ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬರುತ್ತದೆ ಎಂಬ ಮಾತಿದೆ. ಚಿಂತೆಯಿಲ್ಲದ ಮಂದಿಗೆ ಸುಪ್ಪತ್ತಿಗೆಯ ಅಗತ್ಯವಿಲ್ಲ. ಬೇಕೆಂದಾದಾದ, ಕೆಲಸ ಮಾಡಿ ದೇಹ ದಣಿದಾಗ ಎಲ್ಲಿ ಬೇಕಾದರೂ ನಿದ್ದೆ ಬಂದೀತು, ಆದರೆ, ಎಷ್ಟೇ ಐಶ್ವರ್ಯವಿದ್ದರೂ, ನೆಮ್ಮದಿ ಇಲ್ಲದ ಮಂದಿಗೆ ನಿದ್ದೆ ಎಂಬುದು ಮರೀಚಿಕೆಯೇ ಎಂಬುದೇ ಇದರ ಅರ್ಥ. ಏನಿದ್ದರೇನು, ನಿದ್ದೆಯಿಲ್ಲದ ಬದುಕು ಬದುಕೇ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯವೇ. ಆದರೆ, ಹಲವಾರು ಸಮಸ್ಯೆಗಳಿಂದ, ಇಂದಿನ ಜೀವನಶೈಲಿ, ಕೆಲಸದ ಒತ್ತಡ ಇತ್ಯಾದಿ ನಾನಾ ಕಾರಣಗಳಿಂದ ಇಂದು ನಿದ್ದೆಯೆಂಬುದು ಹಲವರಿಗೆ ಮರೀಚಿಕೆಯಾಗಿದೆ. ಪ್ರತಿಯೊಬ್ಬ ಆರೋಗ್ಯವಂತ ಮನುಷ್ಯನಿಗೆ ಏಳರಿಂದ ಒಂಬತ್ತು ಗಂಟೆಗಳ ನಿದ್ದೆಯ ಅವಶ್ಯವಿದೆ. ಈ ನಿದ್ದೆಯೂ ಹಲವರಿಗೆ ನಿತ್ಯ ಸಿಗದಿದ್ದರೆ, ಹೃದಯ ಸಂಬಂಧೀ ತೊಂದರೆಗಳಿಂದ ಮೊದಲ್ಗೊಂಡು ಹಲವು ದೈಹಿಕ ಸಮಸ್ಯೆಗಳೂ ಹೆಚ್ಚಾಗಬಹುದು. ಹಾಗಾದರೆ, ನಿದ್ದೆಯ ಗುಣಮಟ್ಟವನ್ನು ನಾವು ಹೆಚ್ಚಿಸಲು, ಒಳ್ಳೆಯ ನಿದ್ದೆ ಬರಲು ಯಾವೆಲ್ಲ ಆಹಾರವನ್ನು ನಿತ್ಯ ಸೇವಿಸುವ ಮೂಲಕ ನಿದ್ದೆಯ ತೊಂದರೆಯನ್ನು ಆರಂಭದ ಹಂತದಲ್ಲೇ ಪರಿಹರಿಸಿಕೊಳ್ಳಬಹುದು ಎಂಬುದನ್ನು ನೋಡೋಣ.
೧. ಬಿಸಿ ಹಾಲು: ಬಿಸಿ ಹಾಲಿನಲ್ಲಿ ಅಮೈನೋ ಆಸಿಡ್ ಟ್ರಿಪ್ಟೋಫಾನ್ ಇರುವುದರಿಂದ ಇದು ದೇಹ ಸೇರಿದಾಗ ದೇಹ ಇದನ್ನು ಸೆರೆಟೋನಿನ್ ಹಾಗೂ ಮೆಲಟೋನಿನ್ ಆಗಿ ಪರಿವರ್ತಿಸುತ್ತದೆ. ಈ ಎರಡು ಹಾರ್ಮೋನುಗಳು ನಿದ್ದೆಯನ್ನು ನಿಯಂತ್ರಿಸುತ್ತವೆ. ಮಲಗಲು ಹೋಗುವ ಮೊದಲು ಬಿಸಿ ಹಾಲನ್ನು ಕುಡಿಯುವುದರಿಂದ ಇದು ರಿಲ್ಯಾಕ್ಸ್ ಮಾಡುವುದಲ್ಲದೆ, ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದಕ್ಕೆ ಒಂದು ಚಿಟಿಕೆ ಅರಿಶಿನವನ್ನೂ ಸೇರಿಸುವುದರಿಂದ ಒಳ್ಳೆಯ ನಿದ್ದೆ ಹತ್ತುತ್ತದೆ. ಚಳಿಗಾಲದಲ್ಲಿ ಅರಿಶಿನದ ಬದಲು ಕೇಸರಿಯ ಎರಡು ದಳಗಳನ್ನು ಹಾಕಿ ಕುಡಿಯಬಹುದು.
