Site icon Vistara News

Food Tips: ಈ ಬೇಸಿಗೆಗೆ ಮಕ್ಕಳಿಗೆ ಆಲೂಗಡ್ಡೆ ಚಿಪ್ಸ್‌ ಮನೆಯಲ್ಲೇ ಮಾಡಿ!

potato chips

ಬೇಸಿಗೆಯ ಬಿಸಿಲಿಗೆ ಹಪ್ಪಳ ಸಂಡಿಗೆಗಳನ್ನು ಮಾಡಿ ಕೂಡಿಡುವುದು ಹಿಂದಿನಿಂದಲೇ ನಮ್ಮ ಮನೆಗಳಲ್ಲಿ ನಡೆದುಕೊಂಡು ಬಂದ ಪದ್ಧತಿ. ಆದರೆ ಇಂದು ಎಲ್ಲವೂ ಮಾರುಕಟ್ಟೆಯಲ್ಲಿ ಸಿಗುವಂತಾದ ಮೇಲೆ, ಮನೆಗಳಲ್ಲಿ ಮಾಡಿಕೊಳ್ಳುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆದರೆ, ಮನೆಯಲ್ಲಿ ಈಗಷ್ಟೇ ಬೇಸಿಗೆ ರಜೆಯೆಂದು ದಿನವಿಡೀ ಓಡಾಡಿಕೊಂಡಿರುವ ಮಕ್ಕಳ ಅಗತ್ಯಗಳನ್ನು ಪೂರೈಸಲು ಅಂಗಡಿಯಲ್ಲಿ ಸಿಗುವ ಚಿಪ್ಸುಗಳೋ, ತಿನಿಸುಗಳೋ ತರುವುದರಿಂದ ಮಕ್ಕಳ ಆರೋಗ್ಯದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಅಷ್ಟೇ ಅಲ್ಲ, ಮಕ್ಕಳ ಅಗತ್ಯಗಳನ್ನು ಪೂರೈಸುವುದೂ ಕೂಡಾ ಈಗ ಹೆತ್ತವರಿಗೆ ಚಾಲೆಂಜ್‌. ಹೀಗಿದ್ದಾಗ ಮನೆಯಲ್ಲೇ ಸುಲಭವಾಗಿ ಈ ಬಗೆಯ ಆಲೂಗಡ್ಡೆ ಚಿಪ್ಸ್‌ಗಳನ್ನೂ (potato chips) ಮಾಡಿ ಕೊಡಬಹುದು. ಮಾಡಿಟ್ಟುಕೊಂಡು ಬೇಕಾದಾಗ ಫ್ರೆಶ್‌ ಆಗಿ ಹುರಿದು ಕೊಡಬಹುದು. ವಿಶೇಷವೆಂದರೆ, ಬಹಳ ಕಾಲ ಮನೆಯಲ್ಲಿ ಹಪ್ಪಳ ಸಂಡಿಗೆಗಳಂತೆ ಕಾಪಿಟ್ಟುಕೊಳ್ಳಬಹುದಾದ ಈ ಬಗೆಯ ಆಲೂಗಡ್ಡೆ ಚಿಪ್ಸ್‌ ರುಚಿಯೂ ಹೌದು. ಹಾಗಾದರೆ ಬನ್ನಿ, ಈ ಆಲೂಗಡ್ಡೆ ಚಿಪ್ಸ್‌ ಬಗೆಯನ್ನು ಮಾಡುವುದು (potato chips recipe) ಹೇಗೆಂದು ನೋಡೋಣ.

1. ಮೊದಲು ದೊಡ್ಡ ಗಾತ್ರದ ಆಲೂಗಡ್ಡೆಗಳನ್ನು ಚಿಪ್ಸ್‌ ಮಾಡಲು ಆಯ್ಕೆ ಮಾಡಿ. ಅವುಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ನೀರಿನಲ್ಲಿ ಹಾಕಿಡಿ. ಹೀಗೆ ಮಾಡುವುದರಿಂದ ಆಲೂಗಡ್ಡೆ ಕಪ್ಪಗಾಗುವುದಿಲ್ಲ. ನಂತರ ಅವುಗಳನ್ನು ವೃತ್ತಾಕಾರದಲ್ಲಿ ತೆಳುವಾಗಿ ಕತ್ತರಿಸಿ.

2. ಕತ್ತರಿಸಿದ ಹೋಳುಗಳನ್ನುಕೂಡಲೇ ನೀರಿನಲ್ಲಿ ಹಾಕಿಡಿ. ಇದು ಅತ್ಯಂತ ಮುಖ್ಯವಾದ ಘಟ್ಟ. ಇದರಿಂದ ಚಿಪ್ಸ್‌ ಮುಂದೆ ಕಪ್ಪಗಾಗುವುದು ತಡೆದಂತಾಗುತ್ತದೆ.

