ಈರುಳ್ಳಿ ಎಂಬ ಗಡ್ಡೆ ಭಾರತೀಯ ಅಡುಗೆಗಳಲ್ಲಿ ಬಹಳ ಮಹತ್ವದ ಸ್ಥಾನ ಪಡೆದುಕೊಂಡಿದೆ. ಬಹಳಷ್ಟು ಬಗೆಯ ಅಡುಗೆಗಳಲ್ಲಿ ಈರುಳ್ಳಿಯೇ ತಳಹದಿ. ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ಎಣ್ಣೆಯಲ್ಲಿ ಬಾಡಿಸಿಕೊಂಡು ಮಾಡುವ ಕ್ರಮವನ್ನು ಹಲವು ಅಡುಗೆಗಳಲ್ಲಿ ಮಾಡುತ್ತೇವೆ. ಮುಖ್ಯವಾಗಿ ಉತ್ತರ ಭಾರತೀಯ ಅಡುಗೆಗಳಲ್ಲಿ ಈರುಳ್ಳಿಯಿಲ್ಲದೆ ಯಾವ ಅಡುಗೆಯೂ ಮುಂದೆಯೇ ಹೋಗದು. ಈರುಳ್ಳಿ ಯಾವುದೇ ಅಡುಗೆಗೂ ಆಗಲಿ, ತನ್ನದೇ ಒಂದು ವಿಶಿಷ್ಟ ಘಮವನ್ನೂ ಸ್ವಾದವನ್ನೂ ನೀಡುತ್ತದೆ. ಇಂತಹ ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ಬಾಡಿಸುವ ಸಂದರ್ಭಗಳಲ್ಲಿ ಈರುಳ್ಳಿ ಕಪ್ಪಗಾಗಿ ಸುಟ್ಟು ಹೋಗುವ ಸಂದರ್ಭಗಳು ಬಹಳ. ಕಪ್ಪಗಾದ ಈರುಳ್ಳಿಯಿಂದ ಅಂದುಕೊಂಡ ಸ್ವಾದ ಬರದು. ಈರುಳ್ಳಿಯನ್ನು ಹೊಂಬಣ್ಣಕ್ಕೆ ಹದವಾಗಿ ಹುರಿದುಕೊಳ್ಳುವ ಕ್ರಮ ಕೊಂಚವೂ ಹಾಳಾಗದ ಹಾಗೆ, ಅಂದುಕೊಂಡ ಹಾಗೆ ಮಾಡಲು ಒಂದಿಷ್ಟು ಕೌಶಲ್ಯ ಬೇಕು. ಒಂದಿಷ್ಟು ದಿನ ಅಡುಗೆಯಲ್ಲಿ ಕೈ ಪಳಗಬೇಕು. ಆದರೆ, ಈ ಪಳಗುವಿಕೆಗೆ ಕೊಂಚ ಅಡುಗೆಯಲ್ಲಿ ಆಸಕ್ತಿಯೂ ಬೇಕು, ಜೊತೆಗೆ ಇಂತಹುದಕ್ಕೆ ಕೆಲವು ಸರಳ ಟಿಪ್ಸ್‌ಗಳನ್ನು ಆಗಾಗ ಕಲಿತು ತಮ್ಮನ್ನು ತಾವು ಅಪ್‌ಡೇಟ್ ಮಾಡುತ್ತಿರಬೇಕಾಗುತ್ತದೆ. ಹಾಗಾದರೆ ಬನ್ನಿ, ಈರುಳ್ಳಿ ಹೀಗೆ ಸುಟ್ಟು ಹೋಗದಂತೆ, ಯಾವ ಚಿಂತೆಯೂ ಇಲ್ಲದೆ ಹೊಂಬಣ್ಣಕ್ಕೆ ಬರುವಂತೆ ಹುರಿದುಕೊಳ್ಳಲು ಕೆಲವು ಸರಳ ತಂತ್ರಗಳನ್ನು (Onion Benefits) ಇಲ್ಲಿ ನೋಡೋಣ.
