ಚಪಾತಿ ಎಂಬುದು ಉತ್ತರ ಭಾರತೀಯರ ನಿತ್ಯದ ಆಹಾರ. ದಕ್ಷಿಣ ಭಾರತೀಯರ ನಿತ್ಯಾಹಾರವಲ್ಲದಿದ್ದರೂ, ಬಹುತೇಕರ ಬದುಕಿನಲ್ಲಿ ನಿತ್ಯಾಹಾರವಾಗಿ ಸ್ಥಾನ ಪಡೆದುಕೊಂಡಿದೆ. ಅನ್ನದ ಹಾಗೆಯೇ ಚಪಾತಿ ಅತ್ಯಂತ ಅಗತ್ಯದ ಆಹಾರಗಳಲ್ಲಿ ಒಂದು. ಆದರೂ, ದಕ್ಷಿಣ ಭಾರತೀಯರಿಗೆ ಚಪಾತಿ ಮಾಡಲು ಬರುವುದಿಲ್ಲ ಎಂಬುದು ಉತ್ತರ ಭಾರತೀಯರ ಬಲವಾದ ನಂಬಿಕೆ. ಹಾಗೆಯೇ, ನಿತ್ಯವೂ ಚಪಾತಿ ಮಾಡುವ ಮನೆಗಳಲ್ಲೂ, ಉತ್ತರ ಭಾರತೀಯರ ಹಾಗೆ ಮೆದುವಾಗಿ, ಉರುಟುರುಟಾಗಿ ಉಬ್ಬಿ ಬರುವ ಪುಲ್ಕಾಗಳ ಹಾಗೆ ಚಪಾತಿ ಮಾಡಲು ಇನ್ನೂ ಬರುತ್ತಿಲ್ಲ ಎಂಬುದು ದಕ್ಷಿಣ ಭಾರತೀಯರ ಅಳಲು ಕೂಡಾ ಹೌದು. ನಾ ಮಾಡಿದ ಚಪಾತಿ ಯಾಕೆ ಗುಂಡಗಾಗಿಲ್ಲ, ಚಪಾತಿ ಯಾಕೆ ಮೂರು ಬೆರಳುಗಳಲ್ಲಿ ಮುರಿಯಲು ಬರುವುದಿಲ್ಲ, ಅಥವಾ ನಾ ಮಾಡಿದ್ದು ದಪ್ಪ ಯಾಕಾಯಿತು, ಲಟ್ಟಿಸಲು ಯಾಕೆ ಬರುತ್ತಿಲ್ಲ ಎಂಬಿತ್ಯಾದಿ ಪುಟ್ಟ್ ಪುಟ್ಟ ಕಾರಣಗಳೇ ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಹಾಗಾದರೆ ಬನ್ನಿ, ಮೆತ್ತನೆಯ, ಮೂರು ಬೆರಳುಗಳಲ್ಲಿ ಮುರಿಯುವ, ಉಬ್ಬುಬ್ಬಿ ಬರುವ ಚಪಾತಿ ಮಾಡಲು ನಿಮ್ಮಿಂದ ಸಾಧ್ಯವಾಗದೆ ಇದ್ದರೆ, ನೀವು ಮಾಡುತ್ತಿರುವ ತಪ್ಪುಗಳೇನು (food tips) ಎಂಬುದನ್ನು ನೋಡೋಣ ಬನ್ನಿ.
1. ನೀರು ಹಾಗೂ ಗೋಧಿ ಹಿಟ್ಟಿನ ಅನುಪಾತ: ಇದು ಹಿಟ್ಟು ಕಲಸುವಾಗಿನ ಅತ್ಯಂತ ಮುಖ್ಯ ಘಟ್ಟ್. ಹಿಟ್ಟು ಕಲಸಲು ಬರುವುದಿಲ್ಲ ಎಂದಾದರೆ, ಚಪಾತಿಯ ಸೋಲು ಪಕ್ಕಾ. ಚಪಾತಿ ಹಿಟ್ಟು ಹದಾಗಿ ಕಲೆಸಲು ಗೋಧಿ ಹುಡಿಗೆ ಎಷ್ಟು ನೀರು ಹಾಕಬೇಕು ಎಂಬುದು ಒಂದು ಬ್ರಹ್ಮವಿದ್ಯೆಯೇ ಸರಿ. ಸ್ವಲ್ಪ ಸ್ವಲ್ಪವೇ ನೀರು ಸೇರಿಸಿಕೊಂಡು ಕಲೆಸುವುದು ಬಹಳ ಮುಖ್ಯ. ನೀರು ಹೆಚ್ಚಾದರೆ, ಅಂಟಾಗಿಯೂ, ನೀರು ಕಡಿಮೆಯಾದರೆ, ಗಟ್ಟಿಯಾಗಿಯೂ ಆಗಿ ಬಿಡುವ ಹಿಟ್ಟನ್ನು ಮೆದುವಾಗಿ ಕಲಸುವುದು ಬಹಳ ಮುಖ್ಯ. ಇದು ಹಿಟ್ಟು ಕಲೆಸುತ್ತಾ ಕಲೆಸುತ್ತಾ ಅಭ್ಯಾಸವಾಗಿ ಬರುವ ವಿದ್ಯೆ. ಅಭ್ಯಾಸ ಮಾಡುವುದು ಬಹಳ ಮುಖ್ಯವಾಗುತ್ತದೆ.
