Site icon Vistara News

Food Tips: ಮನೆಯಲ್ಲೇ ಮಿದುವಾದ ಪರ್ಫೆಕ್ಟ್‌ ಇಡ್ಲಿ ಮಾಡಲು ಪಂಚಸೂತ್ರಗಳು!

idly

ಬಿಸಿಬಿಸಿ ಇಡ್ಲಿ ಮೇಲೆ, ಸಾಂಬಾರು (Idly sambar) ಸುರಿದುಕೊಂಡು ಪಕ್ಕದಲ್ಲೊಂದು ಚಟ್ನಿ ಇದ್ದರೆ, ಆ ಬೆಳಗು ಸುಖವಲ್ಲದೆ ಇನ್ನೇನು ಹೇಳಿ! ಆದರೆ, ಬಹುತೇಕರ ಸಮಸ್ಯೆ ಎಂದರೆ, ಎಷ್ಟೇ ಪ್ರಯತ್ನ ಪಟ್ಟರೂ, ರೆಸ್ಟೋರೆಂಟಿನಂತೆ ಮನೆಯಿಡ್ಲಿ ಮಿದುವಾಗಿ ಬರುವುದಿಲ್ಲ ಎಂಬುದು. ಅದಕ್ಕಾಗಿ ಅನೇಕರು, ಮನೆಯಲ್ಲಿ ಇಡ್ಲಿಯನ್ನೇ ಮಾಡುವುದಿಲ್ಲ. ಹಾಗಾದರೆ ಇಡ್ಲಿ ಮಾಡುವುದು ಅಷ್ಟೊಂದು ಕಠಿಣ ಕೆಲಸವೇ? ಖಂಡಿತಾ ಇಲ್ಲ. ದಕ್ಷಿಣ ಭಾರತೀಯರಿಗೆ ಇಡ್ಲಿ ಎಂಬುದು ಕೇವಲ ಬೆಳಗಿನ (breakfast) ತಿಂಡಿಯಲ್ಲ, ಅದೊಂದು ಭಾವನೆ. ಆದರೆ, ಪರ್ಫೆಕ್ಟ್‌ ಆಗಿ ಇಡ್ಲಿ ಮಾಡಲು ಪರಿಣಿತ ಕೈಗಳು ಬೇಕು. ಮಾಡುವ ಪ್ರೀತಿಯೂ ಬೇಕು. ಹಾಗಾದರೆ, ಬನ್ನಿ, ಪರ್ಫೆಕ್ಟ್‌ ಇಡ್ಲಿ ಮನೆಯಲ್ಲೇ ಮಾಡುವುದು (idly making) ಹೇಗೆ (food tips) ಎಂಬುದನ್ನು ನೋಡೋಣ.

1. ಎರಡು ಕೈ ಸೇರಿದರೆ ತಾನೇ ಚಪ್ಪಾಳೆ ಎಂದು ಹೇಳುವ ನೀವು, ಇಡ್ಲಿಗೆ ಅಕ್ಕಿಯೂ ಮುಖ್ಯ ಎಂದು ಯಾಕೆ ಅರ್ಥ ಮಾಡಿಕೊಂಡಿಲ್ಲ ಹೇಳಿ? ಯಾಕೆಂದರೆ, ಇಡ್ಲಿಗೆ ಉದ್ದು ಎಷ್ಟು ಮುಖ್ಯವೋ ಅಷ್ಟೇ ಅಕ್ಕಿಯೂ ಮುಖ್ಯ. ಇಂಥದ್ದೇ ಆಗಿರುವ ಅಕ್ಕಿ ಇಡ್ಲಿಗೆ ಬೇಕು ಎಂಬ ನಿಯಮ ನೀವು ಇಡ್ಲಿ ಪ್ರಿಯರಾಗಿದ್ದರೆ ಗೊತ್ತಿರಲೇಬೇಕು. ಅಕ್ಕಿಯಲ್ಲಿ ಬಗೆಬಗೆಯ ಅಕ್ಕಿಯಿದೆ. ಅದರಲ್ಲೂ ಇಡ್ಲಿಗೆ ಒಂದೇ ಬಗೆಯ ಅಕ್ಕಿಯ ಮೊರೆ ಹೋಗುವುದು ಒಳ್ಳೆಯದು. ಮಾರುಕಟ್ಟೆಯಲ್ಲಿ ಇಡ್ಲಿ ಅಕ್ಕಿ ಕೊಡಿ ಎಂದು ಕೇಳಿದರೆ, ಅಕ್ ಅಂಗಡಿಯಾತನಿಗೆ ಯಾವ ಅಕ್ಕಿ ಇಡ್ಲಿಗೆ ಒಳ್ಳೆಯದು ಎಂಬ ಅರಿವು ಚೆನ್ನಾಗಿ ಇರುತ್ತದೆ. ಹಾಗಾಗಿ ಆ ಅಕ್ಕಿಯನ್ನಷ್ಟೇ ಇಡ್ಲಿಗೆ ಬಳಸಿ.

