ಕಾಬೂಲಿ ಹಾಗೂ ಕಪ್ಪು ಕಡಲೆ ಅಥವಾ ಛೋಲೆ ಎಂದು ಕರೆಯಲ್ಪಡುವ ಚೆನ್ನಾ ಪೋಷಕಾಂಶಗಳ ಪವರ್‌ಹೌಸ್. ಉತ್ತಮ ಪ್ರಮಾಣದಲ್ಲಿ ಪ್ರೊಟೀನ್ ಇರುವ ಆಹಾರ. ಸಸ್ಯಜನ್ಯ ಮೂಲಗಳಿಂದ ಪ್ರೊಟೀನ್ ಬೇಕಾದವರಿಗೆ ಇದು ವರ. ಮಕ್ಕಳಿಗೆ ಸಾಕಷ್ಟು ಪೋಷಕಾಂಶ ಸಿಗಬೇಕಾದರೆ, ಇಂತಹ ಆಹಾರಗಳನ್ನು ಬಗೆಬಗೆಯಲ್ಲಿ ಮಕ್ಕಳ ಹೊಟ್ಟೆಗೆ ಸೇರುವಂತೆ ಮಾಡಬೇಕು. ಆದರೆ, ಇಂದಿನ ಮಕ್ಕಳಿಗೆ ಇವನ್ನು ಹೊಟ್ಟೆ ಸೇರುವಂತೆ ಮಾಡುವುದೇ ಪೋಷಕರಿಗೆ ಚಾಲೆಂಜ್. ಬಗೆಬಗೆಯಲ್ಲಿ, ರುಚಿರುಚಿಯಾಗಿ ಕಡಲೆಯನ್ನೂ ಮಕ್ಕಳಿಗೆ ತಿನ್ನಬಹುದಾದಂತೆ ಮಾಡಬಹುದು. ಬನ್ನಿ, ಯಾವೆಲ್ಲ ಬಗೆಯಲ್ಲಿ ಚೆನ್ನಾವನ್ನು ಬಿಡು ಹೊತ್ತಿನಲ್ಲಿ, ಹಸಿವಾದಾಗ ರುಚಿರುಚಿಯಾಗಿ ಮಾಡಿ ತಿನ್ನಬಹುದು (Snacks for Kids) ಎಂಬುದನ್ನು ನೋಡೋಣ.
ಕ್ರಿಸ್ಪೀ ರೋಸ್ಟೆಡ್ ಚೆನ್ನಾ
ರುಚಿಯಷ್ಟೇ, ಪೋಷಕಾಂಶಯುಕ್ತವಾದ ಕ್ರಿಸ್ಪೀ ರೋಸ್ಟೆಡ್ ಚೆನ್ನಾ ಆರೋಗ್ಯಕರ ಸ್ನ್ಯಾಕ್‌ಗಳ ಪೈಕಿ ಒಂದು. ಚೆನ್ನಾವನ್ನು ಚೆನ್ನಾಗಿ ನೆನೆಹಾಕಿದ ಮೇಲೆ, ನೀರನ್ನು ತೆಗೆದು ನಂತರ ನೀರು ಹೋಗುವಂತೆ ಚೆನ್ನಾಗಿ ಒರೆಸಿ, ಆರಲು ಬಿಟ್ಟು, ಅದಕ್ಕೆ ಆಮ್‌ಚೂರ್ ಪೌಡರ್, ಚಾಟ್ ಮಸಾಲಾ, ಸ್ವಲ್ಪ ಮೆಣಸಿನಪುಡಿ, ಜೀರಿಗೆ ಪುಡಿ ಇತ್ಯಾದಿಗಳನ್ನು ಹಾಕಿ ಇದನ್ನು ಏರ್ ಫ್ರೈಯರ್ ಬಾಸ್ಕೆಟ್‌ನಲ್ಲಿ ಹಾಕಿ 200ಸಿ ಯಲ್ಲಿ ಇಪ್ಪತ್ತು ನಿಮಿಷಗಳ ಕಾಲ ಇಟ್ಟರೆ ಕ್ರಿಸ್ಪೀಯಾದ ರೋಸ್ಟೆಡ್ ಚೆನ್ನಾ ರೆಡಿ. ಮಕ್ಕಳು ಆಗಾಗ ತಿನ್ನಲು ಕೇಳುವಾಗ ಕೊಡಬಹುದಾದ ಒಳ್ಳೆಯ ಆರೋಗ್ಯಕರ ಸ್ನ್ಯಾಕ್ ಇದು.
