ಈ ಚಳಿಗಾಲ ಎಂತಹ ಸೋಂಬೇರಿ ಎಂದರೆ, ಚುರುಕಾಗಿದ್ದವರನ್ನೂ ಸೋಂಬೇರಿ ಮಾಡುತ್ತದೆ. ಶಿಸ್ತಾಗಿ ವ್ಯಾಯಾಮ ಮಾಡಿ ತಿಂದುಂಡು ಕೆಲಸ ಮಾಡುತ್ತಿದ್ದವರನ್ನೂ ಆಲಸಿಗಳನ್ನಾಗಿ ಮಾಡುತ್ತದೆ. ಇನ್ನು ಮಕ್ಕಳ ಕಥೆಯೇನು ಹೇಳಿ. ಮಕ್ಕಳನ್ನು ಪಾಲನೆ ಪೋಷಣೆ ಮಾಡುವ ಹೆತ್ತವರಿಗಂತೂ ಅವರನ್ನು ತೃಪ್ತಿಪಡಿಸುವುದೇ ದೊಡ್ಡ ಟಾಸ್ಕ್. ಬೇಸಿಗೆಯಲ್ಲಾದರೆ, ಮಕ್ಕಳಿಗೆ ಐಸ್‌ಕ್ರೀಂ ಕೊಡಿಸುವುದು ಪರಿಪಾಠ. ಆದರೆ, ಚಳಿಗಾಲ ಬಂದರೆ, ಬಿಸಿಬಿಸಿಯಾಗಿ ಅವರಿಗಿಷ್ಟವಾಗುವ ತಿನಿಸುಗಳನ್ನೂ ಡ್ರಿಂಕ್‌ಗಳನ್ನೂ ಮಾಡಿಕೊಡುವುದೇ ಇಂದಿನ ಪೋಷಕರಿಗಿರುವ ದೊಡ್ಡ ಚಾಲೆಂಜ್. ಅಂಥ ಸಂದರ್ಭದಲ್ಲಿ ಪೋಷಕರಿಗೆ ಸುಲಭವಾಗಿ ಕೈಗೆಟಕುವ ಮಕ್ಕಳೂ ಇಷ್ಟಪಡುವ ಡ್ರಿಂಕ್ ಎಂದರೆ ಅದು ಹಾಟ್ ಚಾಕೋಲೇಟ್ (Hot chocolate). ಬಹುತೇಕ ಎಲ್ಲ ಮಕ್ಕಳಿಗೂ ಪ್ರಿಯವಾದ ಡ್ರಿಂಕ್. ಆದರೆ, ಈಗಿನ ಮಕ್ಕಳು ರೆಸ್ಟೋರೆಂಟ್‌ಗಳಲ್ಲಿ ಹಾಟ್ ಚಾಕೋಲೇಟ್ ಕುಡಿದು, ಮನೆಯಲ್ಲಿ ಮಾಡಿಕೊಡುವ ಅಂತಿಂಥ ಹಾಟ್ ಚಾಕೋಲೇಟ್ ಇಷ್ಟಪಡುವುದಿಲ್ಲ. ರುಚಿಯಲ್ಲಿ ಅದು ರೆಸ್ಟೋರೆಂಟನ್ನೂ ಮೀರಿಸುವಂತಿರಬೇಕು. ಹಾಗಿದ್ದರೆ ಮಾತ್ರ ಮಾಡಿಕೊಟ್ಟವರಿಗೆ ನೆಮ್ಮದಿ. ಹಾಗಾದರೆ ಬನ್ನಿ, ರೆಸ್ಟೋರೆಂಟ್ ಕೂಡಾ ಸೋಲುವಂಥ ಕ್ರೀಮೀ ಚಾಕೋಲೇಟೀಯಾಗಿರುವ ರುಚಿಯಾದ ಬಾಯಿ ಚಪ್ಪರಿಸುವ ಹಾಟ್ ಚಾಕೋಲೇಟ್ (Hot chocolate) ಮಾಡುವ ಟಿಪ್ಸ್ ಇಲ್ಲಿವೆ.
1. ಹಾಟ್ ಚಾಕೋಲೇಟ್ ಮಾಡುವಾಗ ಯಾವಾಗಲೂ, ಫುಲ್ ಕ್ರೀಂ ಹಾಲನ್ನು ಬಳಸಿ. ಪ್ಯಾಶ್ಚರೀಕರಿಸಿದ, ಟೋನ್ ಮಾಡಿದ, ಕ್ರೀಂ ಎರಡು ಬಾರಿ ತೆಗೆದ ಹಾಲನ್ನು ಬಳಸಿದರೆ,ರುಚಿಯಾದ ಹಾಟ್ ಚಾಕೋಲೇಟ್ ಸಿದ್ಧವಾಗದು. ನೀರು ಸೇರಿಸದೆ, ಫುಲ್ ಕ್ರೀಂ ಹಾಲನ್ನು ಇದಕ್ಕೆ ಉಪಯೋಗಿಸಿದರೆ ಮಾತ್ರ ಕ್ರೀಮೀಯಾಗಿರುವ ಹಾಟ್ ಚಾಕೋಲೇಟ್ ಮಾಡಲು ಸಾಧ್ಯವಾಗುತ್ತದೆ.
