Site icon Vistara News

Ghee benefits: ನಿತ್ಯವೂ ದೇಹಕ್ಕೆ ಬೇಕು ತುಪ್ಪ! ಹಸುವಿನ ತುಪ್ಪದ ಮಹಿಮೆಯ ಬಲ್ಲಿರಾ?

Ghee benefits

ತುಪ್ಪದ ಬಗ್ಗೆ ನಮಗೆ ಬಹಳಷ್ಟು ತಪ್ಪು ಕಲ್ಪನೆಗಳಿಗೆ. ತುಪ್ಪ ತಿಂದರೆ ದಪ್ಪ ಆಗೋದು ಖಚಿತ ಎಂಬ ಕಲ್ಪನೆ ಒಂದಾದರೆ, ಬೇಸಿಗೆಯಲ್ಲಿ ತುಪ್ಪ ತಿನ್ನಬಾರದು, ಕೇವಲ ಚಳಿಗಾಲದಲ್ಲಷ್ಟೇ ತುಪ್ಪ ಸವಿಯಬಹುದು ಎಂಬ ಕಲ್ಪನೆ ಇನ್ನೊಂದು ಭಾರತೀಯ ಅಡುಗೆ ಮನೆಯ ಅವಿಭಾಜ್ಯ ಅಂಗವಾಗಿರುವ ಶುದ್ಧ ದೇಸೀ ತುಪ್ಪ ತಮ್ಮ ಘಮದಂತೆಯೇ ಆರೋಗ್ಯದ ಅವಿಭಾಜ್ಯ ಅಂಗವೂ ಹೌದು ಎಂಬುದು ನಮಗೇ ಗೊತ್ತಿಲ್ಲ. ತುಪ್ಪವನ್ನು ಸರಿಯಾಗಿ ಹಿತಮಿತವಾಗಿ ಬಳಕೆ ಮಾಡುತ್ತಾ ಬಂದಲ್ಲಿ ಆರೋಗ್ಯಕ್ಕೆ ಲಾಭಗಳು ಅನೇಕ ಇವೆ ಎಂಬ ಸತ್ಯವೇ ನಮಗೆ ಅರಿವಿಲ್ಲ.

ಅನ್ನಕ್ಕೆ ತುಪ್ಪ ಕಲಸಿಕೊಂಡು ಉಣ್ಣುವ, ಚಪಾತಿ, ದೋಸೆಯ ಮೇಲೆ ತುಪ್ಪ ಹಾಕುವ, ದಾಲ್‌ ಅಥವಾ ಸಾರು ಕಲಸಿಕೊಂಡು ಉಣ್ಣುವಾಗ ಒಂದು ಚಮಚ ತುಪ್ಪ ಹಾಕಿಕೊಂಡು ಉಣ್ಣುವ ಹಳೆಯ ರೂಢಿಯನ್ನು ಬಹುತೇಕರು ತೂಕ ಹೆಚ್ಚಿಸಿಕೊಳ್ಳುತ್ತಿದ್ದೇವೆ ಎಂಬ ಭಯದಲ್ಲಿ ಬಿಟ್ಟೇ ಬಿಡುತ್ತಿದ್ದೇವೆ. ಶುದ್ಧ  ಹಸುವಿನ ತುಪ್ಪ, ಎಮ್ಮೆಯ ಹಾಲಿನಿಂದ ಮಾಡಿದ ತುಪ್ಪ ಎಂಬ ಬಗೆಬಗೆಯ ತುಪ್ಪಗಳನ್ನು ಮನೆಗಳಲ್ಲಿ ಬಳಕೆಯೇ ಕಡಿಮೆ ಮಾಡುತ್ತಿದ್ದೇವೆ. ಆದರೆ, ಆಯುರ್ವೇದದ ಪ್ರಕಾರ ನಮ್ಮ ಹಿರಿಯರು ರೂಢಿ ಮಾಡಿಕೊಂಡು ಬಂದಂತೆ ದೇಹಕ್ಕೆ ನಿತ್ಯವೂ ಕೊಂಚ ತುಪ್ಪದ ಅಗತ್ಯವಿದೆ. ಇದು ಒಮೆಗಾ ೩ ಫ್ಯಾಟಿ ಆಸಿಡ್‌ಗಳಿಂದ ಸಮೃದ್ಧವಾಗಿದ್ದು ಸಾಕಷ್ಟು ಆರೋಗ್ಯಕರ ಲಾಭಗಳನ್ನೂ ತನ್ನೊಂದಿಗೆ ನೀಡುತ್ತದೆ. ಹಾಗಾಗಿ ಕೇವಲ ಚಳಿಗಾಲದಲ್ಲಷ್ಟೇ ಅಲ್ಲ, ಬೇಸಿಗೆಯಲ್ಲೂ ತುಪ್ಪದ ಸವಿಯನ್ನು ನಾವು ನಿತ್ಯವೂ ಸವಿಯಬೇಕು ಎನ್ನುತ್ತದೆ ಆಯುರ್ವೇದ.

