ಆಲೂಗಡ್ಡೆ ಎಂಬ ತರಕಾರಿ ಸದಾ ಚಾಲ್ತಿಯಲ್ಲಿರುವ ತರಕಾರಿ. ಅಷ್ಟೇ ಅಲ್ಲ, ಬಹುತೇಕರು ಇಷ್ಟಪಡುವ, ಬಹಳಷ್ಟು ಬಗೆಯ ಅಡುಗೆಗಳನ್ನು ತಯಾರಿಸಬಹುದಾದ ತರಕಾರಿಯೂ ಹೌದು. ಮಕ್ಕಳಿಂದ ಹಿರಿಯರವರೆಗೆ ಪ್ರೀತಿಸುವ ಫ್ರೆಂಚ್ ಫ್ರೈಸ್, ಚಿಪ್ಸ್‌ನಿಂದ ಹಿಡಿದು ಪಲ್ಯ, ಸಾಂಬಾರಿನವರೆಗೆ ಎಲ್ಲ ಬಗೆಯ ಅಡುಗೆಗಳಿಗೂ ಹೊಂದಿಕೊಳ್ಳುವ ಗುಣವೂ ಆಲೂಗಡ್ಡೆಗಿದೆ. ಇಂಥ ಆಲೂಗಡ್ಡೆಯ ಫ್ರೆಂಚ್ ಫ್ರೈಸ್ (French fries) ಮಾಡಲು ಹೊರಟು ಬಹುತೇಕರು ಕೈ ಸುಟ್ಟುಕೊಳ್ಳುವುದುಂಟು. ಅಂದರೆ ಅರ್ಥಾತ್ ರೆಸ್ಟೋರೆಂಟಿಗೆ ಹೋಗಿ ಫ್ರೇಂಚ್ ಫ್ರೈಸ್‌ಗೆ ಆರ್ಡರ್ ಮಾಡಿದರೆ ಸಿಗುವ ಫ್ರೈಸ್‌ಗೂ ನಾವು ಮನೆಯಲ್ಲಿ ಮಾಡುವ ಫ್ರೈಸ್‌ಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ನಿಮ್ಮ ಪುಟಾಣಿ ಮಕ್ಕಳೇ ತೀರ್ಪು ಕೊಟ್ಟು ನಮಗೆ ಮನೆಯ ಫ್ರೆಂಚ್ ಫ್ರೈಸ್ ಬೇಡವೇ ಬೇಡ ಎಂದು ಸತ್ಯಾಗ್ರಹ ನಡೆಸುತ್ತಾರೆ. ಹೊಟೇಲಿನ ಫ್ರೈಸ್‌ಗಿಂತ ಮನೆಯ ಫ್ರೈಸ್ ಆರೋಗ್ಯಕ್ಕೆ ಒಳ್ಳೆಯದು ಎಂಬ ಯೋಚನೆಯಲ್ಲಿ ನೀವು ಫ್ರೈಸ್ ಮಾಡಿದ್ದು ಹೌದಾದರೂ ರುಚಿಯಲ್ಲಿ ನಿಮ್ಮದು ಸೋಲುತ್ತದೆ. ರೆಸ್ಟೋರೆಂಟಿನ ಗರಿಗರಿಯಾದ ಫ್ರೈಸ್‌ನ ಹಾಗೆ ಮನೆಯಲ್ಲೂ ಗರಿಗರಿಯಾಗಿ ಫ್ರೆಂಚ್ ಫ್ರೈಸ್ ಮಾಡುವುದು ಹೇಗೆ ಎಂಬ ಹುಳ ನಿಮ್ಮ ತಲೆಯನ್ನು ಹೊಕ್ಕಿ ಕೂರುತ್ತದೆ.
ಇಲ್ಲಿ ಫ್ರೆಂಚ್ ಫ್ರೈಸ್ ಜೊತೆ ಜೋಳದ ಹಿಟ್ಟು ಸೇರಿಸಿ ಫ್ರೈ ಮಾಡಲು ಹೇಳುತ್ತಾರೆ ಎಂದು ಭಾವಿಸಬೇಡಿ. ಯಾವ ಬೇರೆ ಹಿಟ್ಟು ಸೇರಿಸದೇ, ಕೇವಲ ಆಲೂಗಡ್ಡೆ ಎಂಬ ಏಕಮಾತ್ರ ಪದಾರ್ಥವನ್ನಿಟ್ಟುಕೊಂಡೇ ನೀವು ಹೊರಗೆ ಸಿಗುವಂಥದ್ದೇ ಗರಿಗರಿ ಫ್ರೈಸ್ ಮಾಡಬಹುದು. ಅದೂ ಕೇವಲ ಹತ್ತೇ ನಿಮಿಷದಲ್ಲಿ ಎಂದರೆ ನಂಬುತ್ತೀರಾ. ಹೌದು. ಬಹಳ ಸರಳವಾದ ಕೆಲವು ತಂತ್ರಗಳಿಂದ ಹಾಗೂ ಮಾಡುವ ವಿಧಾನ ಬದಲಾವಣೆಯಿಂದಲೂ ಇದು ಸಾಧ್ಯವಿದೆ.
