Site icon Vistara News

Healthy Pasta | ಪಾಸ್ತಾ ಎಂಬ ಮೋಡಿಗಾರ: ತೂಕ ಇಳಿಸುವ ಮಂದಿ ಪಾಸ್ತಾ ತಿನ್ನಬಾರದೇ?

healthy pasta

ʻಏನಾದರೊಂದು ಸಾಧಿಸಬೇಕೆಂದಿದ್ದರೆ ಕೆಲವು ಇಷ್ಟಗಳನ್ನು ತ್ಯಜಿಸಬೇಕು. ಎಲ್ಲವೂ ಸುಲಭದಲ್ಲಿ ದಕ್ಕುವುದಿಲ್ಲʼ ಎಂಬ ಮಾತೊಂದಿದೆ. ಹಾಗೆಯೇ, ತೂಕದ ಬಗ್ಗೆ ಕಾಳಜಿ ಇಟ್ಟುಕೊಂಡವರೆಲ್ಲ, ನಾಲಿಗೆ ಚಪಲವನ್ನು ಕೊಂಚ ತ್ಯಜಿಸಬೇಕಾಗುತ್ತದೆ. ರುಚಿಯಾದುದನ್ನು ಸವಿಯುತ್ತಲೇ ಇರಬೇಕೆನ್ನುವುದು ಚಟವಾಗಿದ್ದವರಿಗೆ, ತೂಕ ಇಳಿಸಿಕೊಳ್ಳುವುದು ಕಷ್ಟವೇ. ಹೀಗೆ ತೂಕ ಇಳಿಸಿಕೊಳ್ಳುವ ಮಂದಿಗೆ ಮರೀಚಿಕೆಯಾಗಿ ಬಿಡುವ ತಿನಿಸುಗಳ ಪೈಕಿ ಪಾಸ್ತಾ ಕೂಡಾ ಒಂದು. ನಮ್ಮ ದೇಶದ ಮೂಲದ ತಿನಿಸಲ್ಲದಿದ್ದರೂ ಪಿಜ್ಜಾದ ಹಾಗೆ ಯುವಜನರನ್ನು ವ್ಯಾಪಕವಾಗಿ ಸೆಳೆದಿರುವ ತಿನಿಸುಗಳ ಪೈಕಿ ಪಾಸ್ತಾ ಮುಂಚೂಣಿಯಲ್ಲಿದೆ. ಆದರೆ, ತೂಕ ಇಳಿಸುವುದೆಂದರೆ ಯಾವಾಗಲೂ ರುಚಿಯಿಲ್ಲದ ತಿನಿಸುಗಳನ್ನೇ ತಿನ್ನಬೇಕೆಂದೇನೂ ಇಲ್ಲ. ರುಚಿಯಾಗಿ ನಾಲಿಗೆಯ ಆಸೆಯನ್ನೂ ಕೊಂಚ ಮಟ್ಟಿಗೆ ಓಲೈಸಿಕೊಂಡೇ ನಮ್ಮ ತೃಪ್ತಿ ಹೊಂದಬಹುದು. ಆರೋಗ್ಯಕರ ಶೈಲಿಯಲ್ಲಿ ಪಾಸ್ತಾವನ್ನೂ ಮಾಡಿ ತಿನ್ನಬಹುದು.

