ಬೇಸಿಗೆ ಬಂದಾಕ್ಷಣ ಎಲ್ಲೆಲ್ಲೂ ಕಲ್ಲಂಗಡಿ ರಾಶಿ. ಬೇಸಿಗೆಯ ಝಳದಿಂದ ಮುಕ್ತಿ ಪಡೆಯಲು ಕಲ್ಲಂಗಡಿ ಹಣ್ಣಿನಷ್ಟು ಒಳ್ಳೆಯ ಅಮೃತ ಇನ್ನೊಂದು ಸಿಗಲಿಕ್ಕಿಲ್ಲ. ಸಿಹಿಯಾದ, ನೋಡಿದರೆ ಪ್ರೀತಿಯುಕ್ಕುವ ಹಾಗೆ ಕತ್ತರಿಸಿದರೆ ಕೆಂಪನೆಯ ಕಲ್ಲಂಗಡಿ ಹಣ್ಣು ಕಣ್ಣಿಗೂ ದೇಹಕ್ಕೂ ತಂಪು ತಂಪು. ಬಾಯಲ್ಲಿಡುತ್ತಿದ್ದಂತೆ ನೀರಾಗುವ ಇದರಲ್ಲಿ ಬೇಸಗೆಗೆ ದೇಹಕ್ಕೆ ಬೇಕಾಗಿರುವ ಆಂಟಿ ಆಕ್ಸಿಡೆಂಟ್‌ಗಳು, ಖನಿಜಾಂಶಗಳು, ವಿಟಮಿನ್‌ಗಳು ಎಲ್ಲವೂ ಇವೆ. ಹಾಗಾಗಿಯೇ ಇದು ಬೇಸಿಗೆಯಲ್ಲಿ ತಿನ್ನಲೇಬೇಖಾದ ಬೆಸ್ಟ್ ಹಣ್ಣುಗಳ ಪೈಕಿ ಮೊದಲನೇ ಸ್ಥಾನದಲ್ಲಿಯೇ ಇರುತ್ತದೆ. ಬಗೆಬಗೆಯ ಜ್ಯೂಸ್‌ಗಳು, ಸಲಾಡ್‌ಗಳು ಸೇರಿದಂತೆ ಹಾಗೆಯೇ ತಿನ್ನಲೂ ಕೂಡಾ ಕಲ್ಲಂಗಡಿ ಪರ್ಫೆಕ್ಟ್. ಇಂತಹ ರಿಫ್ರೆಶಿಂಗ್ ಹಣ್ಣು ಕೂಡಾ ಕೆಲವೊಮ್ಮೆ ನಮ್ಮನ್ನು ನಿರಾಸೆಗೊಳಿಸುತ್ತದೆ. ಮಾರುಕಟ್ಟೆಯಲ್ಲಿ ರಾಶಿ ರಾಶೀ ಕಂಡಿತು ಎಂದು ಕಚೇರಿಯಿಂದ ಮನೆಗೆ ಮರಳುವಾಗ, ದೊಡ್ಡ ಕಲ್ಲಂಗಡಿ ಹೊತ್ತುಕೊಂಡು ಬಂದು ಕತ್ತರಿಸಿ ನೋಡಿದರೆ, ಒಳಗೆ ಕಪ್ಪಾಗಬೇಕಾಗಿದ್ದ ಬೀಜವೂ ಕಂದು ಬಣ್ಣಕ್ಕೋ, ಅಥವಾ ಇನ್ನೂ ಬೆಳ್ಳಗೇ ಇದ್ದು, ʻನಾನಿನ್ನೂ ಹಣ್ಣೇ ಆಗಿರಲಿಲ್ಲ, ನನ್ನನ್ನು ಒತ್ತಾಯಿಸಿ ಹಣ್ಣು ಮಾಡಿದ್ದಾರೆʼ ಎಂದು ಅಳತೊಡಗಿದರೆ ಕತ್ತರಿಸಿದ ನಮಗೆ ಆತ್ಮತೃಪ್ತಿ ಸಿಗಲಿಕ್ಕಿಲ್ಲ. ನೋಡಲಷ್ಟೇ ದೊಡ್ಡದಾಗಿದ್ದು ಒಳಗೆ ಇನ್ನೂ ಸರಿಯಾಗಿ ಕೆಂಪಾಗದೆಯೋ ಅಥವಾ ಕೆಂಪು ಬಣ್ಣವಿದ್ದೂ ಸಪ್ಪೆಯೇ ಆಗಿದ್ದರೆ, ಕಡಿಮೆ ಬೆಲೆಗೆ ದೊಡ್ಡ ಹಣ್ಣು ಸಿಕ್ಕಿತು ಎಂದು ಕಲ್ಲಂಗಡಿ ತಂದ ನಮಗೆ ನಿರಾಸೆ ಕವಿಯುತ್ತದೆ. ಹಾಗಿದ್ದರೆ, ಕಲ್ಲಂಗಡಿಯನ್ನು ಆಯ್ಕೆ ಮಾಡುವುದೂ ಒಂದು ಕಲೆ ಎಂದರೆ ನಂಬುತ್ತೀರಾ?