ನಮ್ಮ ದೇಸೀ ತುಪ್ಪದಲ್ಲಿರುವುದು ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಒಳ್ಳೆಯ ಕೊಬ್ಬು. ದೇಹದ ಅಂಗಾಂಗಗಳು ಚೆನ್ನಾಗಿ ಕಾರ್ಯ ನಿರ್ವಹಿಸಲು ಒಳ್ಳೆಯ ಕೊಬ್ಬಿನ ಅವಶ್ಯಕತೆ ಇದೆ. ಆ ಕೆಲಸವನ್ನು ಮಾಡುವುದು ತುಪ್ಪ. ಅದಕ್ಕಾಗಿಯೇ, ಚಳಿಗಾಲ, ಮಳೆಗಾಲ, ಬೇಸಗೆಯೆಂಬ ಭೇದವಿಲ್ಲದೆ ನಾವು ತುಪ್ಪವನ್ನು ಸೇವಿಸಬೇಕು. ಇದು ದೇಹದ ತೇವಾಂಶವನ್ನು ಸಮತೋಲನದಲ್ಲಿಟ್ಟು ಆರೋಗ್ಯವನ್ನು ಕಾಪಾಡುತ್ತದೆ.

ಕೇವಲ ತೇವಾಂಶವಷ್ಟೇ ಅಲ್ಲ, ತುಪ್ಪದಲ್ಲಿ ಅತ್ಯುತ್ತಮ ಪೋಷಕಾಂಶಗಳೂ ಇವೆ. ತುದಲ್ಲಿ ಬ್ಯುಟಿರಿಕ್‌ ಆಸಿಡ್‌ ಹೇರಳವಾಗಿದ್ದು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹವನ್ನು ತಂಪಾಗಿಟ್ಟು, ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ. ದೇಹಕ್ಕೆ ಬೇರೆ ರೂಪದಲ್ಲಿ ಅಂದರೆ ಅನ್ನದ ಜೊತೆ, ಚಪಾತಿ ಅಥವಾ ದೋಸೆಯ ಜೊತೆ ಶುದ್ಧ ತುಪ್ಪ ನಾವು ತೆಗೆದುಕೊಳ್ಳದಿದ್ದರೆ, ದಿನಕ್ಕೆ ಅರ್ಧ ಚಮಚ ತುಪ್ಪವನ್ನು ನಾವು ಖಾಲಿ ಹೊಟ್ಟೆಯಲ್ಲಿ ಬೇಸಿಗೆಯಲ್ಲಿ ಸೇವಿಸುವುದು ಒಳ್ಳೆಯದು ಎನ್ನುತ್ತದೆ ಆಯುರ್ವೇದ. ಇದು ದೇಹದಲ್ಲಿ ಪಚನಕ್ರಿಯೆಯನ್ನು ಉತ್ತೇಜಿಸಿ ಗ್ಯಾಸ್ಟ್ರಿಕ್‌ ಆಸಿಡ್‌ನ ಉತ್ಪತ್ತಿಯನ್ನು ಪ್ರಚೋದಿಸುತ್ತದೆ.