ಚೆನ್ನಾ ಚಾಟ್
ನೆನೆಸಿದ ಚೆನ್ನಾವನ್ನು ಬೇಯಿಸಿ, ಅದಕ್ಕೆ, ಈರುಳ್ಳಿ, ಟೊಮೇಟೋ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಸ್ವೀಟ್ ಕಾರ್ನ್ ಹಾಗೂ ಇತರ ಯಾವುದೇ ನಿಮ್ಮಿಷ್ಟದ ಹಸಿ ತರಕಾರಿಗಳನ್ನು ಸೇರಿಸಿ ಸ್ವಲ್ಪ ನಿಂಬೆಹಣ್ಣನ್ನು ಹಿಂಡಿ, ಮೆಣಸಿನ ಪುಡಿ, ಚಾಟ್ ಮಸಾಲಾ ಇತ್ಯಾದಿಗಳನ್ನು ಹಾಕಿ ಬೇಕಿದ್ದರೆ ಸೇವ್ ಹಾಕಿ ಸಂಜೆಯ ಹೊತ್ತು ಹೊಟ್ಟೆ ತುಂಬಬಹುದಾದ ತಿನಿಸನ್ನು ತಿನ್ನಲು ಹೊಡಬಹುದು.
ಚೆನ್ನಾ ರ‍್ಯಾಪ್
ಮಕ್ಕಳಿಗೆ ಪರಾಠಾ ವನ್ನು ಟಿಫನ್ ಬಾಕ್ಸಿಗೆ ಹಾಕಿ ಕೊಡುವ ಸಂದರ್ಭ ಏನೆಲ್ಲ ಮಾಡಬಹುದು ಎಂಬುದಕ್ಕೆ ಇದೂ ಒಂದು ಆಯ್ಕೆ. ನೆನೆ ಹಾಕಿ ಬೇಯಿಸಿದ ಚೆನ್ನಾ ಜೊತೆ, ಮಕ್ಕಳ ಇಷ್ಟದ ತರಕಾರಿಗಳನ್ನೂ ಹಾಕಿ ಮಸಾಲೆಯನ್ನೂ ಹಾಕಿ ಅದನ್ನು ಪರಾಠಾದ ಒಳಗಿಟ್ಟು ರೋಲ್ ಮಾಡಿ ಮಕ್ಕಳಿಗೆ ಕೊಡಬಹುದು.
ಚೆನ್ನಾ ಕಟ್ಲೆಟ್
ಭಾರತದಲ್ಲಿ ನಾವು ಯಾವುದೇ ತರಕಾರಿಯಿಂದಲೂ ಕಟ್ಲೆಟ್ ಮಾಡಿಬಿಡುತ್ತೇವೆ. ಬೇಯಿಸಿದ ಚೆನ್ನಾದ ಜೊತೆಗೆ ನಿಮ್ಮ ಇಷ್ಟದ ತರಕಾರಿಗಳನ್ನು ಸೇರಿಸಿ ಬ್ರೆಡ್ ಕ್ರಂಬ್ಸ್, ಸೂಜಿ ಇತ್ಯಾದಿ ಬೈಂಡಿಂಗ್ ಏಜೆಂಟ್‌ಗಳನ್ನು ಹಾಕಿ ಕಟ್ಲೆಟ್ ಆಕಾರದಲ್ಲಿ ಶಾಲೋ ಫ್ರೈ ಮಾಡಿದರೆ, ತಿನ್ನಲು ರುಚಿ. ಆರೋಗ್ಯಕರ ಸ್ನ್ಯಾಕ್ ಕೂಡಾ ಆದಂತಾಯಿತು.
ಮಸಾಲಾ ಚೆನ್ನಾ ಪಾಪ್ ಕಾರ್ನ್
ಪ್ರೊಟೀನ್‌ನಿಂದ ಸಂಪದ್ಭರಿತವಾದ ಮಸಾಲಾ ಚೆನ್ನಾ ಪಾಪ್ ಕಾರ್ನ್ ಮಾಡಬಹುದು. ಬೇಯಿಸಿದ ಚೆನ್ನಾಕ್ಕೆ, ಸ್ವಲ್ಪ ಬೆಣ್ಣೆ, ಚಾಟ್ ಮಸಾಲಾ, ಮೆಣಸಿನ ಪುಡಿ, ಉಪ್ಪು ಹಾಕಿ ಏರ್ ಫ್ರೈಯರ್‌ನಲ್ಲಿ 180 ಡಿಗ್ರಿಯಲ್ಲಿ 20 ನಿಮಿಷ ಇಟ್ಟು ಆಮೇಲೆ ತಣಿಸಿ. ಸಿನಿಮಾ ನೋಡುವಾಗ ಅಥವಾ, ಮಕ್ಕಳ ಪಾರ್ಟಿಗೆ ಹೀಗೆ ಮಾಡಿ ತಿನ್ನಲು ಕೊಡಬಹುದು.