2. ಇಡ್ಲಿ ಮಾಡಲು ಅಕ್ಕಿಯನ್ನೂ ಉದ್ದನ್ನೂ ನೆನೆಸಬೇಕು ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಎರಡನ್ನೂ ಒಟ್ಟಿಗೆ ಹಾಕಿ ನೀವು ನೆನೆಹಾಕುತ್ತಿದ್ದರೆ ಆ ಅಭ್ಯಾಸ ಮೊದಲು ಬಿಡಿ. ಒಟ್ಟಿಗೆ ಸೇರಿಸಿ ನೆನೆಸುವುದು ನಿಮಗೆ ಸುಲಭವಾಗಿರಬಹುದು, ಆದರೆ, ಮೆದುವಾದ ಇಡ್ಲಿ ಮಾಡಬೇಕಿದ್ದರೆ, ಅಕ್ಕಿಯನ್ನೂ, ಉದ್ದನ್ನೂ ಪ್ರತ್ಯೇಕವಾಗಿ ನೆನೆಸಿ. ಈ ಸಣ್ಣ ಬದಲಾವಣೆಯೂ ಕೂಡಾ, ಇಡ್ಲಿಯ ಮಿದುತನದಲ್ಲಿ ದೊಡ್ಡ ಬದಲಾವಣೆಯನ್ನೇ ತರಬಹುದು. ಯಾಕೆಂದರೆ, ಉದ್ದಿಗೂ, ಅಕ್ಕಿಗೂ ನೆನೆಯಲು ಬೇರೆಬೇರೆಯದೇ ಆದ ಸಮಯ ಹಾಗೂ ನೀರಿನ ಪ್ರಮಾಣ ಬೇಕು.

3. ಮೆದುವಾದ ಇಡ್ಲಿ ಆಗಬೇಕೆಂದರೆ ಹಿಟ್ಟು ಸರಿಯಾಗಿ ಹುಳಿ ಬರುವುದೂ ಮುಖ್ಯ. ಬೆಳಗ್ಗೆ ತಿಂಡಿಗೆ ಇಡ್ಲಿ ಮಾಡುವ ಯೋಚನೆಯಿದ್ದರೆ, ರಾತ್ರಿಯೇ ಹಿಟ್ಟು ರುಬ್ಬಿಟ್ಟು, ಹುಳಿ ಬರಲು ಹಾಗೆಯೇ ಹೊರಗೆ ಸಾಮಾನ್ಯ ಉಷ್ಣತೆಯಲ್ಲಿಡುವುದು ಅತ್ಯಂತ ಒಳ್ಳೆಯದು. ಬೇಸಿಗೆಯಲ್ಲಾದರೂ ಇಡ್ಲಿ ಹಿಟ್ಟು ಹುಳಿ ಬರಬೇಕೆಂದಿದ್ದರೆ ಕನಿಷ್ಟ ಎರಡರಿಂದ ಮೂರು ಗಂಟೆಯಾದರೂ ಬೇಕು. ಹಾಗಾಗಿ ಮುನ್ನಾದಿನವೇ ಹಿಟ್ಟು ರುಬ್ಬಿಟ್ಟು ಹುಳಿ ಬರಿಸುವುದು ಒಳ್ಳೆಯದು. ಆಗ, ಬೆಳಗ್ಗಿನ ಇಡ್ಲಿ ಮಲ್ಲಿಗೆಯ ಹಾಗೆ ಮಿದುವಾಗಿ ಆಗುತ್ತದೆ.

