Site icon Vistara News

Kitchen Tips: ಈ ಐದು ಆಹಾರಗಳನ್ನು ಪ್ರೆಶರ್‌ ಕುಕ್ಕರಿನಲ್ಲಿ ಬೇಯಿಸಬಾರದು, ಯಾವುದು ಗೊತ್ತೆ?

food items by using pressure cooker

ಮಾನವ ಬಗೆಬಗೆಯ ಅಡುಗೆಗಳನ್ನು, ರುಚಿ ವೈವಿಧ್ಯಗಳನ್ನು ಮಾಡಲು ಹೇಗೆ ಕಲಿತ ಎಂಬುದೇ ಅತ್ಯಂತ ಕುತೂಹಲಕರ. ಆತ ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಹೊಸಹೊಸ ವಿಧಾನ ಹಾಗೂ ಸಾಮಾಗ್ರಿಗಳನ್ನು ಕಂಡು ಹಿಡಿಯುತ್ತಾ ಅಡುಗೆ ಮಾಡುವುದರಲ್ಲಿ ಬೆಳೆಯುತ್ತಾ ಬಂದ ಹಾದಿಯೇ (Kitchen Tips) ವಿಶೇಷ. ಇದರ ಚರಿತ್ರೆ ಕೆದಕುತ್ತಾ ಹೋದರೆ ಇದೊಂದು ಅತ್ಯಂತ ಆಸಕ್ತಿಕರ ವಿಷಯ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಆದಷ್ಟು ಬೇಗ ಅಡುಗೆ ಮಾಡಿ (Food Tips) ನಮ್ಮ ಕೆಲಸ ಕಾರ್ಯಗಳತ್ತ ಮುಖ ಮಾಡುವುದನ್ನು ನಾವು ಕಲಿತಿದ್ದೇವೆ. ಈ ಅಡುಗೆಯನ್ನು ಸರಳ ಮಾಡುವ ಸಾಕಷ್ಟು ವಸ್ತುಗಳೂ ಬಂದಿವೆ. ಅವುಗಳ ಪೈಕಿ ಕೆಲವೊಂದು ಇಂಧನ ಉಳಿಸುವ ನಿಟ್ಟಿನಲ್ಲಿ, ಇನ್ನೂ ಕೆಲವೊಂದು ಪೋಷಕಾಂಶ ನಷ್ಟವಾಗದಂತೆ ಮತ್ತೂ ಕೆಲವು ಕೊಬ್ಬು ಸೇರದಂತೆ ಹೀಗೆ ಹತ್ತು ಹಲವು ವಸ್ತುಗಳು ನಮ್ಮ ಅಗತ್ಯಗಳಿಗುಣವಾಗಿ ಮಾರುಕಟ್ಟೆಗೆ ಇಂದು ಬಂದಿವೆ.

ನಾವಿಂದು ಬಹುತೇಕ ಎಲ್ಲ ತರಕಾರಿ, ಆಹಾರ ವಸ್ತುಗಳನ್ನೂ ಬೇಯಿಸಲು ಪ್ರೆಶರ್‌ ಕುಕ್ಕರ್‌ ಬಳಸುತ್ತೇವೆ. ಕುಕ್ಕರ್‌ ಇಲ್ಲದೆ ಅಡುಗೆ ಹೇಗೆ ಎಂಬುದೇ ಇಂದು ಬಹುತೇಕರಿಗೆ ಯೋಚನೆಯನ್ನೂ ಮಾಡಲಾಗದು. ಅಷ್ಟರ ಮಟ್ಟಿಗೆ ಕುಕ್ಕರ್‌ ನಮ್ಮ ನಿತ್ಯ ಜೀವನದಲ್ಲಿ ಬೆಸೆದುಕೊಂಡಿದೆ. ಆದರೆ ಕೆಲವು ಆಹಾರಗಳನ್ನು ಬೇಯಿಸಲು ಕುಕ್ಕರ್‌ ಸೂಕ್ತವಲ್ಲ. ಹಾಗಾದರೆ ಬನ್ನಿ, ಯಾವೆಲ್ಲ ಆಹಾರ ಕುಕ್ಕರ್‌ನಲ್ಲಿ ಬೇಯಿಸಬಾರದು ಎಂಬುದನ್ನು ನೋಡೋಣ.

