Site icon Vistara News

Meat Substitutes For Vegans: ಮಾಂಸಾಹಾರ ಬಿಟ್ಟವರಿಗೆ ಈ ಎಲ್ಲ ತರಕಾರಿಗಳಲ್ಲಿ ಮಾಡಬಹುದು ʼಮಾಂಸದಡುಗೆʼ!

Meat Substitutes For Vegans

ಆಹಾರ ಅವರವರ ಆಯ್ಕೆ. ಈಗ ಜನರು ತಮ್ಮ ಆಹಾರ ವಿಚಾರದಲ್ಲಿ ಹೆಚ್ಚು ಜಾಗೃತರಾಗಿದ್ದಾರೆ. ನಾವೇನು ತಿನ್ನುತ್ತಿದ್ದೇವೆ, ನಮ್ಮ ಹೊಟ್ಟೆಯೊಳಗೆ ಏನು ಹೋಗುತ್ತಿದೆ, ಅವುಗಳ ಪೂರ್ವಾಪರ ವಿಚಾರಗಳು, ಕ್ಯಾಲರಿಗಳು, ಸಾಧಕ ಬಾಧಕಗಳು ಇತ್ಯಾದಿಗಳನ್ನು ಜನರು ಓದಿ, ಕೇಳಿ, ಜಾಲತಾಣಗಳ ಮೂಲಕ ಅಂತರ್ಜಾಲದಲ್ಲಿ ಹುಡುಕಾಡಿ ತಿಳಿದು ತಿನ್ನುತ್ತಿದ್ದಾರೆ. ಈ ಅರಿವು ಬಂದಾಗಿನಿಂದ ಕೆಲವು ಆಹಾರಕ್ರಮಗಳು ಟ್ರೆಂಡ್‌ ಕೂಡಾ ಆಗುತ್ತಿವೆ. ಕೆಲವು ಟ್ರೆಂಡ್‌ಗಳನ್ನು ಜನರು ಹೆಚ್ಚು ಯೋಚನೆಯಿಲ್ಲದೆ ಫಾಲೋ ಮಾಡಿದರೆ, ಇನ್ನೂ ಕೆಲವರು ಓದಿ ತಿಳಿದು ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಂಥ ಟ್ರೆಂಡ್‌ಗಳ ಪೈಕಿ ಸದ್ಯ ಚಾಲ್ತಿಯಲ್ಲಿರುವ ಟ್ರೆಂಡ್‌ ಅಂದರೆ, (Meat Substitutes For Vegans) ಸಸ್ಯಾಹಾರಿ ಮಾಂಸ!

ಏನದು ಅಂತೀರಾ? ಹಲವರು ಇತ್ತೀಚೆಗಿನ ದಿನಗಳಲ್ಲಿ ವೇಗನಿಸಮ್‌ ಮೂಲಕ ವೇಗನ್‌ ಆಗುವ ಜೊತೆಗೆ, ಇನ್ನೂ ಹಲವರು ಮಾಂಸಾಹಾರವನ್ನೇ ತ್ಯಜಿಸಿ ಸಸ್ಯಾಹಾರದೆಡೆಗೆ ಬರುತ್ತಿದ್ದಾರೆ. ಹೊಸ ಲೈಫ್‌ಸ್ಟೈಲ್‌ ಎಂದು ಮಾಂಸಾಹಾರವನ್ನು ಸ್ವಲ್ಪ ದಿನ ಬಿಟ್ಟು ನೋಡುವ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಇಂಥ ಕೆಲವರಿಗೆ, ಆಗಾಗ ಮಾಂಸದಡಿಗೆಯ ಘಮ ಈ ವೃತಕ್ಕೆ ಭಂಗ ತಂದು ಮತ್ತೆ ಹಳೆಯ ಜೀವನಕ್ರಮಕ್ಕೆ ಮರಳುವುದುಂಟು. ಇಂಥ ಹಲವರಿಗಾಗಿಯೇ ಈಗ ಸಸ್ಯಾಹಾರವೆಂಬ ಮಾಂಸದಡಿಗೆ ಟ್ರೆಂಡ್‌ ಆಗುತ್ತಿದೆ.