4. ಒಮ್ಮೆ ಹಿಟ್ಟು ಸರಿಯಾಗಿ ಹುಳಿ ಬಂದರೆ ಉಬ್ಬಿಕೊಂಡ ಹಿಟ್ಟನ್ನು ಮತ್ತೆ ಯಥಾ ಸ್ಥಿತಿಗೆ ಬರಲು ಕೊಂಚ ಅವನ್ನು ಚೆನ್ನಾಗಿ ಬೆರೆಸಿಕೊಳ್ಳಬೇಕು. ಆದರೆ, ಈ ಬೆರೆಸುವ ಪ್ರಕ್ರಿಯೆ ಅತಿಯಾಗಬಾರದು ಎಂಬುದನ್ನು ನೆನಪಿಡಿ. ಅತಿಯಾದರೆ, ಹಿಟ್ಟಿನ ಜೊತೆ ಇರುವ ಗಾಳಿಯೆಲ್ಲ ಹೊರಟುಹೋಗಿ ಸರಿಯಾದ ಉಬ್ಬಿಕೊಂಡ ಮಿದುವಾದ ಇಡ್ಲಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಹಿಟ್ಟಿನಲ್ಲಿರುವ ಗಾಳಿಯೆಲ್ಲ ಹೊರಟುಹೋಗುವಷ್ಟು ಕಲಸಿಕೊಳ್ಳಬೇಡಿ.

5. ಹಿಟ್ಟೇನೋ ಪರ್ಫೆಕ್ಟ್‌ ಆಗಿ ರೆಡಿಯಿದೆ ನಿಜ. ಆದರೆ, ಇಡ್ಲಿ ತಟ್ಟೆಗೆ ಹೊಯ್ಯುವಾಗ ತಟ್ಟೆ ತುಂಬಿ ತುಳುಕುವಷ್ಟು ಹಿಟ್ಟು ಸುರಿಯಬೇಡಿ. ಕೊಂಚ ಉಬ್ಬಲು ಜಾಗ ಬಿಡಿ. ಅಂದರೆ ಪ್ರತಿ ಇಡ್ಲಿ ಕುಳಿಯ ಮುಕ್ಕಾಲು ತುಂಬುವಷ್ಟು ಹಿಟ್ಟು ಸುರಿಯಿರಿ. ಆಗ ಪರ್ಫೆಕ್ಟ್‌ ಗಾತ್ರದ ಪರ್ಫೆಕ್ಟ್‌ ಉಬ್ಬಿದ, ಮಿದುವಾದ ಇಡ್ಲಿ ರೆಡಿಯಾಗುತ್ತದೆ. ಇಷ್ಟೇ ಅಲ್ಲ, ಇಡ್ಲಿ ಹಿಟ್ಟು ಹುಯ್ಯುವ ಮುನ್ನ ತಟ್ಟೆಗೆ ಎಣ್ಣೆ ಪಸೆ ಮಾಡುವುದನ್ನು ಮರೆಯಬೇಡಿ.

ಪರ್ಫೆಕ್ಟ್‌ ಆಗಿ ಮೊದಲ ಬಾರಿಯೇ ಇಡ್ಲಿ ಮಾಡಲು ಸಾಧ್ಯವಾಗದು ನಿಜ. ಆದರೆ, ಈ ಎಲ್ಲ ವಿಚಾರಗಳನ್ನು ಒಂದೊಂದಾಗಿಯೇ ನೆನಪಿಟ್ಟುಕೊಂಡು ಮಾಡಿದರೆ, ಕೆಲ ಪ್ರಯತ್ನಗಳ ನಂತರ ಪರ್ಫೆಕ್ಟ್‌ ಆದ ಇಡ್ಲಿ ಮಾಡಲು ಸಾಧ್ಯವಿದೆ. ಯಾಕೆಂದರೆ, ಇಡ್ಲಿ ಮಾಡುವುದೂ ಒಂದು ಕಲೆ!

ಇದನ್ನೂ ಓದಿ: MTR Rava Idli: ಯುದ್ಧಕ್ಕೂ ರವೆ ಇಡ್ಲಿಗೂ ಏನು ಸಂಬಂಧ? 2ನೇ ಮಹಾಯುದ್ಧದ ವೇಳೆ ಎಂಟಿಆರ್‌ ರವೆ ಇಡ್ಲಿ ಕ್ರಾಂತಿ

Exit mobile version