ಹೌದು. ಕಲ್ಲಂಗಡಿಯನ್ನು ಆಯ್ಕೆ ಮಾಡಲು ಅನುಭವ ಬೇಕು. ಸರಿಯಾಗಿ ಹಣ್ಣಾದ, ಸಿಹಿಯಾಗಿರಬಹುದು ಎಂದು ನೋಡಿದ ಕೂಡಲೇ ಅಂದಾಜಾಗಬೇಕು ಎಂದಾದರೆ ನಾವು ಕಲ್ಲಂಗಡಿ ಆಯ್ಕೆಯಲ್ಲಿ ಕೊಂಚ ಅನುಭವ ಹೊಂದಬೇಕು. ಹಾಗಾದರೆ ಬನ್ನಿ, ಸರಿಯಾಗಿ ಹಣ್ಣಾದ, ರುಚಿಯಾದ ಕಲ್ಲಂಗಡಿಯ ಆಯ್ಕೆ ಹೇಗೆ ನೋಡೋಣ.
1. ತೂಕ ನೋಡಿ. ಮೂರ್ನಾಲ್ಕು ಕಲ್ಲಂಗಡಿ ಹಣ್ಣುಗಳನ್ನು ಎತ್ತಿ ನೋಡಿ ಅದರ ತೂಕವನ್ನು ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕಿ. ಒಂದಕ್ಕೊಂದು ಹೋಲಿಸಿ. ಒಂದೇ ಗಾತ್ರದಲ್ಲಿದ್ದರೂ ಕೆಲವೊಮ್ಮೆ ತೂಕದಲ್ಲಿ ವ್ಯತ್ಯಾಸವಿರುತ್ತದೆ. ಹಾಗಾಗಿ ಗಾತ್ರ ನೋಡಿ ಖರೀದಿಸುವ ಮುನ್ನ, ತೂಕ ನೋಡಿಕೊಳ್ಳಿ. ಭಾರ ಎನಿಸುವ ಹಣ್ಣು ಮಾಗಿರುತ್ತದೆ.
2. ಹೆಬ್ಬೆರಳು ಹಾಗೂ ತೋರುಬೆರಳಿನ ಸಹಾಯದಿಂದ ಕಲ್ಲಂಗಡಿ ಹಣ್ಣನ್ನು ಮೆತ್ತಗೆ ಬಡಿದು ನೋಡಿ ಅದರಿಂದ ಬರುವ ಶಬ್ದ ಗಮನಿಸಿ. ಸರಿಯಾಗಿ ಹಣ್ಣಾದ ಕಲ್ಲಂಗಡಿಯಿಂದ ಯಾವಾಗಲೂ ಆಳವಾದ ಧ್ವನಿ ಬರುತ್ತದೆ.
