ಬೇಸಿಗೆಯಲ್ಲಿ ತಣ್ಣಗೆ ಏನು ಕುಡಿಯಬಹುದು ಎಂಬ ನಮ್ಮ ಶೋಧ ಒಂದೆರಡು ಪೇಯಕ್ಕೆ ತೃಪ್ತವಾಗುವುದಿಲ್ಲ. ಏನಾದರೊಂದು ಹೊಸ ರೆಸಿಪಿ, ಯಾವುದಾದರೊಂದು ಬಗೆಯಲ್ಲಿ ಜಿಹ್ವೆಯ ಬಯಕೆಯನ್ನು ತಣಿಸುವ ಉಪಾಯಗಳನ್ನು ಮನಸ್ಸು ಹುಡುಕುತ್ತಿರುತ್ತದೆ. ಮಜ್ಜಿಗೆ, ಮಸಾಲೆ ಮಜ್ಜಿಗೆ, ಕಲ್ಲಂಗಡಿ ಜ್ಯೂಸ್, ನಿಂಬೆ ಪಾನಕ, ಎಳನೀರಿನ ಜ್ಯೂಸ್, ಕಬ್ಬಿನಹಾಲು ಹೀಗೆ ಒಂದೇ ಎರಡೇ! ಹತ್ತು ಹಲವು ಬಗೆಯ ಪೇಯಗಳ ಬಗೆಬಗೆಯ ರೆಸಿಪಿಗಳನ್ನು ಬೇಸಿಗೆ ತುಂಬ ಟ್ರೈ ಮಾಡುತ್ತೇವೆ. ಎಷ್ಟು ಕುಡಿದರೂ ದಾಹ ಇಂಗದು ಎಂಬಂತೆ ಬೇಸಿಗೆಯಲ್ಲಿ ನಿತ್ಯವೂ ಕುಡಿಯಲು ಏನಾದರೊಂದು ಬೇಕು. ಆ ಮೂಲಕವಾದರೂ ನಮ್ಮ ದೇಹಕ್ಕೆ ಅಗತ್ಯವಿರುವ ನೀರಿನ ಪ್ರಮಾಣವನ್ನು ಪೂರೈಸಲು ನಾವು ಬಗೆಬಗೆಯ ಸರ್ಕಸ್ಸು ಮಾಡುತ್ತೇವೆ. ದೇಹ ತಂಪಾದರೆ ಮನಸ್ಸೂ ತಂಪಾಗುತ್ತದೆ.
ಇಂತಹ ಹಲವು ಬಗೆಯ ಬೇಸಿಗೆಯ ರೆಸಿಪಿಗಳಲ್ಲಿ ಮುಂಚೂಣಿಯಲ್ಲಿರುವುದು ಆಮ್ ಪನ್ನಾ. ಅಂದರೆ ಮಾವಿನಕಾಯಿ ಪನ್ನಾ. ಮಹಾರಾಷ್ಟ್ರ ಹಾಗೂ ಗುಜರಾತಿನ ಮಂದಿ ತಪ್ಪದೇ ತಮ್ಮ ಮನೆಗಳಲ್ಲಿ ಬೇಸಿಗೆಯಲ್ಲಿ ಮಾಡುವ ಪಾನೀಯ ಇದು. ಇಂಥದ್ದೊಂದು ಡ್ರಿಂಕ್ ನೀವು ಮೊದಲೇ ಮನೆಯಲ್ಲಿ ಮಾಡಿಟ್ಟುಕೊಂಡರೆ ಬೇಕಾದಾಗ ತಣ್ಣಗೆ ಹೀರಬಹುದು. ಇದು ಕೇವಲ ರಿಫ್ರೆಶಿಂಗ್ ಡ್ರಿಂಕ್ ಮಾತ್ರ ಅಲ್ಲ. ಫಟಾಫಟ್ ಶಕ್ತಿಯನ್ನೂ ಉತ್ಸಾಹವನ್ನೂ ಹೆಚ್ಚಿಸುವಂತ ಪೋಷಕಾಂಶಯುಕ್ತ ಡ್ರಿಂಕ್. ಜೊತೆಗೆ ಬೇಸಿಗೆಗೆ ಹೇಳಿ ಮಾಡಿಸಿದ್ದು.