2. ಅತಿಯಾಗಿ ನಾದುವುದು: ಹಿಟ್ಟು ಕಲೆಸುವಾಗ ಎಷ್ಟು ಹೊತ್ತು ಹೇಗೆ ಕಲೆಸಿಕೊಳ್ಳಬೇಕು ಎಂಬುದೂ ಮುಖ್ಯ. ಒಮ್ಮೆ ಹಿಟ್ಟು ಸರಿಯಾದ ಹದಕ್ಕೆ ಬಂತು ಎಂದಾದಲ್ಲಿ ಕಲೆಸುವುದನ್ನು ನಿಲ್ಲಿಸಿ, ಸ್ವಲ್ಪ ಹೊತ್ತು ಹಾಗೆಯೇ ಮುಚ್ಚಿಡಿ. ಅತಿಯಾಗಿ ನಾದುತ್ತಾ ಇದ್ದರೆ ಹಿಟ್ಟು ಗಟ್ಟಿಯಾಗುತ್ತದೆ. ಕಟ್ಟಿದ ಉಂಡೆಯೂ ಗಟ್ಟಿಯಾಗಿ ಚಪಾತಿಯೂ ಗಟ್ಟಿಯಾಗುತ್ತದೆ.
3. ಕಲೆಸಿದ ಹಿಟ್ಟಿಗೆ ಸಮಯ ನೀಡದೆ ಇರುವುದು: ಹಿಟ್ಟು ಕಲೆಸಿಕೊಂಡಾದ ಮೇಲೆ ಒಂದರ್ಧ ಗಂಟೆ ಹೊಂದಿಕೊಳ್ಳಲು ಸಮಯ ನೀಡಬೇಕು. ಕಲೆಸಿದ ಕೂಡಲೇ ಉಂಡೆಗಟ್ಟಿ ಲಟ್ಟಿಸಿಬಿಡುವುದಲ್ಲ. ಒಂದರ್ಧ ಗಂಟೆ ಮುಂಚಿತವಾಗಿ ಹಿಟ್ಟು ಕಲೆಸಿ ಇಡುವುದನ್ನು ರೂಢಿ ಮಾಡಿಕೊಳ್ಳಿ. ನಾದಿದ ಹಿಟ್ಟನ್ನು ಹಾಗೆಯೇ ಮುಚ್ಚಿಡಿ. ಆಗ ಚಪಾತಿ ಮೆತ್ತಗಾಗುತ್ತದೆ.
4. ತೆಳ್ಳಗೆ ಲಟ್ಟಿಸದೆ ಇರುವುದು: ಸರಿಯಾಗಿ ನಾದಿಕೊಂಡ ಹದವಾದ ಹಿಟ್ಟಿನಲ್ಲಿ ತೆಳುವಾದ ಮೆದುವಾದ ಚಪಾತಿ ಲಟ್ಟಿಸಿಕೊಳ್ಳಬಹುದು. ಚಪಾತಿಯನ್ನು ಉರುಟಾಗಿ ತೆಳುವಾಗಿ ಲಟ್ಟಿಸುವುದೂ ಕೂಡಾ ಒಂದು ಕಲೆ. ಅಭ್ಯಾಸ ಮಾಡಿಕೊಂಡಂತೆ ಈ ಕಲೆ ಒಲಿಯುತ್ತದೆ. ಅತಿಯಾಗಿ ತೆಳುವಾಗಿ ಲಟ್ಟಿಸುವ ಅಗತ್ಯವೂ ಇಲ್ಲ. ಅತಿಯಾಗಿ ಒತ್ತಡ ಹಾಕಿ ಲಟ್ಟಿಸುವ ಅಗತ್ಯವೂ ಇಲ್ಲ.