೨. ಬಾದಾಮಿ: ಬಾದಾಮಿಯಿಂದ ಸಾಕಷ್ಟು ಲಾಭಗಳಿರುವುದು ಗೊತ್ತೇ ಇದೆ. ಅವುಗಳೆಲ್ಲವುಗಳ ಜೊತೆಗೆ ಬಾದಾಮಿಯಲ್ಲಿ ಮೆಗ್ನೀಶಿಯಂ ಇರುವುದರಿಂದ ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಮಲಗುವ ಮೊದಲು ನಾಲ್ಕಾರು ಬಾದಾಮಿ ತಿನ್ನುವುದರಿಂದ ಒಳ್ಳೆಯ ನಿದ್ದೆ ಬರುತ್ತದೆ.
೩. ಕುಂಬಳಕಾಯಿ ಬೀಜ: ಕುಂಬಳಕಾಯಿ ಬೀಜದಲ್ಲಿಯೂ ಮೆಗ್ನೀಶಿಯಂ ಹೇರಳವಾಗಿರುವುದರಿಂದ ಇದು ನಿದ್ದೆಗೆ ಒಳ್ಳೆಯದು.
ಇದನ್ನೂ ಓದಿ: Sleep Awareness Week: ನಿದ್ದೆಯ ಹೊತ್ತಿನಲ್ಲಿ ಜಾಗೃತರಾಗಿ ಇರಬೇಡಿ!
೪. ಡಾರ್ಕ್ ಚಾಕೋಲೇಟ್: ಚಾಕೋಲೇಟ್ ಪ್ರಿಯರು, ನಮಗೆ ನಿದ್ದೆ ಬರುತ್ತಿಲ್ಲ ಎಂಬ ಕಾರಣ ನೀಡಿ ಬಾಯಿ ಬಾಯಿ ತುಂಬಾ ಚಾಕೋಲೇಟ್ ತಿನ್ನುವ ಕನಸು ಕಾಣಬೇಡಿ. ಮಕ್ಕಳಿಗಂತೂ ಈ ಚಾರ ಹೇಳಿದರೆ, ಮನೆಗೆ ತಂದ ಚಾಕೋಲೇಟ್ ಎಲ್ಲ ಖಾಲಿಯಾಗಬಹುದು. ಆದರೆ, ಇಲ್ಲಿ ಹೇಳುತ್ತಿರುವುದು ಸಾಮಾನ್ಯ ಚಾಕೋಲೇಟ್ ಬಗ್ಗೆ ಅಲ್ಲ, ನೆನಪಿಡಿ. ಡಾರ್ಕ್ ಚಾಕೋಲೇಟ್ ಎಂಬ ಸಕ್ಕರೆ ರಹಿತ ಕೊಂಚ ಕಹಿ ರುಚಿಯ ಚಾಕೋಲೇಟ್‌ನಲ್ಲಿ ಮೆಗ್ನೀಶಿಯಂ ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿರುವುದರಿಂದ ಇವು ನಿದ್ದೆಗೆ ಒಳ್ಳೆಯದು.
೫. ಕ್ವಿನೋವಾ ಬೀಜಗಳು: ಕ್ವಿನೋವಾ ಬೀಜಗಳಲ್ಲೂ ಮೆಗ್ನೀಶಿಯಂ ಇರುವುದರಿಂದ ಇವುಗಳಿಂದ ನಿದ್ದೆ ಸೊಂಪಾಗಿ ಬರುತ್ತದೆ. ಬಿಸಿ ಹಾಲಿನಲ್ಲಿ ಸ್ವಲ್ಪ ಕ್ವಿನೋವಾ ಬೀಜಗಳನ್ನು ನೆನೆಸಿ ಕುಡಿಯಬಹುದು. ಇವೇನೇ ಪರಿಹಾರೋಪಾಯಗಳಿದ್ದರೂ ಪ್ರತಿಯೊಬ್ಬರೂ ಅವರ ದೇಹದ ಮಾತನ್ನು ಕೇಳುವುದು ಬಹಳ ಮುಖ್ಯ. ರಾತ್ರಿ ಮಲಗುವ ವಾತಾವರಣವನ್ನೂ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು ಹಾಗೂ ಗ್ಯಾಜೆಟ್ ಮೋಹದಿಂದ ನಿದ್ದೆಗಗೂ ಮೊದಲು ಕೆಲವು ಗಂಟೆಗಳಿಂದಲೇ ದೂರವಿಡುವುದು ಒಳ್ಳೆಯದು. ಸಮಸ್ಯೆ ಹೆಚ್ಚಿದ್ದರೆ, ಸಂಬಂಧಿಸಿದ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇದನ್ನೂ ಓದಿ: Sleep Awareness Week: ನಿದ್ದೆಯ ಕುರಿತ ಕುತೂಹಲಕರ ಮಾಹಿತಿಗಳಿವು