Site icon Vistara News

Storing Food | ಆಹಾರದ ಸತ್ವ ಕೆಡದಂತೆ ರಕ್ಷಿಸಿಕೊಳ್ಳುವುದು ಹೇಗೆ?

storing food

ಅಡುಗೆ ಮನೆಯಲ್ಲಿ ಆಹಾರ ವಸ್ತುಗಳು ಮಿಗುವುದು ಸಹಜ. ಅಂದರೆ, ಮಧ್ಯಾಹ್ನಕ್ಕೆ ಮಾಡಿದ್ದು ಸಂಜೆಗೆ ಮಿಗುವುದು, ಕತ್ತರಿಸಿದ ಹಣ್ಣ-ತರಕಾರಿಗಳು ಬಳಕೆಯಾಗದೆ ಉಳಿಯುವುದು, ಮುಂದೆಂದೋ ಬಳಸಲೆಂದೇ ನಾವು ಜ್ಯಾಮ್‌, ಉಪ್ಪಿನಕಾಯಿ ಯಂಥ ಪದಾರ್ಥಗಳನ್ನು ಸಂಸ್ಕರಿಸಿ ಉಳಿಸಿಕೊಳ್ಳುವುದು, ವರ್ಷವಿಡೀ ಬಳಸಲೆಂದು ಹಪ್ಪಳ, ಸಂಡಿಗೆ, ಬಾಳಕಗಳನ್ನು ಶೇಖರಿಸಿಕೊಳ್ಳುವುದು…ಹೀಗೆ ಆಹಾರ ಪದಾರ್ಥಗಳು ಉಳಿಯುವುದು ಅಥವಾ ಉಳಿಸಿಕೊಳ್ಳುವುದು ಸಾಮಾನ್ಯ. ಆದರೆ ಅವುಗಳ ಸತ್ವ ಕೆಡದಂತೆ, ಗುಣಮಟ್ಟ ಹಾಳಾಗದಂತೆ ರಕ್ಷಿಸಿಕೊಳ್ಳುವುದು ಮಾತ್ರ ಸಾಮಾನ್ಯ ವಿಷಯವಲ್ಲ. ಇದಕ್ಕಾಗಿ ಕೆಲವು ವಿಧಾನಗಳು ಇಲ್ಲಿವೆ.

ಕೆಲವು ಎಲ್ಲರಿಗೂ ಅರಿವಿರುವ ಸರಳ ವಿಧಾನಗಳು. ಉದಾ, ಕಡಿಮೆ ಉಷ್ಣತೆಯಲ್ಲಿ ಆಹಾರ ವಸ್ತುಗಳನ್ನು ಸಂಗ್ರಹಿಸಿಡುವುದು. ಅಂದರೆ ಕಡಿಮೆ ಸಮಯಕ್ಕಾದರೆ ಫ್ರಿಜ್‌ನಲ್ಲಿ ಇರಿಸಿಕೊಳ್ಳಬಹುದು. ಸ್ವಲ್ಪ ದೀರ್ಘ ಸಮಯಕ್ಕಾದರೆ ಫ್ರೀಜ್‌ ಮಾಡುವ ವಿಧಾನ ಉತ್ತಮ.

