ಇಂದಿನ ಬದುಕಿನ ಧಾವಂತಗಳಲ್ಲಿ ಎಲ್ಲರೂ ಬ್ಯುಸಿ. ಅಪ್ಪ, ಮಕ್ಕಳು, ಅಮ್ಮ, ಅಜ್ಜಿ ಹೀಗೆ ಮನೆಯಲ್ಲಿರುವ ಸದಸ್ಯರ ಊಟದ ಹೊತ್ತುಗಳೂ ಒಂದೊಂದಾಗಿ ಬದಲಾಗಿರುವುದರಿಂದ, ಜೊತೆಗೆ ಒಬ್ಬೊಬ್ಬರೂ ಒಂದೊಂದು ತಟ್ಟೆ ಎತ್ತಿಕೊಂಡು ಹೋಗಿ ಮನ ಬಂದಲ್ಲಿ ಕೂತು ತಮ್ಮದೇ ಲೋಕದಲ್ಲಿ ಧ್ಯಾನಸ್ಥರಾದಂತೆ, ಫೋನು ನೋಡುತ್ತಲೋ, ಟಿವಿ ನೋಡುತ್ತಲೋ ಕುಳಿತು ಬಿಡುವುದರಿಂದಲೋ ಏನೋ ಊಟದ ವಿದಾನ ಬಹಳಷ್ಟು ಬದಲಾಗಿದೆ. ಕುಟುಂಬವೊಂದು ಕೂತು ಉಣ್ಣುವ ಬಾಂಧವ್ಯದೊಂದಿಗೆ ನಾವು ನಿಧಾನವಾಗಿ ಹೇಗೆ ಊಟ ಮಾಡಬೇಕೆಂಬ ಸಾಮಾನ್ಯ ನಿಯಮಗಳನ್ನೂ ಎಲ್ಲರೂ ಮರೆಯುತ್ತಿದೇವೆ. ಆ ಮೂಲಕ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಅದರ ಪರಿಣಾಮಗಳನ್ನೂ ಅನುಭವಿಸುತ್ತಿದ್ದೇವೆ.
ಹಾಗಾದರೆ ಹೇಗೆ ಊಟ ಮಾಡಬೇಕು? ಹೀಗೆ ಮಾಡುವುದರಿಂದ ನಿಜವಾಗಿಯೂ ಆರೋಗ್ಯಕ್ಕೆ ಲಾಭಗಳಿವೆಯಾ ಎಂದು ನೀವು ಕೇಳಬಹುದು. ಆಯುರ್ವೇದವೂ ಪುಷ್ಟೀಕರಿಸುವಂತೆ, ಊಟ ಮಾಡುವ ಬಗೆಗೆ ೧೦ ಚಿನ್ನದಂಥ ನಿಯಮಗಳಿವೆ. ಇವುಗಳನ್ನು ಪಾಲಿಸಿದರೆ, ಆರೋಗ್ಯದ ಕಡೆಗಿನ ನಿಮ್ಮ ಹೆಜ್ಜೆಗೆ ಇನ್ನಷ್ಟು ಬಲ ಬರಬಹುದು. ಬನ್ನಿ, ಆ ಗೋಲ್ಡನ್ ನಿಯಮಗಳನ್ನಿಲ್ಲಿ ನೋಡೋಣ.
೧. ಮಾಡುವ ಊಟ ಹದ ಬಿಸಿಯಿರಲಿ. ಜೊತೆಗೆ ಒಳ್ಳೆಯ ಕೊಬ್ಬು ಹಿತಮಿತವಾಗಿರಲಿ. ಆಗಷ್ಟೇ ಅಡುಗೆ ಮಾಡಿದ ಫ್ರೆಶ್ ಆಹಾರ ಒಳ್ಳೆಯದು.
೨. ಸರಿಯಾದ ಪ್ರಮಾಣದ ಊಟ ಮಾಡುವುದು ಬಹಳ ಮುಖ್ಯ. ಹಸಿವಾಗಿದೆ ಎಂದು ಯದ್ವಾತದ್ವಾ ತಿನ್ನುವುದು, ಊಟ ರುಚಿಯಾಗಿದೆ ಎಂದು ಹೊಟ್ಟೆ ಬಿರಿಯುವ ಹಾಗೆ ಉಣ್ಣುವುದು ಸಲ್ಲ. ಹಾಗಂತ, ತೆಳ್ಳಗಾಗುತ್ತೇನೆ ಎಂಬ ನೆಪವೊಡ್ಡಿ ತಿಂದ ಶಾಸ್ತ್ರ ಮಾಡುವುದೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಪ್ರತಿ ಬಾರಿ ಉಣ್ಣುವ ಮೊದಲು, ಈ ಮೊದಲು ಉಂಡ ಆಹಾರ ಸರಿಯಾಗಿ ಕರಗಿರುವುದೂ ಮುಖ್ಯ.