3. ಈಗ ಮಾಡಿಟ್ಟ ಹೋಳುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ಎರಡು ಮೂರು ಬಾರಿ ತೊಳೆದುಕೊಳ್ಳುವುದು ಬಹಳ ಮುಖ್ಯ. ಇದರಿಂದ ಆಲೂಗಡ್ಡೆಯಲ್ಲಿರುವ ಸ್ಟಾರ್ಚ್‌ ಅಂಶವು ಹೊರ ಹೋಗುತ್ತದೆ. ಚಿಪ್ಸ್‌ ತನ್ನ ಆಕಾರದಲ್ಲಿ ಹಾಗೆಯೇ ಇರಲು ಕೂಡಾ ಇದು ಸಹಾಯ ಮಾಡುತ್ತದೆ.

4. ಈಗ ಒಂದು ಪಾತ್ರೆಯಲ್ಲಿ ನೀರು ಕುದಿಸಿ. ಅದಕ್ಕೆ ಉಪ್ಪು ಹಾಕಿ. ನೀರು ಕುಯದು ಶುರುವಾದಾಗ ಅದಕ್ಕೆ ಈ ತೊಳೆದಿಟ್ಟ ಆಲೂಗಡ್ಡೆ ಹೋಳುಗಳನ್ನು ಹಾಕಿ, ಮುಚ್ಚಳ ಮುಚ್ಚಿ. ನೀವು ಆಲೂಗಡ್ಡೆ ನೀರಿಗೆ ಹಾಕುವಾಗ ನೀರು ಸರಿಯಾಗಿ ಕುದಿದಿರಬೇಕು. ಸುಮಾರು ಐದರಿಂದ ಏಳು ನಿಮಿಷಗಳ ಕಾಲ ಹಾಗೆಯೇ ಕುದಿಯಲು ಬಿಡಿ. ಅದಕ್ಕಿಂತ ಹೆಚ್ಚು ಹೊತ್ತು ಬೇಡ.

ಇದನ್ನೂ ಓದಿ: Summer Foods: ಬೇಸಿಗೆಯಲ್ಲಿ ದೇಹಕ್ಕೆ ಬೇಕೇಬೇಕು ಈ ಕೂಲಿಂಗ್‌ ಮಸಾಲೆ ಪದಾರ್ಥಗಳು!

5. ಹೀಗೆ ಕುದಿಯುವಾಗ ಆಗಾಗ ಸೌಟಿನಲ್ಲಿ ಹೋಳುಗಳನ್ನು ಮೇಲೆ ಕೆಳಗೆ ಮಾಡಿ. ಎಲ್ಲ ಹೋಳುಗಳೂ ಏಕಪ್ರಮಾಣದಲ್ಲಿ ಕುದಿಯಲಿ. ನೀರಿನಲ್ಲಿ ನೊರೆ ಬರಲು ಶುರುವಾದೆ ಹೋಳುಗಳು ಬೆಂದಿವೆ ಎಂದರ್ಥ.

6. ಹೋಳುಗಳು ಮುಟ್ಟುವಾಗ ತುಂಡಾಗುವಂತಿರಬಾರದು. ಸ್ವಲ್ಪ ಬೆಂಡಾಗುವಂತಿದ್ದರೆ ಬೆಂದಿದೆ ಎಂದರ್ಥ. ಅತಿಆಗಿ ಬೇಯಿಸುವುದೂ ಬೇಡ.

7. ಈಗ ಹೋಳುಗಳನ್ನು ನೀರಿನಿಂದ ಪ್ರತ್ಯೇಕಿಸಿ, ಬಟ್ಟೆಯಲ್ಲಿ ಚೆನ್ನಾಗಿ ಒರೆಸಿ ಸೂರ್ಯನ ಬಿಸಿಲಿನಲ್ಲಿ ೨-೩ ದಿನ ಒಣಗಿಸಿ. ಚೆನ್ನಗಿ ಬಿಸಿಲಿರುವ ದಿನಗಳಲ್ಲಿ ಇದನ್ನು ಮಾಡುವುದು ಒಳ್ಳೆಯದು. ಇಲ್ಲದಿದ್ದರೆ, ಆಲೂಗಡ್ಡೆಯನ್ನು ಒಣಗಿಸಲು ಸಾಧ್ಯವಾಗದು.

8. ಚೆನ್ನಾಗಿ ಒಣಗಿಸ ಮೇಲೆ ಇವನ್ನು ಒಂದು ಡಬ್ಬದಲ್ಲಿ ಹಾಕಿ ಶೇಖರಿಸಿಡಿ. ಬೇಕಾದಾಗ ಎಣ್ಣೆಯಲ್ಲಿ ಕರಿದುಕೊಂಡು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಮಸಾಲೆಯನ್ನು ಉದುರಿಸಿ ಸವಿಯಬಹುದು. 

ಇದನ್ನೂ ಓದಿ: Food Tips: ನೀವೇ ಉಪ್ಪಿನಕಾಯಿ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

Exit mobile version