ಇಂದು ಉಪ್ಪಿನಕಾಯಿ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಬೇಕಾದ ಬಗೆಯ ಉಪ್ಪಿನಕಾಯಿಗಳು ಬಗೆಬಗೆಯ ಬ್ರ್ಯಾಂಡ್‌ಗಳಲ್ಲಿ ಸಿಗುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ಈ ತರಹೇವಾರಿ ಉಪ್ಪಿನಕಾಯಿಗಳು ಖಂಡಿತವಾಗಿಯೂ ನಾಲಿಗೆಗೆ ರುಚಿಯಾಗಿಯೇ ಇರುತ್ತವೆ ನಿಜ, ಆದರೆ, ಮನೆಯಲ್ಲಿಯೇ ಹಾಕಿದ ಉಪ್ಪಿನಕಾಯಿಯನ್ನು ಮೀರಿಸುವರುಂಟೇ? ಎಲ್ಲಕ್ಕಿಂತ ಮುಖ್ಯವಾಗಿ ಯಾವ ಪ್ರಿಸರ್ವೇಟಿವ್‌ಗಳ ಭಯವೂ ಇಲ್ಲದ ಹದವಾಗಿ ನಮ್ಮ ರುಚಿಗೆ ತಕ್ಕಂತೆ ಮಾಡಿದ ಮನೆಯ ಉಪ್ಪಿನಕಾಯಿ ಎಂದರೆ ಕೇವಲ ಆಹಾರವಷ್ಟೇ ಅಲ್ಲ. ಅದೊಂದು ಎಮೋಷನ್ನು ಕೂಡಾ.
ಹಿಂದಿನ ಕಾಲದಲ್ಲಿ ಪ್ರತಿ ಮನೆಗಳಲ್ಲೂ ಉಪ್ಪಿನಕಾಯಿ ತಜ್ಞರಾಗಿ ಹಿರಿಯ ಜೀವಗಳು ಇರುತ್ತಿತ್ತು. ಆದರೆ, ಇಂದು ಮನೆಗಳಲ್ಲಿ ಉಪ್ಪಿನಕಾಯಿ ಹಾಕುವ ಸಂಪ್ರದಾಯ ಕಡಿಮೆಯಾಗುತ್ತಿದೆ. ಎಲ್ಲರೂ ಮಾರುಕಟ್ಟೆಯ ಉಪ್ಪಿನಕಾಯಿಗಳ ಮೊರೆಹೋಗುತ್ತಿದ್ದಾರೆ. ಇನ್ನೂ ಕೆಲವು ಪ್ರಯೋಗ ಶೀಲ ಮನಸ್ಸುಗಳು ತಮ್ಮ ಅಜ್ಜಿಯಂದಿರಲ್ಲಿ ಕಲಿಯಲಾಗದಿದ್ದರೂ ವಿಡಿಯೋಗಳ ಮೂಲಕ, ಜಾಲತಾಣಗಳಲ್ಲಿ ಲಭ್ಯವಿರುವ ಮಾಹಿತಿಗಳನ್ನೇ ಆಧಾರವಾಗಿಟ್ಟುಕೊಂಡು ಮನೆಯಲ್ಲಿಯೇ ಉಪ್ಪಿನಕಾಯಿ ಹಾಕುವ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಆದರೆ, ಉಪ್ಪಿನಕಾಯಿ ಎಂದರೆ ಕೊಂಚ ದೊಡ್ಡ ವಿಚಾರವೇ. ಹಾಗಾಗಿ ಉಪ್ಪಿನಕಾಯಿ ಹಾಕುವಾಗ ನೀವು ಮಾಡಬಾರದ ತಪ್ಪುಗಳ ವಿವರ ಇಲ್ಲಿದೆ.
1. ಸರಿಯಾದ ತಾಜಾ ವಸ್ತುಗಳ ಆಯ್ಕೆ ಮಾಡಿ: ನೀವು ಮಾಡಬಹುದಾದ ತಪ್ಪುಗಳ ಪೈಕಿ ಪ್ರಮುಖವಾದದ್ದು ಇದೇ. ಉಪ್ಪಿನಕಾಯಿಗೆ ತರಕಾರಿ ಅಥವಾ ಹಣ್ಣುಗಳ ಆಯ್ಕೆಯ ವಿಚಾರದಲ್ಲಿ ರಾಜಿಯಾಗಬೇಡಿ. ತಾಜಾ ತರಕಾರಿ ಅಥವಾ ಹಣ್ಣು ಆಗಿರುವುದು ಬಹಳ ಮುಖ್ಯ.
2. ಹುಳಿ ಪದಾರ್ಥಗಳ ಅತಿಯಾದ ಬಳಕೆಯೂ ಇನ್ನೊಂದು ತಪ್ಪು: ಉಪ್ಪಿನಕಾಯಿಗೆ ವಿನೆಗರ್ ಅಥವಾ ನಿಂಬೆರಸ ಸೇರಿಸುವ ಹಂತವಿದ್ದರೆ, ಆ ಹಂತದಲ್ಲಿ ಅತಿಯಾಗಿ ಸೇರಿಸುವುದು ಇನ್ನೊಂದು ತಪ್ಪು. ಇವುಗಳ ಪ್ರಮಾಣದ ಬಗೆಗೆ ಅಂದಾಜಿರಲಿ. ಮಿತವಾಗಿ, ಎಷ್ಟು ಬೇಕೋ ಅಷ್ಟೇ ಸೇರಿಸಿ. ಹುಳಿ ಹೆಚ್ಚಾದರೆ ಉಪ್ಪಿನಕಾಯಿ ಅದ್ಭುತ ರುಚಿ ಕೊಡುವುದಿಲ್ಲ. ಅಷ್ಟೇ ಅಲ್ಲ, ತುಂಬ ತೆಳುವಾಗುತ್ತದೆ.