೧. ಪಾಸ್ತಾವನ್ನು ಪೋಷಕಾಂಶಯುಕ್ತವಾಗಿ ಹೇಗೆ ಮಾಡಬಹುದು ಎಂದು ಯೋಚಿಸಿದರೆ, ಅದಕ್ಕಿರುವ ಸರಳ ಉಪಾಯ ಎಂದರೆ ಎಷ್ಟು ಸಾಧ್ಯವೋ ಅಷ್ಟು ತರಕಾರಿಗಳನ್ನು ಸೇರಿಸುವುದು. ಅಂದರೆ, ಮಾಡಲು ಬಳಸಿದ ಪಾಸ್ತಾದ ಎರಡರಷ್ಟು ಪ್ರಮಾಣದ ತರಕಾರಿಯನ್ನೇ ಸೇರಿಸುವುದು. ಈರುಳ್ಳಿ, ಟೊಮೇಟೋ, ಬೆಳ್ಳುಳ್ಳಿ, ದೊಣ್ಣೆ ಮೆಣಸು, ಜೋಳ, ಅಣಬೆ, ಬ್ರೊಕೋಲಿ, ಕ್ಯಾರೆಟ್‌, ಬೀನ್ಸ್‌, ಹಸಿ ಬಟಾಣಿ ಸೇರಿದಂತೆ ಇನ್ನೂ ಅನೇಕ ತರಕಾರಿಗಳನ್ನು ಇದಕ್ಕೆ ಸೇರಿಸಬಹುದು. ಈ ಎಲ್ಲ ತರಕಾರಿಗಳನ್ನು ಹದ ಉರಿಯಲ್ಲಿ ಕಡಿಮೆ ಎಣ್ಣೆಯನ್ನು ಬಳಸಿ ಸಣ್ಣಗೆ ಹುರಿದು ಇದಕ್ಕೆ ಇದರ ಅರ್ಧದಷ್ಟು ಪ್ರಮಾಣದ ಬೇಯಿಸಿದ ಪಾಸ್ತಾ ಸೇರಿಸಿದರೆ, ಪೋಷಕಾಂಶಯುಕ್ತ ಬೆಳಗಿನ ತಿಂಡಿಯಾಗಿಯೂ ಅಥವಾ ಸಂಜೆಯ ಸ್ನ್ಯಾಕ್‌ ಆಗಿಯೂ ತಿನ್ನಬಹುದು.

೨. ಇನ್ನು ಪಾಸ್ತಾ ಪ್ರಿಯರು ತೂಕ ಇಳಿಸುವ ಮಾತಾಡುತ್ತಿದ್ದರೆ, ಮೈದಾ ಹೊರತು ಪಡಿಸಿ ಉಳಿದ ಬಗೆಯ ಪಾಸ್ತಾಗಳನ್ನು ಬಳಸಬಹುದು. ಈಗ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಪಾಸ್ತಾಗಳು ಲಭ್ಯವಿವೆ. ಗೋಧಿ ಪಾಸ್ತಾ, ರಾಗಿ ಅಥವಾ ರವೆಯ ಪಾಸ್ತಾ, ರಾಜ್ಮಾ ಪಾಸ್ತಾ, ಕಾಳುಗಳ ಪಾಸ್ತಾ ಹೀಗೆ ನಾನಾ ಬಗೆಯ ಪಾಸ್ತಾಗಳಿಂದು ಸಿಗುತ್ತವೆ. ಇವುಗಳನ್ನು ಮೈದಾದ ಪಾಸ್ತಾದ ಬದಲಾಗಿ ಇತರ ಧಾನ್ಯ ಬಳಸಿ ಪಾಸ್ತಾ ತಿನ್ನಬೇಕೆನ್ನುವ ಬಯಕೆಯನ್ನು ಈಡೇರಿಸಿಕೊಳ್ಳಬಹುದು.

ಇದನ್ನೂ ಓದಿ | Healthy oil | ಕೊಲೆಸ್ಟೆರಾಲ್‌ ಸಮಸ್ಯೆಯೇ? ಈ ಎಣ್ಣೆಗಳು ನಿತ್ಯ ಬಳಕೆಗೆ ಒಳ್ಳೆಯದು!