ಒಣಗಿಸುವುದು ಮತ್ತೊಂದು ಪರಂಪರಾಗತ ಕ್ರಮ. ಧಾನ್ಯಗಳನ್ನು, ಮೀನು-ಮಾಂಸಗಳನ್ನು ರಕ್ಷಿಸಿಕೊಳ್ಳಲು ಈ ಕ್ರಮ ಬಳಕೆಯಲ್ಲಿದೆ. ಮಾತ್ರವಲ್ಲ, ಹಪ್ಪಳ, ಸಂಡಿಗೆ, ಮೆಣಸು ಮತ್ತಿತರ ಮಸಾಲೆ ಪದಾರ್ಥಗಳ ಗುಣಮಟ್ಟವನ್ನೂ ಬಿಸಿಲಿನಲ್ಲಿ ಒಣಗಿಸುವುದರಿಂದ ಕಾಪಾಡಿಕೊಳ್ಳಬಹುದು. ಬಾದಾಮಿ, ಪಿಸ್ತಾ, ಅಂಜೂರ, ಸುಕ್ಕೇಳಿಯಂಥ ಮುಂತಾದ ಒಣ ಹಣ್ಣುಗಳೂ ಈ ಬಗೆಯಲ್ಲಿ ತಯಾರಾಗುತ್ತವೆ. ಕೆಲವು ಬಗೆಯ ಮಾಂಸಗಳನ್ನು ಹೊಗೆಯಲ್ಲಿಟ್ಟು ಒಣಗಿಸುವ ಕ್ರಮವೂ ಬಳಕೆಯಲ್ಲಿದೆ.

ಸಂರಕ್ಷಕ ಸೇರಿಸುವುದು ಸಹ ಒಪ್ಪಿತ ವಿಧಾನ. ಅಂದರೆ ಉಪ್ಪು, ಎಣ್ಣೆ, ಸಕ್ಕರೆಯಂಥ ವಸ್ತುಗಳನ್ನು ಹೆಚ್ಚುವರಿಯಾಗಿ ಸೇರಿಸಿ ಆಹಾರವನ್ನು ಕಾಪಿಡುವುದು ಕೂಡ ಹಳೆಯ ಪದ್ಧತಿಯೇ. ಹಣ್ಣಿನ ಜ್ಯಾಮ್‌ಗಳನ್ನು ಉಳಿಸಿಕೊಳ್ಳಲು ಸಕ್ಕರೆ ಅಥವಾ ಬೆಲ್ಲ ಸೇರಿಸಿ ಕಾಯಿಸಿಡುವುದು, ಮಾವು, ನಿಂಬೆ ಮುಂತಾದವುಗಳನ್ನು ಉಪ್ಪಿನ ಕಾಯಿ ಹಾಕುವುದು, ಹಲಸು, ಕಳಲೆಯಂಥ ಪದಾರ್ಥಗಳನ್ನು ಉಪ್ಪು ನೀರಲ್ಲಿ ಸಂರಕ್ಷಿಸಿಕೊಳ್ಳುವುದು ಇತ್ಯಾದಿ.

ನಿರ್ವಾತದಲ್ಲಿ ಇಡುವುದು ಸಹ ವ್ಯಾಪಕವಾಗಿ ಬಳಕೆಯಲ್ಲಿರುವ ಪದ್ಧತಿ. ಈ ಕ್ರಮವನ್ನು ಕ್ಯಾನಿಂಗ್‌ಗೆ ಬಳಸುತ್ತಾರೆ. ಮೊದಲಿಗೆ ಆಹಾರವನ್ನು ಕುದಿಸಿ ಕ್ಯಾನ್‌ನಲ್ಲಿರಿಸಿ, ನಂತರ ಕ್ಯಾನ್‌ನಲ್ಲಿ ಗಾಳಿ ಹೋಗದಂತೆ ನಿರ್ವಾತ ಸೃಷ್ಟಿಸಲಾಗುತ್ತದೆ. ಕ್ಯಾನ್‌ನಲ್ಲಿ ಸಂರಕ್ಷಿಸುವುದಕ್ಕೆ ವಿನೇಗರ್‌ ಬಳಸುವ ಕ್ರಮವೂ ಜಾರಿಯಲ್ಲಿದೆ. ಇವೆಲ್ಲಾ ಆಹಾರ ಸಂರಕ್ಷಣೆಯ ಆಧುನಿಕ ಕ್ರಮಗಳು. ಇವಲ್ಲದೆ, ಭಾರತೀಯರಲ್ಲಿ ಪರಂಪರಾಗತವಾಗಿ ಕೆಲವು ಕ್ರಮಗಳು ಬಳಕೆಯಲ್ಲಿವೆ. ಇವೂ ಸಹ ಕೆಲವು ಸಮಯದವರೆಗೆ ಆಹಾರದ ಸತ್ವ ನಶಿಸದಂತೆ ಕಾಪಾಡಿ, ಅದನ್ನು ಮರುಬಳಕೆಗೆ ಯೋಗ್ಯವಾಗಿ ಇರಿಸುತ್ತವೆ.