1. ಅನ್ನ: ಅನ್ನವನ್ನು ಪ್ರೆಶರ್‌ ಕುಕ್ಕರಿನಲ್ಲೇ ಇಟ್ಟು ಅಭ್ಯಾಸವಾಗಿದೆಯಾ? ಹಾಗಾದರೆ ಇದು ಯೋಚಿಸಬೇಕಾದ ಸಮಯ. ಅಕ್ಕಿ ತೊಳೆದು ಕುಕ್ಕರ್‌ನಲ್ಲಿಟ್ಟು ಎಷ್ಟು ಬೇಕೋ ಅಷ್ಟು ಸೀಟಿ ಕೂಗಿಸಿದರೆ ಮುಗೀತು, ಅನ್ನ ಕ್ಷಣಾರ್ಧದಲ್ಲಿ ರೆಡಿ. ಯಾವ ಕಷ್ಟವೂ ಇಲ್ಲ ಎಂದು ಅಂದುಕೊಂಡಿದ್ದರೆ ಅದು ತಪ್ಪು ಗ್ರಹಿಕೆಯಂತೆ. ಬಹಳಷ್ಟು ಮಂದಿ ತಜ್ಞರ ಪ್ರಕಾರ ಕುಕ್ಕರ್‌ನಲ್ಲಿ ಬೇಯುವ ಅನ್ನದಲ್ಲಿರುವ ಸ್ಟಾರ್ಚ್‌ ಅಲ್ಲೇ ಇಂಗುತ್ತದೆ. ಹಾಗಾಗಿ ಇದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವ ಸಂಭವ ಇದೆಯಂತೆ. ಹಾಗಾಗಿ ಹಳೇ ಪದ್ಧತಿಯಂತೆ ಪಾತ್ರೆಯಲ್ಲಿ ಹಾಗೆಯೇ ಅನ್ನ ಬೇಯಿಸುವುದು ಒಳ್ಳೆಯದಂತೆ.

2. ಆಲೂಗಡ್ಡೆ: ಬಹಳಷ್ಟು ಮಂದಿ ಆಲೂಗಡ್ಡೆಯನ್ನೂ ಕುಕ್ಕರ್‌ನಲ್ಲೇ ಬೇಯಿಸುತ್ತಾರೆ. ಆದರೆ, ಅನ್ನದಂತೆಯೇ ಆಲೂಗಡ್ಡೆಯಲ್ಲೂ ಸ್ಟಾರ್ಚ್‌ ಇರುವುದರಿಂದ ಅದನ್ನೂ ಕೂಡಾ ಕುಕ್ಕರ್‌ನಲ್ಲಿ ಬೇಯಿಸುವುದು ಆರೋಗ್ಯಕ್ಕೆ ಹಾನಿಕರವಂತೆ. ಕುಕ್ಕರ್‌ನಲ್ಲಿ ಬೇಯಿಸುವುದು ನಿಮಗ ಸಮಯ ಉಳಿತಾಯವಾಗಬಹುದು ನಿಜ, ಆದರೆ ಅದು ಒಳ್ಳೆಯದಲ್ಲ ಎನ್ನುತ್ತಾರೆ ಹಲವು ತಜ್ಞರು.

ಇದನ್ನೂ ಓದಿ: Kitchen Tips: ಮಿಕ್ಸಿ ಗ್ರೈಂಡರಿನ ಕೆಟ್ಟ ವಾಸನೆ ಹಾಗೂ ಜಿಡ್ಡಿನಿಂದ ಮುಕ್ತಿ ಹೇಗೆ? ಇಲ್ಲಿವೆ ಟಿಪ್ಸ್!

