ಚಳಿಗಾಲ ಬಂದಾಕ್ಷಣ ಬಿಸಿಬಿಸಿಯಾಗಿ ಏನಾದರೂ ಮಾಡಿ ತಿನ್ನುವ ಬಯಕೆ ಖಂಡಿತ ಆಗದೆ ಇರದು. ಚಳಿಯು ಹೆಚ್ಚಾಗುತ್ತಿದ್ದಂತೆ ಈ ಬಿಸಿಯ ಬಯಕೆ ಇನ್ನೂ ಹೆಚ್ಚು, ಬಿಸಿಬಿಸಿ ಸೂಪ್, ಬಜ್ಜಿ, ಬೋಂಡಾ, ವಡೆಗಳು ಬಾಯಲ್ಲಿ ನೀರು ತರಿಸುತ್ತವೆ ನಿಜ. ನೀವು ಚಿಕನ್ ಪ್ರಿಯರಾಗಿದ್ದರಂತೂ ಕಥೆ ಮುಗಿದಂತೆಯೇ. ಚಳಿಗಾಲಕ್ಕೆ ಬಿಸಿಬಿಸಿಯಾದ ಚಿಕನ್ ಡಿಶ್ಗಳು ಕೈಬೀಸಿ ಕರೆಯದೆ ಇರದು. ರಜಾದಿನಗಳಲ್ಲಿ ಮನೆಯಲ್ಲೇ ಚಿಕನ್ ಸೂಪ್ (Chicken Soup) ಮಾಡಿಕೊಂಡು ಕುಡಿಯೋಣ ಅನ್ನಿಸದೆ ಖಂಡಿತ ಇರಲಾರದು. ಆದರೆ, ರೆಸ್ಟೋರೆಂಟ್ನಲ್ಲಿ ಸಿಗುವ ಹಾಗೆ ಮಾಡಲು ಸಾಧ್ಯವಾಗುತ್ತಿಲ್ಲವಲ್ಲ ಎಂದೂ ನಿಮಗೆ ಒಂದೆರಡು ಬಾರಿ ಟ್ರೈ ಮಾಡಿ ಅನಿಸಿರಬಹುದು. ಹಾಗಾದರೆ, ಚಿಕನ್ ಪ್ರಿಯರೇ ಬನ್ನಿ, ನೀವು ಎಡವಿದ್ದೆಲ್ಲಿ ಎಂದು ನೋಡಿಕೊಳ್ಳಲು ಒಮ್ಮೆ ಈ ಟಿಪ್ಸ್ಗಳನ್ನು ಗಮನಿಸಿ. ಸರಳವಾಗಿ ಮನೆಯಲ್ಲೇ ರೆಸ್ಟೋರೆಂಟ್ ರುಚಿಯ ಚಿಕನ್ ಸೂಪ್ (Chicken Soup) ಮಾಡಿ, ಕುಡಿಯಿರಿ, ಚಳಿಯಲ್ಲೂ ಬೆಚ್ಚಗಿರಿ!
- ಸೂಪ್ಗೆ ಬೇಕಾದ ಸ್ಟಾಕ್ ಪ್ರತ್ಯೇಕವಾಗಿ ಮಾಡಿ. ಚಿಕನ್ ಸೂಪ್ನಲ್ಲಿ (Chicken Soup) ಬ್ರಾತ್ ಅಥವಾ ಸ್ಟಾಕ್ ಪಾತ್ರ ಮಹತ್ವದ್ದು. ಕ್ರೀಮೀ ಆಗಿರುವ ದಪ್ಪವಾದ ಸೂಪ್ ರೆಡಿಯಾಗಲು ಖಂಡಿತ ಸಮಯ ಬೇಕು. ಸರಿಯಾದ ಪ್ರಮಾಣದ ಮಸಾಲೆಗಳ ಜೊತೆಗೆ ಹದವಾಗಿ ಮಾಂಸ ಬೇಯುವಾಗ ಸೂಪ್ನ ಘಮ ಇನ್ನೂ ಹೆಚ್ಚುತ್ತದೆ. ಹೀಗೆ ಬೇಯಿಸುವ ಹದವನ್ನು ಕಲಿತುಕೊಳ್ಳುವುದು ಬಹಳ ಮುಖ್ಯ. ಅತ್ಯುತ್ತಮ ಸೂಪ್ನ ಸೀಕ್ರೆಟ್ ಇದರಲ್ಲಿ ಅಡಗಿದೆ.
- ಸೂಪ್ಗೆ ಹಾಕುವ ತರಕಾರಿಗಳನ್ನು ಸರಿಯಾಗಿ ಚಿಕ್ಕದಾಗಿ ಕತ್ತರಿಸಿ. ದೊಡ್ಡ ದೊಡ್ಡ ತುಂಡುಗಳನ್ನಾಗಿ ಮಾಡಬೇಡಿ. ಚಿಕ್ಕ ತುಂಡುಗಳು ಸರಿಯಾಗಿ ಹದವಾಗಿ ಬೆಂದು ಚಮಚದಲ್ಲಿ ಹೊಂದಿಕೊಳ್ಳುತ್ತವೆ.
