Site icon Vistara News

Indian spices | ಮಸಾಲೆ ಪರಿಮಳ ಸದಾ ಘಮಘಮ ಅಂತಾ ಇರಬೇಕಿದ್ದರೆ ಹೀಗೆ ಮಾಡಿ

spices

ಇಂಗು-ತೆಂಗು ಇದ್ದರೆ ಮಂಗಮ್ಮನ ಅಡುಗೆಯೂ ರುಚಿ ಅಂತ ಗಾದೆ. ಅಂದರೆ ಬೀಳಬೇಕಾದ ವಸ್ತುಗಳು ಅಗತ್ಯ ಪ್ರಮಾಣದಲ್ಲಿ ಬಿದ್ದರೆ ಅಡುಗೆಯನ್ನು ಯಾರು ಮಾಡಿದರೂ ರುಚಿಯೇ. ಷಡ್ರಸಗಳ ಹೊರತಾಗಿ ಅಡುಗೆಗೆ ರುಚಿಯನ್ನು ನೀಡುವಂಥವು ಮಸಾಲೆ ಪದಾರ್ಥಗಳು ಮತ್ತು ಪರಿಮಳ ಭರಿತ ಸಸ್ಯಗಳು (indian spices and herbs). ಈ ವಸ್ತುಗಳು ದೀರ್ಘಕಾಲದವರೆಗೆ ಬಾಳಿಕೆ ಬರುವುದು ಹೌದಾದರೂ, ಅವುಗಳಿಗೂ ಒಂದು ಕಾಲಮಿತಿ ಇರಲೇಬೇಕಲ್ಲ. ಯಾವ ಮಸಾಲೆಯ ತಾಳಿಕೆ-ಬಾಳಿಕೆ ಎಷ್ಟು ದಿನ? ಯಾವಾಗ ಅವುಗಳನ್ನು ಬದಲಿಸಬೇಕು ಎಂಬಂಥ ಒಂದಿಷ್ಟು ಮಾಹಿತಿ ಇಲ್ಲಿದೆ.

ಮಸಾಲೆ ವಸ್ತುಗಳು ಆಹಾರಕ್ಕೆ ಬಣ್ಣ, ರುಚಿ, ಪರಿಮಳವನ್ನು ನೀಡುವುದು ಮಾತ್ರವಲ್ಲದೆ, ಆರೋಗ್ಯಕ್ಕೆ ಅನುಕೂಲಕರವಾಗಿಯೂ ಕೆಲಸ ಮಾಡುತ್ತವೆ. ಗಿಡ-ಮರಗಳ ಒಣಗಿದ ಬೇರು-ಕಾಂಡ-ಕಾಯಿಗಳಂಥ ಭಾಗಗಳನ್ನು ಸಾಮಾನ್ಯವಾಗಿ ಮಸಾಲೆ ಪದಾರ್ಥಗಳೆಂದು (spices) ಕರೆದರೆ, ಒಣಗಿದ ಎಲೆ- ಹೂವುಗಳಂಥವನ್ನು herb ಎಂದು ಗುರುತಿಸುತ್ತಾರೆ. ಆದರೆ ಇದೊಂದು ಸ್ಥೂಲ ವಿಂಗಡಣೆಯಷ್ಟೆ, ಈ ವ್ಯಾಖ್ಯೆಗೆ ಅಪವಾದಗಳು ಇದ್ದೇ ಇವೆ.

ಒಣಗಿದ ಎಲೆಗಳಿಗೆ ಆಯಸ್ಸು ಕಡಿಮೆಯೇ. ಉದಾ, ಕಸೂರಿ ಮೇಥಿ, ಪುದೀನಾ, ಕೊತ್ತಂಬರಿ, ನಿಂಬೆಹುಲ್ಲು, ಕರಿಬೇವಿನಂಥ ಅಪ್ಪಟ ಭಾರತೀಯ ವಸ್ತುಗಳೇ ಇರಲಿ, ಅಥವಾ ಬೆಸಿಲ್‌, ಒರೆಗಾನೊ, ರೋಸ್‌ಮೆರಿ, ಪಾರ್ಸ್ಲೆ, ಥೈಮ್‌ನಂತಹ ಐರೋಪ್ಯ ಅಡುಗೆಮನೆಯ ವಸ್ತುಗಳೇ ಇರಲಿ…ಈ ಸಸ್ಯಗಳನ್ನು ಒಣಗಿಸಿ ಬಳಸುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಹರ್ಬ್‌ಗಳ ಆಯಸ್ಸು ಕೆಲವು ತಿಂಗಳುಗಳು ಮಾತ್ರ. ಬೆಸಿಲ್‌, ಥೈಮ್‌ನಂಥವು ಒಂದೆರಡು ವರ್ಷಗಳವರೆಗೂ ಇರಬಲ್ಲವು.

ಪುಡಿ ಮಾಡಿದ ಮಸಾಲೆ ಪದಾರ್ಥಗಳಿಗೆ ಈ ಎಲೆಗಳಿಗಿಂತ ಹೆಚ್ಚಿನ ಆಯಸ್ಸು. ಕೆಲವು ಮೂರು ವರ್ಷಗಳವರೆಗೂ ಇರಬಲ್ಲವು. ಉದಾ, ಅರಿಶಿನ ಪುಡಿ, ಶುಂಠಿ ಪುಡಿ, ಚಕ್ಕೆ-ಲವಂಗ-ಏಲಕ್ಕಿಯಂಥ ಪುಡಿಗಳು, ಕೆಂಪು ಮೆಣಸಿನ ಪುಡಿ, ಕಾಳು ಮೆಣಸಿನ ಪುಡಿ ಇತ್ಯಾದಿ.

