ವಿಟಮಿನ್ ಸಿ (vitamin C) ಎಂದಾಗ ನೆನಪಾಗುವುದು ನೆಲ್ಲಿಕಾಯಿ. ತನ್ನಲ್ಲಿ ಅತ್ಯಂತ ಹೆಚ್ಚು ವಿಟಮಿನ್ ಸಿ ಹೊಂದಿರುವ ನೆಲ್ಲಿಕಾಯಿಯನ್ನು ಬಹುತೇಕರು ಅಡುಗೆಯಲ್ಲಿ ಹಾಗೂ ನಾನಾ ರೂಪಗಳಲ್ಲಿ ನಿತ್ಯೋಪಯೋಗಿಯಾಗುವಂತೆ ನೋಡಿಕೊಳ್ಳುತ್ತಾರೆ. ವಿಟಮಿನ್ ಸಿ ದೇಹಕ್ಕೆ ಸೇರಲಿ ಎಂದು ಹಲವು ಬಗೆಗಳಲ್ಲಿ ನೆಲ್ಲಿಕಾಯಿಯನ್ನು ಶೇಖರಿಸಿಡಲು ಯತ್ನಿಸುತ್ತಾರೆ. ಬಹಳಷ್ಟು ಸಾರಿ ಮಾರುಕಟ್ಟೆಯಿಂದ ಕಡಿಮೆಗೆ ಸಿಕ್ಕಿತು ಎಂದು ತಂದ ಕೆಜಿಗಟ್ಟಲೆ ಬೆಟ್ಟದ ನೆಲ್ಲಿಕಾಯಿಯನ್ನು ಏನು ಮಾಡಬೇಕೆಂದು ತಿಳಿಯದೆ ಹೆಚ್ಚು ಕಾಲ ಶೇಖರಿಸಿಡುವುದೂ ಗೊತ್ತಾಗದೆ ಹಾಳಾಗಿಬಿಡುತ್ತದೆ. ಉಪ್ಪಿನಕಾಯಿ ಹಾಕಲು, ಮೊರಬ್ಬ ಮಾಡಲು ಸಮಯವಿಲ್ಲವೆಂದೋ ತಳ್ಳಿದ ದಿನಗಳು ವಾರಗಳಾಗಿ ತಂದ ನೆಲ್ಲಿಕಾಯಿಯಲ್ಲಿ ಅರ್ಧದಷ್ಟು ಭಾಗ ಹಾಳಾಗಿ ಕಸದ ಬುಟ್ಟಿ ಸೇರುತ್ತವೆ. ಹಾಗಾದರೆ ನೆಲ್ಲಿಕಾಯಿಯನ್ನು ಆದಷ್ಟು ಕಾಲ ಕೆಡದಂತೆ ಶೇಖರಿಸಿಡುವುದು ಹೇಗೆ ಎಂಬುದನ್ನು ನೋಡೋಣ.
1. ಎಣ್ಣೆ ಹಚ್ಚಿಡಿ: ನೆಲ್ಲಿಕಾಯಿ ಕೆಡದಂತೆ ಇಡಲು ಅತ್ಯಂತ ಪುರಾತನ ಐಡಿಯಾ ಎಂದರೆ ಎಣ್ಣೆ ಹಚ್ಚಿಡುವುದು. ಹೌದು. ನೆಲ್ಲಿಕಾಯಿಯನ್ನು ಏನಾದರೂ ಮಾಡಲು ಸಮಯವಿಲ್ಲದಾದಾಗ ಹೆಚ್ಚು ಕಾಲ ಹಾಗೆಯೇ ಸಂರಕ್ಷಿಸಿಡಲು ಎಣ್ಣೆ ಹಚ್ಚಿ ಶೇಖರಿಸಿಡುವುದು ಅತ್ಯುತ್ತಮ ಉಪಾಯ. ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ಅದರ ನೀರು ಆರಿದ ಮೇಲೆ ಅದಕ್ಕೆ ಕೆಲವು ಬಿಂದುಗಳು ಸಾಸಿವೆ ಎಣ್ಣೆಯನ್ನು ಹಚ್ಚಿ ಅದನ್ನೊಂದು ಪ್ಲಾಸ್ಟಿಕ್ ಬ್ಯಾಗ್‌ನೊಳಗೆ ಹಾಕಿ ಫ್ರಿಡ್ಜ್‌ನಲ್ಲಿಡಿ.
2. ಗಾಳಿಯಾಡದ ಡಬ್ಬದಲ್ಲಿಡಿ: ಆಹಾರವನ್ನು ಹೆಚ್ಚೂ ಕಾಲ ಉಳಿಯುವಂತೆ ಕಾಪಾಡಲು ಇರುವ ಸರಳ ಉಪಾಯ ಎಂದರೆ ಗಳಿಯಾಡದ ಡಬ್ಬದಲ್ಲಿ ಹಾಕಿಡುವುದು. ನೆಲ್ಲಿಕಾಯಿಗೂ ಅದೇ ತಂತ್ರ ಅನುಸರಿಸಬಹುದು. ಧಾನ್ಯ, ಬೇಳೆಕಾಳುಗಳನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಹೇಗೆ ಕೆಡುವುದಿಲ್ಲವೋ ಹಾಗೆಯೇ ನೆಲ್ಲಿಕಾಯಿಯೂ ಸುಲಭವಾಗಿ ಹಾಳಾಗುವುದಿಲ್ಲ. ಡಬ್ಬದಲ್ಲಿ ಮುಚ್ಚಿಡುವ ಮೊದಲು ನೆಲ್ಲಿಕಾಯಿಯಮೇಲೆ ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ಒರೆಸಿರುವುದು ಬಹಳ ಮುಖ್ಯ.