ಇದನ್ನೂ ಓದಿ: Health Tips: ಮದುವೆಗಳ ಕಾಲ; ಭರ್ಜರಿ ತಿಂದು ಬಂದ ಮೇಲೆ ಹೀಗೆ ಕಾಳಜಿ ವಹಿಸಿ!

ಆಯುರ್ವೇದ ಹೇಳುವಂತೆ, ದೇಸೀ ಹಸುವಿನ ತುಪ್ಪ ದೇಹದ ಶಕ್ತಿಯನ್ನು ಹೆಚ್ಚಿಸಿ, ಜೀರ್ಣಕ್ರಿಯೆಯನ್ನು ಉತ್ತೇಜಿಸಿ ದೇಹದ ಮೂರು ದೋಷಗಳಾದ ವಾತ, ಪಿತ್ತ ಹಾಗೂ ಕಫಗಳನ್ನು ಶಾಂತಗೊಳಿಸುತ್ತದೆ. ಬೇಸಿಗೆಯಲ್ಲಿ ಹಸುವಿನ ಹಾಲಿನಿಂದ ಮಾಡಿದ ತುಪ್ಪ ಹಗುರವಾಗಿದ್ದು ಜಿಡ್ಡು ಕಡಿಮೆಯಾಗಿದ್ದು ಸಿಹಿಯಾದ ರುಚಿಯೊಂದಿಗೆ ವಾತ ಹಾಗೂ ಪಿತ್ತ ಇವೆರಡರ ಶಮನಕಾರಿಯಾಗಿ ಕೆಲಸ ಮಾಡುತ್ತದೆ. ಬೇಸಿಗೆಯಲ್ಲಿ ಹೆಚ್ಚು ಉಷ್ಣದಿಂದಾಗಿ ಆಗುವ ಪಿತ್ತದ ಪರಿಣಾಮಗಳಿಗೆ ಇದು ಅತ್ಯುತ್ತಮ ಕೂಡಾ. ಉತ್ತಮ ಫಲಕ್ಕಾಗಿ ತುಪ್ಪವನ್ನು ಅಡುಗೆ ಮಾಡುವಾಗ ಬಳಸದೆ ಅಡುಗೆಯ ಮೇಲೆ ಮತ್ತೆ ಹಾಕಿ ಉಣ್ಣುವುದರಿಂದ ಸಿಗುತ್ತದೆ ಎನ್ನುತ್ತದೆ ಆಯುರ್ವೇದ.

ಚರ್ಮದ ಕಾಂತಿ ಹೆಚ್ಚಿಸಲೂ ತುಪ್ಪದ ಬಳಕೆ ಒಳ್ಳೆಯದು. ಆದರೆ, ನೇರವಾಗಿ ತುಪ್ಪವನ್ನು ಒಣ ಚರ್ಮಕ್ಕೆ ಅಥವಾ ಕೂದಲಿಗೆ ಹಚ್ಚುವುದರಿಂದ ಇದರ ಫಲ ಅಷ್ಟಾಗಿ ಕಾಣಲಿಕ್ಕಿಲ್ಲ. ಸೇವನೆಯ ಪರಿಣಾಮದಿಂದ ಇದು ಚರ್ಮದ ಹಾಗೂ ಕೂದಲ ಮೇಲೆ ಕಾಣಬಹುದು. ಒಳ್ಳೆಯ ನಿದ್ದೆಗೂ ತುಪ್ಪ ಸಹಾಯಕಾರಿ.

ಇದನ್ನೂ ಓದಿ: Health Tips: ಬಾಯಿಹುಣ್ಣು ಬೇಗ ಗುಣವಾಗಬೇಕೇ? ಈ ಆಹಾರಗಳನ್ನು ಬಿಡಿ!

Exit mobile version