ಇಂದು ಮಾಂಸದ ರುಚಿಯ ಸಸ್ಯಾಹಾರ. ಇದರ ರುಚಿ ಯಾವ ಮಾಂಸಕ್ಕೂ ಕಡಿಮೆಯಿಲ್ಲ. ರುಚಿಯಲ್ಲೂ, ಘಮದಲ್ಲೂ, ಜೊತೆಗೆ ಮಾಂಸದಲ್ಲಿ ಸಿಗುವ ಪೋಷಕಾಂಷದಲ್ಲೂ ಯಾವುದೇ ಕೊರತೆ ಬಾರದಂತೆ ಕೆಲವೇ ಕೆಲವು ತರಕಾರಿಗಳಿಂದ ಮಾಂಸದಡಿಗೆ ಮಾಡಬಹುದು ಎಂಬುದು ನಿರೂಪಿತವಾಗಿದೆ. ಆ ಸಸ್ಯಾಹಾರಗಳು ಯಾವುವು ಎಂಬುದನ್ನು ನೋಡೋಣ.

Beetroot

ಟೋಫು

ಮಾಂಸಕ್ಕೆ ಪರ್ಯಾಯವಾಗಿ ಬಳಸುವ ಸಸ್ಯಾಹಾರಗಳ ಪೈಕಿ ಬಹಳ ಪ್ರಸಿದ್ಧವಾದ ಸಸ್ಯಾಹಾರ ಇದು. ಸೋಯಾಬೀನ್‌ನ ಹಾಲಿನಿಂದ ಮಾಡಲಾಗುವ ಟೋಫುವಿನಲ್ಲಿ ಅತ್ಯಂತ ಹೆಚ್ಚು ಪ್ರೊಟೀನ್‌ ಇದೆ. ಜೊತೆಗೆ ಇದು ಬೀಫ್‌, ಚಿಕನ್‌, ಪೋರ್ಕ್‌ ಹಾಗೂ ಯಾವುದೇ ಬಗೆಯ ಮಾಂಸಾಹಾರದ ಅಡುಗೆಯ ರುಚಿಯನ್ನು ನೀಡಬಲ್ಲ ಸಸ್ಯಾಹಾರ. ಬೇರೆ ಬೇರೆ ಬಗೆಯ ಸೀಸನಿಂಗ್‌ಗಳ ಮೂಲಕ ಇದನ್ನು ಯಥಾವತ್‌ ಈ ಎಲ್ಲ ಮಾಂಸದ ರುಚಿಯ ಹಾಗೆಯೇ ಅನಿಸುವಂತೆ ಮಾಡಬಹುದಂತೆ. ಹೀಗಾಗಿ ಸದ್ಯ ಟೋಫು ವೇಗನ್‌ ಪ್ರಿಯರ, ಹಾಗೂ ಮಾಂಸಾಹಾರವನ್ನು ತ್ಯಜಿಸಿದ ಮಂದಿಯ ಅತ್ಯಂತ ಪ್ರಿಯವಾದ ಆಹಾರ.

ಅಣಬೆ

ಮಶ್ರೂಮ್‌ ಅಥವಾ ಅಣಬೆಯೂ ಕೂಡಾ ಅತ್ಯುತ್ತಮವಾಗಿ ಮಾಂಸದಡಿಗೆಯ ರೂಪಕ್ಕೆ ಹೊಂದಿಕೊಳ್ಳಬಲ್ಲ ಇನ್ನೊಂದು ಸಸ್ಯಾಹಾರ. ಪ್ರತಿ ೧೦೦ ಗ್ರಾಂ ಮಶ್ರೂಂನಲ್ಲಿ ೩.೧ ಗ್ರಾಂ ಪ್ರೊಟೀನ್‌ ಇದೆ. ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳೂ, ನಾರಿನಂಶವೂ ಹೇರಳವಾಗಿರುವ ಅಣಬೆ ಅತ್ಯಂತ ಕಡಿಮೆ ಕ್ಯಾಲರಿಯ ಆಹಾರ. ಮಾಂಸದ ರುಚಿಯನ್ನೂ ಹೊಂದಿರುವ ಮಾಂಸಾಹಾರದ ಶೈಲಿಯ ಅಡುಗೆಗೆ ಹೇಳಿ ಮಾಡಿಸಿದಂತಿರುವ ಇದೂ ಕೂಡಾ ಅತ್ಯಂತ ಪ್ರಚಲಿತದಲ್ಲಿರುವ ವೆಜಿಟೇರಿಯನ್ ಮೀಟ್‌.