ಇದನ್ನೂ ಓದಿ | smart kitchen: ಜಾಣ ಅಡುಗೆಗೆ ಒಂದಿಷ್ಟು ಕಿವಿಮಾತುಗಳು

ಇವೆಲ್ಲವುಗಳಿಗಿಂತ ಹೆಚ್ಚಿನ ಆಯಸ್ಸಿರುವುದು ಇಡಿಯಾಗಿ ಶೇಖರಿಸಿಟ್ಟ ಮಸಾಲೆ ಪದಾರ್ಥಗಳಿಗೆ. ಈ ಮಸಾಲೆ ಪದಾರ್ಥಗಳು ಗಾಳಿಗೆ ಒಡ್ಡಿದಷ್ಟೂ ಬೇಗ ಹಳತಾಗುತ್ತವೆ. ತಮ್ಮ ಬಣ್ಣ, ರುಚಿ, ಪರಿಮಳ ಕಳೆದುಕೊಳ್ಳುತ್ತವೆ. ಸರಿಯಾಗಿ ಒಣಗಿಸಿ ಶೇಖರಿಸಿಟ್ಟರೆ ನಾಲ್ಕು ವರ್ಷಗಳವರೆಗೂ ಈ ವಸ್ತುಗಳು ಬಾಳಬಲ್ಲವು. ಉದಾ, ಇಡಿಯಾದ ಏಲಕ್ಕಿ, ಲವಂಗ, ಗೇಣುದ್ದದ ದಾಲ್ಚಿನ್ನಿ ಚಕ್ಕೆಗಳು, ಇಡಿಯಾದ ಒಣಮೆಣಸು, ಕಾಳು ಮೆಣಸು, ಧನಿಯಾ, ಜೀರಿಗೆ, ಸೋಂಪು ಇತ್ಯಾದಿಗಳು. ಹಾಗಂತ ಈ ವಸ್ತುಗಳು ಹಳತಾದರೆ ಉಪಯೋಗಿಸಿದವರ ಆರೋಗ್ಯಕ್ಕೆ ಹಾನಿ ಆಗುವುದಿಲ್ಲ. ಆದರೆ ಆಹಾರದ ರುಚಿ, ಪರಿಮಳ ಮುಂತಾದ ಗುಣಮಟ್ಟವನ್ನೂ ವೃದ್ಧಿಸುವುದಿಲ್ಲ.

ಶೇಖರಿಸುವುದು ಹೇಗೆ?: ಇದೊಂದು ಮುಖ್ಯವಾದ ಪ್ರಶ್ನೆ. ಗಾಳಿ, ಬೆಳಕು, ಬಿಸಿಲು ಮತ್ತು ತೇವಕ್ಕೆ ಒಡ್ಡದಂತೆ ಇವುಗಳನ್ನು ಶೇಖರಿಸುವುದು ಅಗತ್ಯ. ನಮ್ಮ ಒಲೆಯ ಪಕ್ಕದಲ್ಲೇ ಅಲಂಕಾರಿಕವಾಗಿ ಈ ವಸ್ತುಗಳನ್ನು ಪೇರಿಸಿಕೊಳ್ಳುವುದು ಹಲವರಿಗೆ ಇಷ್ಟವಾಗುತ್ತದೆ. ಆದರೆ ಇದು ಮಸಾಲೆ ಆಯಸ್ಸನ್ನು ಕುಂಠಿತಗೊಳಿಸುತ್ತದೆ. ಬದಲಿಗೆ, ಒಲೆ ಅಥವಾ ಅವನ್‌ನಿಂದ ಸ್ವಲ್ಪ ದೂರದಲ್ಲಿರುವ ಕಪಾಟು, ಡ್ರಾಗಳು ಸೂಕ್ತ ಜಾಗ. ಗಾಜಿನ ಅಥವಾ ಪಿಂಗಾಣಿಯ, ಭದ್ರ ಮುಚ್ಚಲಿನ ಡಬ್ಬಿಗಳು ಇವುಗಳಿಗೆ ಸೂಕ್ತ. ಸ್ಟೀಲ್‌ ಡಬ್ಬಿಗಳಲ್ಲಿ ಇಡುವುದಾದರೂ ಅಡ್ಡಿಯಿಲ್ಲ. ಆದರೆ ಇವುಗಳಿಗೆ ಶಾಖ ತಾಗದಂತೆ ಎಚ್ಚರ ವಹಿಸಬೇಕು. ಇನ್ನು ಫೈಬರ್/ಪ್ಲಾಸ್ಟಿಕ್‌ ಡಬ್ಬಿಗಳ ಬಳಕೆಯೂ ಉಂಟು. ಮಸಾಲೆಗಳು ಬೇಗ ತಮ್ಮ ಬಣ್ಣ, ಪರಿಮಳ ಕಳೆದುಕೊಳ್ಳುವುದು ಮಾತ್ರವೇ ಅಲ್ಲ, ಡಬ್ಬಿಗಳು ಮರು ಬಳಕೆಗೆ ಕಷ್ಟವಾಗುವ ಮಟ್ಟಿಗೆ ಒಳಗಿನ ವಸ್ತುಗಳ ವಾಸನೆ ಹೀರಿಕೊಳ್ಳುತ್ತವೆ. 

ಇದನ್ನೂ ಓದಿ | Eating habit | ಅಡುಗೆ ಮಾಡಿಕೊಳ್ಳುವಷ್ಟು ಸಮಯ ಇಲ್ಲವೇ? ಹಾಗಿದ್ದರೆ ಹೀಗೆ ಮಾಡಿ

Exit mobile version