3. ಬೇಯಿಸಿಡಿ: ನೆಲ್ಲಿಕಾಯಿಯನ್ನು ಬೇಯಿಸಿಡುವುದೂ ಕೂಡಾ ಅತ್ಯುತ್ತಮ ಉಪಾಯ. ತೊಳೆದು ನೀರು ಆರಿದ ನೆಲ್ಲಿಕಾಯಿಗಳನ್ನು ಕತ್ತರಿಸಿ ಬೀಜದಿಂದ ಬೇರ್ಪಡಿಸಿ. ನಂತರ ಈ ನೆಲ್ಲಿಕಾಯಿಯ ಹೋಳುಗಳನ್ನು ೧೦ರಿಂದ ೧೫ ನಿಮಿಷಗಳ ಕಾಲ ಕುದಿಸಿ. ಒಲೆಯಿಂದ ಕೆಳಗಿಳಿಸಿ ನೀರನ್ನು ತೆಗೆದು ಒಣಗಲು ಬಿಡಿ. ಇದಾದ ಮೇಲೆ ಈ ಬೇಯಿಸಿದ ನೆಲ್ಲಿಕಾಯಿ ತುಂಡುಗಳನ್ನು ಸೂರ್ಯನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿಡಿ. ಒಣಗಿದ ತುಂಡುಗಳನ್ನು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಡಿ.
4. ನೆಲ್ಲಿಕಾಯಿ ಪುಡಿ ಮಾಡಿಡಿ: ಪುಡಿ ಮಾಡುವುದು ನೆಲ್ಲಿಕಾಯಿ ಶೇಖರಿಸಿಡುವ ಅತ್ಯಂತ ಹಳೆಯ ಹಾಗೂ ಪರಿಣಾಮಕಾರಿ ತಂತ್ರ ಎಂದರೆ ನೆಲ್ಲಿಕಾಯಿಯನ್ನು ಪುಡಿ ಮಾಡಿಡುವುದು. ನೆಲ್ಲಿಕಾಯಿಯ ಬೀಜ ತೆಗೆದು ತುಂಡುಗಳಾಗಿ ಮಾಡಿ ೧೦-೧೫ ನಿಮಿಷ ಕುದಿಸಿ ಬಿಸಿಲಲ್ಲಿ ಒಣಗಿಸಿ, ಚೆನ್ನಾಗಿ ಒಣಗಿದ ಮೇಲೆ ಅದನ್ನು ಪುಡಿ ಮಾಡಿಡುವುದು. ಇದನ್ನು ಗಾಳಿಯಾಡದ ಡಬ್ಬದಲ್ ಹಾಕಿಟ್ಟರೆ ವರ್ಷಗಳ ಕಾಳ ಕೆಡದೆ ಉಳಿಯುತ್ತದೆ. ಈ ಪುಡಿಯನ್ನು ಬೇಕಾದಾಗ ನೀರಿಗೆ ಹಾಕಿ ಕುಡಿಯುವ ಮೂಲಕ ಅಥವಾ ತಂಬುಳಿ, ನೆಲ್ಲಿಕಾಯಿ ರೈಸ್ ಇತ್ಯಾದಿಗಳನ್ನು ಮಾಡುವ ಮೂಲಕ ಬಹಳ ಕಾಲ ಉಪಯೋಗಿಸುತಲೇ ಇರಬಹುದು.
5. ನೆಲ್ಲಿಕಾಯಿ ಕ್ಯಾಂಡಿ: ನೆಲ್ಲಿಕಾಯಿ ಕ್ಯಾಂಡಿ ಅಥವಾ ಮೊರಬ್ಬ ಕೂಡಾ ನೆಲ್ಲಿಕಾಯಿ ಶೇಖರಣೆಯ ಅತ್ಯಂತ ಪ್ರಸಿದ್ಧ ವಿಧಾನಗಳಲ್ಲಿ ಒಂದು. ರುಚಿಯೂ ಕೂಡಾ. ಮುಖ್ಯವಾಗಿ ಮಕ್ಕಳು ನೆಲ್ಲಿಕಾಯಿಯನ್ನು ತಿನ್ನುವಂತೆ ಮಾಡಬೇಕಿದ್ದರೆ ಇಂತಹ ಉಪಾಯಗಳೇ ಆಗಬೇಕು. ನೆಲ್ಲಿಕಾಯಿಯನ್ನು ತೊಳೆದು ಬೀಜ ತೆಗೆದು ನೀರಿನಲ್ಲಿ ೧೦-೧೫ ನಿಮಿಷ ಕುದಿಸಿ, ನಂತರ ಬಿಸಿಲಿನಲ್ಲಿ ಒಣಗಿಸುವಾಗ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ ಸೇರಿಸಬೇಕು. ತಿಂಗಳುಗಟ್ಟಲೆ ಕಾಲ ಇದು ಕೆಡದೆ ಹಾಗೆಯೇ ಉಳಿಯುತ್ತದೆ. ತಿನ್ನಲು ರುಚಿಕರ ಕೂಡಾ.
ಇದನ್ನೂ ಓದಿ: Health Tips: ಮದುವೆಗಳ ಕಾಲ; ಭರ್ಜರಿ ತಿಂದು ಬಂದ ಮೇಲೆ ಹೀಗೆ ಕಾಳಜಿ ವಹಿಸಿ!