ಇದನ್ನೂ ಓದಿ: Summer Nail Art : ಸಮ್ಮರ್ ಸೀಸನ್ನಲ್ಲಿ ಟ್ರೆಂಡಿಯಾದ ಕಲ್ಲಂಗಡಿ ಹಣ್ಣಿನ ನೇಲ್ಆರ್ಟ್
3. ಮೂಸಿ ನೋಡಿ. ಹಣ್ಣುಗಳ ಪಕ್ವತೆಯನ್ನು ಮೂಸಿ ನೋಡಿಯೇ ಹೇಳಬಹುದು. ಹಣ್ಣುಗಳ ನಿಜವಾದ ಪರಿಮಳವನ್ನು ಮೂಸಿ ನೋಡಿ ಲೆಕ್ಕಾಚಾರ ಹಾಕುವ ಕಲೆಯನ್ನು ಕರಗತ ಮಾಡಿ. ಹಣ್ಣಾದ ಕಲ್ಲಂಗಡಿಯಲ್ಲಿ ಹಣ್ಣಿನ ಪರಿಮಳ ಮೆಲುವಾಗಿ ನಿಮ್ಮ ಮೂಗಿಗೆ ಬಡಿಯುತ್ತದೆ.
4. ಯಾವುದೇ ಹಣ್ಣಾಗಲಿ, ಅದು ಮಾಗಿದೆಯೋ ಇಲ್ಲವೋ ಎಂಬುದನ್ನು ನೋಡಲು ಅದರ ಹೊರಮೈ ನೋಡಿದರೆ ಸಾಕು. ಹೊರಮೈಯನ್ನು ಮೆದುವಾಗಿ ಒತ್ತಿ ನೋಡಿ. ಮೇಲ್ಮೈನ ಚರ್ಮದ ಗೀರುಗಳು, ಒರಟುತನ ಹಣ್ಣಿನ ಪಕ್ವತೆಯನ್ನು ಹೇಳುತ್ತವೆ.
5. ಕಲ್ಲಂಗಡಿ ಹಣ್ಣಿನಲ್ಲಿ ಬಹಳ ವಿಧವಗಳಿದ್ದರೂ ಮುಖ್ಯವಾಗಿ ಕಾಣ ಸಿಗುವುದು ಎರಡು ಬಗೆಯವು. ಕಡು ಹಸಿರಿನ ಸಣ್ಣ ಗಾತ್ರದ ಕಲ್ಲಂಗಡಿ ಹಾಗೂ ಹಸಿರು ಹಾಗೂ ಬಿಳಿ ಗೀರುಗಳ ದೊಡ್ಡ ಗಾತ್ರದ ದೇಸೀ ತಳಿ. ದೇಸೀ ತಳಿಯಲ್ಲಿ ಹಸಿರಿನ ಮಧ್ಯೆ ಇರುವ ಗೀರು ಕೊಂಚ ಹಳದಿ ಬಣ್ಣಕ್ಕೆ ತಿರುಗಿದ್ದರೆ ಕಲ್ಲಂಗಡಿ ಹಣ್ಣು ಗದ್ದೆಯಲ್ಲಿಯೇ ಸರಿಯಾಗಿ ಮಾಗಿತ್ತು ಎಂದು ಅರ್ಥ. ಆ ಗೀರು ಬಿಳಿಯೇ ಆಗಿದ್ದರೆ, ಅಷ್ಟಾಗಿ ಹಣ್ಣಾಗಿಲ್ಲ ಎಂದು ಅರ್ಥ. ಹಣ್ಣನ್ನು ಖರೀದಿಸುವಾಗ ಇವೆಲ್ಲವನ್ನೂ ಗಮನಿಸುತ್ತಾ ಬಂದರೆ, ನಿಧಾನವಾಗಿ ಸರಿಯಾದ ಕಲ್ಲಂಗಡಿಯ ಆಯ್ಕೆಯ ಕಲೆ ತಾನೇ ತಾನಾಗಿ ಕರಗತವಾಗುತ್ತದೆ.
ಇದನ್ನೂ ಓದಿ: Watermelon: ಕಲ್ಲಂಗಡಿ ಹಣ್ಣನ್ನು ಅತಿಯಾಗಿ ಯಾಕೆ ತಿನ್ನಬಾರದು ಗೊತ್ತೇ?