ಹಲಸಿನಕಾಯಿ

ಹಲಸಿನಕಾಯಿಗೆ ಮಾಂಸದ ರುಚಿಯಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಹಲಸಿನಕಾಯಿಯಿಂದ ಅದ್ಭುತವಾಗಿ ಯಥಾವತ್ ಮಾಂಸದಡಿಗೆಯ ರುಚಿಯನ್ನು ಮಾಡಬಹುದು. ಇದು ತರಕಾರಿಯಲ್ಲ, ಹಣ್ಣು ಎಂಬುದು ನಿಜವಾದರೂ, ಕಾಯಿಯನ್ನು ಆಡುಗೆಯಲ್ಲೂ ವ್ಯಾಪಕವಾಗಿ ಬಳಸಲಾಗುತ್ತದೆ. ಸ್ಯಾಂಡ್‌ವಿಚ್‌ಗೂ ಇದೂ ಪರ್ಫೆಕ್ಟ್‌ ಆಯ್ಕೆ.

ಬದನೆಕಾಯಿ

ಮಾಂಸಾಹಾರಕ್ಕೆ ಸಸ್ಯಾಹಾರದಲ್ಲಿ ಪರ್ಯಾಯ ಏನಿದೆ ಎಂದರೆ, ಬದನಾಕಾಯಿ ಬಹುಶಃ ಬಹುತೇಕರ ತಲೆಯಲ್ಲಿಮೊದಲ ಬಾರಿ ಬರುವ ತರಕಾರಿ. ಇದರ ಮಾಂಸದಂತಹ ಭಾಗ ಮಾಂಸದಡುಗೆಗೆ ಉತ್ತಮ ಆಯ್ಕೆ. ಗ್ರಿಲ್‌ ಮಾಡಿದರೆ, ರೋಸ್ಟ್‌ ಮಾಡಿದರೆ ಅತ್ಯುತ್ತಮ ರುಚಿ. ಮಾಂಸದ ಬರ್ಗರ್‌ಗೆ ಉತ್ತಮ ಸ್ಪರ್ಧೆ ನೀಡುವ ಬದನೆಕಾಯಿ ಬರ್ಗರ್‌ ಯಥಾವತ್‌ ಮಾಂಸದಂತೆಯೇ ಅನಿಸೀತು.

ಬೀಟ್‌ರೂಟ್‌

ಹೌದು ಬೀಟ್‌ರೂಟ್‌ ಕೂಡಾ ಮಾಂಸಕ್ಕೆ ಪರ್ಯಾಯವಾಗಿ ಸಿಗುವ ಸಸ್ಯಾಹಾರ. ರೋಸ್ಟ್‌ ಹಾಗೂ ಗ್ರಿಲ್‌ ಮಾಡಿದರೆ ಇದರಿಂದಲೂ ಅತ್ಯದ್ಭುತ ಮಾಂಸದ ರುಚಿಯ ಅಡುಗೆ ಮಾಡಬಹುದು. ಹಾಗಾಗಿ, ಸದ್ಯ ಮಾಂಸಾಹಾರವನ್ನು ಬಿಟ್ಟು ಸಸ್ಯಾಹಾರದೆಡೆಗೆ ಮುಖ ಮಾಡಿದವರ ನಾಲಿಗೆಯ ಚಪಲಕ್ಕೆ ಇವೆಲ್ಲ ಅತ್ಯುತ್ತಮ ಪರ್ಯಾಯ ಆಯ್ಕೆಗಳಾಗಬಹುದು

ಇದನ್ನೂ ಓದಿ: Eye health foods | ಕಣ್ಣು ಆರೋಗ್ಯವಾಗಿ ಇರಬೇಕಿದ್ದರೆ ಇವನ್ನೆಲ್ಲ ತಿನ್ನುತ್ತಿರಿ!

Exit mobile version