- ಕತ್ತರಿಸಿದ ತರಕಾರಿಗಳನ್ನು ನೇರವಾಗಿ ಕುದಿಯುತ್ತಿರುವ ಸೂಪ್ಗೆ ಹಾಕಬೇಡಿ. ಪ್ರತ್ಯೇಕವಾಗಿ ತರಕಾರಿಗಳನ್ನು ಬಾಣಲೆಯಲ್ಲಿ ಹುರಿದುಕೊಂಡು ನಂತರ, ಕುದಿಯುವ ಸೂಪ್ಗೆ ಹಾಕಿ. ಹೀಗೆ ಮಾಡುವುದರಿಂದ ತರಕಾರಿಗಳು ಅತಿಯಾಗಿ ಬೆಂದು ಸೂಪ್ನೊಳಗೆ ಕರಗಿ ಮಾಯವಾಗುವುದಿಲ್ಲ. ಜೊತೆಗೆ ರುಚಿಯನ್ನೂ ಹೆಚ್ಚಿಸುತ್ತದೆ.
- ಎಲ್ಲರೂ ತಪ್ಪು ಮಾಡುವುದು ಮಸಾಲೆಗಳ ಆಯ್ಕೆಯಲ್ಲಿ. ಚಿಕನ್ ಸೂಪ್ (Chicken Soup) ಎಂದಾಕ್ಷಣ ಭರಪೂರ ಮಸಾಲೆಗಳನ್ನು ಸುರುವಿಕೊಂಡು ಸೂಪ್ ಮಾಡಲು ಹೊರಡುವುದರಲ್ಲೇ ತಪ್ಪು ಹೆಜ್ಜೆ ಇದೆ. ಹೀಗಾಗಿ ಮಸಾಲೆಯನ್ನು ಹಾಕುವಾಗ ಎಚ್ಚರಿಕೆ ವಹಿಸಿ. ಹದವಾಗಿ ಮಸಾಲೆ ಬೆರೆಸಿ. ಮಸಾಲೆ ಎಷ್ಟಿರಬೇಕು ಎಂದರೆ ಅದು ಸೂಪ್ನ ಜೊತೆಗೆ ಹದವಾಗಿ ಮಿಳಿತಗೊಂಡಿರಬೇಕು. ಆಘ್ರಾಣಿಸುವಾದ ಹದವಾದ ಘಮ ಮೂಗಿಗೆ ಬಡಿಯಬೇಕು. ಒಮ್ಮಿಂದೊಮ್ಮೆಲೆ ಮೂಗಿಗೆ ಘಾಟು ಹೊಕ್ಕುವಂತೆ ಅತಿಯಾಗಿ ಮಸಾಲೆ ಸುರಿಯಬಾರದು. ಹಾಗಾಗಿ ರುಚಿಯಾದ ಚಿಕನ್ ಸೂಪ್ಗೆ ಮಸಾಲೆಯ ಹದ ಬಹಳ ಮುಖ್ಯ.
- ಚಿಕನ್ ಸೂಪ್ ಗಡಿಬಿಡಿಯಲ್ಲಿ ಖಂಡಿತಾ ಮಾಡಬಾರದು. ಹತ್ತೇ ನಿಮಿಷದಲ್ಲಿ ಚಿಕನ್ ಸೂಪ್ (Chicken Soup) ಇತ್ಯಾದಿ ತಲೆಬರಹಗಳಿಗೆ ಮಾರು ಹೋಗದೆ, ಸರಿಯಾಗಿ ನಿಮ್ಮ ಸಮಯವನ್ನು ಇದಕ್ಕೆ ಕೊಟ್ಟು ಖುಷಿಯಿಂದ ಪ್ರೀತಿಯಿಂದ ಮಾಡಿ. ನಿಮ್ಮ ಪ್ರೀತಿ ಚಿಕನ್ ಸೂಪ್ ಹೀರುವಾಗ ಅನುಭವಕ್ಕೆ ಬಾರದೆ ಇರದು. ಯಾಕೆಂದರೆ, ಚಿಕನ್ ಸೂಪ್ನಲ್ಲಿ ಬಳಸುವ ಪ್ರತಿಯೊಂದು ತರಕಾರಿಗೂ ಬೇರೆಬೇರೆ ಬೇಯುವ ಸಮಯವಿದೆ. ಉದಾಹರಣೆಗೆ ಬ್ರೊಕೋಲಿಗೆ ಬೇಯಲು ಕಡಿಮೆ ಸಮಯ ಸಾಕಾದರೆ, ಕ್ಯಾರೆಟ್ಗೆ ಹೆಚ್ಚು ಸಮಯ ಬೇಕು. ಪ್ರತಿಯೊಂದಕ್ಕೂ ಅವುಗಳಿಗೆ ಅಗತ್ಯವಾದ ಸಮಯ ನೀಡಿ. ಅಷ್ಟೇ ಅಲ್ಲ, ಚಿಕನ್ಗೂ ಅಗತ್ಯ ಸಮಯ ನೀಡಿ. ಯಾವುದನ್ನೂ ಅತಿಯಾಗಿ ಬೇಯಿಸಬೇಡಿ.
ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ, ನೀವು ಮಾಡುವ ಶೈಲಿಯಲ್ಲೇ ಅದ್ಭುತ ರುಚಿಯ ಚಿಕನ್ ಸೂಪ್ (Chicken Soup) ಬಿಸಿಬಿಸಿಯಾಗಿ ಮನೆಯಲ್ಲೇ ಮಾಡಿ ಸವಿಯಬಹುದು.
ಇದನ್ನೂ ಓದಿ: Health Benefits Of Curd Rice: ಮೊಸರನ್ನ ಎಂಬ ಅಮೃತ: ಹೊಟ್ಟೆಗೂ ಹಿತ, ದೇಹಕ್ಕೂ ಹಿತ!