3. ಪಾಸ್ತಾ: ಕೆಲವರು ಪಾಸ್ತಾವನ್ನು ಕೂಡಾ ಕುಕ್ಕರ್‌ ಒಳಗಿಟ್ಟು ಬೇಯಿಸುವುದುಂಟು. ಪಾಸ್ತಾ ಕೂಡಾ ಅತ್ಯಂತ ಹೆಚ್ಚು ಸ್ಟಾರ್ಚ್‌ ಅನ್ನು ಹೊಂದಿರುವ ಇನ್ನೊಂದು ಆಹಾರ. ಹಾಗಾಗಿ ಇದನ್ನೂ ಕೂಡಾ ಕುಕ್ಕರ್‌ನಲ್ಲಿ ಬೇಯಿಸುವುದು ಒಳ್ಳೆಯದಲ್ಲ. ಕುಕ್ಕರ್‌ನಲ್ಲಿ ಬೆಂದ ಅನ್ನ, ಆಲೂಗಡ್ಡೆಯಂತೆ ಇದೂ ಕೂಡಾ ಆರೋಗ್ಯದ ಪರಿಣಾಮ ಬೀರಬಲ್ಲುದು.

4. ಕ್ರೀಮ್‌ ಇರುವಂಥ ಆಹಾರಗಳು: ಚಪಾತಿ, ಪರಾಠಾಗಳ ಜೊತೆಗೆ ತಿನ್ನಲೆಂದು ಕೆಲವುಸೈಡ್‌ ಡಿಶ್‌ಗಳನ್ನು ನೀವು ಮಾಡಿರುತ್ತೀರಿ. ಇಂಥಹ ಕರಿಗಳಿಗೆ ಕ್ರೀಂ ಹಾಕಿ ಹೆಚ್ಚಿನ ರುಚಿ ಬರುವಂತೆ ಮಾಡಿರುತ್ತೀರಿ. ಇಂತಹ ಆಹಾರನ್ನೂ ಕೂಡಾ ಬಿಸಿ ಮಾಡಲು ಕುಕ್ಕರ್‌ನಲ್ಲಿ ಇಡಬಾರದು. ಇವು ಕ್ರೀಂ ಅನ್ನು ಮೊಸರಾಗುವಂತೆ ಮಾಡುತ್ತದೆ.

5. ಮೀನು: ಬಹಳಷ್ಟು ಮಂದಿಗೆ ಮೀನನ್ನು ಪ್ರೆಶರ್‌ ಕುಕ್ಕರಿನಲ್ಲಿ ಬೇಯಿಸುವುದು ಒಳ್ಳೆಯದಲ್ಲ ಎಂಬುದು ಗೊತ್ತಿರಲಿಕ್ಕಿಲ್ಲ. ಮೀನು ಕೊಂಚ ಸೂಕ್ಷ್ಮವಾದ ಆಹಾರವಾದ್ದರಿಂದ ಇದನ್ನು ಕುಕ್ಕರಿನಲ್ಲಿ ಬೇಯಿಸುವುದರಿಂದ ಹೆಚ್ಚು ಬೆಂದು ಬಿಡುವ ಸಂಭವ ಹೆಚ್ಚು. ಮೀನಿನಲ್ಲಿರುವ ಅಗತ್ಯ ಪೋಷಕಾಂಶಗಳು ಇಲ್ಲವಾಗುತ್ತದೆ. ಹಾಗಾಗಿ ಹದವಾಗಿ ಮೀನನ್ನು ಬೇಯಿಸಲು ಕುಕ್ಕರ್‌ ಬದಲಾಗಿ, ಹಾಗೆಯೇ ಪಾತ್ರೆಯಲ್ಲಿಯೇ ಬೇಯಿಸುವುದು ಉತ್ತಮ. ‌

ಇದನ್ನೂ ಓದಿ: Kitchen Tips: ಕೊತ್ತಂಬರಿ ಸೊಪ್ಪನ್ನು ಕೊಳೆಯದಂತೆ ಶೇಖರಿಸಿಡುವುದೆಂದರೆ ಹೀಗೆ!

Exit mobile version