ಹಾಗಾದರೆ ಬನ್ನಿ ಗರಿಗರಿ ಫ್ರೆಂಚ್ ಫ್ರೈಸ್ ಮಾಡುವ ಮೊದಲು ಕೆಲವು ಟಿಪ್ಸ್‌ಗಳನ್ನು ಓದಿ.
1. ನಿಮ್ಮ ಫ್ರೆಂಚ್ ಫ್ರೈಸ್ ಗರಿಗರಿಯಾಗಿ ಬರುತ್ತಿಲ್ಲ ಎಂದಾದಲ್ಲಿ, ನೀವು ಅದನ್ನು ಕತ್ತರಿಸುವಲ್ಲಿಯೂ ತಪ್ಪು ಮಾಡಿರಬಹುದು. ಹಾಗಾಗಿ ಸರಿಯಾಗಿ ಕತ್ತರಿಸುವುದೂ ಬಹಳ ಮುಖ್ಯ ಎಂಬುದನ್ನು ನೆನಪಿಡಿ ಹಾಗೂ ಸರಿಯಾಗಿ ಕತ್ತರಿಸಿ. ಕಾಲು ಇಂಚುಗಳಷ್ಟು ದಪ್ಪ ಇರುವಂತೆ ಕತ್ತರಿಸಿಕೊಂಡರೆ ಅತ್ಯುತ್ತಮ ಫ್ರೆಂಚ್ ಫ್ರೈಸ್ ಮಾಡಬಹುದು. ಇದನ್ನೇ ರೆಸ್ಟೋರೆಂಟ್‌ಗಳೂ ಪಾಲಿಸುತ್ತವೆ.
೨. ಆಲೂಗಡ್ಡೆ ಕತ್ತರಿಸಿದ ಮೇಲೆ ಕತ್ತರಿಸಿದ ಹಸಿ ಹೋಳುಗಳನ್ನು ನೀರಿನಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ಕುದಿಸಿ. ಈ ನೀರಿಗೆ ಕೊಂಚ ಉಪ್ಪು ಹಾಗೂ ವಿನೆಗರ್ ಕೂಡಾ ಸೇರಿಸಿ. ನೀರಿನಿಂದ ತೆಗೆದ ಮೇಳೆ ಟವಲ್‌ನಲ್ಲಿ ಮೆತ್ತಗೆ ಚೆನ್ನಾಗಿ ಒರೆಸಿ.
ಇದನ್ನೂ ಓದಿ: Food Tips: ಈ ಬೇಸಿಗೆಗೆ ಮಕ್ಕಳಿಗೆ ಆಲೂಗಡ್ಡೆ ಚಿಪ್ಸ್ ಮನೆಯಲ್ಲೇ ಮಾಡಿ!
3. ನೀರಿನಲ್ಲಿ ಕುದಿಸಿದ ಫ್ರೈಸನ್ನು ಒರೆಸಿದ ಮೇಲೆ 50 ಸೆಕೆಂಡುಗಳ ಕಾಲ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ. ಅದನ್ನು ಹೊರತೆಗೆದು, ಟಿಶ್ಯೂನಲ್ಲಿ ಕವರ್ ಮಾಡಿಡಿ. ಫ್ರೈಸ್‌ಗೆ ಮೆತ್ತಿದ ಎಣ್ಣೆಯನ್ನು ಟಿಶ್ಯೂ ಹೀರಿಕೊಳ್ಳಲಿ.
4. ಸೆಮಿ ಫ್ರೈ ಮಾಡಿದ ಫ್ರೈಸನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರೀಜ್ ಮಾಡಿ.
5. ಡೀಪ್ ಫ್ರೀಜ್ ಮಾಡಿದ ಮೇಲೆ ಈ ಅರೆ ಬೆಂದ ಈ ಫ್ರೈಸ್‌ಗಳನ್ನು ಹಾಗೆಯೇ ತೆಗೆದು ಎಣ್ಣೆಗೆ ಹಾಕಿ ಮತ್ತೆ ಫ್ರೈ ಮಾಡಿ. ಫ್ರೀಜ್ ಮಾಡಿದ ಫ್ರೈಸನ್ನು ಮತ್ತೆ ಸಾಮಾನ್ಯ ಉಷ್ಣತೆಗೆ ಬರಲಿ ಎಂದು ಹೊರಗೆ ತೆಗೆದಿಡಬೇಡಿ. ಫ್ರಿಜ್‌ನಿಂದ ತೆಗೆದ ಕೂಡಲೇ ಎಣ್ಣೆಗೆ ಹಾಕಿ. ಹೊಂಬಣ್ಣಕ್ಕೆ ತಿರುಗುವಾಗ ಹೊರತೆಗೆಯಿರಿ. ಕ್ರಿಸ್ಪೀ ಫ್ರೆಂಚ್ ಫ್ರೈಸ್ ಸಿದ್ಧ.
ಇದನ್ನೂ ಓದಿ: Food Tips: ನೆಲ್ಲಿಕಾಯಿ ಎಂಬ ವಿಟಮಿನ್ ಸಿಯನ್ನು ತಿಂಗಳುಗಟ್ಟಲೆ ಶೇಖರಿಸಿಡುವುದು ಹೇಗೆ!?