ಇದಕ್ಕೆ ಬೇಕಾಗಿರುವುದು ಕೆಲವೇ ಕೆಲವು ಪದಾರ್ಥಗಳು. ಸುಮಾರು 500 ಗ್ರಾಂ ಮಾವಿನಕಾಯಿ, ಸಕ್ಕರೆ, ಎರಡು ಚಮಚ ಅಥವಾ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸೈಂದವ ಲವಣ, ಎರಡು ಚಮಚ ಹುರಿದ ಜೀರಿಗೆ, ಸ್ವಲ್ಪ ಹೆಚ್ಚಿದ ಪುದಿನ ಸೊಪ್ಪು, ಎರಡು ಕಪ್ ನೀರು. ಎಲ್ಲರ ಮನೆಗಳಲ್ಲೂ ಸುಲಭವಾಗಿ ಸಿಗಬಹುದಾದ ಈ ಪದಾರ್ಥಗಳನ್ನು ಬಳಸಿ ಆಮ್ ಪನ್ನಾ ಮಾಡಿಟ್ಟುಕೊಳ್ಳಬಹುದು.
ಮೊದಲನೆಯದಾಗಿ ಒಂದು ಪಾತ್ರೆಯಲ್ಲಿ ಮಾವಿನಕಾಯಿಯನ್ನು ನೀರಿನಲ್ಲಿ ಮುಳುಗುವಂತೆ ಹಾಕಿ ಚೆನ್ನಾಗಿ ಬೇಯಿಸಿ. ಮಾವಿನಕಾಯಿ ಮೆತ್ತಗಾಗುವಷ್ಟು ಹಾಗೂ ಅದರ ಸಿಪ್ಪೆ ಬಣ್ಣ ಬದಲಾಗುವಷ್ಟು ಬೇಯಿಸುವುದು ಅಗತ್ಯ. ಇದು ತಣ್ಣಗಾದ ಮೇಲೆ ಸಿಪ್ಪೆಯನ್ನು ತೆಗೆದು ಬಿಸಾಕಿ ಕೇವಲ ಒಳಗಿನ ಬೇಯಿಸಿದ ಮಾವಿನಕಾಯಿ ಪಲ್ಪ್ ಅನ್ನು ಪ್ರತ್ಯೇಕಿಸಿ ತೆಗೆದಿಡಿ. ಈಗ ಹುರಿದು ಪುಡಿ ಮಾಡಿಟ್ಟುಕೊಂಡ ಜೀರಿಗೆಪುಡಿ, ಸೈಂದವ ಲವಣ, ಉಪ್ಪು, ಸಕ್ಕರೆ, ಪುದಿನ ಸೊಪ್ಪು, ಮಾವಿನಕಾಯಿ ಪಲ್ಪ್ ಎಲ್ಲವನ್ನೂ ಸೇರಿಸಿ ಮಿಕ್ಸಿಯಲ್ಲಿ ತಿರುಗಿಸಿ. ಮಾವಿನಕಾಯಿ ಪಲ್ಪ್ ಒಂದು ಕಪ್ ಇದ್ದರೆ, ಸಕ್ಕರೆ ಎರಡು ಕಪ್ ಇರಲಿ. ಚೆನ್ನಾಗಿ ಮಿಕ್ಸ್ ಆದ ಇದನ್ನು ಹಾಗೆಯೇ ಬಾಟಲಿಯಲ್ಲಿ ಹಾಕಿ ಕೆಲವು ತಿಂಗಳುಗಳ ಕಾಲ ಇಡಬಹುದು. ಸಂಗ್ರಹಿಸಿಡುತ್ತಿದ್ದರೆ, ಪುದಿನ ಹಾಕದೆಯೂ ಮಾಡಬಹುದು. ಚಿಟಿಕೆ ಏಲಕ್ಕಿಯನ್ನೂ ಅವರವರ ಆಸಕ್ತಿ ಹಾಗೂ ಇಷ್ಟಕ್ಕೆ ಅನುಗುಣವಾಗಿ ಸೇರಿಸಬಹುದು.
ಹೀಗೆ ಮಾಡಿಟ್ಟುಕೊಂಡ ಆಮ್ ಪನ್ನ ಹಲವು ದಿನ ಫ್ರಿಡ್ಜ್‌ನಲ್ಲಿ ಹಾಗೆಯೇ ಇಟ್ಟುಕೊಂಡರೆ, ಬೇಕಾದಾಗ ಸ್ವಲ್ಪ ಆಮ್ ಪನ್ನಾಕ್ಕೆ ನೀರು ಹಾಗೂ ಐಸ್ ಸೇರಿಸಿ ಹೀರಬಹುದು. ಪ್ರತಿ ಬಾರಿ ಹೀರಿದಾಗಲೂ ರಿಫ್ರೆಶಿಂಗ್ ಅನುಭವವಾಗದಿದ್ದರೆ ಕೇಳಿ!
ಇದನ್ನೂ ಓದಿ: Food Tips: ಮೊಳಕೆ ಕಾಳುಗಳನ್ನು ಕೆಡದಂತೆ ಹೆಚ್ಚು ಕಾಲ ಇಡಲು ಇಲ್ಲಿವೆ ಟಿಪ್ಸ್!