ಕತ್ತರಿಸುವುದೇ ಸಮಸ್ಯೆ
ಕಣ್ಣೀರು ಬರಿಸುವ ಈರುಳ್ಳಿಯನ್ನು ಕತ್ತರಿಸುವುದೇ ಹಲವರಿಗೆ ಸಮಸ್ಯೆ. ಇಂತಹ ಈರುಳ್ಳಿಯನ್ನು ಕತ್ತರಿಸುವ ಸಂದರ್ಭ ಒಂದೇ ಥರದಲ್ಲಿ ಕತ್ತರಿಸಲು ಸಾಧ್ಯವಾಗಲು ಕೊಂಚ ಅನುಭವ ಬೇಕು. ಈರುಳ್ಳಿಯ ಸಿಪ್ಪೆ ಸುಲಿದ ತಕ್ಷಣ ಕಣ್ಣಲ್ಲಿ ಸುರಿಯುವ ನೀರಿನಿಂದ ಮುಕ್ತವಾಗಲು ಗಡಿಬಿಡಿಯಲ್ಲಿ ಈರುಳ್ಳಿಯನ್ನು ಸಿಕ್ಕಸಿಕ್ಕ ಶೇಪಿನಲ್ಲಿ ಕತ್ತರಿಸಿಬಿಡುವುದೇ ಹೆಚ್ಚು. ಆದರೆ, ಹೀಗೆ ಮಾಡುವುದರಿಂದಲೇ ಈರುಳ್ಳಿ ಸುಟ್ಟುಹೋಗುವುದು. ಅದಕ್ಕಾಗಿ, ಯಾವಾಗಲೂ ಈರುಳ್ಳಿಯನ್ನು ಒಂದೇ ಸಮನಾಗಿ ಹೆಚ್ಚುವುದನ್ನು ಕಲಿಯಿರಿ. ಹೀಗೆ ಮಾಡಿದಾಗ, ಹುರಿದುಕೊಳ್ಳುವಾಗ, ಎಲ್ಲ ಈರುಳ್ಳಿಯ ತುಣುಕುಗಳೂ ಒಂದೇ ಸಮನಾಗಿ ಹುರಿಯಲ್ಪಡುತ್ತವೆ.
ಅವಸರ ಮಾಡಬೇಡಿ
ಬೇಗ ಅಡುಗೆ ಮಾಡುವ ಭರದಲ್ಲಿ ದೊಡ್ಡ ಉರಿಯಲ್ಲಿ ಎಣ್ಣೆ ಹಾಕಿ ಈರುಳ್ಳಿಯನ್ನು ಹುರಿದುಕೊಳ್ಳಲು ಹೊರಡಬೇಡಿ. ಮಂದ ಉರಿಯಲ್ಲಿ ಹುರಿಯಿರಿ. ಈರುಳ್ಳಿ ನಿಧಾನವಾಗಿ ಬಾಡಿಕೊಂಡು ಹೊಂಬಣ್ಣಕ್ಕೆ ತಿರುಗುತ್ತದೆ.ಬೇಗ ಹುರಿಯಲು ದೊಡ್ಡ ಉರಿಯಲ್ಲಿಟ್ಟುಕೊಂಡ ಕೂಡಲೇ ಅದು ಕರ್ರಗಾಗಿ, ಅಂದುಕೊಂಡ ಹಾಗೆ ಬರದು.
ಎಣ್ಣೆಯ ಪ್ರಮಾಣ ಸರಿಯಾಗಿರಬೇಕು
ಕಡಿಮೆ ಎಣ್ಣೆಯಲ್ಲಿ ಹುರಿಯಲು ಹೊರಡುವುದೂ ಕೂಡಾ ಬಹುತೇಕರು ಮಾಡುವ ತಪ್ಪು. ಈರುಳ್ಳಿ ಹೊಂಬಣ್ಣಕ್ಕೆ ತಿರುಗಲು ಸರಿಯಾಗಿ ಎಣ್ಣೆಯ ಪ್ರಮಾಣವೂ ಇರಬೇಕು. ಧಾರಾಳವಾಗಿ ಎಣ್ಣೆಯನ್ನು ದಪ್ಪ ತಳದ ಪಾತ್ರೆಯಲ್ಲಿ ಸುರಿದುಕೊಂಡು ಹುರಿಯಿರಿ. ಹೀಗಂದ ಮಾತ್ರಕ್ಕೆ ಈರುಳ್ಳಿ ಮುಳುಗಿ ಹೋಗುವಷ್ಟು ಅತಿಯಾದ ಎಣ್ಣೆಯೂ ಅಗತ್ಯವಿಲ್ಲ. ಆದರೆ, ಈರುಳ್ಳಿಯ ತುಣುಕುಗಳ ಮೈಮೇಲೆಲ್ಲ ಎಣ್ಣೆ ಮೆತ್ತಿಕೊಳ್ಳುವಷ್ಟು ಎಣ್ಣೆಯನ್ನಾದರೂ ಬಳಲಿ. ಆಗ ಹುರಿದುಕೊಳ್ಳುವುದು ಸುಲಭವಾಗುತ್ತದೆ. ಜೊತೆಗೆ ರುಚಿಯೂ ಹೆಚ್ಚುತ್ತದೆ.
