂಚ ಹೊತ್ತು ಗಾಳಿಯಾಡಲು ಬಿಡಿ. ಮೆದುವಾದ ಬಟ್ಟೆಯ ಮೇಳೆ ಹರಡಿ, ಹೆಚ್ಚಿನ ನೀರಿನಂಶ ಆರಲು ಬಿಡಿ. ನೀರು ಅತಿಯಾಗಿ ಇದ್ದಾಗ ಅಥವಾ ತೊಳೆದ ಕೂಡಲೇ ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಡಬೇಡಿ. ಆರಲು ಬಿಟ್ಟು ನೀರಿಲ್ಲದಾಗ ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಶೇಖರಿಸಿ.
5. ಫ್ರಿಡ್ಜ್‌ನಲ್ಲಿ ಹೇಗೆ ಇಡುತ್ತೀರಿ ಎಂಬುದೂ ಕೂಡಾ ಮುಖ್ಯ ಪಾತ್ರ ವಹಿಸುತ್ತದೆ. ಗಾಳಿಯಾಡದ ಡಬ್ಬ ಅಥವಾ ಝಿಪ್‌ಲಾಕ್ ಕವರ್ ಒಳಗಿಡುವುದು ಒಳ್ಳೆಯದು. ಝಿಪ್‌ಲಾಕ್‌ನಲ್ಲಿಡುವಾಗ ಒಂದು ಟಿಶ್ಯೂ ಅಥವಾ ಪೇವರ್ ಟವಲ್ ಅನ್ನೂ ಇಡಿ. ಇದು ಹೆಚ್ಚುವರಿ ನೀರಿನಂಶವನ್ನು ಹೀರಿಕೊಳ್ಳುತ್ತದೆ.
ಇದನ್ನೂ ಓದಿ: Food Tips: ಗರಿಗರಿ ಫ್ರೆಂಚ್ ಫ್ರೈಸ್ ಮನೆಯಲ್ಲೇ ಮಾಡಲು ಇಲ್ಲಿವೆ ಪಂಚಸೂತ್ರಗಳು!