2. ಹಾಟ್ ಚಾಕೋಲೇಟ್ ಮಾಡಲು ಹಾಲು ಹೇಗೆ ಮುಖ್ಯವೋ ಅಷ್ಟೇ ಮುಖ್ಯ ಚಾಕೋಲೇಟ್ ಕೂಡಾ. ಉತ್ತಮ ಗುಣಮಟ್ಟದ ಚಾಕೋಲೇಟ್ ಬಹಳ ಮುಖ್ಯವಾಗುತ್ತದೆ. ಉತ್ತಮ ಗುಣಮಟ್ಟದ ಡಾರ್ಕ್ ಚಾಕೋಲೇಟ್ ಅಥವಾ ಕೋಕೋ ಪುಡಿ ಸೇರಿಸಿ. ಒಳ್ಳೆಯ ಕೊಕೋ ಪುಡಿಯಿಂದ ಹಾಟ್ ಚಾಕೋಲೇಟ್ ದಪ್ಪವಾಗಿಯೂ, ಕ್ರೀಮೀಯಾಗಿಯೂ ಆಗುತ್ತದೆ.
3. ಹಾಟ್ ಚಾಕೋಲೇಟ್ ದಪ್ಪವಾಗದಿದ್ದರೆ, ಕ್ರೀಮೀಯಾಗಿ ಆಗದಿದ್ದರೆ ಅದಕ್ಕೆ ವಿಪ್ ಮಾಡಿದ ಕ್ರೀಮನ್ನೂ ಸೇರಿಸಬಹುದು. ವಿಪ್ ಮಾಡಿದ ಕ್ರೀಂ ಹಾಕಿದರೆ ಹಾಟ್ ಚಾಕೋಲೇಟ್ ರುಚಿ ಹೆಚ್ಚಿತ್ತದೆ. ದಪ್ಪವೂ ಆಗುತ್ತದೆ.
4. ಹೆಚ್ಚಿನವರು ಹಾಟ್ ಚಾಕೋಲೇಟ್‌ಗೆ ಮನೆಯಲ್ಲಿ ಸಾದಾ ಸಕ್ಕರೆಯನ್ನು ಸೇರಿಸುವುದು ರೂಢಿ. ಆದರೆ, ಕಂಡೆನ್ಸ್‌ಡ್ ಮಿಲ್ಕ್ ಸೇರಿಸಿ ನೋಡಿ. ರುಚಿ ಅದ್ಭುತವಾಗಿಯೂ, ದಪ್ಪವೂ, ಕ್ರೀಮೀಯಾಗಿಯೂ ಆಗುತ್ತದೆ.
5. ಹಾಟ್ ಚಾಕೋಲೇಟ್ ಮಾಡುವಾಗ ಇದನ್ನು ಒಲೆಯ ಮೇಲಿಟ್ಟು ಕೊಂಚ ಹೊತ್ತು ಸಣ್ಣ ಉರಿಯಲ್ಲಿರಲು ಬಿಡಿ. ಆಗ ಅದು ಒಂದಕ್ಕೊಂದು ಸರಿಯಾಗಿ ಹೊಂದಿಕೊಂಡು ರುಚಿಕಟ್ಟಾಗಿ ಹೊರಹೊಮ್ಮುತ್ತದೆ.
6. ಹಾಟ್ ಚಾಕೋಲೇಟ್ ಹೀಗೆ ಮಾಡಲು ಟ್ರೈ ಮಾಡಿ: ಹಾಲನ್ನು ಕುದಿಸಿ. ನಂತರ, ಅದಕ್ಕೆ ಕರಗಿಸಿದ ಚಾಕೋಲೇಟ್ ಸೇರಿಸಿ. ಸ್ವಲ್ಪ ಕಂಡೆನ್ಸ್‌ಡ್ ಮಿಲ್ಕ್ ಸೇರಿಸಿ. ಕೊಕೋ ಪುಡಿಯನ್ನೂ ಸೇರಿಸಿ ಚೆನ್ನಾಗಿ ಕರಗಿಸಿ, ಗಂಟುಗಳಾಗದಂತೆ ನೋಡಿಕೊಳ್ಳಿ. ಒಂದು ಸಣ್ಣ ಚಕ್ಕೆಯ ತುಂಡನ್ನು ಹಾಕಿ ಅದರೊಳಗೆ ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿರಲು ಬಿಡಿ. ಮೂರ್ನಾಲ್ಕು ಹನಿ ವೆನಿಲ್ಲಾ ಎಸೆನ್ಸ್ ಕೂಡಾ ಸೇರಿಸಿ. ಈಗ ಒಲೆಯಿಂದ ಕೆಳಗಿಳಿಸಿ, ಮೇಲಿನಿಂದ ವಿಪ್ ಮಾಡಿದ ಕ್ರೀಂ ಹಾಕಿ. ಈಗ ಹಾಟ್ ಚಾಕೋಲೇಟ್ ಡ್ರಿಂಕ್ ರೆಸ್ಟೋರೆಂಟ್‌ನ ಯಾವ ಡ್ರಿಂಕ್‌ಗೂ ಕಡಿಮೆಯಿಲ್ಲ. ಮಕ್ಕಳೇಕೆ, ನೀವೇ ನಿಮ್ಮ ಹಾಟ್ ಚಾಕೋಲೇಟ್ ಡ್ರಿಂಕ್‌ನ ರುಚಿಗೆ ಫಿದಾ ಆಗುತ್ತೀರಿ. ತಡವೇಕೆ, ಟ್ರೈ ಮಾಡಿ ನೋಡಿ!
ಇದನ್ನೂ ಓದಿ: Drugs Mafia : ಮಕ್ಕಳು ಚಾಕೊಲೇಟ್ ತಿನ್ನುತ್ತಿದ್ದರೆ ಹುಷಾರಾಗಿರಿ; ಅಂಗಡಿಗಳಲ್ಲಿ ಸಿಗ್ತಿದೆ ಭಾಂಗ್ ಚಾಕೊಲೇಟ್!