೩. ನಿಮ್ಮ ದೇಹಕ್ಕೆ ಸರಿಯಾಗಿ ಹೊಂದುವ ಊಟ ಮಾಡಿ. ಕೆಲವರಿಗೆ ಕೆಲವು ಆಹಾರಗಳು ಹಿಡಿಸುವುದುದಿಲ್ಲ. ಅರ್ಥಾತ್, ಬಾಯಿಗೆ ರುಚಿ ಅನಿಸಿದರೂ, ದೇಹಕ್ಕೆ ಸೇರುವುದಿಲ್ಲ. ಹಾಗಾಗಿ ನಿಮ್ಮ ನಿಮ್ಮ ದೇಹದ ಸಾಧಕ ಬಾಧಕಗಳನ್ನು ಅರಿತುಕೊಳ್ಳಿ. ದೇಹಕ್ಕೆ ಹೊಂದುವ ಆಹಾರವನ್ನು ಸೇವಿಸಿ.
೪. ಒಂದಕ್ಕೊಂದು ಸರಿಹೊಂದುವ ಆಹಾರ ಸೇವಿಸಿ. ಕೆಲವು ಆಹಾರಗಳು ಜೊತೆಯಲ್ಲಿ ಸೇವಿಸಿದರೆ ಒಂದಕ್ಕೊಂದು ಸರಿ ಹೊಂದುವುದಿಲ್ಲ. ಹಾಗಾಗಿ ಇಂತಹ ಆಹಾರದ ಬಗ್ಗೆ ಗಮನವಿರಲಿ.
ಇದನ್ನೂ ಓದಿ | Hair care | ಫಳಫಳಿಸುವ ತಲೆಕೂದಲಿಗೆ ಸತ್ವಯುತ ಆಹಾರವೇ ಮೂಲ
೫. ಊಟ ಮಾಡುವಾಗ ಅತಿಯಾದ ಮಾತು ನಗು ಒಳ್ಳೆಯದಲ್ಲ. ಅಪರೂಪಕ್ಕೆ ಬಂಧು ಮಿತ್ರರು ಸೇರಿದಾಗ, ಗೆಳೆಯ ಗೆಳತಿಯರೆಲ್ಲ ಊಟಕ್ಕೆಂದೇ ಜೊತೆ ಸೇರಿದಾಗ ಅಪರೂಪಕ್ಕೆ ಮಾತು, ನಗು, ಹರಟೆ, ಕೇಕೆ ಊಟದ ಸಂದರ್ಭ ಸಾಮಾನ್ಯ. ಆದರೆ, ನಿತ್ಯವೂ ಈ ಅಭ್ಯಾಸ ಒಳ್ಳೆಯದಲ್ಲ. ಊಟದ ಸಂದರ್ಭ ಚಿತ್ತ ಚಾಂಚಲ್ಯವೂ ಬೇಡ. ಟಿವಿ ನೋಡುವುದು, ಫೋನ್ ನೋಡುವುದು, ವಿಡಿಯೋ ನೋಡುವುದು ಇತ್ಯಾದಿ ಬೇಡ. ಊಟದ ಕಡೆಗಷ್ಟೆ ಸಂಪೂರ್ಣ ಗಮನವಿರಲಿ.
೬. ಗಡಿಬಿಡಿಯಿಂದ ಗಬಗಬನೆ ನುಂಗಬೇಡಿ. ಹಾಗೆಯೇ ಬಹಳ ನಿಧಾನಗತಿಯೂ ಬೇಡ. ಒಂದೇ ಹದದಲ್ಲಿ ನಿತ್ಯ ಉಂಡರೆ ಒಳ್ಳೆಯದು. ಜೊತೆಗೆ ಸರಿಯಾಗಿ ಜಗಿದು ತಿನ್ನುವುದು ಒಳ್ಳೆಯದು.
