Site icon Vistara News

Food Tips: ಡಯಟ್‌ನಲ್ಲಿದ್ದೂ ಪಾನಿಪುರಿ ತಿನ್ನಬೇಕೇ? ಡಯಟ್‌ ಫ್ರೆಂಡ್ಲೀ ಪಾನಿಪುರಿಗೆ ಕೆಲವು ಸಲಹೆಗಳು!

paani puri

ತೂಕ ಇಳಿಸಿಕೊಳ್ಳುವುದೇನೂ ಸರಳವಲ್ಲ. ಹಾಗಂತ ಶಿಸ್ತಿನ ಜೀವನಶೈಲಿ, ಆಹಾರ ಪದ್ಧತಿ ಹಾಗೂ ವ್ಯಾಯಾಮದಿಂದ ಆರೋಗ್ಯಕರ ಶೈಲಿಯಲ್ಲಿಯೇ ತೂಕ ಇಳಿಸಿಕೊಳ್ಳಲು ಸಾದ್ಯವಿದೆ. ಆದರೆ ತೂಕ ಇಳಿಸಿಕೊಳ್ಳುವ, ಜಂಕ್‌ನಿಂದ ದೂರವಿರುವ ನಿಶ್ಚಯ ಮಾಡಿಕೊಂಡಮೇಳೆ ಬಹಳ ಜನರನ್ನು ಸೆಳೆಯುವುದು ಸ್ಟ್ರೀಟ್‌ ಫುಡ್‌. ಬೀದಿ ಬದಿಯ ಚಾಟ್‌ಗಳಿಂದ ದೂರವಿರಬೇಕೆಂದರೆ ಅದಕ್ಕೆ ಮನೋಬಲವೂ ಬೇಕು. ಯಾಕೆಂದರೆ ಬೀದಿಬದಿಯ ಚಾಟ್‌ಗಳು, ತಿಂಡಿಗಳು ಇಂದು ಬಹುತೇಕರ ಆಹಾರಸಂಸ್ಕೃತಿಯಲ್ಲಿ ಸೇರಿಹೋಗಿದೆ. ವಾರಕ್ಕೊಮ್ಮೆಯಾದರೂ ಗೋಲ್‌ಗಪ್ಪಾ, ಪಾನಿಪುರಿ, ಮಸಾಲೆಪುರಿಗಳಿಲ್ಲದೆ ಜೀವನ ಹೇಗೆ ಎಂಬ ಯೋಚನೆ ಬಹುತೇಕರಿಗೆ ಬಂದೀತು. ಹಾಗಾದರೆ, ಬಾಯಿಚಪಲಕ್ಕಾದರೂ ಪಾನಿಪುರಿ ತಿನ್ನಬೇಕು ಅನಿಸಿದವರು ಮನೆಯಲ್ಲಿ ಪಾನಿಪುರಿ ಮಾಡಲು ಹೊರಟವರು, ಆದಷ್ಟೂ ಆರೋಗ್ಯಕರ ರೀತಿಯಲ್ಲಿ, ತೂಕ ಇಳಿಸಿಕೊಳ್ಳುವ ಡಯಟ್‌ಗೆ ಸರಿಹೊಂದುವಂತೆ ಹೇಗೆ ಮಾಡಿ ತಿನ್ನಬಹುದೆಂಬ ಸರಳ ಸೂತ್ರಗಳು ಇಲ್ಲಿವೆ. ಈ ತಂತ್ರಗಳನ್ನು ಅನುಸರಿಸಿದರೆ, ನಿಶ್ಚಿಂತೆಯಿಂದ ಆರೋಗ್ಯಕರ ಪಾನಿಪುರಿ ತೂಕ ಹೆಚ್ಚಿಸಿಕೊಳ್ಳುವ ಭಯವಿಲ್ಲದೆ ನಿಮ್ಮ ಹೊಟ್ಟೆ ಸೇರುತ್ತದೆ.

೧. ಪುರಿ ಮನೆಯಲ್ಲೇ ಮಾಡಿ: ರಸ್ತೆಬದಿಯಲ್ಲಿ ದೊರೆಯುವ ಪಾನಿಪುರಿ ರುಚಿಯಾಗಿರುತ್ತದೆ ನಿಜ. ಅದನ್ನೇ ವಾರದಲ್ಲಿ ಎರಡು ಬಾರಿ ಹೊಟ್ಟೆ ತುಂಬಿಸಿದರೆ ಏನಾಗಬಹುದು ಹೇಳಿ! ರಸ್ತೆಬದಿಯ ಪುರಿ ಮಾಡಲು ಯಾವ ಎಣ್ಣೆಯನ್ನು ಬಳಸಿರಬಹುದು ಎಂಬ ಯೋಚನೆ ಬಂದರಂತೂ ಕಥೆ ಮುಗಿಯಿತು. ಅದಕ್ಕಾಗಿಯೇ ಪುರಿಯನ್ನು ಯಾಕೆ ನೀವು ಮನೆಯಲ್ಲೇ ಮಾಡಬಾರದು? ಮನೆಯಲ್ಲಿಯೇ ಎಣ್ಣೆಹಾಕದೆ ಏರ್‌ ಫ್ರೈಯರ್‌ನಲ್ಲೋ ಅಥವಾ ಒಳ್ಳೆ ಎಣ್ಣೆಯಲ್ಲೋ ನೀವೇ ಮಾಡಿದರೆ ಹೊರಗೆ ತಿನ್ನುವ ಪುರಿಗಳಿಗಿಂತ ಒಳ್ಳೆಯದೇ!