5. ತವಾದ ಉಷ್ಣತೆಯ ಏರುಪೇರು: ಚಪಾತಿ ಬೇಯಿಸುವ ತವಾವನ್ನು ಅತಿಯಾಗಿ ಬಿಸಿಯಾಗದಂತೆ, ಅತಿಯಾಗಿ ತಣ್ಣಗಾಗದಂತೆ ಒಂದು ನಿಗದಿತ ಉಷ್ಣತೆಯಲ್ಲಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಅತಿಯಾದ ಉಷ್ಣತೆಯಲ್ಲಿ ಬೆಂದ ಚಪಾತಿ ಸುಟ್ಟು, ಗಟ್ಟಿಯಾಗುತ್ತದೆ. ಒಂದೇ ತೆರನಾಗಿ ಬೇಯುವುದಿಲ್ಲ. ಹಾಗಾಗಿ ತವಾದ ಉಷ್ಣತೆ ಒಂದೇ ತೆರನಾಗಿ ಕಾಪಾಡಿಕೊಳ್ಳುವುದು ಮುಖ್ಯ.
ಇದನ್ನೂ ಓದಿ: Food Tips: ಈ ಬೇಸಿಗೆಗೆ ಮಕ್ಕಳಿಗೆ ಆಲೂಗಡ್ಡೆ ಚಿಪ್ಸ್ ಮನೆಯಲ್ಲೇ ಮಾಡಿ!
6. ಎರಡೂ ಬದಿಗಳನ್ನು ಸರಿಯಾಗಿ ಬೇಯಿಸದೇ ಇರುವುದು: ಈ ಕಾರಣವೂ ಕೆಲವೊಮ್ಮೆ ನಿಮ್ಮ ಚಪಾತಿಯನ್ನು ಹಾಳು ಮಾಡುತ್ತದೆ. ಚಪಾತಿಯ ಎರಡೂ ಬದಿಗಳನ್ನು ಸರಿಯಾಗಿ ಬೇಯಿಸುವುದು ಕೂಡಾ ಅಷ್ಟೇ ಮುಖ್ಯ. ಇಲ್ಲದಿದ್ದರೆ, ಒಂದು ಬದಿ ಅತಿಯಾಗಿಯೂ ಇನ್ನೊಂದು ಬದಿ ಹಸಿಯಾಗಿಯೂ ಬೇಯಬಹುದು.
7. ಬೇಯಿಸಿದ ಚಪಾತಿಯನ್ನು ಸರಿಯಾಗಿ ಇಟ್ಟುಕೊಳ್ಳದಿರುವುದು: ಬೇಯಿಸಿದ ಚಪಾತಿಯನ್ನು ಬಿಸಿಯಾಗಿ ಉಳಿವಂತೆ ಸಂಗ್ರಹಿಸಿ ಹಾಟ್ ಬಾಕ್ಸ್ ಒಳಗೆ ಸರಿಯಾದ ರೀತಿಯಲ್ಲಿ ಶೇಖರಿಸಿ ಇಟ್ಟಿರುವುದು ಕೂಡಾ ಮುಖ್ಯ. ಸಾಂಪ್ರದಾಯಿಕವಾಗಿ, ಊಟಕ್ಕೂ ಮೊದಲು ಮಾಡಿಟ್ಟ ಚಪಾತಿಗಳನ್ನು ಕಿಚನ್ ಟವೆಲ್ ಅಥವಾ ತೆಳುವಾದ ಬಟ್ಟೆಯಲ್ಲಿ ಸುತ್ತಿ ಹಾಟ್ ಬಾಕ್ಸ್ ಒಳಗೆ ಇಡುವುದರಿಂದ ಮೆತ್ತಗೆ ಉಳಿಯುತ್ತದೆ. ತೆರೆದ ಪಾತ್ರೆಯಲ್ಲಿ ಹಾಗೆಯೇ ಬಿಡುವುದರಿಂದ ಚಪಾತಿ ಒಣಕಲಾಗುತ್ತದೆ. ಒಣಗಿದ ಚಪಾತಿಯನ್ನು ಮತ್ತೆ ಮೆದುವಾಗಿಸಲು ತುಪ್ಪ ಸವರಿ, ತವಾದ ಮೇಲೆ ಸ್ವಲ್ಪ ಬಿಸಿ ಮಾಡುವ ಮೂಲಕ ಮತ್ತೆ ಮೆದುವಾಗಿಸಿ ತಿನ್ನಲು ಯೋಗ್ಯವನ್ನಾಗಿ ಮಾಡಿಕೊಳ್ಳಬಹುದು.
ಇದನ್ನೂ ಓದಿ: Food Tips: ನೀವೇ ಉಪ್ಪಿನಕಾಯಿ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!