ಯಾವತ್ತಾದರೂ ಇವತ್ತೊಂದು ಒಳ್ಳೆಯ ಅಡುಗೆ ಮಾಡಬೇಕು ಎಂಬ ಉಮೇದು ಬಂದು ಅಡುಗೆಗೆ ಹೊರಟ ದಿನವೇ ಅಡುಗೆಯಲ್ಲಿ ಏನಾದರೂ ಎಡವಟ್ಟಾದ ಅನುಭವ ನಿಮಗಿದೆಯೇ? ಎಲ್ಲ ಅಂದುಕೊಂಡ ಹಾಗೆಯೇ ಆಯ್ತು, ಇನ್ನೇನು ಸ್ವಲ್ಪ ಅಚ್ಚಕಾರದ ಪುಡಿ ಹಾಕಿದರೆ ಮುಗೀತು ಎಂದು ಒಂದೆರಡು ಚಮಚ ಹಾಕುವ ಬದಲು ಡಬಲ್ ಹಾಕಿ ಅಯ್ಯೋ ಎಂಥಾ ತಪ್ಪು ಮಾಡಿಬಿಟ್ಟೆ ಎಂಬ ಅನುಭವ ನಿಮಗೇನಾದರೂ ಆಗಿದೆಯೇ? ಅಡುಗೆ ರುಚಿಯಾಗಿ ಆಯ್ತು, ಆದರೆ, ಖಾರ ಆಗ್ಬಿಟ್ಟಿದ್ಯಲ್ಲಾ ಎಂದು ತಲೆಬಿಸಿಯಾದರೆ ಮಾಡಿದ ಅಡುಗೆಯನ್ನು ಎಸೆಯಲು ಯಾರಿಗೆ ತಾನೇ ಮನಸು ಬಂದೀತು. ಹಾಗಾದರೆ, ಅತಿಯಾಗಿ ಖಾರವಾದ ಅಡುಗೆಯನ್ನು ಸರಿಪಡಿಸುವುದು ಹೇಗೆ ಎಂಬ ಯೋಚನೆ ನಿಮಗಿದ್ದರೆ, ಅದಕ್ಕೆ ಕೆಲವು ಸುಲಭ ಪರಿಹಾರೋಪಾಯಗಳಿವೆ.
1. ನೀರು ಹಾಕಿ: ಖಾರದ ಅಡುಗೆಯಲ್ಲಿ ಖಾರ ಕಡಿಮೆ ಮಾಡುವ ಸುಲಭ ವಿಧಾನ ಎಂದರೆ ನೀರು ಹಾಕುವುದು. ಬಹುತೇಕ ಎಲ್ಲರೂ ಮಾಡುವ ಸರಳ ಕ್ರಮವಿದು. ಇದು ಒಂದು ಮಟ್ಟಿಗೆ ಸಹಾಯ ಮಾಡಬಹುದು. ಆದರೆ, ಅಂದುಕೊಂಡ ಹಾಗೆ ಪೂರ್ತಿ ಸರಿಯಾಗದು. ಆದರೆ, ಹೊಟ್ಟೆಯ ಉರಿಯನ್ನು ಕಡಿಮೆ ಮಾಡಬಹುದು. ಕೊಂಚ ಮಟ್ಟಿನ ಪ್ರಯೋಜನ ಇದರಿಂದ ಸಿಗಬಹುದು.
2. ಸಕ್ಕರೆ ಸೇರಿಸಿ: ಸಕ್ಕರೆ ಕೆಲವೊಮ್ಮೆ ಮ್ಯಾಜಿಕ್ಕನ್ನೇ ಮಾಡುತ್ತದೆ. ಹೆಚ್ಚು ಖಾರವಾಗಿದ್ದರೆ ಸಕ್ಕರೆ ಅಥವಾ ಇನ್ನಾವುದೇ ಸಿಹಿ ಪದಾರ್ಥವನ್ನು ಸೇರಿಸಿದರೆ ಖಾರದ ತೀವ್ರತೆ ಕಡಿಮೆಯಾಗಬಹುದು. ಆದರೆ, ಅಡುಗೆ ಕೊಂಚ ಸಿಹಿ ರುಚಿಯತ್ತ ವಾಲಬಹುದು. ಸಿಹಿ ಇಷ್ಟವಾಗದ ಮಂದಿಗೆ ಇದು ಇಷ್ಟವಾಗಲಿಕ್ಕಿಲ್ಲ. ಅಂಥವರು ಕೊಂಚ ಟೊಮೇಟೋ ಕೆಚಪ್ ಅನ್ನು ಕೂಡಾ ಸೇರಿಸಿ ನೋಡಬಹುದು.