೨. ಆಲೂಗಡ್ಡೆ ಕಡಿಮೆ ಹಾಕಿ: ಪಾನಿಪುರಿಯ ಒಳಗೆ ಹಾಕುವ ಬೇಯಿಸಿದ ಆಲೂಗಡ್ಡೆಯ ಮಸಾಲೆ ಮಾಡುವಾಗ ಅದರ ಪ್ರಮಾಣವನ್ನು ಕಡಿಮೆ ಮಾಡಿ. ಅಥವಾ ಆಲೂಗಡ್ಡೆಯ ಬದಲಾಗಿ ಬೇಯಿಸಿದ ಚೆನ್ನಾ ಹಾಕಬಹುದು. ಅದಕ್ಕೆ ಮೊಳಕೆ ಕಾಳುಗಳನ್ನು ಸೇರಿಸಬಹುದು.

ಇದನ್ನೂ ಓದಿ: Food Tips: ಸೀದು ಕೆಂಪಾದ ಆಹಾರ ಸೇವನೆಗೆ ಯೋಗ್ಯವೇ?

೩. ಮಸಾಲೆಗಳನ್ನು ಧಾರಾಳವಾಗಿ ಬಳಸಿ: ಮನೆಯಲ್ಲೇ ಮಾಡುವ ಪಾನಿಪುರಿಯ ಪಾನಿಗೆ ಹಾಗೂ ಸಿಹಿ ಚಟ್ನಿಗೆ ಧಾರಾಳವಾಗಿ ಮಸಾಲೆಗಳನ್ನು ಹಾಕಿ. ಹುಣಸೆಹಣ್ಣು, ಖರ್ಜೂರ ಸೇರಿಸಿ ಮಾಡಿದ ಸಿಹಿ ಚಟ್ನಿ, ಚೆನ್ನಾಗಿ ಪುದಿನ ಕೊತ್ತಂಬರಿ ಸೊಪ್ಪು ಹಾಕಿದ ಹಸಿರು ಚಟ್ನಿ, ಇಂಗು, ಸೋಂಪು, ಜೀರಿಗೆ, ಸೈಂದವ ಲವಣ, ಜಲ್ಜೀರಾ ಇತ್ಯಾದಿಗಳನ್ನು ಹಾಕಿ ಮಾಡಿದ ಪಾನಿ ಎಲ್ಲವೂ ಉತ್ತಮ ಗುಣಮಟ್ಟದ್ದು, ನಿಮ್ಮದೇ ಮನೆಯದ್ದು ಎಂಬ ಭರವಸೆ, ನೆಮ್ಮದಿಯೂ ನಿಮ್ಮಲ್ಲಿರುತ್ತದೆ. ಈ ಎಲ್ಲ ಮಸಾಲೆಗಳು ದೇಹಕ್ಕೆ ಒಳ್ಳೆಯದೇ.

೪. ಕಡಿಮೆ ತಿನ್ನಿ: ಪಾನಿಪುರಿಯ ಒಂದು ವಿಶೇಷತೆಯೆಂದರೆ ಅದು ಹೆಚ್ಚು ಕ್ಯಾಲರಿಯ ತಿನಿಸಲ್ಲ. ಆದನ್ನು ಆರೋಗ್ಯಕರವಾದ ಶೈಲಿಯಲ್ಲಿ ಮಾಡಿದರೆ ಹೆಚ್ಚು ತಲೆಕೆಡಿಸಿಕೊಳ್ಳದೆ ತಿನ್ನಬಹುದು. ಬರ್ಗರ್‌, ಪಿಜ್ಜಾ, ಮಂಚೂರಿಯನ್‌, ಚೀಸ್‌ ಕಾರ್ನ್‌ ರೋಲ್‌ ಮತ್ತಿತರ ಜಂಕ್‌ಗಳಿಗೆ ಹೋಲಿಸಿದರೆ, ಇದು ಅಷ್ಟು ಕ್ಯಾಲರಿಯನ್ನು ಹೊಂದಿಲ್ಲ ನಿಜ. ಆದರೆ, ತಿನ್ನುವಾಗಿ ರುಚಿಯೆಂದು ಹೊಟ್ಟೆಯ ಮೇಲಿನ ಗಮನ ಬೇರೆಡೆಗೆ ಹೋಗದಿರಲಿ. ಹೊಟ್ಟೆಯ, ನಾಲಿಗೆಯ ಮಾತು ಕೇಳದೆ ನೀವು ಅಂದುಕೊಂಡದ್ದರ ಬಗ್ಗೆ ಯೋಚಿಸಿ.

ಇದನ್ನೂ ಓದಿ: Motivation: ಬಿ ಟೆಕ್‌ ಪಾನಿಪುರಿವಾಲಿ: ದೆಹಲಿಯ ರಸ್ತೆಗಳಲ್ಲಿ 21ರ ಹುಡುಗಿಯ ಯಶಸ್ವಿ ಉದ್ಯಮ!

Exit mobile version