೩. ತೂಕ ಇಳಿಸುವ ಸಂದರ್ಭ ಇನ್ನೊಂದು ಮುಖ್ಯವಾಗಿ ನೆನಪಿಟ್ಟುಕೊಳ್ಳಬೇಕಾದ ವಿಷಯವೆಂದರೆ ಎಷ್ಟು ತಿನ್ನುತ್ತೇವೆಂಬುದು! ತಿನ್ನುವ ಪ್ರಮಾಣ ನಮ್ಮ ತೂಕ ಇಳಿಕೆಯನ್ನು ನಿರ್ಧರಿಸುತ್ತದೆ. ಆದರೆ ಇದರ ಅರ್ಥ ಕಡಿಮೆ ತಿಂದರೆ ಬೇಗ ತೂಕ ಇಳಿಸಬಹುದು ಎಂದಲ್ಲ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಉದಾಹರಣೆಗೆ, ಪಾಸ್ತಾ ಇಷ್ಟ ಎಂದು, ಪೋಷಕಾಂಶಯುಕ್ತವಾಗಿ ಮಾಡಿದ್ದೇವಾದ್ದರಿಂದ ಯಾವುದಕ್ಕೂ ತಲೆಬಿಸಿ ಮಾಡಿಕೊಳ್ಳುವ ಅಗತ್ಯವೇ ಇಲ್ಲವೆಂದು ಹೊಟ್ಟೆ ಬಿರಿಯುವಂತೆ ತಿಂದರೆ ತೂಕದಲ್ಲಿ ವ್ಯತ್ಯಾಸವೇ ಆಗದು. ಮೂರೂ ಹೊತ್ತು ಹೊಟ್ಟೆ ಭರ್ತಿ ತಿನ್ನುವ ಅಭ್ಯಾಸವನ್ನು ಬಿಟ್ಟು, ತಿನ್ನುವ ಪ್ರಮಾಣದ ಮೇಲೆ ಹೆಚ್ಚು ಗಮನ ಹರಿಸಬೇಕು.

ರುಚಿಯಾಗಿ ತಿಂದರೂ, ಎಷ್ಟು ತಿನ್ನುತ್ತೇವೆ ಎಂಬುದು ತೂಕ ಇಳಿಕೆಯಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಒಂದು ಬೌಲ್‌ ತುಂಬಾ ಪಾಸ್ತಾ ತಿಂದರೆ ಒಂದು ಹೊತ್ತಿಗೆ ಸಾಕು. ಎರಡನೇ ಬಾರಿ ಹಾಕಿಸಿಕೊಂಡು ಮತ್ತೆ ತಿನ್ನಬೇಕಾದ ಅಗತ್ಯ ಇಲ್ಲ ಎಂಬ ಜಾಗ್ರತೆ ವಹಿಸಿಕೊಳ್ಳುವುದು ಅಗತ್ಯ. ಇದು ಕೇವಲ ನಿಮ್ಮ ಬಾಯಿ ಚಪಲಕ್ಕಾಗಿ ಇದನ್ನು ತಿನ್ನುತ್ತಿದ್ದೀರಿ ಎಂಬುದನ್ನು ನೆನಪಿಟ್ಟುಕೊಳ್ಳಿ. ನಿಮ್ಮ ಹಸಿವಿನ ಶೇಕಡಾ ೮೦ರಷ್ಟನ್ನು ಮಾತ್ರ ಹೊಟ್ಟೆ ತುಂಬಿಸಿಕೊಂಡರೆ ಆಯಿತು. ಉಳಿದ ೨೦ ಶೇಕಡಾ ಹೊಟ್ಟೆ ಖಾಲಿ ಇರಬೇಕು. ಯಾವಾಗಲೂ ಹೊಟ್ಟೆ ಆದಷ್ಟು ಹಗುರವಾಗಿರುವುದನ್ನು ನೋಡಿಕೊಂಡರೆ ತೂಕ ಇಳಿಸುವುದು ಸುಲಭ. ಇವೆಲ್ಲವುಗಳ ಜೊತೆಗೆ ನಿಯಮಿತ ವ್ಯಾಯಾಮವನ್ನು ಮಾತ್ರ ಮರೆಯಬಾರದು!

ಇದನ್ನೂ ಓದಿ | Healthy Food | ನಾಲಿಗೆಯ ಮಾತು ಕೇಳಬೇಡಿ, ದೇಹಕ್ಕೆ ಕಲಿಸಿ ಆರೋಗ್ಯದ ಪಾಠ!

Exit mobile version