3. ಹಿಟ್ಟಿನುಂಡೆ ಸೇರಿಸಿ: ಚಪಾತಿ ಮಾಡಲೆಂದು ಹಿಟ್ಟು ಕಲಸಿ ಉಂಡೆಗಳನ್ನಾಗಿ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದೀರೆಂದಾದಲ್ಲಿ, ನಾಲ್ಕೈದು ಸಣ್ಣ ಸಣ್ಣ ಉಂಡೆಗಳನ್ನು ಅದಕ್ಕೆ ಹಾಕಿ. ಖಾರವಾದ ಅಡುಗೆಯಲ್ಲಿ 20ರಿಂದ 30 ನಿಮಿಷಗಳ ಕಾಲ ಇದ್ದರೆ, ಉಂಡೆಗಳು ಅಡುಗೆಯಲ್ಲಿರುವ ಖಾರವನ್ನು ಹೀರಿಕೊಂಡು, ಅಡುಗೆ ಕೊಂಚ ಸರಿಯಾಗುತ್ತದೆ. ನಂತರ ಉಂಡೆಗಳನ್ನು ಅದರಿಂದ ತೆಗೆಯಿರಿ. ನಂತರ ಬೇಕಿದ್ದರೆ ನೀರು ಸೇರಿಸಬಹುದು.
ಇದನ್ನೂ ಓದಿ: Food Tips: ಸೀದು ಕೆಂಪಾದ ಆಹಾರ ಸೇವನೆಗೆ ಯೋಗ್ಯವೇ?
4. ಹಾಲು ಅಥವಾ ಹಾಲಿನ ಉತ್ಪನ್ನಗಳು, ತೆಂಗಿನ ಹಾಲು ಸೇರಿಸಿ: ಅಡುಗೆಯಲ್ಲಿ ಖಾರ ಹೆಚ್ಚಾದಾಗ ಖಾರ ತಗ್ಗಿಸಲು ಸಹಾಯ ಮಾಡುವ ಇನ್ನೊಂದು ಪ್ರಮುಖ ಆದರೆ ಅಷ್ಟೇ ಸರಳ ಉಪಾಯ ಎಂದರೆ ಹಾಲು. ಹಾಲು ಅಥವಾ ಹಾಲಿನ ಉತ್ಪನ್ನಗಳಾದ ಮೊಸರು, ಕ್ರೀಂ, ಚೀಸ್ ಟೋಫು ಇತ್ಯಾದಿಗಳನ್ನು ಸೇರಿಸಬಹುದು. ತೆಂಗಿನಕಾಯಿಯ ಹಾಲು ಕೂಡಾ ಸೇರಿಸುವುದರಿಂದ ಖಾರ ಕಡಿಮೆ ಮಾಡಬಹುದು.
5. ಆಲೂಗಡ್ಡೆ ಹಾಕಿ: ಅತ್ಯಂತ ಸುಲಭ ಹಾಗೂ ಪರಿಣಾಮಕಾರಿ ಉಪಾಯ ಎಂದರೆ ಆಲೂಗಡ್ಡೆ ಹಾಕುವುದು. ನಾಲ್ಕೈದು ಆಲೂಗಡ್ಡೆ ತುಂಡುಗಳನ್ನು ಹಾಕಬಹುದು. ಆಲೂಗಡ್ಡೆಯ ತುಂಡುಗಳ ಮೇಲೆ ನಾಲ್ಕೈದು ತೂತುಗಳನ್ನು ಮಾಡಿ ಅಡುಗೆಗೆ ಹಾಕಿ. ಅದು ಅಡುಗೆಯ ಜೊತೆಗೆ ಚೆನ್ನಾಗಿ ಬೇಯಲಿ. ಆಲೂಗಡ್ಡೆ ಖಾರದ ಅಡುಗೆಯಲ್ಲಿರುವ ಖಾರವನ್ನು ಹೀರಿಕೊಳ್ಳುತ್ತದೆ. ಬೆಂದ ಮೇಲೆ ಬೇಡವಾಗಿದ್ದರೆ ಆಲೂಗಡ್ಡೆಯನ್ನು ಹೊರತೆಗೆಯಿರಿ.
6. ನಿಂಬೆಹಣ್ಣು ಹಿಂಡಿ: ಅಸಿಡಿಕ್ ವಸ್ತುಗಳು ಖಾರದ ಅಡುಗೆಯ ಜೊತೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಖಾರ ಹೆಚ್ಚಾದ ಅಡುಗೆಗೆ ಕೊಂಚ ನಿಂಬೆಹಣ್ಣಿನ ರಸ ಹಿಂಡುವುದರಿಂದ, ಅಥವಾ ಸ್ವಲ್ಪ ವಿನೆಗರ್ ಹಾಕುವುದರಿಂದ ಖಾರವನ್ನು ತಗ್ಗಿಸಬಹುದು.
ಇದನ್ನೂ ಓದಿ: Food Tips: ಬೇಸಿಗೆಯಲ್ಲಿ ನೀವು ಟ್ರೈ ಮಾಡಲೇಬೇಕಾದ ಐಸ್‌ಕ್ರೀಂ ಜೋಡಿಗಳಿವು!