೭. ಊಟವೊಂದು ಕೇವಲ ಕೈಯಿಂದ ತುತ್ತು ತೆಗೆದು ಬಾಯಿಗಿಡುವ ದೈಹಿಕ ಕ್ರಿಯೆ ಮಾತ್ರವಲ್ಲ. ಅದೊಂದು ಭಾವನಾತ್ಮಕ ಕ್ರಿಯೆಯೂ ಕೂಡಾ. ಇಲ್ಲಿ ದೇಹದೊಂದಿಗೆ ಮನಸ್ಸೂ ಬಹಳಷ್ಟನ್ನು ಗ್ರಹಿಸುತ್ತಿರುತ್ತದೆ. ಹಾಗಾಗಿ ಆ ಸಂಪೂರ್ಣ ಕ್ರಿಯೆಯಲ್ಲಿ ನಮ್ಮನ್ನು ನಾವೂ ಒಳಗೊಳ್ಳಿಸುವುದು ಮುಖ್ಯವಾಗುತ್ತದೆ. ಒಂದೊಂದು ತುತ್ತಿನ ರುಚಿಯನ್ನೂ ಸಕಲ ಇಂದ್ರಿಯಗಳಿಂದ ಗ್ರಹಿಸುತ್ತ ಸಂತೋಷದಿಂದ ಪ್ರೀತಿಯಿಂದ ಉಣ್ಣುವುದು ಮಾನಸಿಕವಾಗಿಯೂ ಪರಿಣಾಮ ಬೀರುತ್ತದೆ.
೮. ಎಷ್ಟು ಬೇಕೋ ಅಷ್ಟನ್ನೇ ಹಾಕಿಕೊಂಡು ಉಣ್ಣುವುದು ಬಹಳ ಮುಖ್ಯ. ಎಷ್ಟೇ ಶ್ರೀಮಂತಿಕೆಯಿರಲಿ, ಊಟ ಎನ್ನುವುದೊಂದು ಭಾಗ್ಯ ಎಂಬುದರಲ್ಲಿ ನಂಬಿಕೆಯಿರಲಿ. ಉಣ್ಣುವ ಅನ್ನದ ಮೇಲೆ ಗೌರವವಿರಲಿ. ಬೇಕಾದಷ್ನ್ನೇ ಹಾಕಿಕೊಂಡು ಉಣ್ಣಲು ಕಲಿಯಿರಿ. ಬೇಡದಿದ್ದರೆ ಎಸೆದರಾಯಿತು ಎಂಬ ಪ್ರವೃತ್ತಿ ಬೇಡ.
ಇದನ್ನೂ ಓದಿ | National nutrition week | ಊಟ, ತಿಂಡಿಗೆ ಮೊದಲು ಅರಗಿಸಿಕೊಳ್ಳಿ ಈ ಸಂಗತಿ!
೯. ಸಾಧ್ಯವಾದಷ್ಟೂ ಕೆಳಗೆ ನೆಲದಲ್ಲಿ ಕೂತು ಉಣ್ಣುವುದನ್ನು ರೂಢಿಸಿಕೊಳ್ಳಿ, ಡೈನಿಂಗ್ ಟೇಬಲ್ಲು, ಸೋಫಾ, ಮೇಜು ಅಥವಾ ನಿಂತು ಉಣ್ಣುವುದು ಇತ್ಯಾದಿಗಳಿಗಿಂತ ಹಿಂದಿನ ಪದ್ಧತಿಯಂತೆ ನೆಲದಲ್ಲಿ ಕೂತು ಉಣ್ಣುವುದು ಆರೋಗ್ಯಕರ. ವಾರದಲ್ಲೊಮ್ಮೆಯಾದರೂ, ವೀಕೆಂಡಿನಲ್ಲಿ ಮನೆಯವರೆಲ್ಲರ ಜೊತೆ ಹೀಗೆ ಜೊತೆಯಾಗಿ ಕುಳಿತು ಕಲೆತು ಉಣ್ಣುವುದನ್ನು ಅಭ್ಯಾಸ ಮಾಡಿಕೊಳ್ಳಿ.
೧೦. ಎಲ್ಲಕ್ಕಿಂತ ಮುಖ್ಯವಾಗಿ ಊಟ ಮಾಡುವ ಪರಿಸರ ಸ್ವಚ್ಛವಾಗಿರಲಿ.