ಇದನ್ನೂ ಓದಿ | Hair care | ಫಳಫಳಿಸುವ ತಲೆಕೂದಲಿಗೆ ಸತ್ವಯುತ ಆಹಾರವೇ ಮೂಲ

ಇದಕ್ಕಾಗಿ ಕೆಲವು ಭಿನ್ನ ರೀತಿಯ ಪಾತ್ರೆಗಳ ಬಳಕೆ ಮಾಡಲಾಗುತ್ತದೆ. ಅಂದರೆ ಯಾವ ಆಹಾರವನ್ನು ಯಾವ ರೀತಿಯ ಪಾತ್ರೆಗಳಲ್ಲಿ ರಕ್ಷಿಸಿಡಬೇಕು ಎಂಬುದು ಈ ಕ್ರಮದ ಮೂಲ ತತ್ವ. ಉದಾ, ಹಣ್ಣಿನ ರಸ ಮತ್ತು ಪಾನಕದಂಥ ಪೇಯಗಳನ್ನು ಬೆಳ್ಳಿಯ ಪಾತ್ರೆಗಳಲ್ಲಿ ಇರಿಸುವುದು. ಆದರೆ ಮಜ್ಜಿಗೆಯಂಥ ಹುಳಿ ಬರುವ ಪದಾರ್ಥಗಳನ್ನು ಲೋಹಗಳ ಬದಲಿಗೆ ಕಲ್ಲಿನ ಪಾತ್ರೆಗಳಲ್ಲಿ ಶೇಖರಿಸಿಡಬಹುದು.

ತುಪ್ಪವನ್ನು ಗಾಜು ಅಥವಾ ಪಿಂಗಾಣಿಯ ಪಾತ್ರೆಗಳಲ್ಲಿ ಇಡಬಹುದು. ಇದೇ ರೀತಿಯಲ್ಲಿ ಉಪ್ಪ, ಖಾರ ಮುಂದಿರುವಂಥ ಉಪ್ಪಿನ ಕಾಯಿ, ತೊಕ್ಕುಗಳಿಗೂ ಈ ಪಾತ್ರೆಗಳೇ ಯೋಗ್ಯ. ಬೇಯಿಸಿದ ಆಹಾರಗಳಿಗೂ ಬೆಳ್ಳಿಯ ಪಾತ್ರೆಗಳೇ ಶೇಖರ ಯೋಗ್ಯ. ಹಣ್ಣು-ತರಕಾರಿಗಳಾದರೆ ಬಾಳೆ ಎಲೆಗಳಲ್ಲಿ ಸುತ್ತಿಟ್ಟರೆ ಒಂದೆರಡು ದಿನಗಳವರೆಗೆ ಬಾಡದಂತೆ ಕಾಪಾಡಿಕೊಳ್ಳಬಹುದು. ನೀರು ತಾಜಾ, ತಂಪಾಗಿ ಇರಬೇಕೆಂದರೆ ಮಣ್ಣಿನ ಮಡಿಕೆಗಳು, ತಾಮ್ರ ಅಥವಾ ಬೆಳ್ಳಿ ಪಾತ್ರೆಗಳೂ ಆಗಬಹುದು.

ಇದನ್ನೂ ಓದಿ | ಕ್ಯಾನ್ಸರ್‌ ನಂತರದ ಬದುಕು | ಆಹಾರ ಹೇಗಿರಬೇಕು? ಛವಿ ಹೇಳ್ತಾರೆ ಕೇಳಿ

Exit mobile version