ಬೇರೆ ಕಡೆ ಗಮನ ಕೊಡಬೇಡಿ
ಈರುಳ್ಳಿಯನ್ನು ಬಾಣಲೆಗೆ ಹಾಕಿಟ್ಟು ಬೇರೆ ಕೆಲಸದೆಡೆಗೆ ಗಮನ ಹರಿಸಬೇಡಿ. ಬೇರೆ ಕೆಲಸ ಜೊತೆಗೆ ಮಾಡುತ್ತಿದ್ದರೂ, ಪಕ್ಕದಲ್ಲೇ ಇರುವ ಬಾಣಲೆಯಲ್ಲಿ ಸೌಟಿನಿಂದ ಇದನ್ನು ಮಗುಚುತ್ತಿರಿ. ಆಗ ಈರುಳ್ಳಿಯ ಎಲ್ಲ ಬದಿಗಳೂ ಸಮನಾಗಿ ಹುರಿದುಕೊಳ್ಳುತ್ತದೆ. ಅಂದುಕೊಂಡ ಹೊಂಬಣ್ಣಕ್ಕೆ ತಿರುಗುತ್ತದೆ. ಇಲ್ಲವಾದರೆ, ಒಂದು ಬದಿ ಕಪ್ಪಾಗಿ, ಇನ್ನೊಂದು ಬದಿ ಸರಿಯಾಗಿ ಬೇಯುವುದಿಲ್ಲ.
ತಾಳ್ಮೆ ಮುಖ್ಯ
ಯಾವುದೇ ಅಡುಗೆಯಿರಲಿ, ತಾಳ್ಮೆ ಬಹಳ ಮುಖ್ಯ. ಈರುಳ್ಳಿ ಹುರಿದುಕೊಳ್ಳಲೂ ಕೂಡ ತಾಳ್ಮೆ ಮುಖ್ಯ. ನಿಮ್ಮ ಒಂದೆರಡು ನಿಮಿಷದ ತಾಳ್ಮೆಗೆಡುವಿಕೆ ಇಡೀ ಈರುಳ್ಳಿಯನ್ನೇ ಹಾಳು ಮಾಡಬಹುದು. ಹೀಗಾಗಿ, ತಾಳ್ಮೆಯಿಂದ ಮಂದ ಉರಿಯಲ್ಲಿ ಬಾಣಲೆಯಲ್ಲಿ ಕೈಯಾಡಿಸುತ್ತಾ ಈರುಳ್ಳಿಯನ್ನು ಹುರಿದುಕೊಂಡಿರಿ. ಈರುಳ್ಳಿ ಹದವಾಗಿ ಹೊಂಬಣ್ಣಕ್ಕೆ ತಿರುಗುತ್ತಿದೆ ಎಂಬಷ್ಟರಲ್ಲಿ ಮುಂದಿನ ಹಂತಕ್ಕೆ ಸಾಗಿ. ಆಗ, ಅನವಶ್ಯಕ ಈರುಳ್ಳಿ ಹಾಳಾಗುವುದು ತಪ್ಪುತ್ತದೆ. ಜೊತೆಗೆ ತಾಳ್ಮೆ ನಿಮ್ಮ ಈರುಳ್ಳಿಯನ್ನು ಪೆರ್ಫೆಕ್ಟಾಗಿ ಹೊಂಬಣ್ಣಕ್ಕೆ ತಂದಿರುತ್ತದೆ.
ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ? ಮಾನಸಿಕ ಒತ್ತಡವೂ ಕಾರಣವಾಗಿರಬಹುದು!