3. ಎಣ್ಣೆ ಕಡಿಮೆ ಬಳಸುವುದು: ಉಪ್ಪಿನಕಾಯಿಯಲ್ಲಿ ಕಡಿಮೆ ಎಣ್ಣೆ ಎಂಬ ನಿಮ್ಮ ಶಿಸ್ತು ವರ್ಕೌಟ್ ಆಗದು. ಎಣ್ಣೆ ಹಾಕಿ ಮಾಡುವ ಉಪ್ಪಿನಕಾಯಿ ಆಗಿದ್ದರೆ ಮುಖ್ಯವಾಗಿ ಸಾಸಿವೆ ಎಣ್ಣೆ ಹಾಕಿ ಮಾಡುವ ಉಪ್ಪಿನಕಾಯಿಗಳಲ್ಲಿ ಎಣ್ಣೆಯ ಪ್ರಮಾಣವೂ ಅಷ್ಟೇ ಮುಖ್ಯ. ಎಣ್ಣೆ ಕಡಿಮೆ ಹಾಕುತ್ತೇನೆ ಎಂದುಕೊಂಡರೆ ಉಪ್ಪಿನಕಾಯಿಯ ರುಚಿ ಬರದು.
ಇದನ್ನೂ ಓದಿ: Food Tips: ಬಜ್ಜಿ, ಬೋಂಡಾ ಕರಿಯುವಾಗ ನೀವು ಮಾಡುವ 5 ತಪ್ಪುಗಳು!
4. ಹೊಂದಿಕೊಳ್ಳಲು ಸಮಯ ಕೊಡದೇ ಇರುವುದು: ಉಪ್ಪಿನಕಾಯಿ ಹಾಕುವುದರಲ್ಲಿ ಒಂದು ಶ್ರದ್ಧೆ ಬೇಕು. ಯಾಕೆಂದರೆ, ಉಪ್ಪಿನಕಾಯಿ ರುಚಿಯಾಗುವುದರಲ್ಲಿ ಅದಕ್ಕೆ ಸಾಕಷ್ಟು ಸಮಯ ನಾವು ಕೊಡುವುದರಲ್ಲೂ ಅಡಗಿದೆ. ಪ್ಪಿನಕಾಯಿ ಮಾಡುವುದೆಂದರೆ, ನಮ್ಮ ಅಷ್ಟೂ ಪ್ರೀತಿಯನ್ನು ಸುರಿದು, ಅನುಭವಿಸಿಕೊಂಡು ಮಾಡುವುದು. ಮಾಡಿದ ಉಪ್ಪಿನಕಾಯಿಗೆ ಅದರೊಳಿನ ಪದಾರ್ಥಗಳು ಒಂದಕ್ಕೊಂದು ಹೊಂದಿಕೊಂಡು ಹದವಾಗಿ ಮಿಳಿತಗೊಳ್ಳಲು ಕೊಂಚ ಕಾಲ ಬಿಡಬೇಕು. ಆಗಷ್ಟೇ ಅದರ ರುಚಿ ಅದ್ಭುತವಾಗಲು ಸಾಧ್ಯ.
5. ಸರಿಯಾದ ಡಬ್ಬಿಯಲ್ಲಿ ಕೂಡಿಡದೇ ಇರುವುದು: ಉಪ್ಪಿನಕಾಯಿಯನ್ನು ಮಾಡಿದಷ್ಟೇ ಜತನದಿಂದ ಕಾಪಿಡುವುದರಲ್ಲೂ ಶ್ರಮ ಅಡಗಿದೆ. ಉಪ್ಪಿಕಾಯಿ ತುಂಬಿಸುವ ಡಬ್ಬಿ ಅಥವಾ ಭರಣಿಯನ್ನು ಮೊದಲೇ ತೊಳೆದು ಶುಭ್ರವಾಗಿ ಒರೆಸಿ ಒಣಗಿಸಿಟ್ಟುಕೊಳ್ಳಬೇಕು. ಅಷ್ಟೇ ಅಲ್ಲ, ಉಪ್ಪಿನಕಾಯಿಗೆ ಪ್ರತ್ಯೇಕ ಗಾಜಿನ ಬಾಟಲಿ, ಅಥವಾ ಭರಣಿಯನ್ನು ಇಟ್ಟುಕೊಳ್ಳಬೇಕು. ಚೆನ್ನಾಗಿ ಒಣಗಿದ ಶುಭ್ರ ಬಾಟಲಿಯಲ್ಲಿ ಗಾಳಿಯಾಡದ ಹಾಗೆ ಹಾಕಿಟ್ಟುಕೊಳ್ಳಬೇಕು.
ಇದನ್ನೂ ಓದಿ: Food Tips: ನೆನಪಿಡಿ, ತಾಮ್ರದ ಪಾತ್ರೆಯಲ್ಲಿ ಈ ಎಲ್ಲ ಅಡುಗೆಗಳನ್ನು ಮಾಡಬೇಡಿ!